ಬೆಂಗಳೂರು: ಸಾರ್ವಜನಿಕ ಕ್ಷೇತ್ರದ ಸಿಂಡಿಕೇಟ್ ಬ್ಯಾಂಕ್ ಪ್ರಸಕ್ತ ಸಾಲಿನ ವಿತ್ತೀಯ ವರ್ಷದ 3ನೇ ತ್ತೈಮಾಸಿಕದಲ್ಲಿ 93 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಮಂಗಳವಾರ ನಗರದ ಕಾರ್ಪೊರೇಟ್ ಕಚೇರಿಯಲ್ಲಿ 2016-17ನೇ ಸಾಲಿನ ಹಣಕಾಸು ವರದಿಯನ್ನು ಬಿಡುಗಡೆಗೊಳಿಸಿದ ಬ್ಯಾಂಕ್, ಕಳೆದ ವರ್ಷ ಇದೇ ಅವಧಿಯಲ್ಲಿ 119 ಕೋಟಿ ರೂ. ನಿವ್ವಳ ನಷ್ಟ ಅನುಭವಿ ಸಿದ್ದಾಗಿ ಹೇಳಿದೆ.
2016ರ ಡಿಸೆಂಬರ್ ಅಂತ್ಯಕ್ಕೆ ಬ್ಯಾಂಕ್ ಗಳಿಸಿರುವ ಬಡ್ಡಿ ಮೇಲಿನ ಆದಾಯ 1,391 ಕೋಟಿ ರೂ.ಗಳಾಗಿದ್ದು, ಇದು 2015-16ನೇ ಸಾಲಿನ ಆದಾಯಕ್ಕಿಂತ 125 ಕೋಟಿ ರೂ. ಕಡಿಮೆಯಾಗಿದೆ. ನಿವ್ವಳ ಬಡ್ಡಿ ಮಾರ್ಜಿನ್ 2016-17ರ ಸಾಲಿನ ತ್ತೈಮಾಸಿಕದಲ್ಲಿ ಶೇ. 2.16 ರಷ್ಟಾಗಿದೆ. ಇದೇ ಅವಧಿಯಲ್ಲಿ ಬ್ಯಾಂಕಿಗೆ ಸಂದಿರುವ ಠೇವಣಿಯ ಮೊತ್ತ 2,70,795 ಕೋಟಿ ರೂ.ಗಳಾಗಿದ್ದು, ಕಳೆದ ಬಾರಿಯ ತ್ತೈಮಾಸಿಕ ಅಂತ್ಯದಲ್ಲಿ 2,55,893 ಕೋಟಿ ರೂ.ಗಳ ಠೇವಣಿ ಸಂದಾಯವಾಗಿತ್ತು. ಸಾಲದ ಸಂಗತಿಯಲ್ಲಿ ಬ್ಯಾಂಕ್ ಮುನ್ನೆ°ಚ್ಚರಿಕೆ ಕ್ರಮ ಅನುಸರಿಸಿ ಕಳೆದ ಸಾಲಿಗಿಂತ 13,103 ಕೋಟಿ ರೂ. ಕಡಿಮೆ ವಿತರಿಸಿದೆ.
ಬ್ಯಾಂಕ್‌ನ ಜಾಗತಿಕ ವಹಿವಾಟು 4,65,886 ಕೋಟಿ ರೂ.ಮಾಡಿದ್ದು, ಕಳೆದ ಬಾರಿಗಿಂತ ಕೊಂಚ ಏರಿಕೆಯಾಗಿದೆ. ಅದರಲ್ಲಿ 2,70,795 ಕೋಟಿ ರೂ.ಠೇವಣಿ ರೂಪದಲ್ಲೂ 1,95,091 ಕೋಟಿ ರೂ. ಸಾಲದ ರೂಪದಲ್ಲೂ ವಹಿವಾಟು ನಡೆಸಲಾಗಿದೆ ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ.
ನಿವ್ವಳ ಎನ್‌ಪಿಎ ಪ್ರಮಾಣ ಶೇ. 5.63ರಷ್ಟಾಗಿದ್ದು, ಕಳೆದ ಸಾಲಿನಲ್ಲಿ ಇದರ ಪ್ರಮಾಣ ಶೇ. 3.04ರಷ್ಟಿತ್ತು. ಡಿಜಿಟಲ್ ಬ್ಯಾಂಕಿಂಗ್‌ನಡಿ ಮೊಬೈಲ್ ಆ್ಯಪ್ ಪರಿಚಯಿಸಿ ಎನ್‌ಪಿಎ ಟ್ರ್ಯಾಕ್ಟರ್, ಜಿಯೋ ಟ್ಯಾಗಿಂಗ್ ಮೂಲಕ ವಹಿವಾಟು ನಡೆಸುತ್ತಿದೆ. ಬ್ಯಾಂಕ್ ವ್ಯವಹಾರದಲ್ಲಿ ಈ ಪದ್ಧತಿಗಳ ಅಳವಡಿಕೆಗಾಗಿ “ಸ್ಕೋಚ್ ಆರ್ಡರ್ ಆಫ್ ಮೆರಿಟ್-2016′ ಪ್ರಶಸ್ತಿ ಕೂಡ ಬ್ಯಾಂಕಿಗೆ ಲಭಿಸಿದೆ.