Advertisement

T.R.P. Rama movie review; ಬ್ರೇಕಿಂಗ್‌ ನ್ಯೂಸ್‌ನಿಂದ ಬಸವಳಿದ ಬದುಕು!

10:54 AM Nov 04, 2023 | Team Udayavani |

ಇಂದಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಒಳ್ಳೆಯ ಟಿಆರ್‌ಪಿ ತಮ್ಮದಾಗಿಸಿಕೊಳ್ಳಲು ಟಿ. ವಿ ಚಾನೆಲ್‌ಗ‌ಳು ಏನೆಲ್ಲ ಕಸರತ್ತುಗಳು, ಸಾಹಸಗಳನ್ನು ಮಾಡುತ್ತವೆ ಎಂಬುದು ಬಹುತೇಕರು ಬಲ್ಲರು. ಸುದ್ದಿ ವಾಹಿನಿಗಳ ವರದಿಗಾರರು, ಪತ್ರಕರ್ತರು, ಸಿಬ್ಬಂದಿಯ ಕೆಲಸದ ಒತ್ತಡ ಹೇಗಿರುತ್ತದೆ ಎಂಬುದು ಹತ್ತಿರದಿಂದ ಕಂಡವರಷ್ಟೇ ಗೊತ್ತು. ಪ್ರತಿದಿನ ಬ್ರೇಕಿಂಗ್‌ ಸುದ್ದಿಯನ್ನು ಬೆನ್ನುಹತ್ತುವ, ಟಿಆರ್‌ಪಿ ರೇಸಿಂಗ್‌ನಲ್ಲಿ ಮುಗಿಬೀಳುವ ಸುದ್ದಿ ವಾಹಿನಿಗಳು, ತಮ್ಮ ಸುದ್ದಿಯ ಸತ್ಯಾಸತ್ಯತೆಗಳನ್ನು ಪರಾಮರ್ಶಿಸದೆ ಹೋದರೆ, ಏನೆಲ್ಲ ಅನಾಹುತಗಳಾಗುತ್ತದೆ ಎಂಬು ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಸಿನಿಮಾ “ಟಿಆರ್‌ಪಿ ರಾಮ’.

Advertisement

“ಟಿಆರ್‌ಪಿ ರಾಮ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಖಾಸಗಿ ಸುದ್ದಿವಾಹಿನಿಯೊಂದರ “ಟಿಆರ್‌ಪಿ’ ಏರಲು “ರಾಮ’ ಎಂಬ ಹಳ್ಳಿಯ ಹುಡುಗನೊಬ್ಬ ಹೇಗೆ ಸರಕಾಗುತ್ತಾನೆ. ಈ ರಾಮ ಯಾರು? ಅವನ ಹಿನ್ನೆಲೆಯೇನು? ಅವನನ್ನು ಸಮಾಜ ಮತ್ತು ವ್ಯವಸ್ಥೆ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ? ಎಂಬುದೇ “ಟಿಆರ್‌ಪಿ ರಾಮ’ ಸಿನಿಮಾದ ಕಥಾಹಂದರ. ಅಂತಿಮವಾಗಿ ಇದೆಲ್ಲದಕ್ಕೂ ಉತ್ತರವೇನು? ಎಂಬುದನ್ನು ನಿರ್ದೇಶಕರು ಕ್ಲೈಮ್ಯಾಕ್ಸ್‌ ನಲ್ಲಿ ಕೊಡುವ ಪ್ರಯತ್ನ ಮಾಡಿದ್ದಾರೆ.

ಪ್ರಸ್ತುತ ವಿಷಯಗಳ ಸುತ್ತ “ಟಿಆರ್‌ಪಿ ರಾಮ’ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಆದರೆ ಅದನ್ನು ಚಿತ್ರಕಥೆ, ನಿರೂಪಣೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ತೆರೆದಿಡುವ ಪ್ರಯತ್ನದಲ್ಲಿ ಚಿತ್ರತಂಡ ಹಿಂದುಳಿದಿದೆ. ತಾಯಿ-ಮಗನ ನಡುವಿನ ಭಾವನಾತ್ಮಕ ಸನ್ನಿವೇಶಗಳು ಸಿನಿಮಾದ ಹೈಲೈಟ್ಸ್‌. ಸಿನಿಮಾದ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿ, ಚಿತ್ರಕಥೆ-ನಿರೂಪಣೆಗೆ ಕೊಂಚ ವೇಗ ನೀಡಿದ್ದರೆ, “ಟಿಆರ್‌ಪಿ ರಾಮ’ ಇನ್ನಷ್ಟು ವೇಗವಾಗಿ ನೋಡುಗರ ಮನಮುಟ್ಟುವ ಸಾಧ್ಯತೆಗಳಿದ್ದವು.

ಸುಮಾರು ಮೂರು ದಶಕಗಳ ನಂತರ ಮತ್ತೆ ಕನ್ನಡಕ್ಕೆ ಮರಳಿರುವ ಹಿರಿಯ ನಟಿ ಮಹಾಲಕ್ಷ್ಮೀ, ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ನ ಮೊದಲ ಪಾತ್ರದಲ್ಲೇ ನೋಡುಗರಿಗೆ ಇಷ್ಟವಾಗುತ್ತಾರೆ. ಅಸಹಾಯಕ ತಾಯಿಯ ಪಾತ್ರದಲ್ಲಿ ಮಹಾಲಕ್ಷ್ಮೀ ಅವರದ್ದು ಅದ್ಭುತ ಅಭಿನಯ. ಉಳಿದಂತೆ ವರದಿಗಾರ್ತಿಯಾಗಿ ಸ್ಪರ್ಶ, ಮಾನಸಿಕ ಅಸ್ವಸ್ಥನಾಗಿ ರವಿಪ್ರಸಾದ್‌ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಇತರೆ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ, ಅವುಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ

ಜಿ.ಎಸ್‌.ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next