Advertisement

Mangaluru ಜನತಾದರ್ಶನಕ್ಕೆ ವ್ಯವಸ್ಥಿತ ಸಿದ್ಧತೆ: ಜಿ.ಪಂ. ಸಿಇಒ

11:39 PM Jan 20, 2024 | Team Udayavani |

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸುಳ್ಯ ಕೆವಿಜಿ ಪುರಭವನದಲ್ಲಿ ಜ. 23ರಂದು ಆಯೋಜಿಸಲಾಗುತ್ತಿರುವ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ನಿಂದ ವ್ಯವಸ್ಥಿತವಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ದರ್ಶನದಲ್ಲಿ ಜಿಲ್ಲೆಯ ಸಾರ್ವಜನಿಕರು ಜನತೆ ತಮ್ಮ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಬಹುದು. ಇದಕ್ಕಾಗಿ ಅನುಕೂಲ ಕಲ್ಪಿಸಿಕೊಡಲು ಮೊದಲ ಹಂತದಲ್ಲಿ ಹೆಲ್ಪ್ಡೆಸ್ಕ್ ತೆರೆಯಲಾಗುವುದು. ಅಹವಾಲು ಸಲ್ಲಿಸಲು ಬರುವ ಸಾರ್ವಜನಿಕರಿಗೆ ತಾವು ಸಲ್ಲಿಸುವ ಅಹವಾಲು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನು ಅಲ್ಲಿ ನಿಯೋಜಿಸಲಾಗಿರುವ ಸಿಬಂದಿ ತಿಳಿಸಿಕೊಡುವರು ಎಂದರು.

ಎರಡನೇ ಹಂತದಲ್ಲಿ ಸಾರ್ವಜನಿಕರು ನೀಡಿದ ಅರ್ಜಿಯನ್ನು ಪಡೆಯಲು ವಿವಿಧ ಇಲಾಖೆಗಳಿಗಾಗಿ ತೆರೆಯಲಾದ ಕೌಂಟರ್‌ಗಳಿಗೆ ಕಳುಹಿಸಲಾಗುವುದು. ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಅಹವಾಲುಗಳು, ಅವುಗಳಿಗೆ ಕೈಗೊಳ್ಳಲಾಗುವ ಪರಿಹಾರ, ಕೈಗೊಂಡಿರುವ ಕ್ರಮಗಳು, ಸರಕಾರದ ಗಮನ ಸೆಳೆಯುವಂತಹ ಅರ್ಜಿಗಳಿದ್ದಲ್ಲಿ ಅವುಗಳನ್ನು ಸರಕಾರದ ಮಟ್ಟದಲ್ಲಿ ಗಮನಕ್ಕೆ ತರುವುದು ಸೇರಿದಂತೆ ಅರ್ಜಿಗಳಿಗೆ ಅನುಕ್ರಮವಾಗಿ ನಂಬರ್‌ ನೀಡಿ, ಅರ್ಜಿದಾರರ ಹೆಸರು, ಮೊಬೈಲ್‌ ನಂಬರ್‌ ಹಾಗೂ ಅವರ ಸಮಸ್ಯೆಗಳ ಸಂಕ್ಷಿಪ್ತ ವಿವರಣೆಯನ್ನು ಪಡೆಯಬೇಕು ಎಂದು ಸೂಚಿಸಿದರು.

ಮೂರನೇ ಹಂತದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ/ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿ ಅವರಿಗೆ ಮೌಖಿಕವಾಗಿ ತಿಳಿಸುವುದು. ಈ ಮೂರು ಹಂತಗಳಲ್ಲಿ ಯಾವುದೇ ರೀತಿಯ ಗೊಂದಲ, ಅವ್ಯವಸ್ಥೆ ಆಗಬಾರದು. ಸಂಬಂಧಿಸಿದವರು ನೀಡಿದ ಅರ್ಜಿಯ ಪತ್ತೆ ವಿಧಾನ ಸುಲಭವಾಗಿ ಆಗಬೇಕು. ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಇತ್ಯರ್ಥ ಪಡಿಸಬೇಕಾಗುತ್ತದೆ ಈ ಕುರಿತು ಸಾರ್ವಜನಿಕರಿಗೆ ನೀಡಿದ ಹಿಂಬರಹದ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಹಾಗೂ ದಿನದ ಕೊನೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯನ್ನು ತಿಳಿಸಬೇಕು ಎಂದು ನಿರ್ದೇಶನ ನೀಡಿದರು.

ವರದಿ ಸಲ್ಲಿಸಿ
ಉಸ್ತುವಾರಿ ಸಚಿವರ ಹಿಂದಿನ ಜನತಾದರ್ಶನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಎಲ್ಲ ಅಹವಾಲುಗಳ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಎಲ್ಲ ಅಧಿಕಾರಿಗಳು ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರಗಲಿದೆ. ಜನತಾ ದರ್ಶನದಲ್ಲಿ ನಿಯೋಜಿತರಾಗುವ ಸಿಬಂದಿ ಶಾಂತಚಿತ್ತರಾಗಿ ಸಾರ್ವಜನಿಕರೊಂದಿಗೆ ವ್ಯವಹರಿಸಬೇಕು, ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌ ಹೇಳಿದರು. ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next