Advertisement

ಸಮುದಾಯ ಸ್ನೇಹಿ ಬ್ಯಾಂಕಿಂಗ್‌: ಟಿ.ಎ.ಪೈ ಯಶಸ್ವೀ ಸೂತ್ರ

02:29 AM Feb 23, 2021 | Team Udayavani |

ಅತೀ ಸಣ್ಣ ಮೊತ್ತವನ್ನು ಸಾಲವಾಗಿ ನೀಡುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಂದು ಕೆಟ್ಟ ಸಂಪ್ರದಾಯ ಎಂದೇ ಪರಿಗಣಿಸಿದ್ದ ಕಾಲಘಟ್ಟದಲ್ಲಿ ಅನಂತ ಪೈ ಅವರು ಸಣ್ಣ ಮೊತ್ತವನ್ನು ಸಾಲವಾಗಿ ನೀಡುವ ಮೂಲಕ ಗ್ರಾಹಕರ ಮನಗೆದ್ದಿದ್ದರು.

Advertisement

“ನಾವು ನಮ್ಮ ಭವನಗಳನ್ನು ರೂಪಿಸುತ್ತೇವೆ, ಆ ಬಳಿಕ ಅವು ನಮ್ಮನ್ನು ರೂಪಿಸುತ್ತವೆ’ ಎಂಬುದಾಗಿ ವಿನ್‌ಸ್ಟನ್‌ ಚರ್ಚಿಲ್‌ ಒಮ್ಮೆ ಹೇಳಿದ್ದರು.

ಮುಂಗಾಣ್ಕೆಯುಳ್ಳ ಕೆಲವೇ ಮಂದಿಯಿಂದಾಗಿ ಸಣ್ಣ ಸ್ಥಳವೊಂದು ಹೇಗೆ ಮಹೋನ್ನತವಾಗಿ ಬೆಳೆಯಬಹುದು ಮತ್ತು ಪ್ರತಿರೂಪಿಯಾಗಿ ಲಕ್ಷಾಂತರ ಮಂದಿಯ ಭವಿಷ್ಯವನ್ನು ಹೇಗೆ ರೂಪಿಸಲು ಸಾಧ್ಯ ಎಂಬುದಕ್ಕೆ ಮಣ್ಣುಪಳ್ಳ ಅಥವಾ ಮಣಿಪಾಲ ಜ್ವಲಂತ ಸಾಕ್ಷಿಯಾಗಿದೆ.

ಪಶ್ಚಿಮ ಘಟ್ಟಗಳು ಮತ್ತು ಅರಬಿ ಸಮುದ್ರದ ನಡುವಣ ಪುಟ್ಟ ಊರು ಮಣಿಪಾಲ. ಇಂದು ಅದು ತನ್ನ ಗಾತ್ರಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚಿನ ಸಂಖ್ಯೆಯ ಜಾಗತಿಕ ಮಟ್ಟದ ಸಂಸ್ಥೆಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಸಣ್ಣ ಹಳ್ಳಿಯಾಗಿದ್ದ ಮಣಿಪಾಲವನ್ನು ಜಗತ್ತೇ ಬೆರಗಿ ನಿಂದ ಅನುಸರಿಸುವಂತಹ ಒಂದು ಮಾದರಿಯಾಗಿ ಬೆಳೆಸಿದ ದೂರ ದರ್ಶಿಗಳಲ್ಲಿ ತೋನ್ಸೆ ಅನಂತ ಪೈ (1922 ಜ. 17-1981 ಮೇ 29) ಒಬ್ಬರು.

38 ವರ್ಷಗಳ ತನ್ನ ರಾಜಕೀಯ ಜೀವನದಲ್ಲಿ ಅನಂತ ಪೈಗಳ ರಾಷ್ಟ್ರ ನಿರ್ಮಾಣ ಕಾಯಕ ಹಲವು ರೂಪುಗಳಲ್ಲಿ ವ್ಯಾಪಿಸಿತ್ತು. ರಾಜಕಾರಣಿಯಾಗಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೇ, ಭಾರೀ ಉದ್ಯಮ, ಉಕ್ಕು ಮತ್ತು ಗಣಿಗಾರಿಕೆಯಂತಹ ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. 1970ರ ದಶಕದ ಅತ್ಯಂತ ತೊಳಲಾಟದ ದಿನಗಳಲ್ಲಿ ರೈಲ್ವೇ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆ ಅವರದು. ಇದಕ್ಕೆ ಮುನ್ನ ಜೀವವಿಮಾ ನಿಗಮದ ಅಧ್ಯಕ್ಷರಾಗಿ ನಿಗಮದಲ್ಲಿ ಆಮೂಲಾಗ್ರ ಬದಲಾವಣೆ ಗಳನ್ನು ತಂದರು. ಅವರು ಸ್ಥಾಪಿಸಿದ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಇಂದು ದೇಶದ ಪ್ರಮುಖ ಬಿಝಿನೆಸ್‌ ಸ್ಕೂಲ್‌ಗ‌ಳಲ್ಲಿ ಒಂದಾಗಿ ಬೆಳೆದುನಿಂತಿದೆ. ಇವೆಲ್ಲದಕ್ಕೂ ಮುನ್ನ ಅವರು ಸಮಾಜಕ್ಕೆ ಅತೀ ಗಮನಾರ್ಹ ಕೊಡುಗೆ ನೀಡಿದ್ದು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿದ್ದಾಗ ಎಂಬುದನ್ನು ಎಂದಿಗೂ ಮರೆಯಲಸಾಧ್ಯ.

Advertisement

ಆಗಿನ ಬಾಂಬೆಯ ಸಿಡೆನ್‌ಹ್ಯಾಮ್‌ ಕಾಲೇಜ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಕನಾಮಿಕ್ಸ್‌ನಿಂದ ಪದವೀಧರನಾಗಿ ಮಣಿಪಾಲಕ್ಕೆ ಹಿಂದಿರುಗಿದೊಡನೆಯೇ ಅನಂತ ಪೈಗಳು 1943ರಲ್ಲಿ ಉಪ ವ್ಯವಸ್ಥಾಪಕರಾಗಿ ಸಿಂಡಿಕೇಟ್‌ ಬ್ಯಾಂಕನ್ನು ಸೇರಿಕೊಂಡರು. ಆ ಬಳಿಕದ ಕೆಲವು ವರ್ಷಗಳು ಗ್ರಾಮೀಣ ಬ್ಯಾಂಕಿಂಗ್‌ ಪಾಲಿಗೆ ಅತ್ಯಂತ ಸವಾಲಿನ ಕಾಲವಾಗಿತ್ತು. ಅನಂತ ಪೈಗಳ ತಂದೆ ಉಪೇಂದ್ರ ಪೈ, ಟಿಎಂಎ ಪೈ ಮತ್ತು ವಿ.ಎಸ್‌. ಕುಡ್ವ ಅವರು ಸ್ಥಾಪಿಸಿದ ಸಿಂಡಿಕೇಟ್‌ ಬ್ಯಾಂಕ್‌ ಆ ಕಾಲಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದ ದೇಶದ ಪ್ರಥಮ ಬ್ಯಾಂಕ್‌ ಆಗಿತ್ತು. ಪಿಗ್ಮಿ ಠೇವಣಿಯಂತಹ ಯೋಜನೆಗಳ ಮೂಲಕ ಸಣ್ಣ ಉಳಿತಾಯಗಾರರನ್ನು ಪ್ರೋತ್ಸಾಹಿಸು ವುದಕ್ಕೆ ಸಿಂಡಿಕೇಟ್‌ ಬ್ಯಾಂಕ್‌ ಪ್ರಖ್ಯಾತಿಯಾಗಿತ್ತು.

