ಪಶುವೈದ್ಯಾಧಿಕಾರಿಯಾಗಿ ರಾಯಚೂರಿನಲ್ಲಿ ಸರಕಾರಿ ಸೇವೆ ಯಲ್ಲಿದ್ದ ನಾನು ಸ್ನೇಹಿತರ ಒತ್ತಾಸೆಯಿಂದ 1980ರ ಎಪ್ರಿಲ್ 1ರಂದು ಸಿಂಡಿಕೇಟ್ ಬ್ಯಾಂಕ್‌ಗೆ ಸೇರಿದೆ. ಒಂದೇ ವರ್ಷದಲ್ಲಿ ಕೆನರಾ ಮಿಲ್ಕ್ ಯೂನಿಯನ್ ಅಧ್ಯಕ್ಷರಾಗಿದ್ದ ಟಿ.ಎ. ಪೈ, ಪತ್ನಿ ವಸಂತಿ ಪೈ ಅವರ ನಿಕಟ ಪರಿಚಯವಾಯಿತು. ಯೂನಿಯನ್‌ಗೆ ಸಿಂಡಿಕೇಟ್ ಬ್ಯಾಂಕ್‌ನ ಆರ್ಥಿಕ ನೆರವಿತ್ತು. ಹಾಗಾಗಿ ನಾನು ಯೂನಿಯನ್‌ಗೆ ಎರವಲು ಸೇವೆಗೆ ಮೇ 15ರಂದು ನಿಯುಕ್ತಿಗೊಂಡೆ.
ರಿವರ್ಸ್ ಮಾರ್ಕೆಟಿಂಗ್ ಫಿಲಾಸಫಿ
ಬೇಸಗೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ಹೈನುಗಾರರಿಂದ ನಿತ್ಯ 300 ಲೀ. ಮಾತ್ರ ಹಾಲು ಪೂರೈಕೆಯಾಗುತ್ತಿತ್ತು. ಮಣಿಪಾಲ ಡೇರಿಯ ಸಾಮರ್ಥ್ಯ ದೊಡ್ಡದಿತ್ತು. ಅಕ್ಟೋಬರ್‌ನಿಂದ ಮಾರ್ಚ್ ತನಕ ಹಾಲಿನ ಪೂರೈಕೆ ಹೆಚ್ಚು ಇರುತ್ತಿದ್ದರೆ, ಆಗ ಜನರಿಂದ ಬೇಡಿಕೆ ಕಡಿಮೆ ಇರುತ್ತಿತ್ತು. ಮಾರ್ಚ್ ನಿಂದ ಹಾಲು ಪೂರೈಕೆ ಕಡಿಮೆಯಾಗುತ್ತಿತ್ತು, ಜನರಿಂದ ಬೇಡಿಕೆ ಹೆಚ್ಚಿಗೆ ಇರುತ್ತಿತ್ತು. ಟಿ.ಎ. ಪೈ ಅವರು ಜನರ ಬೇಡಿಕೆ ಇರುವಾಗ ತಾಜಾ ಹಾಲನ್ನು ಪೂರೈಸಲು ರಿವರ್ಸ್ ಮಾರ್ಕೆಟಿಂಗ್ ಫಿಲಾಸಫಿ ಚಿಂತನೆ ನಡೆಸಿ ಹಾಸನದಿಂದ ಹಾಲು ಖರೀದಿಸಿ ಇಲ್ಲಿ ವಿತರಿಸುವಂತೆ ಮಾಡಿದರು.
