ಉಡುಪಿ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಳವಡಿಸಿ ಕೊಂಡ ವ್ಯವಸ್ಥಿತ ತೋಟಗಾರಿಕೆ ಪದ್ಧತಿಯಿಂದ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗುತ್ತಿದ್ದು, ಫಾರ್ಮ್ಗಳಲ್ಲಿ ಬೆಳೆಸಲಾದ ಬಗೆ ಬಗೆ ಹಣ್ಣು, ತರಕಾರಿ ಸಸಿಗಳು ಜನರ ಗಮನ ಸೆಳೆಯುತ್ತಿದೆ.
ಜಿಲ್ಲೆಯ ತೋಟಗಾರಿಕೆ ಕ್ಷೇತ್ರ ಗಳು ಸಸಿ ಮಾರಾಟ ಮತ್ತು ಬೆಳೆಗಳ ಹರಾಜಿನಿಂದ ಉತ್ತಮ ಆದಾಯ ಗಳಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ 14.20 ಲಕ್ಷ ರೂ., ವಾರಂಬಳ್ಳಿ 7.16 ಲ.ರೂ., ಕೆದೂರು 6.53 ಲ. ರೂ., ಕುಂಭಾಶಿ 8 ಲ.ರೂ., ಕುಕ್ಕುಂದೂರು 10.14 ಲ.ರೂ., ರಾಮಸಮುದ್ರ 13.17 ಲ.ರೂ., ಸೇರಿದಂತೆ ಒಟ್ಟು ವಾರ್ಷಿಕ 59.28 ಲ.ರೂ., ಆದಾಯ ಗಳಿಸಿದೆ. 2017-18ನೇ ಸಾಲಿ ನಲ್ಲಿ 37.69 ಲ. ರೂ., 2016-17ರಲ್ಲಿ 30 ಲ.ರೂ., 2015-16ರಲ್ಲಿ 20 ಲ.ರೂ., ಆದಾಯ ಗಳಿಸಿತ್ತು.
700 ಹೆಕ್ಟೇರ್ ವಿಸ್ತರಣೆ ಗುರಿ
ಜಿಲ್ಲೆಯ ದೊಡ್ಡಣಗುಡ್ಡೆ ಶಿವಳ್ಳಿ 27.48 ಎಕ್ರೆ, ವಾರಂಬಳ್ಳಿ 2.74 ಎಕ್ರೆ, ಕುಂದಾಪುರದ ಕುಂಭಾಶಿ 22.22 ಎಕ್ರೆ, ಕೆದೂರು 13.62 ಎಕ್ರೆ, ಕಾರ್ಕಳದ ಕುಕ್ಕಂದೂರು 15.49 ಎಕ್ರೆ, ರಾಮಸಮುದ್ರ 196.97 ಎಕ್ರೆ ಪ್ರದೇಶ ಮಾದರಿ ತೋಟಗಾರಿಕೆ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕಳೆದ ಸಾಲಿನಲ್ಲಿ 500 ಹೆಕ್ಟೇರ್ ತೋಟಗಾರಿಕೆ ಬೆಳೆ ವಿಸ್ತರಣೆ ಗುರಿ ದಾಟಿ 611 ಹೆಕ್ಟೇರ್ ವಿಸ್ತರಣೆಯಾಗಿದೆ. ಈ ಬಾರಿ 700 ಹೆಕ್ಟೇರ್ ಗುರಿಯನ್ನು ಹೊಂದಿದೆ.
Advertisement
59.28 ಲ. ರೂ.,ಆದಾಯ
Related Articles
Advertisement
ವಾಣಿಜ್ಯ ಸಸಿಗಳ ಬೇಡಿಕೆ
ಜಿಲ್ಲೆಯಲ್ಲಿ ವಾಣಿಜ್ಯ ಸಸಿಗಳ ಬೇಡಿಕೆ ಹೆಚ್ಚಿದೆ. ಕಳೆದ ಬಾರಿ 3.88 ಲ.ರೂ. ವಾಣಿಜ್ಯ ಸಸಿಗಳು ಮಾರಾಟವಾಗಿವೆ. ಅದರಲ್ಲಿ ಸುಮಾರು 53,000 ತರಕಾರಿ ಸಸಿಗಳು ಮಾರಾಟವಾಗಿವೆ.
ನೀರಿನ ಸಮಸ್ಯೆ
ತೋಟಗಳಿಗೆ ಅಧಿಕ ಪ್ರಮಾಣದಲ್ಲಿ ನೀರಿನ ಅಗತ್ಯತೆ ಇದ್ದು, ಅಂತರ್ಜಲ ವೃದ್ಧ್ದಿಗಾಗಿ, ವರ್ಷದ ಎಲ್ಲ ದಿನಗಳಲ್ಲಿ ನೀರಿನ ಆವಶ್ಯಕತೆಗೆ ಎಲ್ಲ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಲಾಗಿದೆ. ಆದರೆ ಈ ಬಾರಿ ರಾಮಸಮುದ್ರದಲ್ಲಿ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿರುವುದರಿಂದ ಸರದಿ ಪ್ರಕಾರ ಸಸಿಗಳಿಗೆ ನೀರು ಬಿಡಲಾಗುತ್ತಿದೆ. ಶಿವಳ್ಳಿಯಲ್ಲಿ ಬೇಸಗೆ ನೀರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಂತರ್ಜಲ ವೃದ್ದಿಗೆ 8.89 ಲಕ್ಷ ಲೀಟರ್ ಸಾಮರ್ಥ್ಯದ ಗುಂಡಿ ನಿರ್ಮಿಸಲಾಗಿದೆ.
ಬೇಡಿಕೆ ಇದೆ
ಎಲ್ಲ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಸಿಗಳಿಗೆ ಸಾಕಷ್ಟು ಬೇಡಿಕೆ ಇದೆ. ವಾಣಿಜ್ಯ ಬೆಳೆ ಸೇರಿದಂತೆ ತರಕಾರಿ ಸಸಿಗಳ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೊಸದಾಗಿ ರೈತರ ಬೇಡಿಕೆಗೆ ಅನುಸಾರ ಕಸಿ ಕಾಳು ಮೆಣಸು ಸಸಿ ಉತ್ಪಾದನೆಯನ್ನು ಮಾಡಲಾಗುತ್ತಿದೆ.
– ನಿದೀಶ್ ಹೊಳ್ಳ , ಸಹಾಯಕ ತೋಟಗಾರಿಕೆ ಅಧಿಕಾರಿ, ಉಡುಪಿ
– ತೃಪ್ತಿ ಕುಮ್ರಗೋಡು