Advertisement

ಅಸಾಧಾರಣ ಅಪ್ರಮೇಯ; ಅಧೀನರ ವ್ಯಕ್ತಿತ್ವ ಅಳೆದು ಬೆಳೆಸುತ್ತಿದ್ದವರು

01:08 AM Jan 17, 2022 | Team Udayavani |

ತನ್ನ ಅಧೀನದ ಅಧಿಕಾರಿಗಳನ್ನು (ಸಬಾರ್ಡಿ ನೇಟ್ಸ್‌) ಟಿ.ಎ. ಪೈ ಅವರು ಹೇಗೆ ನೋಡಿ ಕೊಳ್ಳುತ್ತಿದ್ದರು, ಸಿಬಂದಿಯಲ್ಲಿ ಎಂತಹ ಪ್ರೀತಿ ವಿಶ್ವಾಸವನ್ನು ತೋರುತ್ತಿದ್ದರು ಎಂಬುದು ಎಲ್ಲ ಬಗೆಯ ಆಡಳಿತಗಾರರಿಗೆ ಒಂದು ಮಾದರಿ.

Advertisement

1959ರಲ್ಲಿ ನಾನು ಮಂಗಳೂರಿನಲ್ಲಿ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಓದುತ್ತಿದ್ದೆ. ಆಗ ಅಲ್ಲಿಗೆ ಟಿ.ಎ. ಪೈ ಅವರು ಬರುತ್ತಿದ್ದರು. “ಬಿಕಾಂ ಆದಾಗ ತಿಳಿಸು’ ಎಂದು ನನಗೆ ಆಗ ಹೇಳಿದ್ದರು. ನಾನು ಉತ್ತೀರ್ಣನಾದೆನೆ ಹೊರತು ಬಹಳ ಅಂಕ ಬಂದಿರಲಿಲ್ಲ. ಹೀಗಾಗಿಅವರಿಗೆ ಸಿಗಬೇಕೋ? ಬೇಡವೋ? ಎಂಬಗೊಂದಲದಲ್ಲಿ ಸಿಲುಕಿದೆ. ಇದೇ ವೇಳೆ ನನಗೆಕಾರ್ಪೊರೇಶನ್‌ ಬ್ಯಾಂಕ್‌ನಲ್ಲಿ ಉದ್ಯೋಗ ಸಿಕ್ಕಿತು. ನನಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್‌ ಆಯಿತು. ಬೆಂಗ ಳೂರಿನ ಗಾಂಧಿನಗರದಲ್ಲಿಸಿಂಡಿಕೇಟ್‌ ಬ್ಯಾಂಕ್‌ ವಸತಿ ಗೃಹವಿತ್ತು. ಅಲ್ಲಿ ನನಗೆ ಟಿ.ಎ. ಪೈಯವರು ಸಿಕ್ಕಿ ಕಾರ್ಪೊರೇಶನ್‌ ಬ್ಯಾಂಕ್‌ಗೆ ರಾಜೀನಾಮೆ ನೀಡಿ ಸಿಂಡಿಕೇಟ್‌ ಬ್ಯಾಂಕ್‌ಗೆಸೇರು ಎಂದು ಸ್ಪಷ್ಟ ವಾಗಿ ಹೇಳಿದರು. ಉಡುಪಿಯ ಪ್ರಧಾನಕಚೇರಿಯಲ್ಲಿ ಮುಂಗಡವಿಭಾಗವನ್ನು ನೋಡಿಕೊಳ್ಳುತ್ತಿದ್ದ ಎಚ್‌.ಎನ್‌. ರಾವ್‌ (ಮುಂದೆ ಬ್ಯಾಂಕ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾ ದರು) ಅಧೀನ 1960ರಲ್ಲಿ ನಿಯುಕ್ತಿ ಯಾಯಿತು.

ಟಿ.ಎ. ಪೈ ಅವರ ಹುಸಿ ಸಿಟ್ಟು
ಒಂದು ದಿನ ಟಿ.ಎ. ಪೈ ಅವರು “ಇಲ್ಲಿಂದ ಪರಸ್ಥಳಕ್ಕೆ ಹೋಗದೆ ಇದ್ದರೆ ಭಡ್ತಿ ಸಿಗುವುದಿಲ್ಲ’ ಎಂದು ಸಿಟ್ಟುಗೊಂಡು ಹೇಳಿದರು. “ನಾನು ಯಾರಲ್ಲಿಯೂ ಏನೂ ಹೇಳಲಿಲ್ಲವಲ್ಲ?’ ಎಂದೆ. ಅದಕ್ಕೆ ಟಿ.ಎ. ಪೈ ಅವರು “ಎಚ್‌.ಎನ್‌.ರಾವ್‌ ನೀವು ಇಲ್ಲಿಯೇ ಇರಬೇಕೆಂದು ಹೇಳುತ್ತಿದ್ದಾರೆ. ಇಲ್ಲಿಂದ ಹೋಗದೆ ಇದ್ದರೆ ಭಡ್ತಿ ಇಲ್ಲವೇ ಇಲ್ಲ’ ಎಂದರು. “ನಾನು ಒಂದು ಬಾರಿ ಬೈಸಿಕೊಂಡಾಗಿದೆ. ನನ್ನನ್ನು ಬಿಡುವುದಿಲ್ಲ ಎಂದು ಹೇಳಿದ್ದಕ್ಕಿಂತ ಪ್ರೊಮೋಶನ್‌ ಬೇರೆ ಉಂಟಾ?’ ಎಂದು ಹೇಳಿದೆ. “ಹೋಗು, ಹೋಗು’ ಎಂದಷ್ಟೇ ಹೇಳಿದರು.

