Advertisement

ನೇರ ನುಡಿ, ಪ್ರಾಮಾಣಿಕತೆಯ ಆದರ್ಶ

01:23 AM Jan 17, 2022 | Team Udayavani |

ಟಿ.ಎ. ಪೈ ಎಂದೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ತೋನ್ಸೆ ಅನಂತ ಪೈ ಅವರು ಬಹುಮುಖೀ ಸಾಧನೆ ನಡೆಸಿದವರು. ನೇರ ನಡೆ ನುಡಿ, ಪ್ರಾಮಾಣಿಕ, ದಕ್ಷ, ದೇಶದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಗಮನಾರ್ಹವಾದ ಕೊಡುಗೆ ನೀಡಿದವರು. ನನ್ನ ತಂದೆಯವರಾದ ದಿವಂಗತ ನ್ಯಾಯಮೂರ್ತಿ ಕೆ.ಎಸ್‌. ಹೆಗ್ಡೆಯವರು ಮತ್ತು ಟಿ.ಎ. ಪೈ ಅವರು ಸ್ನೇಹಿತರಾಗಿದ್ದವರು. ವೈಯಕ್ತಿಕವಾಗಿ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಜತೆಯಾಗಿ ವಿವಿಧ ರೀತಿಯಲ್ಲಿ ಕಾಯಕ ನಡೆಸಿದವರು. ಅವರ ಕಾರ್ಯಕ್ಷೇತ್ರಗಳು, ವಿಶೇಷವಾಗಿ ಆರಂಭಿಕ ಮತ್ತು ಕೊನೆಯ ಹಂತದಲ್ಲಿ ರಾಜಕೀಯ ರಂಗದಲ್ಲಿ ಜತೆಯಾಗಿತ್ತು. ಹಾಗಾಗಿ ಅವರಿಬ್ಬರೂ ದೇಶದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದವರು. ಟಿ.ಎ. ಪೈ ಅವರನ್ನು ನಾನು ಪ್ರಥಮವಾಗಿ ನೋಡಿದ್ದು ನನ್ನ ಹದಿನಾಲ್ಕರ ವಯಸ್ಸಿನಲ್ಲಿ. ಆಗ ಹೆಗ್ಡೆಯವರು ರಾಜ್ಯಸಭೆ ಸದಸ್ಯರು. ಪೈ ಅವರು ಆಗಿನ ಮದ್ರಾಸ್‌ ವಿಧಾನಸಭೆ ಮತ್ತು ಮೈಸೂರು ವಿಧಾನಸಭೆಯ ಸದಸ್ಯರಾಗಿದ್ದರು. ಪೈ ಬಂಧುಗಳಿಗೂ ನಮ್ಮ ಕುಟುಂಬಕ್ಕೂ ತುಂಬಾ ಆತ್ಮೀಯತೆ. ಆದ್ದರಿಂದ ಟಿ.ಎ. ಪೈ ಅವರನ್ನು ಆಗಾಗ ನೋಡುವ ಸಂದರ್ಭ ಸಿಗುತ್ತಿತ್ತು. ಅವರು ಶಿಸ್ತಿನ ವ್ಯಕ್ತಿ. ಅವರ ಉಡುಗೆ ತೊಡುಗೆಗಳು ಕೂಡ ಅವರಷ್ಟೇ ಆಕರ್ಷಕ ಆಗಿರುತ್ತಿದ್ದವು.

Advertisement

ಅವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಸ್ವಾತಂತ್ರ್ಯ ಹೋರಾಟಗಾರರಿಗೆ ಅವರು ಸತತ ಬೆಂಗಾವಲಾಗಿ ನಿಂತರು. ನಾನು ಒಂದು ಸಂಶೋಧನಾ ಲೇಖನದಲ್ಲಿ ಓದಿದ ಉಲ್ಲೇಖ ಹೀಗಿದೆ: ಸ್ವಾತಂತ್ರ್ಯ ಸಮರದಲ್ಲಿ ನಿರತನಾಗಿರುವ ಸತ್ಯಾಗ್ರಹಿ ಯೋಧನ ಹೋರಾಟ ಒಂದು ರೀತಿಯಾದರೆ, ಸ್ವಾತಂತ್ರಾé ನಂತರ ರಾಷ್ಟ್ರ ರಚನಾ ಕಾರ್ಯದಲ್ಲಿ ನಿರತನಾಗಿರುವ ಶಿಲ್ಪಿ ಯೋಧನ ರೀತಿ ಮತ್ತೂಂದು ತರ. ಟಿ.ಎ. ಪೈ ಅವರು ಎರಡನೆಯ ರೀತಿಯ ಯೋಧ. ಹೌದು; ನಾನು ಈ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ಪೈ ಅವರು ಸಿಂಡಿಕೇಟ್‌ ಬ್ಯಾಂಕ್‌ನ ಅಧ್ಯಕ್ಷರಾಗಿ ಬಹುಮಂದಿಗೆ ಉದ್ಯೋಗ ನೀಡಿದರು. ಆರ್ಥಿಕ ಸಹಕಾರ ಒದಗಿಸಿ ಸ್ವಾವಲಂಬಿಗಳನ್ನಾಗಿಸಿದರು. ಬ್ಯಾಂಕನ್ನು ನಿಜ ಅರ್ಥದಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸಿದರು. ಆಹಾರ ನಿಗಮ, ಜೀವವಿಮಾನಿಗಮ ಹೀಗೆ ಅವರ ಕಾರ್ಯಕ್ಷೇತ್ರ ವಿಸ್ತಾರದ್ದಾಗಿತ್ತು.

