Advertisement

ಮೊದಲ ಟಿ20 : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಎಂಟು ವಿಕೆಟ್ ಸೋಲು

11:06 PM Mar 12, 2021 | Team Udayavani |

ಅಹ್ಮದಾಬಾದ್‌: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಶಕ್ತಿಯುತ ಪ್ರದರ್ಶನ ನೀಡಿದ ವಿಶ್ವದ ನಂ.1 ತಂಡವಾದ ಇಂಗ್ಲೆಂಡ್‌ ಟಿ20 ಸರಣಿಯನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಶುಕ್ರವಾರದ ಮೊದಲ ಪಂದ್ಯದಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದು 1-0 ಮುನ್ನಡೆ ಸಾಧಿಸಿದೆ.

Advertisement

ಇಂಗ್ಲೆಂಡಿನ ಬಿಗಿಯಾದ ಬೌಲಿಂಗ್‌ ದಾಳಿಗೆ ಪರದಾಡಿದ ಭಾರತದಿಂದ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 124 ರನ್‌ ಮಾತ್ರ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮೊತ್ತವನ್ನು ಶ್ರೇಯಸ್‌ ಅಯ್ಯರ್‌ ಒಬ್ಬರೇ ದಾಖಲಿಸಿದರು. ಅವರ ಗಳಿಕೆ 67 ರನ್‌. ಜವಾಬಿತ್ತ ಇಂಗ್ಲೆಂಡ್‌ 15.3 ಓವರ್‌ಗಳಲ್ಲಿ 2 ವಿಕೆಟಿಗೆ 130 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಚೇಸಿಂಗ್‌ ವೇಳೆ ರಾಯ್‌-ಬಟ್ಲರ್‌ ಜೋಡಿ 8 ಓವರ್‌ಗಳಲ್ಲಿ 72 ರನ್‌ ಪೇರಿಸಿ ಗೆಲುವನ್ನು ಸುಲಭಗೊಳಿಸಿತು. ಜಾಸನ್‌ ರಾಯ್‌ ಒಂದೇ ರನ್ನಿನಿಂದ ಅರ್ಧ ಶತಕ ತಪ್ಪಿಸಿಕೊಂಡರು. ವಾಷಿಂಗ್ಟನ್‌ ತಮ್ಮ ಮೊದಲ ಎಸೆತದಲ್ಲೇ ಈ ವಿಕೆಟ್‌ ಹಾರಿಸಿದರು. ಔಟಾದ ಮತ್ತೂಬ್ಬ ಆಟಗಾರ ಬಟ್ಲರ್‌ (28). ಬೇರ್‌ಸ್ಟೊ 26, ಮಾಲನ್‌ 24 ರನ್‌ ಮಾಡಿ ಔಟಾಗದೆ ಉಳಿದರು.

ಇಂಗ್ಲೆಂಡ್‌ ನಿರ್ಧಾರ ಯಶಸ್ವಿ
ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತನ್ನ ನಿರ್ಧಾರವನ್ನು ಬಹಳ ಬೇಗನೇ ಸಮರ್ಥಿಸಿಕೊಂಡಿತು. 5 ಓವರ್‌ಗಳಲ್ಲಿ ಕೇವಲ 20 ರನ್‌ ಆಗುವಷ್ಟರಲ್ಲಿ ಭಾರತದ 3 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿತು. ಆರ್ಚರ್‌ ತಮ್ಮ ದ್ವಿತೀಯ ಎಸೆತದಲ್ಲೇ ಕೆ.ಎಲ್‌. ರಾಹುಲ್‌ (1) ಅವರನ್ನು ಬೌಲ್ಡ್‌ ಮಾಡಿ ಕುಸಿತಕ್ಕೆ ಮುಹೂರ್ತವಿರಿಸಿದರು. ಮುಂದಿನ ಓವರಿನಲ್ಲಿ ರಶೀದ್‌ ಕ್ಯಾಪ್ಟನ್‌ ಕೊಹ್ಲಿ ಅವರನ್ನು ಶೂನ್ಯಕ್ಕೆ ಮರಳಿಸಿದರು. ಮಾರ್ಕ್‌ ವುಡ್‌ ತಮ್ಮ ಮೊದಲ ಓವರಿನಲ್ಲಿ ಶಿಖರ್‌ ಧವನ್‌ಗೆ ಬಲೆ ಬೀಸಿದರು. ರೋಹಿತ್‌ ಗೈರಲ್ಲಿ ಅವಕಾಶ ಪಡೆದ ಧವನ್‌ ಗಳಿಕೆ ಕೇವಲ 4 ರನ್‌.