ಒಂದು ದಿನ ರಥಬೀದಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಹೋಗಿದ್ದ ಎಚ್‌.ಎನ್‌. ರಾವ್‌ ಸಿಕ್ಕಿ ದರು. ಗಂಧವನ್ನು ನನ್ನ ಹಣೆಗೆ ಹಚ್ಚಿ “ನೀವು ಇಲ್ಲಿಯೇ ಇರುತ್ತೀರಿ’ ಎಂದರು. “ಆತನ ಭವಿಷ್ಯಕ್ಕೆ ಅಡ್ಡಿ ಬರಬೇಡಿ’ ಎಂಬ ಟಿ.ಎ. ಪೈ ಮಾತನ್ನು ಹೇಳಲು ರಾವ್‌ ಮರೆಯಲಿಲ್ಲ. ಮತ್ತೆರಡು ತಿಂಗಳ ಬಳಿಕ ಕೋಲಾರ ಸಮೀಪದ ರಾಬಿನ್‌ಸನ್‌ಪೇಟೆಯಲ್ಲಿದ್ದ ಒಂದು ಬ್ಯಾಂಕನ್ನು ಸಿಂಡಿಕೇಟ್‌ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲು ಬೇಕಾದ ಪ್ರಕ್ರಿಯೆ ನಡೆ ಸುವ ಅಧಿಕಾರವನ್ನು ನನಗೆ ಕೊಟ್ಟರು. ಆಗ ನನಗೆ ಕೇವಲ 25 ವರ್ಷ. ಮೂರು ತಿಂಗಳೊಳಗೆ ಖರೀದಿ ವ್ಯವಹಾರ ಮುಗಿಸಿ ಯಶಸ್ವಿಯಾದೆ.

ದೊಡ್ಡ ಶಾಖೆಗಳನ್ನು ನಿಭಾಯಿಸುವ ಕಾನ್ಫಿಡೆನ್ಸ್‌ ಇಲ್ಲ ಎಂದಾಗ “ನಿನ್ನ ಕಾನ್ಫಿಡೆನ್ಸ್‌ ಯಾರ ಯ್ಯ ಕೇಳ್ತಾರೆ? ನನಗೆ ಕಾನ್ಫಿಡೆನ್ಸ್‌ ಇದೆ’ ಎಂದು ಹೇಳಿ ಸುರತ್ಕಲ್‌ ಶಾಖೆಗೆ ವರ್ಗಾಯಿಸಿದರು.

Advertisement

1964ರಲ್ಲಿ ಪ್ರಧಾನ ಕಚೇರಿ ಮಣಿಪಾಲಕ್ಕೆ ಸ್ಥಳಾಂತರ ಆಗುತ್ತದೆ. ಅಲ್ಲಿ ಶಾಖೆಯನ್ನೂ ತೆರೆಯಲಿದ್ದು ನೀನೇ ಮೊದಲ ಮ್ಯಾನೇಜರ್‌ ಆಗಬೇಕೆಂದರು. ಮಣಿಪಾಲಕ್ಕೆ ಯಾರೇ ವಿವಿಐಪಿಗಳು ಬಂದರೆ ಅವರನ್ನು ನಮ್ಮ ಕಚೇರಿಗೆ ಕರೆದುಕೊಂಡು ಬಂದು “ಹೀ ಈಸ್‌ ಮಿಸ್ಟರ್‌ ಕೆ.ಆರ್‌. ಭಂಡಾರಿ, ಯಂಗೆಸ್ಟ್‌ ಮ್ಯಾನೇಜರ್‌ ಇನ್‌ ದಿ ವರ್ಲ್ಡ್’ ಎಂದು ಪರಿಚಯಿಸುತ್ತಿದ್ದರು.

ಟಿ.ಎ. ಪೈ ಅವರು ಭಾರತ ಆಹಾರ ನಿಗಮದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಬಳಿಕ ಅವರ ಖಾಸಗಿ ಲೆಕ್ಕಪತ್ರ, ಬ್ಯಾಂಕ್‌ ವ್ಯವಹಾ ರಗಳನ್ನು ನೋಡಿಕೊಳ್ಳಲು ತಿಳಿಸಿದರು.

