Advertisement

ಅಭಿವೃದ್ಧಿಯ ಆಲೋಚಕ ಸಾಮಾಜಿಕ ದ್ರಷ್ಟಾರ; ಗ್ರಾಮಾಭಿವೃದ್ಧಿಯ ಹರಿಕಾರ

02:17 AM Jan 17, 2022 | Team Udayavani |

ಅಮಂತ್ರಂ ಅಕ್ಷರಂ ನಾಸ್ತಿ, ನಾಸ್ತಿ ಮೂಲಮ್‌ ಅನೌಷಧಮ್‌|
ಅಯೋಗ್ಯಃ ಪುರುಷೋ ನಾಸ್ತಿ, ಯೋಜಕಃ ತತ್ರ ದುರ್ಲಭಃ ||
ಮಂತ್ರದ ಶಕ್ತಿಯಿಲ್ಲದ ಅಕ್ಷರವಿಲ್ಲ. ಔಷಧಕ್ಕೆ ಉಪಯೋಗ ಬಾರದ ಗಿಡ ಮೂಲಿಕೆ ಇಲ್ಲ. ಕೆಲಸಕ್ಕೆ ಬಾರದ ಮನುಷ್ಯನಿಲ್ಲ. ಆದರೆ ಗುಣಗಳನ್ನು ತಿಳಿದು, ಯೋಗ್ಯವಾಗಿ ನಾಯಕತ್ವ ವಹಿಸುವ ವ್ಯಕ್ತಿಯು ದೊರಕುವುದು ದುರ್ಲಭ.

ಇಂತಹ ನಾಯಕತ್ವ ವ್ಯಕ್ತಿತ್ವವಿದ್ದವರು ತೋನ್ಸೆ ಅನಂತ ಪೈ. ಕೀರ್ತಿಶೇಷ ಟಿ.ಎ. ಪೈ ಅವರು ವಿವಿಧ ಹೊಣೆಗಾರಿಕೆಗಳ ಮೂಲಕ ದೇಶದ ಪ್ರಗತಿಗೆ ನವ ಚೈತನ್ಯ ನೀಡಿದರು.

Advertisement

ಸಮಸ್ಯೆಗಳ ಸುಳಿಯಲ್ಲಿದ್ದ ರೈಲು ಉದ್ಯಮದ ಪ್ರಗತಿಯ ರೂವಾರಿಗಳಾದರು. ಕೈಗಾರಿಕಾ ವಲಯದ ತ್ವರಿತ ಪ್ರಗತಿಗೂಅವರ ಸೃಜನಶೀಲ ಧೋರಣೆಗಳು ಮತ್ತು ಅವರು ನಡೆಸಿದ ಪರವಾನಿಗೆ ನೀತಿಯ ಉದಾರೀಕರಣ ಕಾರಣವಾಗಿದೆ. ದೇಶಕಂಡ ಅತ್ಯಂತ ಪ್ರತಿಭಾನ್ವಿತ, ಪ್ರಭಾವಿ ವ್ಯಕ್ತಿ ಟಿ.ಎ. ಪೈ ಅವರನ್ನು ಬಹಳ ಹತ್ತಿರದಿಂದ ಭೇಟಿಯಾಗುವ ಮತ್ತು ಚಿಂತನೆಗಳನ್ನು ಹಂಚಿಕೊಳ್ಳುವ ಅವಕಾಶ ದೊರಕಿತು. ಅಪಾರ ಸ್ಮರಣಶಕ್ತಿ ಹೊಂದಿದ್ದರು. ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವರಾಗಿದ್ದರು. ಅಂಕೆ-ಸಂಖ್ಯೆಯ ದಾಖಲಾತಿ ಜತೆಗೆ ವಸ್ತುಸ್ಥಿತಿ ಮತ್ತು ಮುಂದೆ ನಡೆದುಕೊಳ್ಳಬೇಕಾದ ರೀತಿ – ಇವು ಮೂರನ್ನೂ ಗಮನಿಸಿ ಮಾಡುತ್ತಿದ್ದ ಭಾಷಣ ಅತ್ಯಂತ ಮಾರ್ಮಿಕ, ಉಪಯುಕ್ತವಾಗಿರುತ್ತಿತ್ತು. ಮಾತನಾಡುವ ಶೈಲಿ ಸ್ವಾಭಾವಿಕ ವಾದರೂ ಪರಿಣಾಮಕಾರಿ ಧ್ವನಿ, ಇಂಗ್ಲಿಷ್‌ ಭಾಷೆಯ ಮೇಲಿನ ಪ್ರಭುತ್ವ, ಸಭಾಸದರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿತ್ತು. ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದರು.

