Advertisement

ಸಿಂಡ್‌ ಬ್ಯಾಂಕ್‌ ಗುರುತು ಉಳಿಯುವಂತೆ ಪ್ರಯತ್ನ ಅಗತ್ಯ

08:29 AM Nov 02, 2019 | Team Udayavani |

ಉಡುಪಿ: ವಿಲೀನದ ಹಂತದಲ್ಲಿರುವ ಸಿಂಡಿಕೇಟ್‌ ಬ್ಯಾಂಕ್‌ನ ಗುರುತು, ಸ್ಮರಣೆ ಉಳಿಯಬೇಕಾಗಿದೆ ಎಂದು ಸ್ಥಾಪಕರ ವಂಶಸ್ಥರು, ಮುಖ್ಯ ಅತಿಥಿಗಳು ಉಡುಪಿ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 94ನೇ ಸ್ಥಾಪನ ದಿನಾಚರಣೆಯಂದು ಆಶಯ ವ್ಯಕ್ತಪಡಿಸಿದರು.

Advertisement

ಇಂದಿರಾ ಗಾಂಧಿ ಶ್ಲಾಘನೆ
ಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, 1970ರಲ್ಲಿ ಮಣಿಪಾಲ ಆಸ್ಪತ್ರೆಯ ಸರ್ಜಿಕಲ್‌ ಬ್ಲಾಕ್‌ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಇಂದಿರಾ ಗಾಂಧಿಯವರು, ಡಾ| ಟಿಎಂಎ ಪೈಯವರಂತಹ ಹತ್ತು ಮಂದಿ ದೇಶದಲ್ಲಿದ್ದರೆ ದೇಶದ ಚಿತ್ರಣವೇ ಬದಲಾಗುತ್ತದೆ ಎಂದಿದ್ದರು ಎಂಬುದನ್ನು ನೆನಪಿಸಿಕೊಂಡರು.

ಸ್ಥಾಪಕತ್ರಯರು
ಗ್ರಾಮೀಣ ಕೃಷಿ ಹಣಕಾಸು ಒದಗಣೆ ಆರಂಭಿಸಿದ ಟಿ.ಎ. ಪೈಯವರು ಬಹುಮುಖೀ ವ್ಯಕ್ತಿತ್ವ ದವರು. ಉಪೇಂದ್ರ ಪೈಯವರು ಎಲೆಮರೆಯ ಕಾಯಿಯಾಗಿ ಡಾ| ಟಿಎಂಎ ಪೈಯವರನ್ನು ಮುಂದೆ ಬಿಡುತ್ತಿದ್ದರು. ಡಾ| ಪೈ, ಉಪೇಂದ್ರ ಪೈ, ಸಾರಿಗೆ ಉದ್ಯಮಿಯಾಗಿದ್ದ ವಾಮನ ಕುಡ್ವರು ಸೇರಿ ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಿಸಿದರು ಎಂದು ಡಾ| ಬಲ್ಲಾಳ್‌ ಹೇಳಿದರು.

ಪಿಗ್ಮಿ, ಕೃಷಿ ಸಾಲ ವಿರೋಧಿಸಿದ್ದ ಆರ್‌ಬಿಐ
ಸಿಂಡಿಕೇಟ್‌ ಬ್ಯಾಂಕ್‌ ಆರಂಭಿಸಿದ ಪಿಗ್ಮಿ ಯೋಜನೆಗೆ ಆ ಕಾಲದಲ್ಲಿ ಆರ್‌ಬಿಐ ವಿರೋಧ ಸೂಚಿಸಿತ್ತು. ಅನಂತರ ಕೃಷಿ ಸಾಲಕ್ಕೂ ವಿರೋಧ ವ್ಯಕ್ತಪಡಿಸಿತು. ಇವೆರಡೂ ಅನಂತರ ವಿವಿಧ ಬ್ಯಾಂಕುಗಳಿಂದ ಅಂಗೀಕೃತವಾದವು. ಬ್ಯಾಂಕ್‌ನ ವಿಸ್ತರಣೆ ಪ್ರಸ್ತಾವ ಬಂದಾಗ ಸಿಬಂದಿಗಳಿಗೆ ಉನ್ನತ ಶಿಕ್ಷಣ ಇಲ್ಲದ ಕಾರಣ ಆರ್‌ಬಿಐ ನಿರಾಕರಿಸಿತು. ಇದಕ್ಕಾಗಿ ಡಾ| ಟಿಎಂಎ ಪೈಯವರು ಕಾನೂನು ಕಾಲೇಜನ್ನು ತೆರೆದು ಸಿಬಂದಿ ಕಾನೂನು ಪದವಿ ಗಳಿಸಲು ಅವಕಾಶ ಮಾಡಿಕೊಟ್ಟರು ಎಂದು ಡಾ| ಟಿಎಂಎ ಪೈಯವರ ಪುತ್ರ ಟಿ. ಅಶೋಕ್‌ ಪೈ ಹೇಳಿದರು.

ಸಮಗ್ರ ಅಭಿವೃದ್ಧಿಗೆ ಕಾರಣವಾದ ಬ್ಯಾಂಕ್‌
ಸಿಂಡಿಕೇಟ್‌ ಬ್ಯಾಂಕ್‌ ಕೇವಲ ಹಣಕಾಸು ಸಂಸ್ಥೆಯಾಗಿರದೆ ಕರಾವಳಿ, ನಾಡಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. 1947ರಲ್ಲಿ ದೂರವಾಣಿ ಸೇವೆ ಬರುವ ಸಂದರ್ಭ 24 ಮಾರ್ಗಗಳಿದ್ದರೆ ಮಾತ್ರ ವಿನಿಮಯ ಕೇಂದ್ರ ಮಂಜೂರಾಗುವುದಿತ್ತು. ಸಿಂಡಿಕೇಟ್‌ ಬ್ಯಾಂಕ್‌ನಿಂದ 24 ಮಾರ್ಗಗಳನ್ನು ಪಡೆಯಲಾಯಿತು. ಕಟ್ಟಡವನ್ನೂ ಕೊಡಲಾಯಿತು. ಉತ್ತರದಲ್ಲಿ ಪ್ರಥಮ ಗ್ರಾಮೀಣ ಬ್ಯಾಂಕ್‌ ಸ್ಥಾಪಿಸಲಾಯಿತು. ಕಾರ್ಕಳದ ಭುವನೇಂದ್ರ ಕಾಲೇಜು ತೆರೆಯುವಾಗ ಬ್ಯಾಂಕ್‌ ಅಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ತು. ಉಡುಪಿ ಪುರಸಭೆ ಸ್ವರ್ಣಾ ಯೋಜನೆಯನ್ನು ಕೈಗೆತ್ತಿಕೊಂಡಾಗ ಹಣವಿರಲಿಲ್ಲ. ಆಗ ಹಣಕಾಸು ