Advertisement

ಸಿಂಡಿಕೇಟ್‌ ಬ್ಯಾಂಕ್‌ ಮಾಜಿ ಸಿಎಂಡಿ ತಿಂಗಳಾಯ ನಿಧನ

12:30 AM Jan 26, 2019 | Team Udayavani |

ಮಂಗಳೂರು/ ಉಡುಪಿ: ಸಿಂಡಿಕೇಟ್‌ ಬ್ಯಾಂಕಿನ ಮಾಜಿ ಅಧ್ಯಕ್ಷ  ಹಾಗೂ ಆಡಳಿತ ನಿರ್ದೇ ಶಕ, ಹಿರಿಯ ಅರ್ಥಶಾಸ್ತ್ರಜ್ಞ  ಡಾ| ಎನ್‌.ಕೆ. ತಿಂಗಳಾಯ (82) ಅಸೌಖ್ಯದಿಂದ ಜ. 25ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Advertisement

ಮಂಗಳೂರಿನ ಲೇಡಿಹಿಲ್‌ ಸಮೀಪ ವಾಸಿಸುತ್ತಿದ್ದ ಅವರು 10 ದಿನಗಳಿಂದ ನ್ಯೂಮೋನಿಯಾ ದಿಂದ ಬಳಲುತ್ತಿದ್ದರು. ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಸಿಇಒ ಹುದ್ದೆ ಗೇರಿದ ಕೆಲವೇ ಮಂದಿ ಬ್ಯಾಂಕಿಂಗ್‌ ಅರ್ಥ ಶಾಸ್ತ್ರಜ್ಞ ರಲ್ಲಿ  ಡಾ| ತಿಂಗಳಾಯ ಒಬ್ಬ ರಾಗಿದ್ದರು.

1937ರಲ್ಲಿ ಜನಿಸಿದ್ದ ಡಾ| ನವೀನ್‌ಚಂದ್ರ ಕೆ. ತಿಂಗಳಾಯ ಅವರು ಮಂಗಳೂರಲ್ಲಿ ಪ್ರಾಥಮಿಕ ಶಿಕ್ಷಣ,  1958ರಲ್ಲಿ ಮದರಾಸು ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ  ಪದವಿ ಶಿಕ್ಷಣ ಪಡೆದಿದ್ದರು. 1960ರಲ್ಲಿ ಸ್ನಾತಕೋತ್ತರ ಪದವಿ, 1966ರಲ್ಲಿ ಮುಂಬಯಿ ವಿ.ವಿ.ಯಿಂದ  ಅರ್ಥ ಶಾಸ್ತ್ರದಲ್ಲಿ  ಡಾಕ್ಟರೆಟ್‌ ಪದವಿ ಗಳಿಸಿದ್ದರು. ಅದೇ ವರ್ಷ (1966)  ಸಿಂಡಿಕೇಟ್‌ ಬ್ಯಾಂಕಿನ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ರಚಿಸಿದ್ದ ಅರ್ಥಶಾಸ್ತ್ರ ಸಂಶೋಧನ ವಿಭಾಗದಲ್ಲಿ ಆರ್ಥಿಕ ಸಲಹೆಗಾರರಾಗಿ ಟಿ.ಎ. ಪೈ ಅವರ ಮೂಲಕ ನೇಮಕಗೊಂಡಿದ್ದರು.
 
1977ರಲ್ಲಿ ವಿಶ್ವ ಬ್ಯಾಂಕ್‌ನಲ್ಲಿ “ಬ್ಯಾಂಕಿಂಗ್‌ನಲ್ಲಿ ಹೊಸತನ- ಸಿಂಡಿಕೇಟ್‌ ಬ್ಯಾಂಕಿನ ಅನುಭವ’ ಸಂಶೋಧನ ಯೋಜನೆಗೆ ಸಲಹೆಗಾರ ರಾಗಿದ್ದರು. 1978ರಲ್ಲಿ ಮಲೇಷ್ಯಾದ ಬ್ಯಾಂಕ್‌ ನೆಗಾರದಲ್ಲಿ  ಗ್ರಾಮೀಣ ಸಾಲ ಬಗೆಗಿನ ವಿಚಾರ ಸಂಕಿರಣದಲ್ಲಿ  ಭಾಗವಹಿಸಿದ್ದರು. 1983ರಲ್ಲಿ ಕಾಠ್ಮಂಡುವಿನಲ್ಲಿ ನಡೆದ ನೇಪಾಲ ರಾಷ್ಟ್ರ ಬ್ಯಾಂಕ್‌ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಸಾಲ ವ್ಯವಸ್ಥೆ ವಿಶೇಷ ತಜ್ಞರಾಗಿ ಪಾಲ್ಗೊಂಡಿದ್ದರು.

1987-88ರಲ್ಲಿ  ಹಾಂಕಾಂಗ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಿಸಿದ ಇಂಡೊ- ಹಾಂಕಾಂಗ್‌ ಇಂಟರ್‌ನ್ಯಾಶನಲ್‌ ಫೈನಾನ್ಸ್‌  ಲಿ. ನಿರ್ದೇಶಕರಾಗಿದ್ದರು.

