ಹೋಬರ್ಟ್: ದೊಡ್ಡ ಮೊತ್ತದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯ 11 ರನ್ನುಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 213 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 8 ವಿಕೆಟಿಗೆ 202 ರನ್ ಮಾಡಿ ಶರಣಾಯಿತು.
ಆಸೀಸ್ ಪರ 100ನೇ ಪಂದ್ಯವಾಡಿದ ಡೇವಿಡ್ ವಾರ್ನರ್ 36 ಎಸೆತಗಳಿಂದ 70 ರನ್ ಸಿಡಿಸಿ ಪಂದ್ಯಶ್ರೇಷ್ಠರೆನಿಸಿದರು (12 ಬೌಂಡರಿ, 1 ಸಿಕ್ಸರ್). ಜೋಶ್ ಇಂಗ್ಲಿಸ್ 39 ರನ್ ಬಾರಿಸಿದರು. ಈ ಜೋಡಿಯಿಂದ ಮೊದಲ ವಿಕೆಟಿಗೆ 8 ಓವರ್‌ಗಳಿಂದ 93 ರನ್ ಹರಿದು ಬಂತು. ಟಿಮ್ ಡೇವಿಡ್ 17 ಎಸೆತಗಳಿಂದ ಅಜೇಯ 37 ರನ್ ಬಾರಿಸಿ (4 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ವೆಸ್ಟ್ ಇಂಡೀಸ್ ಆರಂಭ ಕೂಡ ಅಬ್ಬರದಿಂದ ಕೂಡಿತ್ತು. ಬ್ರ್ಯಾಂಡನ್ ಕಿಂಗ್ (53) ಮತ್ತು ಜಾನ್ಸನ್ ಚಾರ್ಲ್ಸ್ (42) ಸೇರಿಕೊಂಡು 8.3 ಓವರ್‌ಗಳಿಂದ 89 ರನ್ ಪೇರಿಸಿದರು. ಕೊನೆಯಲ್ಲಿ ಜೇಸನ್ ಹೋಲ್ಡರ್ (34) ಸಿಡಿದು ನಿಂತರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಮುಳುವಾಯಿತು. ತಲಾ 3 ವಿಕೆಟ್ ಕಿತ್ತ ಆ್ಯಂಡ್ರೆ ರಸೆಲ್ ಮತ್ತು ಆ್ಯಡಂ ಝಂಪ ಈ ಪಂದ್ಯದ ಯಶಸ್ವಿ ಬೌಲರ್.
ಆಸೀಸ್ ಟೆಸ್ಟ್ ತಂಡಕ್ಕೆ ನೇಸರ್
ಮೆಲ್ಬರ್ನ್: ಆಲ್‌ರೌಂಡರ್ ಮೈಕಲ್ ನೇಸರ್ ಅವರನ್ನು ಆಸ್ಟ್ರೇಲಿಯ ಟೆಸ್ಟ್ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧ ಅವರದೇ ನೆಲದಲ್ಲಿ 8 ವರ್ಷಗಳ ಬಳಿಕ ಆಡಲಾಗುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನೇಸರ್ ಸೇರ್ಪಡೆಗೊಂಡಿದ್ದಾರೆ.
ಮೈಕಲ್ ನೇಸರ್ 2022ರ ಡಿಸೆಂಬರ್‌ನಲ್ಲಿ ಕೊನೆಯ ಸಲ ಟೆಸ್ಟ್ ಆಡಿದ್ದರು. ವೇಗಿ ಸ್ಕಾಟ್ ಬೋಲ್ಯಾಂಡ್ ಕೂಡ ತಂಡದಲ್ಲಿದ್ದಾರೆ. ಆದರೆ ಅವರ ಫಿಟ್‌ನೆಸ್ ಬಗ್ಗೆ ಅನುಮಾನಗಳಿವೆ.
ಸರಣಿಯ ಮೊದಲ ಟೆಸ್ಟ್ ಪಂದ್ಯ ಫೆ. 29ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ.