Advertisement
1925ರ ಅಕ್ಟೋಬರ್ 20ರಂದು ಉಡುಪಿಯಲ್ಲಿ ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಎಂಬ ಹೆಸರಲ್ಲಿ ಜನಿಸಿದ ಸಿಂಡಿಕೇಟ್ ಬ್ಯಾಂಕ್ ಅದೇ ವರ್ಷದ ನವೆಂಬರ್ 10ರಂದು ರೂ. 8,000 ಬಂಡವಾಳದೊಂದಿಗೆ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿದ ದಿನದಿಂದ ಈವರೆಗೂ ತನ್ನದೇ ಆದ ಸಂಸ್ಥಾ ಸಂಸ್ಕೃತಿಯೊಂದಿಗೆ ಗ್ರಾಮೀಣ ಪಕ್ಷಪಾತಿಯಾಗಿ, ವಿಶಿಷ್ಟ ಬ್ಯಾಂಕಿಂಗ್ ಆವಿಷ್ಕಾರಗಳ ಬಳಕೆಯ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ದೇಶದ ಆರ್ಥಿಕತೆಗೆ ನಿರಂತರವಾಗಿ ಪುಷ್ಟಿ ನೀಡುತ್ತಾ ಬಂದಿದೆ. ಗ್ರಾಹಕರನ್ನು ಆರ್ಥಿಕವಾಗಿ ಬೆಳೆಸುತ್ತಾ ಮತ್ತು ಈ ಪ್ರಕ್ರಿಯೆಯ ಮೂಲಕ ತನ್ನನ್ನು ಬೆಳೆಸಿಕೊಳ್ಳುತ್ತಾ ಬಂದಿರುವ ಸಿಂಡಿಕೇಟ್ ಬ್ಯಾಂಕ್‌ನ ವಿಲೀನದ ನಿರ್ಧಾರ ಬ್ಯಾಂಕಿಗೆ ಆರಂಭದ ದಿನಗಳಿಂದಲೂ ಅಚಲ ನಿಷ್ಠೆ ಹೊಂದಿರುವ ಲಕ್ಷಗಟ್ಟಲೆ ಗ್ರಾಹಕರಿಗೆ ಸಾವಿರಗಟ್ಟಲೆ ಮಾಜಿ ನೌಕರರಿಗೆ ಮತ್ತು ಬ್ಯಾಂಕಿನ ಸ್ಥಾಪಕ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ ಮತ್ತು ತೀವ್ರವಾದ ನೋವನ್ನು ನೀಡಿದೆ.
Related Articles
Advertisement
ಹಣಕಾಸಿನ ಸೇರ್ಪಡೆ: ಪಿಗ್ಮಿ ಯೋಜನೆ ಹಣಕಾಸಿನ ಸೇರ್ಪಡೆಯ ಪರಿಣಾಮಕಾರಿ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ . 1928ರಲ್ಲಿ ಸಿಂಡಿಕೇಟ್ ಬ್ಯಾಂಕ್ ಪಿಗ್ಮಿ ಯೋಜನೆಯ ಆವಿಷ್ಕಾರ ನಡೆಸಿದಲ್ಲಿಂದ ಆ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಅರ್ಥಪೂರ್ಣ ಹಣಕಾಸಿನ ಸೇರ್ಪಡೆಗಾಗಿ ಬಳಸಲಾಗುತ್ತಿತ್ತು. ಡಾ| ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಯು.ಪಿ.