ತಿ.ನರಸೀಪುರ: ಪಟ್ಟಣದಲ್ಲಿ ಹೆಚ್ಚುವರಿ ನ್ಯಾಯಾಧೀಶರ ಜತೆ ಜೆಎಂಎಫ್ಸಿ ನ್ಯಾಯಾಲಯ ಕಾರ್ಯಾರಂಭ ಮಾಡುತ್ತಿರುವುದರಿಂದ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸಲು ಬಹಳ ಅನುಕೂಲವಾಗಲಿದೆ ಎಂದು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಎ.ನಾಗಿರೆಡ್ಡಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಆರಂಭಗೊಂಡ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನಿಯೋಜನೆ ಹಾಗೂ ಸಿವಿಲ್ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕೇಂದ್ರದ ನ್ಯಾಯಾಲಯದಲ್ಲಿ ಹೆಚ್ಚು ಪ್ರಕರಣಗಳು ಇದ್ದು, ಹೆಚ್ಚುವರಿ ನ್ಯಾಯಾಲಯದ ಅಗತ್ಯ ಹಿನ್ನೆಲೆಯಲ್ಲಿ 2016ರಲ್ಲಿ ಹೊಸದಾಗಿ ನ್ಯಾಯಾಲಯ ಸ್ಥಾಪಿಸಲಾಗಿತ್ತು.
ಕಳೆದ ಶುಕ್ರವಾರ ಹೈಕೋರ್ಟ್‌ನಿಂದ ಕಚೇರಿ ಹಾಗೂ ನ್ಯಾಯಾಧೀಶರನ್ನು ನಿಯೋಜನೆಗೊಳಿಸಿದ್ದು, ಇಂದಿನಿಂದ ಕಾರ್ಯಾರಂಭವಾಗಿದೆ. ನ್ಯಾಯಾಲಯದಲ್ಲಿ ಖಾಲಿ ಇದ್ದ ನ್ಯಾಯಾಧೀಶರ ಹುದ್ದೆಗಳಿಗೂ ನಿಯೋಜನೆ ಆಗಿದೆ.
ಮುಂದಿನ ದಿನಗಳಲ್ಲಿ ವಕೀಲರಿಗೆ, ಕಕ್ಷಿದಾರರಿಗೆ ಅನುಕೂಲವಾಗಲಿದೆ. ತಲಕಾಡು ಪೊಲೀಸ್ ಠಾಣೆಯ ಪ್ರಕರಣಗಳು ಸೇರಿದಂತೆ ಒಟ್ಟು 1,500 ಪ್ರಕರಣಗಳು ಹೆಚ್ಚುವರಿ ನ್ಯಾಯಾಲಯದ ಮೂಲಕ ಇತ್ಯರ್ಥವಾಗಲಿದೆ ಎಂದರು.
ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅನಿತಾ ಕುಮಾರಿ, ಸಿವಿಲ್ ನ್ಯಾಯಾಧೀಶ ಪ್ರಶಾಂತ್, ಪ್ರಭಾರ ನ್ಯಾಯಾಧೀಶೆ ಮಾಲಾ, ವಕೀಲರ ಸಂಘದ ಅಧ್ಯಕ್ಷ ಜಿ.ರವಿಶಂಕರ್ ಬಿ.ಎಂ. ನಾಗಭೂಷಣಮೂರ್ತಿ, ಮಾದಪ್ಪ, ಜಯದೇವಣ್ಣ,
-ಕೆ.ಬಿ.ಬಸವಣ್ಣ, ದೊಡ್ಡಲಿಂಗೇಗೌಡ, ನಂಜುಂಡೇಗೌಡ, ಶಿವಣ್ಣ, ಅಣ್ಣೇಗೌಡ, ಮಹದೇವಸ್ವಾಮಿ, ಸುಮಿತ್ರಾ, ಜಗದೀಶ್, ಎಚ್.ಎನ್.ಬಿ.ನಿಧಿ, ಪಾಲಾಕ್ಷಾ, ಶಿರಸ್ತೇದಾರ್ ಶಶಿಕಲಾ ಇತರರು ಉಪಸ್ಥಿತರಿದ್ದರು.