ಮೊದಲ ಬಾರಿಗೆ ಕೃತಕ ಗರ್ಭಧಾರಣೆಗೆ ಅನುಕೂಲವಾದ ಘನೀಕೃತ ವೀರ್ಯ ಸಂಗ್ರಹಣ ವ್ಯವಸ್ಥೆಯನ್ನು ಜಾರಿಗೊಳಿಸಿದೆವು. ನಾವು ಆಗಾಗ್ಗೆ ಹಳ್ಳಿಗಳಲ್ಲಿ ಸಭೆ ಸೇರಿಸುತ್ತಿದ್ದೆವು. ಟಿ.ಎ. ಪೈ ಅವರು ಆಗಷ್ಟೆ ಕೃಷಿ ಯಂತ್ರೋಪಕರಣ ಪೂರೈಸುವ ಸ್ಕ್ಯಾಡ್ಸ್ ಸಂಸ್ಥೆಯನ್ನು ಹುಟ್ಟು ಹಾಕಿ ಅದನ್ನು ಅಭಿವೃದ್ಧಿಪಡಿಸುತ್ತಿದ್ದರು. ಮನೆಗೊಂದು ಪಂಪ್‌ಸೆಟ್ ಒದಗಿಸಲು ಅವರು ಆ ಮೂಲಕ ಯೋಜನೆ ಹಾಕಿ ಕೊಂಡರೆ ಯೂನಿಯನ್ ಮೂಲಕ ಮನೆಗೊಂದು ದನ ಸಾಕಲು ಪ್ರೇರಣೆ ನೀಡುತ್ತಿದ್ದರು. ಯೂನಿಯನ್ ಅಧ್ಯಕ್ಷರಾಗಬೇಕಾದರೆ ಯಾವುದಾದರೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಬೇಕಿತ್ತು. ಟಿ.ಎ. ಪೈ ಅವರನ್ನು ಅಂಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿಸಿದೆವು. ಡಯಾನಾ ಹೊಟೇಲಿನ ಮೋಹನ ದಾಸ ಪೈ ಯವರಿಂದ ಟಿ.ಎ. ಪೈ ಅವರು “ಮಂಗಳ’ ಎಂಬ ದನವನ್ನು ಖರೀದಿಸಿದರು. ಹಟ್ಟಿ ಕಟ್ಟಿ ಕೆಚ್ಚಲು ತೊಳೆಯಲು ಗೀಸರ್ ಅಳವಡಿಸಿದ್ದರು.
ಮಣಿಪಾಲ ಎಂಐಟಿಯ ತ್ಯಾಜ್ಯ ನೀರಿನಿಂದ ಡೇರಿ ಪ್ರದೇಶದ ಮೂರು ಎಕ್ರೆ ಪ್ರದೇಶದಲ್ಲಿ ಹಸಿಹುಲ್ಲು ಬೆಳೆಸುತ್ತಿದ್ದೆವು. ಇಲ್ಲಿಂದ ನಿತ್ಯ 60 ಕೆ.ಜಿ. ಹುಲ್ಲನ್ನು ಪೈಯವರ ಮನೆಗೆ ಕಳುಹಿಸಿ ಅವರಿಗೆ ಬಿಲ್ ಕಳುಹಿಸುತ್ತಿದ್ದೆವು. ನಿತ್ಯ ಸುಮಾರು 15 ಲೀ. ಹಾಲು ಪೂರೈಕೆ ಮಾಡುತ್ತಿದ್ದರು. ವಸಂತಿ ಪೈ ಅವರು ಒಮ್ಮೆ ದನ ಸಾಕುವುದನ್ನು ಆಕ್ಷೇಪಿಸಿದಾಗ ದನ ಸಾಕಣೆ ನಷ್ಟವಲ್ಲ ಎಂದು ಮನವರಿಕೆ ಮಾಡಿದ್ದರು. 10-15 ಲೀ. ವಿತರಿಸುವ ಏಜೆನ್ಸಿಯವರೂ ಆಗಾಗ್ಗೆ ಬಂದು ಟಿ.ಎ. ಪೈ ಅವರೊಂದಿಗೆ ಸಮಸ್ಯೆ ಕುರಿತಂತೆ ವಾದ, ಜಗಳ ಮಾಡುತ್ತಿದ್ದರು. ರೈಲ್ವೇ, ಭಾರೀ ಕೈಗಾರಿಕೆ ಸಚಿವರಾಗಿದ್ದ ಪೈಯವರು ಸಣ್ಣ ಏಜೆನ್ಸಿಯವರ ಮಾತನ್ನೂ ಸಮಾಧಾನದಿಂದ ಕೇಳಿ ಪರಿಹಾರ ಸೂಚಿಸುತ್ತಿದ್ದರು. 1981ರ ಮೇಯಲ್ಲಿ ಹಾಸನದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿ ಪೂರೈಕೆ ಯಾಗದಿದ್ದಾಗ ತಮಿಳುನಾಡಿನ ಈರೋಡ್‌ನಿಂದ ಹಾಲು ತರಿಸಲು ಅಲ್ಲಿಗೆ ಹೋಗಿದ್ದೆ. ಅಲ್ಲಿ ಅಧ್ಯಕ್ಷರೊಂದಿಗೆ ಮಾತನಾಡಿ ವಾಪಸು ಹೊರಡಬೇಕೆನ್ನುವಾಗ ಆ ಅಧ್ಯಕ್ಷರು “ಟಿ.ಎ. ಪೈಯವರು ನಿಧನ ಹೊಂದಿದರು’ ಎಂಬ ದುಃಖದ ಸಂದೇಶವನ್ನು ಕೊಟ್ಟರು.