1940ರ ದಶಕದಲ್ಲಿ ಎರಡು ಸಾಮಾಜಿಕ-ಆರ್ಥಿಕ ಘಟನೆಗಳು ದೇಶದ ಬ್ಯಾಂಕಿಂಗ್‌ ಉದ್ದಿಮೆಯ ಮೇಲೆ ಪ್ರಭಾವ ಬೀರಿದ್ದವು. ಮೊದಲನೆಯದು ದ್ವಿತೀಯ ಮಹಾಯುದ್ಧ. ಇದರಿಂದಾಗಿ ಅನೇಕ ಭಾರತೀಯ ಯೋಧರು ಉದ್ಯೋಗ ಪಡೆದರು, ಗ್ರಾಮೀಣ ಭಾಗ ದಲ್ಲಿ ಆದಾಯ ವೃದ್ಧಿಯಾಯಿತು. ಇನ್ನೊಂದು ಬ್ರಿಟಿಷರ ದಾಸ್ಯದಿಂದ ಮುಕ್ತಿ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತ ಜಾರಿಯಾಗಿ ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯದ ಅನುಭವ ಉಂಟಾಯಿತು. ಇವೆರಡರ ಪರಿಣಾಮವಾಗಿ ಸೃಷ್ಟಿಯಾದ ಹೊಸ ಆರ್ಥಿಕ ಸನ್ನಿವೇಶಕ್ಕೆ ಸಮರ್ಥವಾಗಿ ಪ್ರತಿಸ್ಪಂದಿಸಲು ಭಾರತೀಯ ಗ್ರಾಮೀಣ ಜನ ಜೀವನದ ಬಗ್ಗೆ ತಳಮಟ್ಟದ ಅರಿವು, ಔದ್ಯಮಿಕ ಚಾತುರ್ಯ ಹಾಗೂ ಬಡವರು ಮತ್ತು ಜನಸಾಮಾನ್ಯರ ಬಗ್ಗೆ ಸಹಾನುಭೂತಿ ಹೊಂದಿರುವ ಮುತ್ಸದ್ಧಿಯೊಬ್ಬರ ಅಗತ್ಯವುಂಟಾಯಿತು. ಅನಂತ ಪೈ ಈ ಎಲ್ಲ ಗುಣಗಳನ್ನು ಹೊಂದಿದ್ದ ಸಮರ್ಥರಾಗಿದ್ದರು.

ಅನಂತ ಪೈಗಳ ಸಾರಥ್ಯದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಹಲವು ನವೀನ ಕಾರ್ಯಕ್ರಮಗಳೊಂದಿಗೆ ಗ್ರಾಮೀಣ ಪ್ರದೇಶಗಳಿಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಾದ್ಯಂತ ಗ್ರಾಮ ಪ್ರತಿನಿಧಿಗಳ ಸಕ್ರಿಯ ಭಾಗೀದಾರಿಕೆಯೊಂದಿಗೆ ಬ್ಯಾಂಕ್‌ನ ಹಲವು ಶಾಖೆಗಳು ಕಾರ್ಯಾರಂಭಿಸಿದವು. ಈ ಭಾಗೀದಾರಿಕೆ ಎಷ್ಟರಮಟ್ಟಿಗೆ ಇತ್ತು ಎಂದರೆ ಹಲವು ಶಾಖೆಗಳು ಈ ಪ್ರತಿನಿಧಿಗಳ ಮನೆಯಿಂದಲೇ ಕಾರ್ಯಾಚರಿಸುತ್ತಿದ್ದವು. ಸ್ಥಳೀಯ ಭಾಷೆಯಲ್ಲಿಯೇ ವ್ಯವಹಾರಗಳು ನಡೆಯುತ್ತಿದ್ದವು, ಅರ್ಜಿ, ನಮೂನೆಗಳು ಕನ್ನಡದಲ್ಲಿಯೇ ಇದ್ದವು.