ಎ. 1ರ ಅವಧಿಯಲ್ಲಿ ಭಾರತ ಸರ್ಕಾರ ಹಣಕಾಸಿನ ಸೇರ್ಪಡೆ ಯೋಜನೆಯನ್ನು ಜಾರಿಗೆ ತಂದಿತು. ತರುವಾಯ ಮೋದಿ ಸರಕಾರ ಅದಕ್ಕೆ ಜನಧನ ಯೋಜನೆ ಎಂಬ ಹೆಸರು ನೀಡಿ ಅದರಲ್ಲಿ ತುಸು ಬದಲಾವಣೆ ಮಾಡಿತು. ಆದರೆ ಸಿಂಡಿಕೇಟ್ ಬ್ಯಾಂಕ್ “ಬ್ಯಾಂಕಿನ ಪರಿಧಿ’ಯಿಂದ ಹೊರಗಿರುವ ಮಂದಿಯನ್ನು ಬ್ಯಾಂಕಿನ ಪರಿಧಿಗೆ ತಂದು ಗ್ರಾಹಕರನ್ನಾಗಿ ಮಾಡಿ ಅವರೆಲ್ಲ ಪಿಗ್ಮಿ ಯೋಜನೆಯ ಮೂಲಕ ಆರ್ಥಿಕ ಬಲವರ್ಧನೆ ಸಾಧಿಸಿ ಕೊಳ್ಳುವಂತೆ ಆರಂಭದ ವರ್ಷಗಳಿಂದಲೇ ಶ್ರಮಿಸುತ್ತಿತ್ತು. ಆದರೆ ಈ ಪ್ರಕ್ರಿಯೆಗೆ ಹಣಕಾಸಿನ ಸೇರ್ಪಡೆಯೆಂಬ ಹೆಸರನ್ನು ಮಾತ್ರ ನೀಡಿರಲಿಲ್ಲ ಅಷ್ಟೆ . ಪಿಗ್ಮಿ ಯೋಜನೆ ಒಂದು ಕ್ರಾಂತಿಕಾರಿ “ಉತ್ಪನ್ನ ಆವಿಷ್ಕಾರ’. ಸಿಂಡಿಕೇಟ್ ಬ್ಯಾಂಕಿನ ಒಟ್ಟು ಠೇವಣಿಗಳಲ್ಲಿ ಶೇ. 10ರಷ್ಟು ಯಾವಾಗಲೂ ಪಿಗ್ಮಿ ಠೇವಣಿಗಳಿಂದ ಇರುತ್ತಿದ್ದವು.
1957ರಲ್ಲಿ ಸಿಂಡಿಕೇಟ್ ಬ್ಯಾಂಕ್ ತನ್ನ ನೂರನೆಯ ಶಾಖೆಯನ್ನು ಕರ್ನಾಟಕದ ಇಳ್ಕಲ್‌ನಲ್ಲಿ ತೆರೆಯಿತು. 1963ರಲ್ಲಿ ಬ್ಯಾಂಕಿನ ಹೆಸರನ್ನು ಸಿಂಡಿಕೇಟ್ ಬ್ಯಾಂಕ್ ಎಂದು ಬದಲಿಸಲಾಯಿತು. ರಾಷ್ಟ್ರೀಕರಣದ ವೇಳೆ ಬ್ಯಾಂಕಿಗೆ 306 ಶಾಖೆಗಳಿದ್ದವು. ಅವುಗಳಲ್ಲಿ ಶೇ. 66ರಷ್ಟು ಶಾಖೆಗಳು ಗ್ರಾಮೀಣ ಮತ್ತು ಅರೆ ಪಟ್ಟಣ ಕೇಂದ್ರಗಳಲ್ಲಿದ್ದವು.
ಸಾಲ ನೀಡಿಕೆಯಲ್ಲಿ ಹೊಸತನ: ಸಿಂಡಿಕೇಟ್ ಬ್ಯಾಂಕ್ ತನ್ನ ಆರಂಭದ ವರ್ಷಗಳಿಂದಲೇ ಸಾಲ ನೀಡಿಕೆಯಲ್ಲಿ ಹೊಸತನ ತೋರಿಸಿತು. ಇತರ ಬ್ಯಾಂಕುಗಳಿಗಿಂತ ಭಿನ್ನವಾದ ಸಾಲ ನೀಡಿಕೆ ನೀತಿಯನ್ನು ಸಿಂಡಿಕೇಟ್ ಬ್ಯಾಂಕ್ ಅಳವಡಿಸಿಕೊಂಡಿತು. ಇತರ ಬ್ಯಾಂಕುಗಳು ಸಾಲ ವಸೂಲಿ ಸುಲಭವಾಗುವಂತೆ ಮಾಡಿಕೊಳ್ಳಲು ತುಂಬಾ ಹಣವಿದ್ದವರಿಗೆ ಮತ್ತು ಅತಿ ಶ್ರೀಮಂತರಿಗೆ ಸಾಲ ನೀಡುತ್ತಿದ್ದವು. ಸಿಂಡಿಕೇಟ್ ಬ್ಯಾಂಕ್ ಸಣ್ಣ ಪುಟ್ಟ ಕಸುಬುದಾರರಿಗೆ, ಮೀನುಗಾರರಿಗೆ, ನೇಕಾರರಿಗೆ, ಹಳ್ಳಿಯ ವೃತ್ತಿ ನಿರತರಿಗೆ, ರೈತರಿಗೆ, ಹೊಟೇಲ್‌ಗಳಿಗೆ, ವ್ಯಾಪಾರಿಗಳಿಗೆ, ಗೂಡಂಗಡಿ ನಡೆಸುವವರಿಗೆ ಸಾಲ ನೀಡಿತು. ಉನ್ನತ ಶಿಕ್ಷಣಕ್ಕೆ ಸಾಲ ನೀಡುವ ಯೋಜನೆಯನ್ನು ಸಿಂಡಿಕೇಟ್ ಬ್ಯಾಂಕ್ ರೂಪಿಸಿ ಜಾರಿಗೆ ತಂದಿತು. ಕಿರು ಹಣಕಾಸು ಯೋಜನೆಯನ್ನು ಡಾ| ಪೈ ಸಿಂಡಿಕೇಟ್ ಬ್ಯಾಂಕಿನಲ್ಲಿ ಆರಂಭಿ ಸಿದರು. ಡಾ| ಪೈ ಹಣಕಾಸು ಪರಿಕಲ್ಪನೆಯ ಮೂಲಶಿಲ್ಪಿ ಹಾಗೂ ಇದರ ಪೇಟೆಂಟ್ ಸಿಂಡಿಕೇಟ್ ಬ್ಯಾಂಕ್‌ಗೆ ಸಲ್ಲಬೇಕು.