ಪಕ್ಷದಲ್ಲಿದ್ದರೂ “ರಾಜಕೀಯ’ ಇರಲಿಲ್ಲ
ರಾಜಕೀಯ ಪಕ್ಷದಲ್ಲಿದ್ದರೂ ರಾಜಕೀಯ ಮಾಡುವ ಮನಸ್ಸಿರಲಿಲ್ಲ. ಅಜ್ಜರಕಾಡಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ವಿದ್ದಾಗ ಟಿ.ಎ. ಪೈ ಅವರು ವಾಜಪೇಯಿಯವರನ್ನು ಸಮ್ಮಾನಿಸಿದ್ದರು. ಇಂಥ ಗುಣದಿಂದಾಗಿಯೇ ಅವರು ಮೃತಪಟ್ಟಾಗ ಇಂದಿರಾ ಗಾಂಧಿ ಯವರಿಗೆ ಅತಿ ಸನಿಹರಾಗಿದ್ದ ಗ್ಯಾನಿ ಜೈಲ್ ಸಿಂಗ್ (ಮುಂದೆ ರಾಷ್ಟ್ರಪತಿಯಾದರು) ಮಣಿಪಾಲಕ್ಕೆ ಬಂದು ಒಂದು ದಿನವಿದ್ದು ಪತ್ನಿಗೆ ಸಾಂತ್ವನಹೇಳಿದರು. ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಿಸಲು, ದುಡಿ ಯುವ ಸ್ವಭಾವಕ್ಕೆ, ಅಧ್ಯಯನಶೀಲತೆಗೆ ಟಿ.ಎ. ಪೈ ಅವರೊಬ್ಬರು “ಐಕಾನ್’ ಇದ್ದಂತೆ. ಇಂದು ದ.ಕ. ಹಾಲು ಉತ್ಪಾದಕರ ಒಕ್ಕೂಟ ವಿವಿಧ ಆಯಾಮಗಳಲ್ಲಿ ನಂಬರ್ 1 ಆಗಲು ಟಿ.ಎ. ಪೈ ಅವರ ಕೊಡುಗೆ ಅಪಾರ.
ಕಳ್ಳ ಉತ್ತಮನಾಗ ಬಾರದೆ?
ಕೆನರಾ ಮಿಲ್ಕ್ ಯೂನಿಯನ್‌ಗೆ ನಾವು ಒಬ್ಬನನ್ನು ನೇಮಿಸಲು ಮುಂದಾದಾಗ “ಆತ ಕಳ್ಳ. ಗೊತ್ತೆ?’ ಎಂದು ಪೈ ಹೇಳಿದರು. ಹಾಗಾದರೆ ಈತನನ್ನು ಕೈಬಿಡೋಣವೆಂದೆ. “ಬೇಡ. ಈಗ ಬದಲಾವಣೆಯಾಗಿರುತ್ತಾನೆ. ಮನುಷ್ಯ ಬದಲಾಗುತ್ತಾ ಇರುತ್ತಾನೆ’ ಎಂದು ನೇಮಕಕ್ಕೆ ಸಹಿ ಹಾಕಿದರು.
-ಡಾ| ಎಲ್.ಎಚ್. ಮಂಜುನಾಥ್
(ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು)