ಚೆನ್ನೈ: ಆಸ್ಟ್ರೇಲಿಯ ಪ್ರವಾಸದ ವೇಳೆ ಮೂರೂ ಮಾದರಿಯ ಅಂತಾ ರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಭಾರೀ ಯಶಸ್ಸು ಗಳಿಸಿದ ವೇಗಿ ಟಿ. ನಟರಾಜನ್ ಅವರನ್ನು ಬಿಸಿಸಿಐ ಕೋರಿಕೆಯಂತೆ ತಮಿಳುನಾಡಿನ “ವಿಜಯ್ ಹಜಾರೆ’ ಏಕದಿನ ಕ್ರಿಕೆಟ್ ತಂಡದಿಂದ ಬಿಡುಗಡೆಗೊಳಿಸಲಾಗಿದೆ.
“ವಿಜಯ್ ಹಜಾರೆ ಟೂರ್ನಿ’ಯಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಬೇಕಿದ್ದ ನಟರಾಜನ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿತ್ತು. ಈ ಬಗ್ಗೆ ತಮಿಳು ನಾಡು ಕ್ರಿಕೆಟ್ ಸಂಸ್ಥೆಗೂ ಬಿಸಿಸಿಐ ಮನವಿ ಮಾಡಿತ್ತು.
“ಬಿಸಿಸಿಐ ಮನವಿಯನ್ನು ಸ್ವೀಕರಿಸಿದ್ದು, ಅದರಂತೆ ನಟರಾಜನ್ ಅವರನ್ನು ತಮಿಳುನಾಡು ತಂಡದಿಂದ ಬಿಡುಗಡೆ ಗೊಳಿಸಲಾಗಿದೆ’ ಎಂದು ತಮಿಳುನಾಡು ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯ ಅಧ್ಯಕ್ಷ ಎಸ್. ವಾಸುದೇವನ್ ತಿಳಿಸಿದ್ದಾರೆ. ನಟರಾಜನ್ ಸ್ಥಾನಕ್ಕೆ ಆರ್.ಎಸ್. ಜಗನ್ನಾಥ್ ಶ್ರೀನಿವಾಸ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ದ್ವಿತೀಯ ಟೆಸ್ಟ್ : ಜೇಮ್ಸ್ ಆ್ಯಂಡರ್ಸನ್‌ಗೆ ರೆಸ್ಟ್ ?
ಟೀಮ್ ಇಂಡಿಯಾದ ಭರವಸೆಯ ಬೌಲರ್ ಆಗಿರುವ ನಟರಾಜನ್ ಅವರನ್ನು ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಡಿಸುವುದು ಬಿಸಿಸಿಐ ನಿರ್ಧಾ ರವಾಗಿದೆ. ಅಥವಾ ಅವರು ಕೊನೆಯ ಎರಡು ಟೆಸ್ಟ್‌ಗಳಿಗೆ ಆಯ್ಕೆಯಾಗಲೂಬಹುದು. ಹೀಗಾಗಿ ವಿಶ್ರಾಂತಿಯೊಂದಿಗೆ ಸಂಪೂರ್ಣ ಫಿಟ್‌ನೆಸ್ ಕಾಯ್ದುಕೊಳ್ಳುವಂತೆ ನಟರಾಜನ್ ಅವರಿಗೆ ಸೂಚಿಸಲಾಗಿದೆ.