ಆರಂಭದಿಂದಲೇ ಜನಸಾಮಾನ್ಯರ ಬ್ಯಾಂಕ್ ಆಗಿ ಬೆಳೆಯುತ್ತಾ ಬಂದ ಸಿಂಡಿಕೇಟ್ ಬ್ಯಾಂಕ್ ಪ್ರಥಮ ಮೆಮೋರಂಡಮ್‌ನಲ್ಲಿ ಗುಡಿ ಕೈಗಾರಿಕೆ, ಕೃಷಿ, ಸಣ್ಣ ಉದ್ದಿಮೆ, ಕೈಮಗ್ಗದ ಉದ್ದಿಮೆ, ಮೀನುಗಾರಿಕೆ ಇತ್ಯಾದಿಗಳಿಗೆ ನೆರವು ನೀಡುವ ಧ್ಯೇಯವನ್ನು ಅಳವಡಿಸಿಕೊಳ್ಳಲಾಗಿತ್ತು. ಹಾಗಾಗಿ ಸಿಂಡಿಕೇಟ್ ಬ್ಯಾಂಕಿನ ಧ್ಯೇಯಗಳಿಗೂ ರಾಷ್ಟ್ರೀಕರಣದ ಧ್ಯೇಯಗಳಿಗೂ ವ್ಯತ್ಯಾಸ ವಿರಲಿಲ್ಲ. ರಾಷ್ಟ್ರೀಕರಣೋತ್ತರ ಅವಧಿಯಲ್ಲಿ ಆದ್ಯತಾ ರಂಗಗಳೆಂದು ಗುರುತಿಸಲ್ಪಟ್ಟ ಕ್ಷೇತ್ರಗಳೇ 1925ರಿಂದಲೇ ಸಾಲ ನೀಡಿಕೆಯಲ್ಲಿ ಬ್ಯಾಂಕಿನ ಒತ್ತಿನ ಕ್ಷೇತ್ರಗಳಾಗಿದ್ದವು. ಹಾಗಾಗಿ ರಾಷ್ಟ್ರೀಕರಣದ ನಂತರದ ಬ್ಯಾಂಕಿಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸುವ ಅಥವಾ ತನ್ನ ಕಾರ್ಯತಂತ್ರಕ್ಕೆ ಹೊಸ ರೂಪ ನೀಡುವ ಅವಶ್ಯಕತೆಯೇ ಬರಲಿಲ್ಲ. ರಾಷ್ಟ್ರೀಕರಣದ ಧ್ಯೇಯೋದ್ದೇಶಗಳೇ ರಾಷ್ಟ್ರೀಕರಣದ ಮುಂಚೆಯೇ ಸಿಂಡಿಕೇಟ್ ಬ್ಯಾಂಕಿನ ಧ್ಯೇಯೋದ್ದೇಶಗಳಾಗಿದ್ದವು. ಅದಕ್ಕಾಗಿಯೇ ರಾಷ್ಟ್ರೀಕರಣದ ನಂತರ ಬ್ಯಾಂಕಿನ ಅನುಭವದ ಮಾಹಿತಿ ಪಡೆಯಲು ಇತರ ಬ್ಯಾಂಕುಗಳು ಸಿಂಡಿಕೇಟ್ ಬ್ಯಾಂಕಿನತ್ತ ನೋಡುವಂತಾಯಿತು. ರಾಷ್ಟ್ರೀಕರಣ ಸಿಂಡಿಕೇಟ್ ಬ್ಯಾಂಕಿನ ಪಾಲಿಗೆ ಹಿಂದಿನ ನೀತಿ ಮತ್ತು ಕಾರ್ಯತಂತ್ರಗಳ ಮುಂದುವರಿಕೆಯಷ್ಟೇ ಆಯಿತು.
