Advertisement

ಟಾರ್ಗೆಟ್‌ ಕ್ಲೀನ್‌ಸ್ವೀಪ್‌: ಟೀಮ್‌ ಇಂಡಿಯಾ ಮಂತ್ರ

11:14 PM Dec 07, 2020 | mahesh |

ಸಿಡ್ನಿ: ಆಸ್ಟ್ರೇಲಿಯ ವಿರುದ್ಧ ಅನುಭವಿಸಿದ ಏಕದಿನ ಸರಣಿ ಸೋಲಿಗೆ ಟಿ20 ಮುಖಾಮುಖಿಯಲ್ಲಿ ಸೇಡು ತೀರಿಸಿಕೊಳ್ಳುವ ಭಾರತದ ಒಂದು ಹಂತದ ಕಾರ್ಯತಂತ್ರ ಅತ್ಯಂತ ಯಶಸ್ವಿಯಾಗಿದೆ. ಮೊದಲ ಎರಡೂ ಪಂದ್ಯಗಳನ್ನು ಗೆದ್ದ ಕೊಹ್ಲಿ ಪಡೆಯ ಮಂಗಳವಾರದ ಯೋಜನೆ, ಕ್ಲೀನ್‌ಸ್ವೀಪ್‌ ಆಗಿ ಸರಣಿ ವಶಪಡಿಸಿಕೊಳ್ಳುವುದು. ಆ ಮೂಲಕ ಟೆಸ್ಟ್‌ ಸರಣಿಗೆ ಹೊಸ ಸ್ಫೂರ್ತಿ ಗಳಿಸುವುದು.

Advertisement

ಏಕದಿನ ಸರಣಿಯ ಮೊದಲೆರಡು ಪಂದ್ಯ ಮುಗಿದಾಗ ಭಾರತ ಕೂಡ ಇದೇ ಸ್ಥಿತಿಯಲ್ಲಿತ್ತು. ಎರಡೂ ಪಂದ್ಯಗಳನ್ನು ಕಳೆದುಕೊಂಡು ಕ್ಲೀನ್‌ಸ್ವೀಪ್‌ನತ್ತ ಮುಖ ಮಾಡಿತ್ತು. ಆದರೆ ಕ್ಯಾನ್‌ಬೆರಾದಲ್ಲಿ ತಿರುಗಿ ಬೀಳುವ ಮೂಲಕ ಮುಖಭಂಗವನ್ನು ತಪ್ಪಿಸಿಕೊಂಡಿತು. ಆಸ್ಟ್ರೇಲಿಯದಿಂದ ಮಂಗಳವಾರ ಇಂಥದೊಂದು ಮ್ಯಾಜಿಕ್‌ ಸಾಧ್ಯವೇ ಎಂಬುದೊಂದು ಕುತೂಹಲ. ಇಲ್ಲವಾದರೆ ಕಾಂಗರೂ ಪಡೆ 3 ಸಲ ಟಿ20 ಸರಣಿಯಲ್ಲಿ ವೈಟ್‌ವಾಶ್‌ ಆದಂತಾಗುತ್ತದೆ. ಭಾರತ ಮತ್ತು ಪಾಕಿಸ್ಥಾನ ವಿರುದ್ಧ ಆಸೀಸ್‌ ಈ ಸಂಕಟಕ್ಕೆ ಸಿಲುಕಿತ್ತು. 2016ರ ಪ್ರವಾಸದ ವೇಳೆ ಭಾರತ ಮೂರೂ ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಕೆಡವಿತ್ತು. ಈಗಲೂ ಅದೇ ಜೋಶ್‌ನಲ್ಲಿದೆ. ತೃತೀಯ ಪಂದ್ಯವನ್ನು ಗೆಲ್ಲುವ ಫೇವರಿಟ್‌ ತಂಡವಾಗಿದೆ.