ಸಣ್ಣ ಗ್ರಾಹಕರೆಡೆಗೆ ಗಮನ: ಅನಂತ ಪೈ ಅವರ ಚಿತ್ತ ದೊಡ್ಡ ಉದ್ಯಮಿಗಳು, ಬೃಹತ್‌ ಠೇವಣಿದಾರರ ಬದಲಾಗಿ ಸಣ್ಣ ಗ್ರಾಹಕರತ್ತಲೇ ಇತ್ತು. ಅವರ ಕಾರ್ಯಾವಧಿಯಲ್ಲಿ ಬ್ಯಾಂಕ್‌ನ ಬಹುತೇಕ ಶಾಖೆಗಳಲ್ಲಿ ಠೇವಣಿದಾರರು ಮತ್ತು ಸಾಲಗಾರರ ವ್ಯವಹಾರ ಕೆಲವೇ ಸಾವಿರ ರೂ. ಗಳಷ್ಟಾಗಿತ್ತು. ಅತೀ ಸಣ್ಣ ಮೊತ್ತವನ್ನು ಸಾಲವಾಗಿ ನೀಡುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಂದು ಕೆಟ್ಟ ಸಂಪ್ರದಾಯ ಎಂದೇ ಪರಿಗಣಿಸಿದ್ದ ಕಾಲಘಟ್ಟದಲ್ಲಿ ಅನಂತ ಪೈ ಅವರು ಸಣ್ಣ ಮೊತ್ತವನ್ನು ತನ್ನ ಗ್ರಾಹಕರಿಗೆ ಸಾಲವಾಗಿ ನೀಡುವ ಮೂಲಕ ಅವರ ಮನಗೆದ್ದರು.

ಅನಂತ ಪೈ ಅವರು ಸಿಂಡಿಕೇಟ್‌ ಬ್ಯಾಂಕ್‌ನ ಆಡಳಿತ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಆರ್‌ಬಿಐ ಡೆಪ್ಯುಟಿ ಗವರ್ನರ್‌ ಅವರು “ಬ್ಯಾಂಕ್‌ ಇಷ್ಟೊಂದು ಅಭಿವೃದ್ಧಿ ಸಾಧಿಸಿರುವಾಗ ಇಷ್ಟೊಂದು ಕನಿಷ್ಠ ಮೊತ್ತವನ್ನು ಸಾಲವಾಗಿ ಯಾಕೆ ನೀಡುತ್ತೀರಿ’ ಎಂದು ನೇರವಾಗಿ ಅನಂತ ಪೈ ಅವರನ್ನು ಪ್ರಶ್ನಿಸಿದ್ದರು. “25, 50 ರೂ.ಗಳನ್ನೇ ನಾವು ಸಾಲವಾಗಿ ನೀಡಿದ್ದರಿಂದ ಬ್ಯಾಂಕ್‌ ಪ್ರಗತಿ ಹೊಂದಲು ಸಾಧ್ಯವಾಗಿದೆ’ ಎಂದು ಅನಂತ ಪೈ ಅವರು ಉತ್ತರಿಸಿದ್ದನ್ನು ಎಂ.ವಿ. ಕಾಮತ್‌ ಅವರು ತಮ್ಮ ಪುಸ್ತಕ “ಇನ್ನೋವೇಟಿವ್‌ ಬ್ಯಾಂಕರ್‌’ ನಲ್ಲಿ ಉಲ್ಲೇಖೀಸಿದ್ದಾರೆ.
ಸಿಂಡಿಕೇಟ್‌ ಬ್ಯಾಂಕ್‌ನ ಎಲ್ಲ ಕಾರ್ಯಾಚರಣೆಗಳಲ್ಲೂ “ಸಮುದಾಯ ಸೇವೆ’ಗೆ ಆದ್ಯತೆ ನೀಡುತ್ತಲೇ ಬರಲಾಗಿತ್ತು. ಆದರೆ ಎಲ್ಲೂ ವ್ಯವಹಾರದ ಧ್ಯೇಯೋದ್ದೇಶಗಳಿಂದ ಬ್ಯಾಂಕ್‌ ರಾಜಿ ಮಾಡಿಕೊಂಡಿರಲಿಲ್ಲ. ಮೈಕ್ರೋಫೈನಾನ್ಸಿಂಗ್‌ನಂತಹ ಯೋಚನೆಯ ಸೃಜನೆಗೂ ಮುನ್ನವೇ ಸಣ್ಣ ಗ್ರಾಹಕರಿಗೆ ಸೇವೆ ನೀಡುವುದನ್ನು ತಮ್ಮ ಪ್ರಥಮ ಆದ್ಯತೆಯನ್ನಾಗಿ ಅನಂತ ಪೈ ಪರಿಗಣಿಸಿದ್ದರು. ಅಷ್ಟು ಮಾತ್ರವಲ್ಲದೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಮಹಿಳೆಯರಿಗೆ ಉತ್ತೇಜನ ನೀಡುವ ಮೂಲಕ ಅವರಲ್ಲಿ ಉಳಿತಾಯದ ಮನೋಭಾವ ಹೆಚ್ಚುವಂತೆ ಮಾಡಿದ್ದರು.