2 ವಿಕೆಟ್‌ ಪತನದ ಬಳಿಕ ಭಡ್ತಿ ಪಡೆದು ಬಂದ ರಿಷಭ್‌ ಪಂತ್‌ ಹೊಡಿಬಡಿ ಆಟದ ಸೂಚನೆ ನೀಡಿದರು. ಆರ್ಚರ್‌ ಎಸೆತವೊಂದನ್ನು ರಿವರ್ಸ್‌ ಸ್ವೀಪ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟಿದ ರೀತಿ ಅತ್ಯಾಕರ್ಷಕವಾಗಿತ್ತು. ಆದರೆ ಪಂತ್‌ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. 23 ಎಸೆತಗಳಿಂದ 21 ರನ್‌ ಮಾಡಿ ವಾಪಸಾದರು (2 ಬೌಂಡರಿ, 1 ಸಿಕ್ಸರ್‌). ಸರಿಯಾಗಿ ಅರ್ಧ ಹಾದಿ ಕ್ರಮಿಸುವ ವೇಳೆ ಸ್ಟೋಕ್ಸ್‌ ಈ ವಿಕೆಟ್‌ ಹಾರಿಸಿದರು. 10 ಓವರ್‌ ಮುಕ್ತಾಯಕ್ಕೆ ಭಾರತದ ಸ್ಕೋರ್‌ 4 ವಿಕೆಟಿಗೆ ಕೇವಲ 48 ರನ್‌ ಆಗಿತ್ತು. ಮೊದಲ 10 ಓವರ್‌ ವೇಳೆ 6 ಮಂದಿ ಬೌಲಿಂಗಿಗೆ ಇಳಿದದ್ದು ಆಂಗ್ಲರ ಬೌಲಿಂಗ್‌ ಆಳಕ್ಕೆ ಉತ್ತಮ ನಿದರ್ಶನವಾಗಿತ್ತು.

Advertisement

ಅಯ್ಯರ್‌ ಅರ್ಧ ಶತಕ
ಭಾರತದ ಸರದಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರದು ಏಕಾಂಗಿ ಹೋರಾಟವಾಗಿತ್ತು. ಎಲ್ಲರೂ ಅಗ್ಗಕ್ಕೆ ಔಟಾದರೆ ಅಯ್ಯರ್‌ ಆಂಗ್ಲರ ದಾಳಿಯನ್ನು ತಡೆದು ನಿಂತು ಅರ್ಧ ಶತಕ ಬಾರಿಸಿದರು. ಅಯ್ಯರ್‌ ಅವರ ಗಳಿಕೆ 48 ಎಸೆತಗಳಿಂದ 67 ರನ್‌ (8 ಫೋರ್‌, 1 ಸಿಕ್ಸರ್‌). ಇದು ಅವರ 3ನೇ ಅರ್ಧ ಶತಕ ಹಾಗೂ ಸರ್ವಾಧಿಕ ವೈಯಕ್ತಿಕ ಗಳಿಕೆ. ಅಂತಿಮ ಓವರಿನಲ್ಲಿ ಜೋರ್ಡನ್‌ ಈ ವಿಕೆಟ್‌ ಉರುಳಿಸಿದರು. ಹಾರ್ದಿಕ್‌ ಪಾಂಡ್ಯ ಗಳಿಕೆ 21 ಎಸೆತಗಳಿಂದ 19 ರನ್‌ (1 ಬೌಂಡರಿ, 1 ಸಿಕ್ಸರ್‌).