ಗೆಲುವಿನ ಕಾಂಬಿನೇಶನ್‌
ವಿರಾಟ್‌ ಕೊಹ್ಲಿ ಹೇಳಿದಂತೆ, ಪ್ರಧಾನ ಆಟಗಾರರಾದ ರೋಹಿತ್‌ ಶರ್ಮ ಮತ್ತು ಜಸ್‌ಪ್ರೀತ್‌ ಬುಮ್ರಾ ಗೈರಲ್ಲಿ ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಕೆಡವಿದ್ದು ಭಾರತದ ಮಹಾನ್‌ ಸಾಧನೆಯಾಗಿದೆ. ಗಾಯಾಳು ರವೀಂದ್ರ ಜಡೇಜ ಅನುಪಸ್ಥಿತಿ ಕೂಡ ಟೀಮ್‌ ಇಂಡಿಯಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ಹಾಗೆಯೇ ಸ್ಟ್ರೈಕ್‌ ಬೌಲರ್‌ ಮೊಹಮ್ಮದ್‌ ಶಮಿ ವಿಶ್ರಾಂತಿಯಲ್ಲಿದ್ದುದನ್ನೂ ಮರೆಯುವಂತಿಲ್ಲ.

ಈಗಾಗಲೇ ಸರಣಿ ಗೆದ್ದರೂ ಭಾರತದ ಆಡುವ ಬಳಗದಲ್ಲಿ ಭಾರೀ ಬದಲಾವಣೆ ಅಥವಾ ಪ್ರಯೋಗ ನಡೆಯುವ ಸಾಧ್ಯತೆ ಕಡಿಮೆ. ಬುಮ್ರಾ, ಶಮಿ ಅವರ ವಿಶ್ರಾಂತಿ ಮತ್ತೆ ಮುಂದುವರಿಯಬಹುದು. ಯುವ ವೇಗಿಗಳ ಪಡೆ ಉತ್ತಮ ಸಾಧನೆ ತೋರ್ಪಡಿಸುತ್ತಿರುವುದರಿಂದ ಈ ಕಾಂಬಿನೇಶನ್‌ ಮುರಿಯುವ ಯಾವುದೇ ಯೋಜನೆ ಭಾರತದ ಮುಂದೆ ಇಲ್ಲ ಎಂಬುದೊಂದು ಲೆಕ್ಕಾಚಾರ. ಅದರಲ್ಲೂ “ನ್ಯೂ ವೈಟ್‌ ಬಾಲ್‌ ಸೆನ್ಸೇಶನ್‌’ ಟಿ. ನಟರಾಜನ್‌ ಅವರ ಎಸೆತಗಳನ್ನು ಅರ್ಥೈಸಿಕೊಳ್ಳಲು ಕಾಂಗರೂಗಳಿಗೆ ಸಾಧ್ಯವಾಗದಿರುವುದೊಂದು ಪ್ಲಸ್‌ ಪಾಯಿಂಟ್‌. ಹೀಗಾಗಿ 6ನೇ ಬೌಲರ್‌ನ ಅನಿವಾರ್ಯತೆ ಭಾರತಕ್ಕಿಲ್ಲ ಎಂಬುದು ಸಾಬೀತಾಗಿದೆ.

ಸಿಡ್ನಿಯ ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲಿ 194 ರನ್‌ ಸೋರಿಹೋದರೂ ಸಾಂಘಿಕ ಬ್ಯಾಟಿಂಗ್‌ ಸಾಹಸ ಟೀಮ್‌ ಇಂಡಿಯಾವನ್ನು ಗೆಲುವಿನ ಆಸನದಲ್ಲಿ ಕೂರಿಸಿತ್ತು. ಆರಂಭದಲ್ಲಿ ಧವನ್‌, ರಾಹುಲ್‌, ಕೊಹ್ಲಿ ಸೇರಿಕೊಂಡು ಇನ್ನೂರರ ಸಮೀಪವಿದ್ದ ಗುರಿಯನ್ನು ಬೆನ್ನಟ್ಟಲು ಬೇಕಾದ ಟಾನಿಕ್‌ ಒದಗಿಸಿದರು. ಕೊನೆಯಲ್ಲಿ ಪಾಂಡ್ಯ, ಅಯ್ಯರ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಕಾಂಗರೂಗಳ ಸಮಬಲದ ಯೋಜನೆಯನ್ನು ತಲೆಕೆಳಗಾಗಿಸಿದರು. ಪಾಂಡ್ಯ ಹೊಡೆತಗಳು 3ನೇ ಪಂದ್ಯದ ವೇಳೆಯೂ ಆತಿಥೇಯರನ್ನು ಬೆಚ್ಚಿ ಬೀಳಿಸುವುದು ಖಂಡಿತ!

