ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಯಲ್ಲಿ 5-0 ವೈಟ್‌ವಾಶ್ ಅನುಭವಿಸಿದ ಸಂಕಟದಲ್ಲಿರುವ ಪಾಕಿಸ್ಥಾನ ಟಿ20 ಸರಣಿಯಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿ ಆಘಾತಕ್ಕೆ ಸಿಲುಕಿದೆ.
ಸೋಮವಾರದ ಮೊದಲ ಮುಖಾಮುಖೀಯಲ್ಲಿ ಆತಿಥೇಯ ಕಿವೀಸ್ ಸಫìರಾಜ್ ಅಹ್ಮದ್ ಬಳಗವನ್ನು 7 ವಿಕೆಟ್‌ಗಳಿಂದ ಸುಲಭದಲ್ಲಿ ಮಣಿಸಿದೆ.
ವೇಗಿಗಳಾದ ಟಿಮ್ ಸೌಥಿ ಮತ್ತು ಸೇತ್ ರ್ಯಾನ್ಸ್ ದಾಳಿಗೆ ತತ್ತರಿಸಿದ ಪಾಕಿಸ್ಥಾನ 19.4 ಓವರ್‌ಗಳಲ್ಲಿ 105 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದರೆ, ನ್ಯೂಜಿಲ್ಯಾಂಡ್ 15.5 ಓವರ್‌ಗಳಲ್ಲಿ 3 ವಿಕೆಟಿಗೆ 106 ರನ್ ಮಾಡಿ ಗೆಲುವು ಸಾಧಿಸಿತು. 3 ಪಂದ್ಯಗಳ ಸರಣಿಯ 2ನೇ ಹಣಾಹಣಿ ಜ. 25ರಂದು ಆಕ್ಲೆಂಡ್‌ನಲ್ಲಿ ನಡೆಯಲಿದೆ.
ಸೌಥಿ (13ಕ್ಕೆ 3) ಮತ್ತು ರ್ಯಾನ್ಸ್ (26ಕ್ಕೆ 3) ಬೌಲಿಂಗ್ ಆಕ್ರಮಣವನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾದ ಪಾಕಿಸ್ಥಾನ 6ನೇ ಓವರ್ ವೇಳೆ 22 ರನ್ನಿಗೆ 4 ವಿಕೆಟ್ ಉರುಳಿಸಿಕೊಂಡು ಚಿಂತಾಜನಕ ಸ್ಥಿತಿಗೆ ತಲಪಿತ್ತು. ಕೊನೆಗೂ ಈ ಸ್ಥಿತಿಯಿಂದ ಚೇತರಿಸಿಕೊಳ್ಳಲೇ ಇಲ್ಲ. ಪಾಕ್ ಪರ ಇಬ್ಬರಷ್ಟೇ ಎರಡಂಕೆಯ ಗಡಿ ದಾಟಿದರು. ಬಾಬರ್ ಆಜಂ (41) ಮತ್ತು ಹಸನ್ ಅಲಿ (23) ಸಣ್ಣ ಮಟ್ಟದ ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ ನೂರರ ಗಡಿ ದಾಟುವಂತಾಯಿತು.
ನ್ಯೂಜಿಲ್ಯಾಂಡ್ ಆರಂಭವೂ ಆಘಾತಕಾರಿಯಾಗಿತ್ತು. 8 ರನ್ ಆಗುವಷ್ಟಲ್ಲಿ ಮಾರ್ಟಿನ್ ಗಪ್ಟಿಲ್ (2) ಮತ್ತು ಗ್ಲೆನ್ ಫಿಲಿಪ್ಸ್ (3) ವಿಕೆಟ್ ಹಾರಿಹೋಗಿತ್ತು. ಆದರೆ ಕಾಲಿನ್ ಮುನ್ರೊ (ಅಜೇಯ 49), ಟಾಮ್ ಬ್ರೂಸ್ (26) ಮತ್ತು ರಾಸ್ ಟಯ್ಲರ್ (ಅಜೇಯ 22) ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು. ಆಕ್ರಮಣಕಾರಿ ಆಟದ ಮೂಲಕ 43 ಎಸೆತಗಳಿಂದ 49 ರನ್ (3 ಬೌಂಡರಿ, 2 ಸಿಕ್ಸರ್) ಹೊಡೆದ ಮುನ್ರೊ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-19.4 ಓವರ್‌ಗಳಲ್ಲಿ 105 (ಬಾಬರ್ 41, ಹಸನ್ ಅಲಿ 23, ಸೌಥಿ 13ಕ್ಕೆ 3, ರ್ಯಾನ್ಸ್ 26ಕ್ಕೆ 3, ಸ್ಯಾಂಟ್ನರ್ 15ಕ್ಕೆ 2). ನ್ಯೂಜಿಲ್ಯಾಂಡ್-15.5 ಓವರ್‌ಗಳಲ್ಲಿ 3 ವಿಕೆಟಿಗೆ 106 (ಮುನ್ರೊ ಔಟಾಗದೆ 49, ಬ್ರೂಸ್ 26, ಟಯ್ಲರ್ ಔಟಾಗದೆ 22, ರಯೀಸ್ 24ಕ್ಕೆ 2). ಪಂದ್ಯಶ್ರೇಷ್ಠ: ಕಾಲಿನ್ ಮುನ್ರೊ.