Advertisement
ಬುಧವಾರದ ಮೊದಲ ಟಿ20 ಪಂದ್ಯದ ತಾಣ ಹೊಸದಿಲ್ಲಿಯ “ಫಿರೋಜ್ ಷಾ ಕೋಟ್ಲಾ’ ಅಂಗಳ. ಈ ಪಂದ್ಯ ಭಾವುಕ ಕ್ಷಣವೊಂದಕ್ಕೂ ಸಾಕ್ಷಿಯಾಗಲಿದೆ. ಕಳೆದೆರಡು ದಶಕಗಳಿಂದ ಭಾರತವನ್ನು ಪ್ರತಿನಿಧಿಸುತ್ತಲೇ ಬಂದಿದ್ದ ಎಡಗೈ ವೇಗಿ ಆಶಿಷ್ ನೆಹ್ರಾ ಇಲ್ಲಿ ಕೊನೆಯ ಸಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಇಳಿಯಲಿದ್ದಾರೆ. ತವರಿನಂಗಳದಲ್ಲಿ, ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಅಂತಿಮ ಓವರ್ ಎಸೆಯಲಿದ್ದಾರೆ. ನೆಹ್ರಾ ಅವರ ಈ ಕೋರಿಕೆಯನ್ನು ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಪರಿಗಣಿಸಿದ್ದು, ದಿಲ್ಲಿ ಪಂದ್ಯಕ್ಕಾಗಿ ಮಾತ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಏಕದಿನದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿ ಯಕ್ಕಿಂತಲೂ ಉತ್ತಮ ಪ್ರದರ್ಶನ ನೀಡಿದ್ದು ನ್ಯೂಜಿಲ್ಯಾಂಡಿನ ಹೆಗ್ಗಳಿಕೆ. ಕಾನ್ಪುರದಲ್ಲಿ ಅದೃಷ್ಟ ಇನ್ನೂ ಸ್ವಲ್ಪ ಗಟ್ಟಿಯಾಗಿದ್ದರೆ ವಿಲಿಯಮ್ಸನ್ ಪಡೆ ಸರಣಿಯನ್ನೂ ವಶಪಡಿಸಿಕೊಳ್ಳುತ್ತಿತ್ತು. ಆದರೆ ಭಾರತದ ನಸೀಬು ಚೆನ್ನಾಗಿತ್ತು!
Related Articles
Advertisement
ಹೌದು, ಭಾರತ-ನ್ಯೂಜಿಲ್ಯಾಂಡ್ ಈವರೆಗೆ 6 ಟಿ20 ಪಂದ್ಯಗಳನ್ನಾಡಿವೆ. ಐದರಲ್ಲಿ ಕಿವೀಸ್ ಗೆದ್ದಿದೆ. ಒಂದು ಪಂದ್ಯ ರದ್ದಾಗಿದೆ. ಐದರಲ್ಲಿ 2 ಗೆಲುವು ಭಾರತದ ನೆಲದಲ್ಲೇ ಒಲಿದಿತ್ತು. 2012ರ ಚೆನ್ನೈ ಪಂದ್ಯವನ್ನು ಒಂದು ರನ್ನಿನಿಂದ ರೋಮಾಂಚಕಾರಿಯಾಗಿ ಗೆದ್ದ ನ್ಯೂಜಿಲ್ಯಾಂಡ್, 2016ರಲ್ಲಿ ಕೊನೆಯ ಸಲ ನಾಗ್ಪುರದಲ್ಲಿ ಎದುರಾದಾಗ 47 ರನ್ ಜಯ ಸಾಧಿಸಿತ್ತು. ಇದು ವಿಶ್ವಕಪ್ ಕೂಟದ ಪಂದ್ಯವೆಂಬುದನ್ನು ಮರೆಯುವಂತಿಲ್ಲ. ನಂ.1 ಹಾದಿಯಲ್ಲಿ ಅದು ಆಸ್ಟ್ರೇಲಿಯ, ಇಂಗ್ಲೆಂಡ್, ಶ್ರೀಲಂಕಾ ಮೊದಲಾದ ತಂಡಗಳಿಗೆ ನೀರು ಕುಡಿಸಿತ್ತು. ಇದನ್ನೆಲ್ಲ ಗಮನಿಸಿದಾಗ ವಿಲಿಯಮ್ಸನ್ ಪಡೆಯನ್ನೇ ಈ ಸರಣಿಯ ನೆಚ್ಚಿನ ತಂಡವೆಂದು ಪರಿಗಣಿಸಬೇಕಾಗುತ್ತದೆ.