ಹಳ್ಳಿಗರನ್ನು ಮುಖಾಮುಖೀಯಾಗಿ ಭೇಟಿಯಾಗಿ ಅವರೊಂದಿಗೆ ನಡೆಸುತ್ತಿದ್ದ ಮಾತುಕತೆಗಳಿಂದಾಗಿ ಅನಂತ ಪೈ ಅವರಿಗೆ ಮಹಿಳೆ ಯರು ಎದುರಿಸುತ್ತಿರುವ ಸಂಕಷ್ಟ, ಸಮಸ್ಯೆಗಳ ಅರಿವಿತ್ತು. ತರಕಾರಿ, ಮೀನು ಮಾರಾಟ ಮಾಡುವ ಮಹಿಳೆಯರು ದಿನವಿಡೀ ದುಡಿದು ಸಂಪಾದಿ ಸಿದ ಹಣವೆಲ್ಲ ದೈನಂದಿನ ವೆಚ್ಚಗಳಲ್ಲಿಯೇ ಕರಗಿಹೋಗುತ್ತಿ ರುವುದನ್ನು ಕಂಡ ಅನಂತ ಪೈ ಅವರು ಮಹಿಳೆಯರು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಪ್ರೇರಣೆ ನೀಡುವ ಮೂಲಕ ಅವರಲ್ಲಿ ಉಳಿತಾಯ ಮನೋಭಾವವನ್ನು ಬೆಳೆಸಿದರು.

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಟ್ಟರು. 1962ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ ಆಡಳಿತ ನಿರ್ದೇ  ಶಕರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅವರು ಬೆಂಗಳೂರಿನ ಶೇಷಾದ್ರಿಪುರದಲ್ಲಿ ಸಂಪೂರ್ಣ ಮಹಿಳಾ ಸಿಬಂದಿಯನ್ನೇ ಒಳಗೊಂಡಿರುವ ಬ್ಯಾಂಕ್‌ನ ಶಾಖೆಯನ್ನು ತೆರೆದರು. ಈ ಮೂಲಕ ಸಿಂಡಿಕೇಟ್‌ ಬ್ಯಾಂಕ್‌ ಇತಿಹಾಸ ಸೃಷ್ಟಿಸಿತು. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಶಾಖೆಗಳು ಆರಂಭಗೊಂಡವು.

ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕ್‌ಗಳು ತಮ್ಮದೇ ಆದ ಪಾತ್ರವನ್ನು ವಹಿಸಬೇಕಿವೆ ಎಂದು ಪ್ರತಿಪಾದಿಸುತ್ತಲೇ ಬಂದಿದ್ದ ಅನಂತ ಪೈ, ಕೃಷಿ ಕ್ಷೇತ್ರದಂತಹ ಒಂದಿಷ್ಟು ಅಸ್ಥಿರತೆ, ಅನಿಶ್ಚತತೆಯ ಕ್ಷೇತ್ರಗಳಲ್ಲೂ ಬ್ಯಾಂಕ್‌ಗಳು ಹೂಡಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಇದರ ಭಾಗವಾ ಗಿಯೇ ಅವರು ಕೃಷಿ ಹಣಕಾಸು ವಿಭಾಗವನ್ನು ತೆರೆದು ಕೃಷಿಕರಿಗೆ ನೀರಾವರಿ ಪಂಪ್‌ಸೆಟ್‌ ಖರೀದಿಸಲು ಹಣಕಾಸಿನ ನೆರವನ್ನು ನೀಡಲು ಆರಂಭಿಸಿದರು. ಇದು ಕೇವಲ ಕೃಷಿಕರಿಗೆ ಸಹಕಾರಿಯಾದುದಷ್ಟೇ ಅಲ್ಲದೆ ಸಿಂಡಿಕೇಟ್‌ ಬ್ಯಾಂಕ್‌ಗೂ ಲಾಭವನ್ನು ತಂದುಕೊಟ್ಟಿತು. ಆ ಬಳಿಕದ ದಿನಗಳಲ್ಲಿ ಇದು ಬ್ಯಾಂಕ್‌ನ ಅತ್ಯಂತ ಲಾಭದಾಯಕ ಯೋಜನೆ ಎಂದು ಗುರುತಿಸಲ್ಪಟ್ಟಿತು. ರೈತರಿಗಾಗಿ ಹಣ ಮರುಪಾವತಿಗೆ ಸುಲಭಸಾಧ್ಯವಾದ ಸಾಲ ಯೋಜನೆ ಮತ್ತು ಇನ್ನಿತರ ಉಪಕ್ರಮಗಳನ್ನು ಪರಿಚಯಿಸಿದರು. ಇಷ್ಟು ಮಾತ್ರವಲ್ಲದೆ ಸಹಕಾರ ಕ್ಷೇತ್ರದ ಬಗೆಗೆ ಹೆಚ್ಚಿನ ವಿಶ್ವಾಸವನ್ನು ಇರಿಸಿದ್ದ ಅವರು ಕೃಷಿ ಮತ್ತು ಹಾಲು ಉತ್ಪಾದಕ ಸಹಕಾರ ಸಂಘಗಳ ಸ್ಥಾಪನೆಗೆ ನೆರವು ನೀಡಿದ್ದರು.

ಬ್ಯಾಂಕ್‌ಗಳು ಸಮಾಜದ ಎಲ್ಲ ಸ್ತರಗಳ ನಾಗರಿಕರಿಗೂ ತಲುಪು ವಂತಾ ಗಲು ಕೇಂದ್ರ ಸರಕಾರ 1969ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಸಹಿತ 13 ಇತರ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿತು. ರಾಷ್ಟ್ರೀಕರಣ ಗೊಂಡ ಬಳಿಕ ಬ್ಯಾಂಕ್‌ಗಳ ಕಾರ್ಯವೈಖರಿಯನ್ನು ಕಂಡಾಗ ಬ್ಯಾಂಕ್‌ಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಎಲ್ಲೋ ಎಡ ವುತ್ತಿವೆ ಎಂದೆನಿಸದಿರದು. ರಾಷ್ಟ್ರೀಕರಣಕ್ಕೂ ಮುನ್ನ ಸಿಂಡಿಕೇಟ್‌ ಬ್ಯಾಂಕ್‌ ಜನತೆಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ನೀಡಿದ್ದ ಸೇವೆ, ಹಣಕಾಸು ನೆರವನ್ನು ಮರೆಯಲಸಾಧ್ಯ.