Advertisement

ಒಟ್ಟಾರೆ, ಭಾರತ ಟಿ20 ಕ್ರಿಕೆಟ್‌ನಲ್ಲಿ ಪಕ್ಕಾ ವೃತ್ತಿಪರತೆಯೊಂದಿಗೆ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತ ಹೋಗುತ್ತಿರುವುದಂತೂ ಸ್ಪಷ್ಟ. ಇಲ್ಲವಾದರೆ, ರವಿವಾರ ಟಾಸ್‌ ಗೆದ್ದೂ ಬ್ಯಾಟಿಂಗ್‌ ಬಿಟ್ಟುಕೊಡುವ ಧೈರ್ಯ ತೋರುತ್ತಿರಲಿಲ್ಲ!

ಆಸ್ಟ್ರೇಲಿಯ ಪರಿ
ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿಲ್ಲ ಎಂಬುದಿಲ್ಲಿ ಉಲ್ಲೇಖನೀಯ. ನಾಯಕ ಫಿಂಚ್‌, ವಾರ್ನರ್‌, ಸ್ಟಾರ್ಕ್‌, ಕಮಿನ್ಸ್‌, ಹ್ಯಾಝಲ್‌ವುಡ್‌ ಗೈರಲ್ಲಿ ಸರಣಿ ಕಳೆದುಕೊಂಡಿದೆ. ಅಂತಿಮ ಪಂದ್ಯಕ್ಕೆ ಫಿಂಚ್‌ ಮರಳುವ ಸಾಧ್ಯತೆ ಇದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ಆಸೀಸ್‌, ದ್ವಿತೀಯ ಪಂದ್ಯದಲ್ಲಿ ಈ ಕೊರತೆಯನ್ನೇನೋ ನೀಗಿಸಿಕೊಂಡಿತು. ಆದರೆ ಬೌಲರ್ ದಿಕ್ಕು ತಪ್ಪಿದರು. ಅಂತಿಮ ಪಂದ್ಯದಲ್ಲಿ ಮೇಲುಗೈ ಸಾಧಿಸಬೇಕಾದರೆ ಆಸೀಸ್‌ ಅಸಾಮಾನ್ಯ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.