ನನಗೆ ಮಣಿಪಾಲದ ಪೈ ಕುಟುಂಬದ ಜತೆಗೆ ಸಂಬಂಧ ಬೆಳೆಸಿಕೊಂಡು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸುಯೋಗ ದೊರಕಿತ್ತು. 1968ರ ಅಕ್ಟೋಬರ್‌ 24ರಂದು ನನಗೆ ಧರ್ಮಸ್ಥಳದಲ್ಲಿ ಪಟ್ಟಾಭಿಷೇಕವಾದಾಗ ಡಾ| ಟಿ.ಎಂ.ಎ. ಪೈ ಅವರು ಧರ್ಮಸ್ಥಳಕ್ಕೆ ಬಂದು ಅರ್ಧ ದಿನ ಇದ್ದು ಸಮಾರಂಭದಲ್ಲಿ ಭಾಗವಹಿಸಿದರು.
ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಬಗ್ಗೆ ಸರ್ವರ ಗೌರವ, ನಂಬಿಕೆ ಮತ್ತು ವಿಶ್ವಾಸ ಅಪೂರ್ವವಾಗಿತ್ತು. ಟಿ.ಎ. ಪೈ
ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿ 1970ರ ಸುಮಾರಿಗೆ ಚಿರಪರಿಚಿತರಾಗಿದ್ದರು. ರಾಜಕೀಯದಿಂದ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ರಾಜಕೀಯ ಅಧಿಕಾರ ಉಪಯೋಗಿಸಬಹುದೆಂದು ತಿಳಿದು ಸಹಕಾರಿ ರಂಗಕ್ಕೆ ಪ್ರವೇಶಿಸಿದರು. ಗ್ರಾಹಕರಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆ ಹಾಗೂ ಗೌರವದ ತಳಹದಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಜನರ ಸಂಘಟನೆ, ಗ್ರಾಮಗಳ ಸಂಘಟನೆ ಹಾಗೂ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಯನ್ನು ಅರಿತು ವಿಶೇಷ ಆಸಕ್ತಿ ತೋರಿಸಿದರು. ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಕಂಡರು.

ಸ್ವಾತಂತ್ರ್ಯ ದೊರಕಿ 20 ವರ್ಷಗಳಷ್ಟೇ ಕಳೆದಿದ್ದ ಆಗ ಭವಿಷ್ಯದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲದ ಸಮಾಜವಿತ್ತು. ಹಿರಿಯರು ಸ್ವಾತಂತ್ರ್ಯ ಸಾಧಿಸಿದ್ದೇವೆ ಅನ್ನುವ ಸಾರ್ಥಕತೆಯ ಚಿಂತನೆಯಲ್ಲಿದ್ದರು. ಮಧ್ಯ ವಯಸ್ಸಿನವರಿಗೆ ಕೃಷಿ ಮತ್ತಿತರ ಕಾರ್ಯ ಕ್ಷೇತ್ರಗಳಲ್ಲಿ ಪ್ರಗತಿಯ ಅವಕಾಶಗಳು ಕಡಿಮೆ ಕಂಡು ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳುವುದರಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಇಂತಹ ಸಂದರ್ಭ ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ನಂಬಿದ್ದ ಪೈ ಕುಟುಂಬದವರು ರಾಜ್ಯದ ವಿವಿಧ ಊರುಗಳಲ್ಲಿ ಮತ್ತು ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾನಿಗಳ ನೆರವನ್ನು ಪಡೆದು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.

