Advertisement

ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಒಮ್ಮೆಲೇ 20 ಸ್ಥಾನ ಜಿಗಿದ ಲಸಿತ ಮಾಲಿಂಗ

12:30 AM Sep 08, 2019 | Sriram |

ದುಬಾೖ: ನ್ಯೂಜಿಲ್ಯಾಂಡ್‌ ಎದುರಿನ ಅಂತಿಮ ಟಿ20 ಪಂದ್ಯದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಉರುಳಿಸಿ, ಒಟ್ಟು 6 ರನ್ನಿಗೆ ಐವರನ್ನು ಪೆವಿಲಿಯನ್ನಿಗೆ ಅಟ್ಟಿ ಮ್ಯಾಜಿಕ್‌ ಮಾಡಿದ ಶ್ರೀಲಂಕಾದ ಲಸಿತ ಮಾಲಿಂಗ ನೂತನ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ನೆಗೆತ ಕಂಡಿದ್ದಾರೆ. ಒಮ್ಮೆಲೇ 20 ಸ್ಥಾನ ಮೇಲೇರಿ 21ನೇ ಸ್ಥಾನ ಅಲಂಕರಿಸಿದ್ದಾರೆ.

Advertisement

ಲಸಿತ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಸಲ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಹಾರಿಸಿದ ವಿಶ್ವದ ಮೊದಲ ಬೌಲಿಂಗ್‌ ಸಾಧಕ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಲಿಂಗ ಸಾಧಿಸಿದ 5ನೇ ಹ್ಯಾಟ್ರಿಕ್‌ ಇದಾಗಿದೆ. ಈ ಸಾಧನೆ ಯೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಉರುಳಿಸಿದ ಮೊದಲ ಬೌಲರ್‌ ಎಂಬ ದಾಖಲೆಗೂ ಪಾತ್ರರಾದರು. ಅವರೀಗ 76 ಟಿ20 ಪಂದ್ಯಗಳಿಂದ 104 ವಿಕೆಟ್‌ ಕೆಡವಿದ್ದಾರೆ.

ರಶೀದ್‌ , ಆಜಂ ನಂ.1
ಅಫ್ಘಾನಿಸ್ಥಾನದ ರಶೀದ್‌ ಖಾನ್‌ ಬೌಲಿಂಗ್‌ ರ್‍ಯಾಂಕಿಂಗ್‌ ಯಾದಿಯ ಅಗ್ರಸ್ಥಾನ ಅಲಂಕರಿಸಿದ್ದಾರೆ. ನ್ಯೂಜಿಲ್ಯಾಂಡ್‌ನ‌ ಎಡಗೈ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಅವರದು 6 ಸ್ಥಾನಗಳ ಪ್ರಗತಿ. ಅವರೀಗ 5ನೇ ಸ್ಥಾನ ತಲುಪಿದ್ದಾರೆ. ಕುಲದೀಪ್‌ ಟಾಪ್‌-10 ಯಾದಿಯಲ್ಲಿರುವ ಭಾರತದ ಏಕೈಕ ಬೌಲರ್‌ (8).

ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನದ ಬಾಬರ್‌ ಆಜಂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕಾಲಿನ್‌ ಮುನ್ರೊ 2ರಿಂದ 3ಕ್ಕೆ ಇಳಿದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ 3ರಿಂದ 2ನೇ ಸ್ಥಾನ ತಲುಪಿದ್ದಾರೆ. ಟಾಪ್‌-10 ಯಾದಿಯಲ್ಲಿರುವ ಭಾರತದ ಬ್ಯಾಟ್ಸ್‌ ಮನ್‌ಗಳೆಂದರೆ ಕೆ.ಎಲ್‌. ರಾಹುಲ್‌ (7) ಮತ್ತು ರೋಹಿತ್‌ ಶರ್ಮ (10).

ಮ್ಯಾಕ್ಸ್‌ವೆಲ್‌ ನಂ.1 ಆಲ್‌ರೌಂಡರ್‌
ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಟಿ20ಯ ಅಗ್ರಮಾನ್ಯ ಆಲ್‌ರೌಂಡರ್‌ ಆಗಿದ್ದಾರೆ (390 ಅಂಕ). ದ್ವಿತೀಯ ಸ್ಥಾನದಲ್ಲಿರುವವರು ಬಾಂಗ್ಲಾದೇಶದ ಶಕಿಬ್‌ ಅಲ್‌ ಹಸನ್‌ (339). ಇವರಿಬ್ಬರ ನಡುವೆ 51 ಅಂಕಗಳ ಅಂತರವಿದೆ. ಅಫ್ಘಾನಿಸ್ಥಾನದ ಮೊಹಮ್ಮದ್‌ ನಬಿ 3ನೇ, ಬಾಂಗ್ಲಾದ ಮಹಮದುಲ್ಲ 4ನೇ ಸ್ಥಾನದಲ್ಲಿದ್ದಾರೆ. ಅಗ್ರ ಹತ್ತರಲ್ಲಿ ಭಾರತದ ಯಾವುದೇ ಕ್ರಿಕೆಟಿಗರಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next