Advertisement

ಆಸೀಸ್‌ ವನಿತೆಯರಿಗೆ ತ್ರಿಕೋನ ಟಿ20 ಸರಣಿ

10:26 AM Feb 14, 2020 | Team Udayavani |

ಮೆಲ್ಬರ್ನ್: ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಅವರ ಹೋರಾಟಕಾರಿ ಅರ್ಧಶತಕದಿಂದ ಯಾವುದೇ ಪ್ರಯೋಜನ ಲಭಿಸಿಲ್ಲ. ಅವರ ಹೋರಾಟದ ಬ್ಯಾಟಿಂಗ್‌ ಹೊರತಾಗಿಯೂ ಭಾರತವು ತ್ರಿಕೋನ ವನಿತಾ ಟಿ20 ಸರಣಿಯ ಫೈನಲ್‌ನಲ್ಲಿ 11 ರನ್ನುಗಳಿಂದ ಸೋತು ನಿರಾಶೆ ಅನುಭವಿಸಿತು.

Advertisement

ಗೆಲ್ಲಲು 156 ರನ್‌ ತೆಗೆಯುವ ಸವಾಲು ಪಡೆದಿದ್ದ ಭಾರತವು ಮೊದಲ 15 ಓವರ್‌ ಮುಗಿದಾಗ ಮೂರು ವಿಕೆಟಿಗೆ 115 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು ಮತ್ತು ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಆಬಳಿಕ ನಾಟಕೀಯ ಕುಸಿತ ಕಂಡ ಭಾರತವು 144 ರನ್ನಿಗೆ ಆಲೌಟಾಗಿ 11 ರನ್ನುಗಳಿಂದ ಶರಣಾಯಿತು.

ಜೊನಾಸೆನ್‌ ಗೆಲುವಿನ ರೂವಾರಿ
ಅನುಭವಿ ಎಡಗೈ ಸ್ಪಿನ್ನರ್‌ ಜೆಸ್‌ ಜೊನಾಸೆನ್‌ ಫೈನಲ್‌ ಪಂದ್ಯದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೊನೆ ಹಂತದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ ಸಂಘಟಿಸಿದ ಅವರು ಭಾರತಕ್ಕೆ ಪ್ರಬಲ ಹೊಡೆತ ನೀಡುವಲ್ಲಿ ಯಶಸ್ವಿಯಾದರು. ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ 12 ರನ್ನಿಗೆ ಐದು ವಿಕೆಟ್‌ ಉರುಳಿಸುವ ಮೂಲಕ ಅವರು ಭಾರತಕ್ಕೆ ಪ್ರಶಸ್ತಿ ನಿರಾಕರಿಸಿದರು. ಅವರು ವನಿತಾ ಟಿ20ಯಲ್ಲಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದ ಆಸ್ಟ್ರೇಲಿಯದ ಮೂರನೇ ಬೌಲರ್‌ ಆಗಿದ್ದಾರೆ.

15ನೇ ಓವರಿನಲ್ಲಿ ಮಂದನಾ ಅವರ ವಿಕೆಟ್‌ ಬೀಳುವುದರೊಂದಿಗೆ ಭಾರತ ಹಿನ್ನಡೆ ಅನುಭವಿಸಿತು. ಡೀಪ್‌ ಮಿಡ್‌ವಿಕೆಟ್‌ ಕ್ಷೇತ್ರದಲ್ಲಿ ನಿಕೋಲಾ ಕ್ಯಾರಿ ಪಡೆದ ಅದ್ಭುತ ಕ್ಯಾಚ್‌ಗೆ ಮಂದನಾ ಬಲಿಯಾದರು. 16ನೇ ಓವರಿನಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಔಟಾಗುತ್ತಲೇ ಭಾರತದ ಸೋಲು ಖಚಿತವಾಯಿತು. ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದ ಮಂದನಾ 37 ಎಸೆತಗಳಲ್ಲಿ 66 ರನ್‌ ಸಿಡಿಸಿದ್ದರು. 12 ಬೌಂಡರಿ ಬಾರಿಸಿದ್ದರು. ಭಾರತ ಪರ ಮೊದಲ ಪಂದ್ಯವನ್ನಾಡಿದ 16ರ ಹರೆಯದ ರಿಚಾ ಘೋಷ್‌ 23 ಎಸೆತಗಳಿಂದ 17 ರನ್‌ ಗಳಿಸಿದರು.

ಆಲ್‌ರೌಂಡ್‌ ನಿರ್ವಹಣೆ
ಮಂದನಾ ಅವರ ವಿಕೆಟನ್ನು ಪಡೆಯುವ ಮೂಲಕ ಪಂದ್ಯ ತಿರುವು ಪಡೆಯಿತು. ಅವರು ಮೈದಾನದ ಎಲ್ಲ ಕಡೆಗೂ ಚೆಂಡನ್ನು ಹೊಡೆಯುತ್ತಿದ್ದರು. ಜೊನಾಸೆನ್‌ ಅವರ ಅದ್ಭುತ ದಾಳಿಯಿಂದ ಜಯ ನಮ್ಮದಾಯಿತು ಎಂದು ಆಸ್ಟ್ರೇಲಿಯ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಹೇಳಿದ್ದಾರೆ.

Advertisement

ಒತ್ತಡಕ್ಕೆ ಬಿದ್ದೆವು
ಕೊನೆಯ ಮೂರು ಓವರ್‌ಗಳಲ್ಲಿ ನಾವು ಒತ್ತಡಕ್ಕೆ ಬಿದ್ದೆವು. ಒತ್ತಡವನ್ನು ಮೆಟ್ಟಿ ನಿಲ್ಲಲು ನಾವು ವಿಫ‌ಲರಾಗಿ ವಿಕೆಟ್‌ ಕಳೆದುಕೊಂಡು ಶರಣಾದೆವು ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ತಿಳಿಸಿದರು.

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯ 20 ಓವರ್‌ಗಳಲ್ಲಿ ಆರು ವಿಕೆಟಿಗೆ 155 (ಬೆತ್‌ ಮೂನಿ 71 ಔಟಾಗದೆ), ಭಾರತ 20 ಓವರ್‌ಗಳಲ್ಲಿ 144 ಆಲೌಟ್‌ (ಸ್ಮತಿ ಮಂದನಾ 66, ಜೆಸ್‌ ಜೊನಾಸೆನ್‌ 12ಕ್ಕೆ 5).

Advertisement

Udayavani is now on Telegram. Click here to join our channel and stay updated with the latest news.

Next