ಬ್ಯಾಂಕಿಂಗ್‌ ಕ್ಷೇತ್ರ ಹಾಗೂ ಜೀವ ವಿಮಾ ಕ್ಷೇತ್ರದಲ್ಲಿ ಇರುವ ಪ್ರಗತಿಯ ಅವಕಾಶಗಳು ಮತ್ತು ಸಾಧ್ಯತೆಗಳ ನ್ನರಿತು, ಅಲ್ಲಲ್ಲಿ ಶಾಖೆಗಳನ್ನು ತೆರೆದು ಸೇವೆಯನ್ನು ವಿಸ್ತರಿಸಿದರು.

Advertisement

ಟಿ.ಎ. ಪೈ ಅವರು ಉದ್ಯೋಗ ಕೊಡುವಾಗ ಉತ್ಸಾಹ, ಕಠಿನ ದುಡಿಮೆಗೆ ಆದ್ಯತೆ ಕೊಟ್ಟರು. ಇದ ರಿಂದಾಗಿ ಎಸೆಸೆಲ್ಸಿ ಉತ್ತೀರ್ಣರಾದ ವರು ಕೂಡ ಸಿಂಡಿಕೇಟ್‌ ಬ್ಯಾಂಕಿಗೆ ಸೇರಿ ಮುಂದೆ ಉತ್ತಮ ಸಾಧನೆಯಿಂದ ಭಡ್ತಿ ಹೊಂದಿ ಉನ್ನತ ಹುದ್ದೆಯಲ್ಲಿ ನಿವೃತ್ತರಾದವರೂ ಇದ್ದಾರೆ. ಕೃತಜ್ಞತೆ ವ್ಯಕ್ತಪಡಿಸುವುದಕ್ಕಾಗಿ ಬ್ಯಾಂಕಿಗೆ ಸೇರಿದವರೆಲ್ಲ ಅತ್ಯಂತ ಶ್ರದ್ಧೆಯಿಂದ ಸೇವೆ ಮಾಡಿದರು.

ಹಲವು ವರ್ಷಗಳ ಅನುಭವದಲ್ಲಿ ಹೇಳುವುದಾದರೆ, ಜನಮನ್ನಣೆಯನ್ನು, ಪ್ರೀತಿ-ವಿಶ್ವಾಸವನ್ನು ಗಳಿಸಬೇಕಾದರೆ ಆದರ್ಶ ವ್ಯಕ್ತಿತ್ವ, ನಾಯಕತ್ವ, ಶ್ರೇಷ್ಠ ಗೌರವ, ನಲು°ಡಿ, ಸರಳ ಹಾಗೂ ಸೌಜನ್ಯಪೂರ್ಣ ವರ್ತನೆಯಲ್ಲಿ ಶ್ರದ್ಧೆ ಇರಬೇಕು. ಟಿ.ಎ. ಪೈ ಅವರನ್ನು ವರ್ಷಕ್ಕೊಮ್ಮೆಯಾದರೂ ಭೇಟಿ ಮಾಡುವ ಅಥವಾ ಭೇಟಿ ಮಾಡಲಾಗದ ವ್ಯಕ್ತಿಗಳು ಕೂಡ ಅವರನ್ನು ಆದರ್ಶ ಪುರುಷನೆಂದು ತಿಳಿದು ಗೌರವ, ಅಭಿಮಾನವನ್ನು ಬೆಳೆಸಿಕೊಂಡಿದ್ದರು.
ಯಾವತ್ತೂ ಕಾರ್ಯನಿರ್ವಹಣೆಯಿಂದಲೇ ಸಾಮರ್ಥ್ಯ ವನ್ನು ತೋರಿಸಬೇಕೆಂದು ಏಕಲವ್ಯನಂತೆ ಮಣಿಪಾಲದ ಸಂಸ್ಥೆಗಳಲ್ಲಿ ದುಡಿದ ನೂರಾರು ಜನರನ್ನು ನಾನು ಕಂಡಿದ್ದೇನೆ.