ಭಾರತ ಸರಕಾರದಲ್ಲಿ ರೈಲ್ವೇ ಸಹಿತ ಕೆಲವು ಖಾತೆಗಳ ಮಂತ್ರಿಯಾಗಿ ಅವರು ವಿಶೇಷ ಸೇವೆ ಸಲ್ಲಿಸಿದವರು. ಇಲ್ಲಿ ಒಂದು ಮಹತ್ವದ ಸಂಗತಿ ಯನ್ನು ನಾನು ಉಲ್ಲೇಖೀಸ ಬಯಸುತ್ತೇನೆ. ಟಿ.ಎ. ಪೈ ಮತ್ತು ಮಲ್ಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಆಧುನೀ ಕರಣದ ರೂವಾರಿಗಳು. ರಾಷ್ಟ್ರೀಯ ಹೆದ್ದಾರಿಗಳು, ಸೇತುವೆಗಳು, ಮೂಲಸೌಕರ್ಯ ಎಲ್ಲವನ್ನೂ° ಅಳವಡಿಸಲು ಕಾರಣರಾದವರು.

ತುರ್ತುಪರಿಸ್ಥಿತಿಯ ಕತೆ
ಭಾರತದಲ್ಲಿ ಎಪ್ಪತ್ತರ ದಶಕದಲ್ಲಿ ಆಗಿನ ಪ್ರಧಾನ ಮಂತ್ರಿಯವರು ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಜಾರಿಗೊಳಿಸಿದರು. ರಾಜಕೀಯ ವಿರೋಧಿಗಳನ್ನು (ವಾಜಪೇಯಿ, ಆಡ್ವಾಣಿ ಅವರಂತಹ ಮಹಾ ನಾಯಕರ ಸಹಿತ), ಪ್ರತಿಭಟನಕಾರರನ್ನು ಬಂಧಿಸಿ ಜೈಲುಗಳಲ್ಲಿ ಇರಿಸಿದರು. ಆಗ ನನ್ನ ತಂದೆಯವರು ಸುಪ್ರೀಂ ಕೋರ್ಟ್‌ಗೆ ರಾಜೀನಾಮೆ ನೀಡಿದ್ದರು. ಪೈ ಅವರು ಆ ಪ್ರಧಾನಿಯ ರಾಜಕೀಯ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಅವರಿಬ್ಬರ ಬಂಧನ ಆಗ ಬಹುದೆಂಬ ಗಾಳಿಸುದ್ದಿ ಹರಡಿತ್ತು. ನಮ್ಮಲ್ಲೂ ಒಂದಿಷ್ಟು ಆತಂಕವಿತ್ತು. ಆಗಷ್ಟೇ ಅವರು ನನ್ನ ತಂದೆಯನ್ನು ಭೇಟಿಯಾಗಲು ಬರುತ್ತಿದ್ದರು. ನನ್ನ ತಂದೆ ಅವರನ್ನು ಸಮಾಧಾನಿಸಿದ ಮಾತುಗಳು ನನಗೆ ಈಗಲೂ ನೆನಪಿವೆ: “ಪೈ ಅವರೇ, ನೀವು ಆತಂಕಪಡಬೇಡಿ. ನೀವು ಪರಿಪೂರ್ಣ ಪ್ರಾಮಾಣಿಕರು. ಶುದ್ಧ ಚಾರಿತ್ರ್ಯದವರು. ನಿಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ’. ಹಾಗೇ ಆಯಿತು. ಬಂಧನವಾಗಲಿಲ್ಲ!
ಕರ್ನಾಟಕ ಏಕೀಕರಣದಲ್ಲಿ ಪೈ ಅವರ ಪಾತ್ರ ಪ್ರಮುಖ. ಧೀರೂ ಬಾೖ ಅಂಬಾನಿಯವರಿಗೆ ಮೊದಲ ಮುಂಗಡವನ್ನು ಸಿಂಡಿಕೇಟ್‌ ಬ್ಯಾಂಕ್‌ ಮೂಲಕ ನೀಡಿದ್ದು ಪೈ ಅವರ ದೂರದರ್ಶಿತ್ವಕ್ಕೆ ನಿದರ್ಶನ. ಈಗ ಅಂಬಾನಿ ಉದ್ಯಮ ಸಮೂಹ ಜಗತ್ತಿನಾದ್ಯಂತ ವಿಸ್ತರಿಸಿದೆ. ಹೀಗೆ ಟಿ.ಎ. ಪೈ ಅವರು ಸ್ಫೂರ್ತಿಶಕ್ತಿ ಆದರು. ಒಟ್ಟು ಸಮಾಜದ ಹಿತಾಸಕ್ತಿ ರಕ್ಷಣೆಯ ವೇಗವರ್ಧಕವಾದರು. ಅವರ ಸಾರ್ವಕಾಲಿಕ, ಸರ್ವಾದರ್ಶ ಚೇತನಕ್ಕೆ ನನ್ನ ನಮನಗಳು.

-ನಿಟ್ಟೆ ವಿನಯ ಹೆಗ್ಡೆ
(ಅಧ್ಯಕ್ಷರು-ನಿಟ್ಟೆ ಸಮೂಹ ಸಂಸ್ಥೆಗಳು)
ಕುಲಾಧಿಪತಿ-ನಿಟ್ಟೆ ವಿಶ್ವವಿದ್ಯಾನಿಲಯ

Advertisement

 

Advertisement

Udayavani is now on Telegram. Click here to join our channel and stay updated with the latest news.

Next