ಕೃಷಿ ಸಾಲ : ಕೃಷಿ ಸಾಲವನ್ನು ಮೊತ್ತ ಮೊದಲಾಗಿ ಆರಂಭಿಸಿದ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್. ಕೃಷಿ ಸಾಲ ನೀಡಿಕೆ ತನ್ನ ಮಾರ್ಗದರ್ಶಿ ನಿಯಮಗಳಿಗೆ ವಿರುದ್ಧವಾಗಿದ್ದು ಅದನ್ನು ಕೂಡಲೇ ನಿಲ್ಲಿಸಬೇಕೆಂದು ಆರ್.ಬಿ.ಐ. ಆದೇಶಿಸಿತ್ತು. ಕೃಷಿ ಸಾಲ ಆರಂಭಿಸಿದ್ದನ್ನು ಪ್ರಶ್ನಿಸಿದ ರಿಸರ್ವ್ ಬ್ಯಾಂಕ್ ಡಾ| ಪೈಯವರಿಂದ ವಿವರಣೆ ಕೇಳಿ ಪತ್ರ ಬರೆದಿತ್ತು.
ಅದೇ ರೀತಿ ಸಿಂಡಿಕೇಟ್ ಬ್ಯಾಂಕ್ ನೀಡುತ್ತಿದ್ದ ರೂ. 50 ರೂ. 75 ಇತ್ಯಾದಿ ಸಣ್ಣ ಸಾಲಗಳನ್ನು ರಿಸರ್ವ್ ಬ್ಯಾಂಕ್ ವಿರೋಧಿಸಿತ್ತು. ಈ ಸಣ್ಣ ಸಾಲಗಳಿಂದ ಆಗಿನ ಕಾಲದಲ್ಲಿ ನಿಜವಾದ ಅರ್ಥಪೂರ್ಣ ಹಣಕಾಸಿನ ಸೇರ್ಪಡೆ ಸಾಧ್ಯವಾಗುತ್ತಿತ್ತು. ಅತಿ ಬಡವರೂ, ವಂಚಿತರೂ ಸಾಲ ಪಡೆಯಲು ಸಾಧ್ಯವಾಗುವಂತಾಗಲೂ ಈ ಸಣ್ಣ ಸಾಲಗಳನ್ನು ಬ್ಯಾಂಕು ನೀಡುತ್ತಿತ್ತು. ಈ ಸಣ್ಣ ಸಾಲಗಳಿಂದ ಬ್ಯಾಂಕಿನ ಹೆಸರಿಗೆ ಧಕ್ಕೆಯುಂಟಾಗುತ್ತದೆ. ಅಂತಹ ಸಾಲಗಳನ್ನು ನಿಲ್ಲಿಸಿ ಎಂದು ರಿಸರ್ವ್ ಬ್ಯಾಂಕ್ ಆದೇಶಿಸಿತ್ತು.
ಕೃಷಿ ಕ್ಷೇತ್ರಕ್ಕೆ ಬೆಂಬಲ ರೂಪದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಸಿಂಡಿಕೇಟ್ ಬ್ಯಾಂಕಿಗಿತ್ತು. ಆದರೆ ರಿಸರ್ವ್ ಬ್ಯಾಂಕಿನ ಮಾರ್ಗದರ್ಶಿ ನಿಯಮಗಳಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಅದಕ್ಕಾಗಿ ಬ್ಯಾಂಕ್ 1966ರಲ್ಲಿ ಸಿಂಡಿಕೇಟ್ ಕೃಷಿ ಪ್ರತಿಷ್ಠಾನವೆಂಬ ಬಾಹ್ಯ ಸಂಸ್ಥೆಯನ್ನು ಸ್ಥಾಪಿಸಿತು.
ಪ್ರಾದೇಶಿಕ ಬ್ಯಾಂಕುಗಳು: ಪ್ರಾದೇಶಿಕ ಬ್ಯಾಂಕುಗಳ ಮೂಲ ಶಿಲ್ಪಿ ಕೂಡ ಡಾ| ಟಿ.ಎಂ.ಎ. ಪೈ. ಮಹಾರಾಷ್ಟ್ರ ಅಪೆಕ್ಸ್ ಬ್ಯಾಂಕ್ ಮತ್ತು ಸದರ್ನ್ ಇಂಡಿಯಾ ಎಪೆಕ್ಸ್ ಬ್ಯಾಂಕ್ ಎಂಬ ಎರಡು ಪ್ರಾದೇಶಿಕ ಬ್ಯಾಂಕುಗಳನ್ನು ಅವರು ಸ್ಥಾಪಿಸಿದರು. 1953ರಲ್ಲಿ ಈ ಬ್ಯಾಂಕುಗಳನ್ನು ಸಿಂಡಿಕೇಟ್ ಬ್ಯಾಂಕಿನೊಂದಿಗೆ ವಿಲೀನ ಗೊಳಿಸಲಾಯಿತು. ಪ್ರಾದೇಶಿಕ ಗ್ರಾಮೀಣ ಬ್ಯಾಂಕೊಂದನ್ನು ಪ್ರಪ್ರಥಮವಾಗಿ ಆರಂಭಿಸಿದ ಕೀರ್ತಿ ಸಿಂಡಿಕೇಟ್ ಬ್ಯಾಂಕಿಗೆ ಸಲ್ಲಿಸಬೇಕು. 1975ರ ಅಕ್ಟೋಬರ್ 2ರಂದು ಪ್ರಥಮ ಬ್ಯಾಂಕನ್ನು ಸಿಂಡಿಕೇಟ್ ಬ್ಯಾಂಕ್ ಸ್ಥಾಪಿಸಿತು. ಆ ತರುವಾಯ ಇತರ 9 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಬ್ಯಾಂಕ್ ಆರಂಭಿಸಿತು. ಅವೆಲ್ಲವೂ ಲಾಭ ಗಳಿಸುವ ಬ್ಯಾಂಕುಗಳಾಗಿದ್ದವು. ಈಗ ವಿಲೀನದ ಫಲವಾಗಿ 5 ರಾಜ್ಯಗಳಲ್ಲಿ 5 ಗ್ರಾಮೀಣ ಬ್ಯಾಂಕುಗಳಿದು,ª ಅವು 30 ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿವೆ.
ಈಗ ಹೆಚ್ಚಿನ ಬ್ಯಾಂಕುಗಳು ನೇರವಾಗಿ ಅಥವಾ ಉಪಸಂಸ್ಥೆಗಳ ಮೂಲಕ ಶೇರ್ ಬ್ರೋಕಿಂಗ್ ವ್ಯವಹಾರ ನಡೆಸುತ್ತಿವೆ. ಸಿಂಡಿಕೇಟ್ ಬ್ಯಾಂಕ್ 1966ರಲ್ಲಿ ಶೇರ್ ಬ್ರೋಕಿಂಗ್ ವ್ಯವಹಾರ ಆರಂಭಿಸಿತು. ಶೇರು ಬ್ರೋಕಿಂಗ್ ವ್ಯವಹಾರಕ್ಕಾಗಿ ಇನ್ವೆಸ್ಟರ್ ಏಜನ್ಸಿ ವಿಭಾಗವನ್ನು ಡಾ| ಪೈ ಆರಂಭಿಸಿದರು. ಡಾ. ಪೈಯವರಿಗೆ ಸರ್ವವ್ಯಾಪಿ ಬ್ಯಾಂಕಿಂಗ್‌ನತ್ತ ದೃಷ್ಟಿ ಆಗಲೇ ಇತ್ತು.
ಬ್ಯಾಂಕಿಂಗ್ ಪ್ರತಿನಿಧಿಗಳ ಬಳಕೆ: 10-12 ವರ್ಷಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸಿನ ಸೇರ್ಪಡೆಯ ವಿಸ್ತರಣೆಗಾಗಿ ಶಾಖಾರಹಿತ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಬ್ಯಾಂಕಿಂಗ್ ಪ್ರತಿನಿಧಿಗಳನ್ನು (Banking correspondents) ನೇಮಿಸುವ ಅವಕಾಶವನ್ನು ಬ್ಯಾಂಕ್‌ಗಳಿಗೆ ನೀಡಿತು. ಆದರೆ ಸಿಂಡಿಕೇಟ್ ಬ್ಯಾಂಕ್ 1946ರಲ್ಲೇ ಇಂತಹ ಬ್ಯಾಂಕಿಂಗ್ ಪ್ರತಿನಿಧಿಗಳನ್ನು ನೇಮಿಸಿತು. 22-4-1946ರಂದು ತೆರೆದ 29 ಗ್ರಾಮೀಣ ಶಾಖೆಗಳಿಗೆ ಪೂರ್ಣಾವಧಿ ಅಧಿಕಾರಿಗಳನ್ನು ಮೇನೇಜರುಗಳಾಗಿ ನೇಮಿಸುವ ಬದಲು ಆಯಾ ಶಾಖೆಗಳಿರುವ ಪ್ರದೇಶಗಳ ವಾಸಿಸುತ್ತಿದ್ದ ಪ್ರಭಾವಶಾಲಿ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳನ್ನು ಬ್ಯಾಂಕಿನ ಏಜೆಂಟರುಗಳನ್ನಾಗಿ ನೇಮಿಸಿತು. ಅವರು ಠೇವಣಿ ಸಂಗ್ರಹ, ನಿಶ್ಚಿತ ಮೊತ್ತದ ವರೆಗೆ ಸಾಲ ನೀಡಿಕೆ, ಡಿಮಾಂಡ್ ಡ್ರಾಫ್ಟ್ ವಿತರಣೆ, ಇತ್ಯಾದಿಗಳನ್ನು ಗ್ರಾಮೀಣ ಶಾಖೆಗಳಲ್ಲಿ ಮಾಡುತ್ತಿದ್ದರು. ಇದು ಹಣಕಾಸಿನ ಸೇರ್ಪಡೆಯ ವಿಸ್ತರಣೆಗೆ 1946ರಲ್ಲೇ ಬ್ಯಾಂಕ್ ತೆಗೆದುಕೊಂಡ ಮಹತ್ವದ ಹೆಜ್ಜೆಯಾಗಿತ್ತು.
ದ್ವೀಪಗಳಿಗೆ ಬ್ಯಾಂಕಿಂಗ್: ಸಿಂಡಿಕೇಟ್ ಬ್ಯಾಂಕ್ ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಬ್ಯಾಂಕಿಂಗ್ ಸಂದೇಶ ಒಯ್ದ ಪ್ರಪ್ರಥಮ ಬ್ಯಾಂಕ್ 5-2-1971ರಂದು ಕವರಟ್ಟಿಯಲ್ಲಿ ಬ್ಯಾಂಕ್ ಮೊದಲನೆಯ ಶಾಖೆ ತೆರೆಯಿತು. ಎರಡನೆಯ ಶಾಖೆಯನ್ನು 1971ರ ಏಪ್ರಿಲ್ 21ರಂದು ಮಿನಿಕಾಯಿಯಲ್ಲಿ ತೆರೆಯಿತು. ಅನಂತರ ಇನ್ನೂ ಎರಡು ಶಾಖೆಗಳನ್ನು ಅಮಿನಿ ಮತ್ತು ಅಂಡ್ರೋತ್(Androth) ಗಳಲ್ಲಿ ತೆರೆಯಲಾಯಿತು. 1976ರಲ್ಲಿ ಈ ದ್ವೀಪದಲ್ಲಿ ಮತ್ತೂಂದು ಶಾಖೆಯನ್ನು ತೆರೆಯಿತು. ಅಂಡಮಾನ್ ನಿಕೋಬಾರ್ ದ್ವೀಪಗಳ ಪ್ರಥಮ ಶಾಖೆಯನ್ನು 1969ರಲ್ಲಿ ಪೋರ್ಟ್‌ಬ್ಲೇರ್‌ನಲ್ಲಿ ತೆರೆಯಲಾಯಿತು. ಎರಡನೆಯ ಶಾಖೆಯನ್ನು ಕ್ಯಾಂಪ್‌ಬೆಲ್ ಬೇಯಲ್ಲಿ ತೆರೆಯಲಾಯಿತು. 17-8-1976ರಂದು ಬ್ಯಾಂಕ್ ಲಂಡನ್ ಶಾಖೆ ತೆರೆಯಿತು.
(ಮುಂದುವರಿಯುವುದು)
– ಡಾ| ಕೆ.ಕೆ. ಅಮ್ಮಣ್ಣಾಯ