ಆದರೆ ಚುಟುಕು ಕ್ರಿಕೆಟ್ ಎಂಬುದು “ಡಿಫರೆಂಟ್ ಬಾಲ್ ಗೇಮ್’ ಆಗಿರುವುದರಿಂದ ಹಾಗೂ ಭಾರತ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿರುವುದರಿಂದ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯನ್ನು ಧಾರಾಳವಾಗಿ ಇರಿಸಿಕೊಳ್ಳಬಹುದು. ಇದು ಕೋಟ್ಲಾದಲ್ಲೇ ತೆರೆಯಲ್ಪಟ್ಟರೆ ಅರ್ಥಪೂರ್ಣವೆನಿಸಲಿದೆ. ಆಗ ನೆಹ್ರಾಗೆ ಪರಿಪೂರ್ಣ ವಿದಾಯವನ್ನೂ ಸಲ್ಲಿಸಿದಂತಾಗುತ್ತದೆ!
ಭಾರತ ಸ್ಪೆಷಲಿಸ್ಟ್ ತಂಡಟಿ20 ಸರಣಿಗಾಗಿ ಭಾರತ ಸ್ಪೆಷಲಿಸ್ಟ್ ತಂಡ ವನ್ನೇ ಆರಿಸಿದೆ. ಬ್ಯಾಟಿಂಗ್ ವಿಭಾಗದಲ್ಲಂತೂ ತೀವ್ರ ಪೈಪೋಟಿ ಇದೆ. ರೋಹಿತ್-ಧವನ್, ಕೊಹ್ಲಿ ಬಳಿಕ ಯಾರು ಎಂಬುದು ಬಹಳ ಜಟಿಲವಾದ ಪ್ರಶ್ನೆ. ಇಲ್ಲಿ ರಾಹುಲ್, ಪಾಂಡೆ, ಅಯ್ಯರ್, ಕಾರ್ತಿಕ್ ರೇಸ್‌ನಲ್ಲಿದ್ದಾರೆ. ತಂಡದ ಬೌಲಿಂಗ್ ಹಾಗೂ ಆಲ್‌ರೌಂಡ್ ವಿಭಾಗವೂ ಸಶಕ್ತವಾಗಿದೆ. ಪಾಂಡ್ಯ, ಕುಲದೀಪ್, ಭುವನೇಶ್ವರ್, ನೆಹ್ರಾ, ಚಾಹಲ್, ಬುಮ್ರಾ ಜತೆಗೆ ಹೊಸಬ ಮೊಹಮ್ಮದ್ ಸಿರಾಜ್ ಇದ್ದಾರೆ. ನೆಹ್ರಾಗೆ ಜಾಗ ಬಿಡುವವರು ಯಾರೆಂಬುದೊಂದು ಕುತೂಹಲ. ನ್ಯೂಜಿಲ್ಯಾಂಡ್ ಕೂಡ ಬಲಿಷ್ಠ ಪಡೆಯನ್ನೇ ಹೊಂದಿದೆ. ವಿಲಿಯಮ್ಸನ್, ಮುನ್ರೊ, ಗಪ್ಟಿಲ್, ಟಯ್ಲರ್, ಲ್ಯಾಥಂ, ಸ್ಯಾಂಟ್ನರ್, ಬೌಲ್ಟ್ ಜತೆಗೆ ಕೆಲವು ಯುವ ಆಟಗಾರರೂ ತಂಡದಲ್ಲಿದ್ದಾರೆ. ಇವರೆಲ್ಲ ಸೇರಿಕೊಂಡು ಗೆಲುವಿನ ಅಭಿಯಾನ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಇದಕ್ಕೆ ಟೀಮ್ ಇಂಡಿಯಾ ಬ್ರೇಕ್ ಹಾಕಬೇಕಿದೆ.