ಟಿ.ಎ. ಪೈ ಅವರ ಬಗ್ಗೆ ಬಹಳ ದೊಡ್ಡ ಕಲ್ಪನೆ ಇದ್ದ ನಮ್ಮ ವಯಸ್ಸಿನವರು ಅವರ ಬಳಿ ಹೋದಾಗ ಶ್ರೇಷ್ಠ ವ್ಯಕ್ತಿ, ಮೇಧಾವಿ (Genius)ಅಂತ ಕಂಡರೂ ಅತ್ಯಂತ ಸರಳತೆಯಿಂದ, ಆತ್ಮೀಯರಾಗಿ ಬಿಡುತ್ತಿದ್ದರು. ಅತ್ಯಂತ ಸೂಕ್ಷ್ಮ¾ಗ್ರಾಹಿಯಾಗಿದ್ದರು. ಪ್ರತಿಯೊಬ್ಬ ವ್ಯಕ್ತಿಯ ಜತೆಗೆ ಹಿನ್ನೆಲೆ ಅರಿತು ಬೆರೆಯುವ ಶಕ್ತಿ-ಸಾಮರ್ಥ್ಯ ಹೊಂದಿದ್ದರು.

ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿ ಸ್ಥಾಪಿಸುವುದಕ್ಕಾಗಿ ಕಾರ್ಕಳದಲ್ಲಿ ಮೂರ್ತಿ ನಿರ್ಮಾಣದ ಕಾರ್ಯ ನಡೆಯುತ್ತಿತ್ತು. ಆಗ ಮೂರ್ತಿಯನ್ನು ಧರ್ಮಸ್ಥಳಕ್ಕೆ ಸಾಗಾಟ ಮಾಡುವುದು ಹೇಗೆ ಎಂಬ ಸವಾಲು ಇತ್ತು. ನಾನೊಮ್ಮೆ ಮಂಗಳೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಅರ್ಕುಳದ ಬಳಿ ರೈಲ್ವೇ ಸೇತುವೆ ನಿರ್ಮಾಣವಾಗುತ್ತಿರುವುದನ್ನು ಗಮನಿಸಿದೆ. ಆಗಲೇ ನನಗೆ ಅನಿಸಿದ್ದು, ರೈಲ್ವೇ ಇಲಾಖೆಯಲ್ಲಿರುವ ಕಬ್ಬಿಣದ ಸೇತುವೆಗಳನ್ನು ಬಳಸಿ ಧರ್ಮಸ್ಥಳಕ್ಕೆ ಬಾಹುಬಲಿ ಮೂರ್ತಿಯನ್ನು ಸಾಗಾಣಿಕೆ ಮಾಡಬಹುದು ಎಂದು. ನನ್ನ ತಮ್ಮ ಸುರೇಂದ್ರ ಕುಮಾರನನ್ನು ತತ್‌ಕ್ಷಣ ದಿಲ್ಲಿಗೆ ಕಳುಹಿಸಿ ಕೇಂದ್ರ ರೈಲ್ವೇ ಸಚಿವರಾಗಿದ್ದ ಟಿ.ಎ. ಪೈ ಅವರಲ್ಲಿ ಮಾತನಾಡಿ, ಇಲಾಖೆ ವತಿಯಿಂದ ತಾತ್ಕಾಲಿಕ ಸೇತುವೆ ನಿರ್ಮಿಸಿ ಬಾಹುಬಲಿ ಮೂರ್ತಿ ಸಾಗಾಣಿಕೆಗೆ ಸಹಕಾರ ನೀಡುವಂತೆ ಕೋರಲು ತಿಳಿಸಿದೆ. ಕೂಡಲೇ ಅದಕ್ಕೆ ಬೇಕಾದ ಕೆಲಸಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದರು. ಕೆಲವು ಕಡೆ ನದಿ ನೀರಿನಲ್ಲಿ ಮುಳುಗಿ ಮರಳು ಚೀಲಗಳನ್ನಿಟ್ಟು ಅದರ ಮೇಲೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಬಾಹುಬಲಿ ಮೂರ್ತಿಯ ಸುಗಮ ಸಾಗಾಣಿಕೆಗೆ ರೈಲ್ವೇ ಇಲಾಖೆ ಗುತ್ತಿಗೆದಾರರು ಸಹಕರಿಸಿದರು. ಇತರರೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದರು.