2016ರಲ್ಲಿ 3-0 ವಿಕ್ರಮ
ಭಾರತ 2016ರ ಪ್ರವಾಸದ ಎಲ್ಲ 3 ಟಿ20 ಪಂದ್ಯಗಳನ್ನು ಗೆದ್ದು ಮೊದಲ ಸಲ ಆಸ್ಟ್ರೇಲಿಯಕ್ಕೆ ವೈಟ್‌ವಾಶ್‌ ಮಾಡಿತ್ತು. ಅಂದು ಧೋನಿ ಮತ್ತು ಫಿಂಚ್‌ ನಾಯಕರಾಗಿದ್ದರು. ಕೊನೆಯ ಪಂದ್ಯದಲ್ಲಿ ಆಸೀಸ್‌ ತಂಡವನ್ನು ವಾಟ್ಸನ್‌ ಮುನ್ನಡೆಸಿದ್ದರು. ಅಡಿಲೇಡ್‌ನ‌ಲ್ಲಿ ನಡೆದ ಮೊದಲ ಪಂದ್ಯವನ್ನು 37 ರನ್ನುಗಳಿಂದ ಗೆದ್ದ ಭಾರತ ಶುಭಾರಂಭ ಮಾಡಿತು. ಕೊಹ್ಲಿ ಅವರ ಅಜೇಯ 90 ರನ್‌ ಸಾಹಸದಿಂದ ಟೀಮ್‌ ಇಂಡಿಯಾ 3 ವಿಕೆಟಿಗೆ 188 ರನ್‌ ಗಳಿಸಿದರೆ, ಆಸ್ಟ್ರೇಲಿಯ 19.3 ಓವರ್‌ಗಳಲ್ಲಿ 151ಕ್ಕೆ ಕುಸಿಯಿತು. ಬುಮ್ರಾ 3, ಅಶ್ವಿ‌ನ್‌, ಜಡೇಜ ಮತ್ತು ಪಾಂಡ್ಯ ತಲಾ 2 ವಿಕೆಟ್‌ ಉರುಳಿಸಿದರು. ಮೆಲ್ಬರ್ನ್ನ ದ್ವಿತೀಯ ಮುಖಾಮುಖಿಯಲ್ಲಿ ಭಾರತದ ಗೆಲುವಿನ ಅಂತರ 27 ರನ್‌. ಧೋನಿ ಪಡೆ 3ಕ್ಕೆ 184 ರನ್‌ ಪೇರಿಸಿದರೆ, ಆಸೀಸ್‌ 8ಕ್ಕೆ 157 ರನ್‌ ಗಳಿಸಿ ಶರಣಾಯಿತು. ರೋಹಿತ್‌ 60, ಕೊಹ್ಲಿ 59 ರನ್‌ ಹೊಡೆದರೆ, ಆಸೀಸ್‌ ಪರ ಫಿಂಚ್‌ 74 ರನ್‌ ಬಾರಿಸಿದರು. ಬುಮ್ರಾ, ಜಡೇಜ ತಲಾ 2 ವಿಕೆಟ್‌ ಹಾರಿಸಿದರು.

ಅಂತಿಮ ಪಂದ್ಯದ ತಾಣ ಸಿಡ್ನಿ. ಆಸೀಸ್‌ 5ಕ್ಕೆ 197 ರನ್‌ ಸೂರೆಗೈದರೂ ಭಾರತ ವಿಚಲಿತಗೊಳ್ಳಲಿಲ್ಲ. ಸರಿಯಾಗಿ 20 ಓವರ್‌ಗಳಲ್ಲಿ 3 ವಿಕೆಟಿಗೆ 200 ರನ್‌ ಬಾರಿಸಿ ಮೆರೆದಾಡಿತು. ರೋಹಿತ್‌ 52, ಕೊಹ್ಲಿ 50, ರೈನಾ ಅಜೇಯ 49 ರನ್‌ ಹೊಡೆದು ಭಾರತವನ್ನು ದಡ ತಲುಪಿಸಿದ್ದರು. ವಾಟ್ಸನ್‌ ಹೊಡೆದ 124 ರನ್‌ ವ್ಯರ್ಥವಾಯಿತು!

ಸಂಭಾವ್ಯ ತಂಡಗಳು
ಭಾರತ: ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹರ್‌, ಟಿ. ನಟರಾಜನ್‌, ಯಜುವೇಂದ್ರ ಚಹಲ್‌.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ)/ಡಿ’ಆರ್ಸಿ ಶಾರ್ಟ್‌, ಮ್ಯಾಥ್ಯೂ ವೇಡ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಸಸ್‌ ಹೆನ್ರಿಕ್ಸ್‌, ಮಾರ್ಕಸ್‌ ಸ್ಟೋಯಿನಿಸ್‌, ಸೀನ್‌ ಅಬೋಟ್‌, ಡೇನಿಯಲ್‌ ಸ್ಯಾಮ್ಸ್‌, ಮಿಚೆಲ್‌ ಸ್ವೆಪ್ಸನ್‌, ಆ್ಯಡಂ ಝಂಪ, ಆ್ಯಂಡ್ರ್ಯು ಟೈ.

ಆರಂಭ ಅಪರಾಹ್ನ 1.40
ಪ್ರಸಾರ ಸೋನಿ ಟೆನ್‌, ಸೋನಿ ಸಿಕ್ಸ್‌

Advertisement

Udayavani is now on Telegram. Click here to join our channel and stay updated with the latest news.

Next