1992- 93ರಲ್ಲಿ ಕೃಷಿ ಹಣಕಾಸು ನಿಗಮ ಕೈಗೆತ್ತಿಕೊಂಡ ಭಾರತದಲ್ಲಿ  ಗ್ರಾಮೀಣ ಸಾಲ ಸಂಬಂಧಿತ ಸತ್ಯ ಶೋಧನ ತಂಡದ ಸದಸ್ಯರಾಗಿದ್ದರು. 1995ರಲ್ಲಿ ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ ಥಾಯ್ಲೆಂಡ್‌, ತೈವಾನ್‌, ದಕ್ಷಿಣ ಕೊರಿಯಾ, ಇಂಡೊ ನೇಶ್ಯ, ಮಲೇಶ್ಯ ದೇಶಗಳಲ್ಲಿ ಆರ್ಥಿಕ ಸುಧಾರಣೆಯ ಪರಿಣಾಮಗಳ ಅಧ್ಯಯನಕ್ಕೆ ಸಂಬಂಧಿಸಿ ರಚಿಸಿದ್ದ ಅಧ್ಯಯನ ತಂಡದ ಸದಸ್ಯರಾಗಿದ್ದರು.

Advertisement

ಆರ್ಥಿಕ ಸಲಹೆಗಾರರಾಗಿ ನಿಯುಕ್ತಿ ಗೊಂಡ ತಿಂಗಳಾಯರು ಪದೋನ್ನತಿ ಹೊಂದಿ ಸಿಂಡಿಕೇಟ್‌ ಬ್ಯಾಂಕಿನ ಅಧ್ಯಕ್ಷ  ಹಾಗೂ ಆಡಳಿತ ನಿರ್ದೇಶಕರಾಗಿ 1997ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ 1999ರಿಂದ 2005ರ ವರೆಗೆ ಬೆಂಗಳೂರಿನ ಕ್ಯಾನ್‌ ಬ್ಯಾಂಕ್‌ ಇನ್ವೆಸ್ಟ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ನ ನಾನ್‌- ಎಕ್ಸಿಕ್ಯೂಟಿವ್‌ ಚೇರ್ಮನ್‌ ಆಗಿದ್ದರು. ಪ್ರಸ್ತುತ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ಅಕಾಡೆಮಿಕ್‌ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. 

ಬ್ಯಾಂಕಿಂಗ್‌ ಕ್ಷೇತ್ರದ ಚಿಂತಕರಲ್ಲಿ  ಮುಂಚೂಣಿಯಲ್ಲಿದ್ದ ಅವರು ಐಬಿಎ ಎಕೊನಾಮಿಸ್ಟ್‌  ಸಮಿತಿ, ಆರ್‌ಬಿಐ ನೇಮಿಸಿದ್ದ ಗ್ರಾಮೀಣ ಬ್ಯಾಂಕ್‌ ಪುನರ್‌ಸಂಘಟನೆ ಸಮಿತಿಗಳ  ಅಧ್ಯಕ್ಷರಾಗಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕರ್ನ ಕಾರ್ಯಪಡೆಯ ಸದಸ್ಯರು ಸೇರಿದಂತೆ  ಅನೇಕ ಪ್ರತಿಷ್ಠೆಯ ಹುದ್ದೆಗಳಲ್ಲಿ  ಸೇವೆ ಸಲ್ಲಿಸಿದ್ದಾರೆ. ಅರ್ಥಿಕ, ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ  10ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 1960-70ರ ದಶಕದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಹೊರತರುತ್ತಿದ್ದ ಪಿಗ್ಮಿ ಇಕಾನಾಮಿಕ್‌ ರಿವ್ಯೂ ನಿಯತಕಾಲಿಕೆಯಲ್ಲಿ ಕೊಂಕಣ ರೈಲ್ವೇ ಜಾರಿಯಾಗಲು ಹೇಗೆ ನಿಧಿ ಸಂಗ್ರಹಿಸಬೇಕೆಂದು, ಚಾಣಕ್ಯನ ಅರ್ಥಶಾಸ್ತ್ರದ ಬಗೆಗೆ, ಸಮಕಾಲೀನ ಆರ್ಥಿಕತೆ ಕುರಿತು ಲೇಖನ ಬರೆಯುತ್ತಿದ್ದರು. ಉದಯವಾಣಿ ಯಲ್ಲಿಯೂ ಇವರ ಅನೇಕ ಲೇಖನಗಳು ಪ್ರಕಟವಾಗಿದ್ದವು.

ತಂದೆ ನಿಧನ ದಿನದಂದೇ
ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಪ್ಪ ತಿಂಗಳಾಯರು ನಿಧನ ಹೊಂದಿದ್ದು 1980ರ ಜ. 25 ರಂದು. ಮಗ ಡಾ| ಎನ್‌.ಕೆ. ತಿಂಗಳಾಯರೂ 38 ವರ್ಷಗಳ ಬಳಿಕ ಅದೇ ದಿನ ಮೃತಪಟ್ಟರು.

ಪ್ರಧಾನ ಕಚೇರಿಯಲ್ಲೇ
ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಸೇವೆಗೆ ಸೇರಿದ ಡಾ| ತಿಂಗಳಾಯರು ಅಧ್ಯಕ್ಷರಾಗಿ ನಿವೃತ್ತಿ ಆಗುವವರೆಗೂ ಅಲ್ಲೇ ಸೇವೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next