“ನಿನ್ನ ಮುಂದಿನ ಗುರಿ ಲಂಡನ್‌ ಶಾಖೆಯ ಜವಾಬ್ದಾರಿಯಾಗಿರಬೇಕು’ ಎಂದು ಟಿ.ಎ. ಪೈ ಅವರು ನನಗೆ ಹಿಂದೆಯೇ ಹೇಳುತ್ತಿದ್ದರು. ಅವರು ಅಂದುಕೊಂಡಂತೆ 1984ರಲ್ಲಿ ಲಂಡನ್‌ ಶಾಖೆಯಹೊಣೆಯನ್ನು ನಿರ್ವಹಿಸಿದೆ. 1988ರಲ್ಲಿ ಮಣಿಪಾಲ ಪ್ರಧಾನ ಕಚೇರಿಗೆ ಹಿಂದಿರುಗಿದೆ. 1990ರಲ್ಲಿ ಮುಂಗಡ ವಿಭಾಗದ ಮಹಾಪ್ರಬಂಧಕನಾಗಿ 1994ರಲ್ಲಿ ನಿವೃತ್ತಿ ಹೊಂದಿದೆ. ನಾನು ಈಗ ವಾಸವಿರುವ ಮನೆಯ ಜಾಗವನ್ನು ಬ್ಯಾಂಕ್‌ನ ಸಿಬಂದಿಗೆ ಸಹಕಾರ ತಣ್ತೀದಲ್ಲಿ ಕೊಡಿಸಿದ್ದರು.

ಕೆಲಸವನ್ನಷ್ಟೇ ಗೌರವಿಸುವ ವ್ಯಕ್ತಿತ್ವ
1960ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿ ಇದ್ದದ್ದು ಉಡುಪಿಯ ಮುಕುಂದ ನಿವಾಸದಲ್ಲಿ. ಅಲ್ಲೇ ಸಮೀಪ ದೂರವಾಣಿ ವಿನಿಮಯ ಕೇಂದ್ರವಿತ್ತು. ನಾನು ಕೆಲಸಕ್ಕೆ ಸೇರಿದ ಎರಡೇ ತಿಂಗಳಲ್ಲಿ ದೂರವಾಣಿ ವಿನಿಮಯ ಕೇಂದ್ರದಲ್ಲಿ ಮುಷ್ಕರ ನಡೆಯಿತು. ಆಗ ಎಂಜಿನಿಯರ್‌ ಒಬ್ಬರು ಟಿ.ಎ.ಪೈಗಳಿಗೆ ಸಿಕ್ಕಿ ಸಹಾಯ ಯಾಚಿಸಿದರು. ನನ್ನ ಬಳಿ “ಬ್ಯಾಂಕ್‌ನ ನಾಲ್ವರು ಸಿಬಂದಿಯನ್ನು ಕರೆದುಕೊಂಡು ದೂರವಾಣಿ ವಿನಿಮಯ ಕೇಂದ್ರಕ್ಕೆ ಹೋಗಿ ಕೆಲಸ ಮಾಡು’ ಎಂದರು ಟಿ.ಎ. ಪೈಗಳು. ದೂರವಾಣಿ ಕೇಂದ್ರದಲ್ಲಿ ಎಂಜಿನಿಯರ್‌ಗಳಿಗೆ ಸಹಾಯ ಮಾಡಬೇಕಿತ್ತಷ್ಟೇ. ಮುಷ್ಕರ ಮುಗಿದು ಯಥಾಸ್ಥಿತಿಗೆ ಬಂದ ಬಳಿಕ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಟಿ.ಎ.ಪೈಯವರು ವಿಷಯ ವಿವರಿಸಿದರು. ಡಾ| ಟಿ.ಎಂ.ಎ.ಪೈಯವರಿಗೂ ಅಚ್ಚರಿ. ಮುಷ್ಕರ ನಡೆದೇ ಇಲ್ಲವೇನೋ ಎಂಬ ಅನುಭವ ಅವರಿಗೂ ಆಗಿತ್ತು. ನಮ್ಮ ನಾಲ್ವರನ್ನೂ ಕರೆದು ಡಾ|ಟಿ.ಎಂ.ಎ.ಪೈ ಮತ್ತು ಟಿ.ಎ.ಪೈಯವರು ಅಭಿನಂದಿಸಿದರು. ಸಣ್ಣ ಕೆಲಸಗಾರರಾದರೂ ಅವರ ಕೆಲಸಗಳನ್ನು ಮೆಚ್ಚಿ ಗುರುತಿಸುವ ಗುಣ ಅವರಲ್ಲಿತ್ತು.

-ಕುಳಾಯಿ
ರಘುರಾಮ ಭಂಡಾರಿ
(ಕೆ.ಆರ್‌.ಭಂಡಾರಿ ಎಂದೇ ಸುಪರಿಚಿತರು. ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು)

Advertisement

Udayavani is now on Telegram. Click here to join our channel and stay updated with the latest news.

Next