ಸ್ಕೋರ್‌ ಪಟ್ಟಿ
ಭಾರತ
ಶಿಖರ್‌ ಧವನ್‌ ಬಿ ವುಡ್‌ 4
ಕೆ.ಎಲ್‌. ರಾಹುಲ್‌ ಬಿ ಆರ್ಚರ್‌ 1
ವಿರಾಟ್‌ ಕೊಹ್ಲಿ ಸಿ ಜೋರ್ಡನ್‌ ಬಿ ರಶೀದ್‌ 0
ರಿಷಭ್‌ ಪಂತ್‌ ಸಿ ಬೇರ್‌ಸ್ಟೊ ಬಿ ಸ್ಟೋಕ್ಸ್‌ 21
ಶ್ರೇಯಸ್‌ ಅಯ್ಯರ್‌ ಸಿ ಮಾಲನ್‌ ಬಿ ಜೋರ್ಡನ್‌ 67
ಹಾರ್ದಿಕ್‌ ಪಾಂಡ್ಯ ಸಿ ಜೋರ್ಡನ್‌ ಬಿ ಆರ್ಚರ್‌ 19
ಶಾರ್ದೂಲ್‌ ಠಾಕೂರ್‌ ಸಿ ಮಾಲನ್‌ ಬಿ ಆರ್ಚರ್‌ 0
ವಾಷಿಂಗ್ಟನ್‌ ಸುಂದರ್‌ ಔಟಾಗದೆ 3
ಅಕ್ಷರ್‌ ಪಟೇಲ್‌ ಔಟಾಗದೆ 7
ಇತರ 2
ಒಟ್ಟು (7 ವಿಕೆಟಿಗೆ) 124
ವಿಕೆಟ್‌ ಪತನ: 1-2, 2-3, 3-20, 4-48, 5-102, 6-102, 7-117.
ಬೌಲಿಂಗ್‌; ಆದಿಲ್‌ ರಶೀದ್‌ 3-0-14-1
ಜೋಫ್ರ ಆರ್ಚರ್‌ 4-1-23-3
ಮಾರ್ಕ್‌ ವುಡ್‌ 4-0-20-1
ಕ್ರಿಸ್‌ ಜೋರ್ಡನ್‌ 4-0-27-1
ಬೆನ್‌ ಸ್ಟೋಕ್ಸ್‌ 3-0-25-1
ಸ್ಯಾಮ್‌ ಕರನ್‌ 2-0-15-0

ಇಂಗ್ಲೆಂಡ್‌
ಜಾಸನ್‌ ರಾಯ್‌ ಎಲ್‌ಬಿಡಬ್ಲ್ಯು ಸುಂದರ್‌ 49
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಚಹಲ್‌ 28
ಡೇವಿಡ್‌ ಮಾಲನ್‌ ಔಟಾಗದೆ 24
ಜಾನಿ ಬೇರ್‌ಸ್ಟೊ ಔಟಾಗದೆ 26
ಇತರ 3
ಒಟ್ಟು (15.3 ಓವರ್‌ಗಳಲ್ಲಿ 2 ವಿಕೆಟಿಗೆ) 130
ವಿಕೆಟ್‌ ಪತನ: 1-72, 2-89.
ಬೌಲಿಂಗ್‌: ಅಕ್ಷರ್‌ ಪಟೇಲ್‌ 3-0-24-0
ಭುವನೇಶ್ವರ್‌ ಕುಮಾರ್‌ 2-0-15-0
ಯಜುವೇಂದ್ರ ಚಹಲ್‌ 4-0-44-1
ಶಾರ್ದೂಲ್‌ ಠಾಕೂರ್‌ 2-0-16-0
ಹಾರ್ದಿಕ್‌ ಪಾಂಡ್ಯ 2-0-13-0
ವಾಷಿಂಗ್ಟನ್‌ ಸುಂದರ್‌ 2.3-0-18-1

ಪಂದ್ಯಶ್ರೇಷ್ಠ: ಜೋಫ್ರ ಆರ್ಚರ್‌

Advertisement

Udayavani is now on Telegram. Click here to join our channel and stay updated with the latest news.

Next