ತಿ.ನರಸೀಪುರ: ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವಿಚಾರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಸಮುದಾಯವನ್ನು ಒಡೆಯಲು ವ್ಯವಸ್ಥಿತವಾಗಿ ನಡೆಯುತ್ತಿರುವ ಹುನ್ನಾರವನ್ನು ಖಂಡಿಸಿ ಪಟ್ಟಣದಲ್ಲಿ ವೀರಶೈವ ಲಿಂಗಾಯತರು ಪ್ರತಿಭಟನೆ ನಡೆಸಿದರು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾನ ಮನಸ್ಕರ ವೇದಿಕೆ, ವೀರಶೈವ ಮಹಾಸಭಾ, ಮಹಾಸಭಾ ಯುವ ಘಟಕ, ತಾಲೂಕು ಶಸಾಪರಿ ಹಾಗೂ ವೀರಶೈವ ಸೇವಾ ಸಮಾಜ ಸಂಘದ ಸಂಯುಕ್ತಾಶ್ರದಲ್ಲಿ ಜಮಾವಣೆಗೊಂಡಿದ್ದ ಸಮುದಾಯದ ಮುಖಂಡರು ರಾಜ್ಯದಲ್ಲಿ ಸಮುದಾಯವನ್ನು ಒಡೆಯುವ ಷಡ್ಯಂತ್ರವನ್ನು ವಿರೋಧಿಸಿ ಮೆರವಣಿಗೆ ನಡೆಸಿದರು.
ಮೆರವಣಿಗೆ ಯುದ್ದಕ್ಕೂ ವೀರಶೈವ ಲಿಂಗಾಯತರನ್ನು ಒಡೆಯುವ ಕುತಂತ್ರಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಕಾಲೇಜು ಜೋಡಿ ರಸ್ತೆ, ಲಿಂಕ್ ರಸ್ತೆ ಹಾಗೂ ಪುರಸಭೆ ರಸ್ತೆಗಳ ಮೂಲಕ ತಾಲೂಕು ಕಚೇರಿಗೆ ತೆರಳಿ ಸಿಎಂ ಸಿದ್ದರಾಮಯ್ಯಗೆ ಶಿರಸ್ತೇದಾರ್ ಪ್ರಭುರಾಜ್ ಮೂಲಕ ಮನವಿ ಸಲ್ಲಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಹೆಳವರಹುಂಡಿ ಸಿದ್ಧಪ್ಪ ಮಾತನಾಡಿ, ಸಮಾಜದ ಎಲ್ಲಾ ವರ್ಗಗಳು ಮತ್ತು ವಿವಿಧ ಧರ್ಮದ ಜನರೊಂದಿಗೆ ಸಾಮರಸ್ಯದಿಂದ ಬದುಕುತ್ತಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಬೇಕಿಲ್ಲ. ಒಂದೇ ನಾಣ್ಯದ ಎರಡು ಮುಖಗಳಂತಿರುವ ವೀರಶೈವ ಲಿಂಗಾಯತರ ನಡುವೆ ಭಿನ್ನಬೇಧವ ಮಾಡುವ ಮೂಲಕ ಸಮುದಾಯವನ್ನು ಸಾಮಾಜಿಕವಾಗಿ ಒಡೆಯುವ ಕಾರ್ಯಕ್ಕೆ ಕೈ ಹಾಕಲಾಗುತ್ತಿದೆ. ಸಮುದಾಯದ ಜನರು ಜಾಗೃತರಾಗಿ ಪ್ರತ್ಯೇಕ ಧರ್ಮ ವಿರೋಧಿಸುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಸಮುದಾಯವನ್ನು ಛಿದ್ರಗೊಳಿಸಲಿಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ತೋಟದಪ್ಪ ಬಸವರಾಜು ಮಾತನಾಡಿ, 12ನೇ ಶತಮಾನದಲ್ಲಿ ಸಮಾನತೆ ಸಮಾಜ ನಿರ್ಮಾಣಕ್ಕಾಗಿ ಮಾನವ ಧರ್ಮವನ್ನು ಪ್ರತಿಪಾದಿಸಿದ ಬಸವಣ್ಣ ಲಿಂಗಾಧಾರಣೆ ಮಾಡಿದ್ದರಿಂದ ವೀರಶೈವ ಲಿಂಗಾಯತ ಎಂಬುದಾಗಿ ಕರೆಯುತ್ತಿರುವ ಸಮುದಾಯವನ್ನು 20ನೇ ಶತಮಾನದಲ್ಲಿ ಧರ್ಮದ ಹೆಸರಿನಲ್ಲಿ ಇಬ್ಭಾಗ ಮಾಡುವ ಕೃತ್ಯ ನಿಜಕ್ಕೂ ಬಸವಣ್ಣರಿಗೆ ಮಾಡಿದ ಅಪಚಾರವಾಗಿದೆ. ಕೂಡಲೇ ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವಿಚಾರವನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಮಾಜಿ ಅಧ್ಯಕ್ಷ ಪುಟ್ಟಬುದ್ಧಿ, ಕನ್ನಡಪರ ಹೋರಾಟಗಾರ ತಾಯೂರು ವಿಠuಲಮೂರ್ತಿ, ವೀರಶೈವ ಮಹಸಭಾ ಅಧ್ಯಕ್ಷ ಕೆ.ಜಿ.ಶಿವಪ್ರಸಾದ್, ಉಪಾಧ್ಯಕ್ಷ ಸಿದ್ದಲಿಂಗಮೂರ್ತಿ, ಯುವ ಘಟಕ ಅಧ್ಯಕ್ಷ ಆರ್.ಶಿವಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ನಟರಾಜು, ಕಸಬಾ ಪಿಎಸಿಸಿಎಸ್ ಅಧ್ಯಕ್ಷ ಮಲ್ಲಣ್ಣ, ನಿರ್ದೇಶಕ ಅಂಗಡಿ ಎನ್.ಶೇಖರ್, ತಾಪಂ ಸದಸ್ಯ ಎಂ.ಚಂದ್ರಶೇಖರ್,
-ಗ್ರಾಪಂ ಅಧ್ಯಕ್ಷ ಮರಿನಂಜಪ್ಪ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ವಕೀಲ ಎನ್.ಎಸ್.ಜಾnನೇಂದ್ರಮೂರ್ತಿ, ಪಪಂ ಮಾಜಿ ಅಧ್ಯಕ್ಷ ವಿರೇಶ್, ಮುಖಂಡರಾದ ಹೆಳವರಹುಂಡಿ ಮೂರ್ತಿ, ನೂತನ್, ಹಿರಿಯೂರು ನವೀನ, ಬಸವರಾಜು, ಮೂಗೂರು ಗುರು, ಹಲಸಹಳ್ಳಿ ಮಹದೇವಸ್ವಾಮಿ, ನಾಗೇಶ, ಡಣಾಕಯನಪುರ ರಾಜಶೇಖರ, ಶಾಮಿಯಾನ ವೀರೇಶ್, ಬಿ.ಜಿ.ರಾಜಶೇಖರ, ಎನ್.ಲೋಕೇಶ, ಫ್ಯಾನ್ಸಿ ಮೋಹನ, ಶಂಕರ್ ಗುರು, ಕುರುಬೂರು ಮಂಜುನಾಥ್, ಸಿದ್ದೇಶ್, ಶಿವಶಂಕರ್ ಇತರರು ಇದ್ದರು.