ಎಲ್‌ಐಸಿ ಮುನ್ನಡೆಸಿದ್ದ ಅನಂತ ಪೈ: 1970ರಲ್ಲಿ ಅನಂತ ಪೈ ಅವರು ಕೆಲವು ಕಾಲ ಎಲ್‌ಐಸಿ ಯ ಅಧ್ಯಕ್ಷರಾಗಿಯೂ ಕಾರ್ಯ  ನಿರ್ವಹಿಸಿ ದ್ದರು. ಈ ಅವಧಿಯಲ್ಲಿ ಎಲ್‌ಐಸಿಯಲ್ಲಿ ಸಾಕಷ್ಟು ಸುಧಾರಣೆಗಳಾದು ವಲ್ಲದೆ ವ್ಯವಹಾರದಲ್ಲಿ ಭಾರೀ ವೃದ್ಧಿಯನ್ನು ಕಂಡಿತು. ವಿಮಾ ಪ್ರೀಮಿಯಂ ಮೂಲಕ ಸಂಗ್ರಹವಾಗುವ ಹಣ  ವನ್ನು ಬಡವರಿಗೆ ಮನೆ ನಿರ್ಮಾಣ, ಮೂಲ ಸೌಕರ್ಯ ಕಾಮ  ಗಾರಿ  ಗಳಿಗೆ ಬಳಕೆ..ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅನಂತ ಪೈ ಅವಕಾಶ ಕಲ್ಪಿಸಿಕೊಟ್ಟರು. ಇದರಿಂದ ಹಣಕಾಸಿನ ಚಲಾವಣೆ ಹೆಚ್ಚಿತಲ್ಲದೆ ಎಲ್‌ಐಸಿಯ ವರಮಾನವೂ ವೃದ್ಧಿಯಾ  ಯಿತು. 1972ರಲ್ಲಿ ಭಾರತ ಸರಕಾರ ಅನಂತ ಪೈ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫ‌ವಾಗಿ ವೆ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಸಣ್ಣ ಮತ್ತು ಗ್ರಾಮೀಣ ಗ್ರಾಹಕರ ಬಗೆಗೆ ಈಗಲೂ ದೊಡ್ಡ ಬ್ಯಾಂಕ್‌ಗಳು ಅಸಡ್ಡೆಯ ಮನೋಭಾವವನ್ನೇ ಮೈಗೂಡಿಸಿಕೊಂಡಿವೆ. ಆದರೆ ಅನಂತ ಪೈ ಅವರಂತಹ ವ್ಯವಹಾರ ಜಾಣ್ಮೆ ಮತ್ತು ದೂರದೃಷ್ಟಿಯ ಆಡಳಿತಗಾರರಿಂದ ಮಾತ್ರವೇ ಸಮಾಜ ಸೇವೆಯ ಜತೆಜತೆಯಲ್ಲಿ ವ್ಯವಹಾರವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯ. ಸದ್ಯ ವ್ಯವಹಾರ ಮತ್ತು ಸೇವೆ ಪರಸ್ಪರ ಹೊಂದಿಕೆಯಾಗದ ವಿಷಯಗಳು. ಆದರೆ ಅನಂತ ಪೈ ಅವರಿಗೆ ಇಂತಹ ದ್ವಂದ್ವ ಎಂದಿಗೂ ಕಾಡಿರಲಿಲ್ಲ. ಇದು ನಿಜಕ್ಕೂ ವಿಸ್ಮಯ ಮೂಡಿಸುತ್ತದೆ.

 ಪ್ರೊ| ಎಸ್‌.ಸುಧೀಂದ್ರ, ಅಸೋಸಿಯೇಟ್‌ ಡೀನ್‌(ಅಕಾಡೆಮಿಕ್ಸ್‌)  ಟ್ಯಾಪ್ಮಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next