ಟಿ.ಎ. ಪೈ ಅವರಿಗೆ ಧನ್ಯವಾದ ಅರ್ಪಿಸಲು ಹೋದಾಗ ಇದು ನಮ್ಮದೇ ಕಾರ್ಯ ಎಂದು ಹೇಳಿ ಸಂತೋಷಪಟ್ಟರು. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಬ್ಯಾಂಕರ್‌ ಆಗಿದ್ದ ಟಿ.ಎ. ಪೈ, ಗ್ರಾಮೀಣ ಜನರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಅವರು ಆರ್ಥಿಕವಾಗಿ ಬಲಿಷ್ಠರಾಗುವಂತೆ ಮಾಡಲು ಯೋಜನೆಗಳನ್ನು ರೂಪಿಸಿದರು.
ಕೃಷಿ ಪದವೀಧರರನ್ನು ನೇಮಿಸಿ, ರೈತರಿಗೆ ತಾಂತ್ರಿಕ ಸಲಹೆ, ಸೂಚನೆ ನೀಡುವ ವ್ಯವಸ್ಥೆ ಮಾಡಿದರು. ಕೃಷಿ, ಹೈನುಗಾರಿಕೆಯಲ್ಲಿ ಪ್ರಗತಿಪರ ಹೊಸ ಚಿಂತನೆಗಳನ್ನು ಜಾರಿಗೊಳಿಸಿದರು.

1980ರಲ್ಲಿ ಗ್ರಾಹಕರೊಬ್ಬರಿಗೆ ಸಾಲಕ್ಕಾಗಿ ಹಾಕಿದ ಅರ್ಜಿ ಅಪೂರ್ಣ ಎಂದು ರಾಷ್ಟ್ರದ ಪ್ರಸಿದ್ಧ ಬ್ಯಾಂಕೊಂದರ ಮಹಾಪ್ರಬಂಧಕರು (General Manager) ಸಾಲ ಮಂಜೂರು ಮಾಡಲು ನಿರಾಕರಿಸಿದರು.

ಅದೇ ಗ್ರಾಹಕ ರಿಲಯನ್ಸ್‌ ಕಂಪೆನಿಯ ಧೀರೂಭಾಯಿ ಅಂಬಾನಿಯವರು ಆ ಬ್ಯಾಂಕನ್ನು ತಮ್ಮ ಆಡಳಿತಕ್ಕೆ ಸೇರ್ಪಡೆ ಗೊಳಿಸಲು ಪ್ರಯತ್ನಿಸಿದರು ಎಂದು ನಾನು ಕೇಳಿದ್ದೇನೆ. ಮುಂದೆ ಅಂಬಾನಿಯವರು ಯಶಸ್ಸಿನ ಹಂತಕ್ಕೇರಿದರು. ಬೇರೆ ಎಲ್ಲ ಬ್ಯಾಂಕ್‌ಗಳು ಸಾಲ ಕೊಡಲು ನಿರಾಕರಿಸಿದಾಗ ಟಿ.ಎ. ಪೈಯವರು ಧೀರೂಭಾಯಿ ಅವರಿಗೆ ಸಿಂಡಿಕೇಟ್‌ ಬ್ಯಾಂಕಿನಿಂದ ಸಾಲ ನೀಡಿ ಪ್ರೋತ್ಸಾಹಿಸಿದರು. ಈತ ಮುಂದೆ ಶ್ರೇಷ್ಠ ಉದ್ಯಮಿಯಾಗುತ್ತಾನೆ ಎಂದು ಗುರುತಿಸಿ ಅವರಿಗೆ ಹೆಚ್ಚಿನ ಹಣ ಮಂಜೂರು ಮಾಡುವಂತೆ ತಿಳಿಸಿದರು.

