ಕಿಂಗ್‌ಸ್ಟನ್: ಕೆರಿಬಿಯನ್ ಕ್ರಿಕೆಟ್ ಮೈದಾನಗಳ ದುರಸ್ತಿಗಾಗಿ ಹಣವನ್ನು ಸಂಗ್ರಹಿಸುವ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ವಿಶ್ವ ಇಲೆವೆನ್ ತಂಡಗಳ ನಡುವೆ ಏಕೈಕ ಟಿ20 ಪಂದ್ಯವನ್ನು ಆಯೋಜಿಸಲಾಗಿದೆ. ಇದೊಂದು ಸೌಹಾರ್ದ ಪಂದ್ಯವಾಗಿದೆ.
ಮೇ 31ರಂದು ಲಾರ್ಡ್ಸ್‌ನಲ್ಲಿ ಈ ಟಿ20 ಪಂದ್ಯ ನಡೆಯಲಿದೆ. ಇದಕ್ಕೆ ಐಸಿಸಿ ಮಾನ್ಯತೆ ನೀಡಿದೆ. ಐಸಿಸಿ ಸದಸ್ಯರು ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪಂದ್ಯವನ್ನು ಆಯೋಜಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಡೇವ್ ಕ್ಯಾಮರಾನ್, ಪಂದ್ಯದಿಂದ ಹೆಚ್ಚಿನ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ. ಬರುವ ಹಣವನ್ನು ಮೈದಾನಗಳ ದುರಸ್ತಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಇರ್ಮಾ ಮತ್ತು ಮರಿಯಾ ಚಂಡಮಾರುತಕ್ಕೆ ಸಿಲುಕಿ ಡೊಮಿನಿಕಾದ “ವಿಂಡ್ಸರ್ ಪಾರ್ಕ್’, ಆಂಗ್ವಿಲ್ಲಾದ “ಜೇಮ್ಸ್ ರೊನಾಲ್ಡ್ ವೆಬ್‌ಸ್ಟರ್ ಪಾರ್ಕ್’ಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿತ್ತು.
ಈ ಸಹಾಯಾರ್ಥ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ಥಾನದ ಕ್ರಿಕೆಟಿಗರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮೇ 27ಕ್ಕೆ ಐಪಿಎಲ್ ಮುಗಿಯಲಿದ್ದು, ಅನಂತರ ಸ್ವಲ್ಪ ಸಮಯದ ವರೆಗೆ ಭಾರತಕ್ಕೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಕಾರ್ಯಕ್ರಮವಿಲ್ಲ. ಹೀಗಾಗಿ ಭಾರತದ ಆಟಗಾರರು ಲಾರ್ಡ್ಸ್ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.