ಟಿ.ಎ. ಪೈ ನಿಧನ ಹೊಂದಿದ ದಿನ ಅಂಬಾನಿ ಅವರು ವಿಶೇಷ ವಿಮಾನದಲ್ಲಿ ಮಣಿಪಾಲಕ್ಕೆ ಬಂದು ತಮ್ಮ ಕೃತಜ್ಞತೆ ಯೊಂದಿಗೆ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದರು.

ಟಿ.ಎ. ಪೈ ಅವರು ಇಂದು ನಮ್ಮ ಮುಂದೆ ಇಲ್ಲವಾದರೂ ಅವರ ಸೇವೆಯ ಸ್ಮರಣೆ ಸದಾ ಮಾಡುವ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲರೂ ಅವರಿಗೆ ಸದಾ ಕೃತಜ್ಞರಾಗಿದ್ದು ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಅವರ ಸೇವೆ- ಸಾಧನೆಯನ್ನು ಧನ್ಯತೆಯಿಂದ ಸ್ಮರಿಸುತ್ತೇವೆ ಎಂದು ಅಭಿಮಾನದಿಂದ ಹೇಳಲು ಇಚ್ಛಿಸುತ್ತೇನೆ.

ಸಕಾರಾತ್ಮಕ ಚಿಂತನೆಯೇ ಅವರ ಧೀಶಕ್ತಿ
ಯಾವತ್ತೂ ಸಕಾರಾತ್ಮಕ ಚಿಂತನೆ ಅವರ ಅಪಾರ ಶಕ್ತಿ. ಏನೇ ಮಾತನಾಡಿದರೂ, ಯಾವುದೇ ಪ್ರತಿಕ್ರಿಯೆ ಕೊಟ್ಟಾಗಲೂ,ಉತ್ಸಾಹ ತೋರಿಸುತ್ತಿದ್ದರು. “ನೋಡೋಣ’ ಎನ್ನುವ ತೇಲಿಸಿಕೊಂಡು ಹೋಗುವ ಹಾರಿಕೆಯ ಮಾತು ಅವರಲ್ಲಿ ಎಂದೂ ಇರಲಿಲ್ಲ. “ಔಛಿಠಿ us ಛಟ ಜಿಠಿ’, “ನಾವು ಮಾಡೋಣ’ ಎನ್ನುವ ಸ್ಫೂರ್ತಿ, ಉತ್ಸಾಹ ಸದಾ ಕಾಣುತ್ತಿತ್ತು.ಸರ್‌.ಎಂ. ವಿಶ್ವೇಶ್ವರಯ್ಯನವರು ಕಾವೇರಿ ನದಿ ನೀರು ಪೋಲಾಗುವುದನ್ನು ನೋಡಿ ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಿದಂತೆ ಟಿ.ಎ.ಪೈ ಜೀವವಿಮಾ ನಿಗಮದ ಅಧ್ಯಕ್ಷರಾದಾಗ ಅಲ್ಲಿದ್ದ ಅಪಾರ ಸಂಪತ್ತನ್ನು ದೇಶದ ವಿವಿಧ ರಾಜ್ಯಗಳಲ್ಲಿ ನಗರಾಭಿವೃದ್ಧಿಗೆ ಸಾಲವಾಗಿ ಕೊಟ್ಟು ಸಂಪತ್ತಿನ ಸದುಪಯೋಗವಾಗುವಂತೆ ಮಾಡಿದರು.

- ಡಾ| ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next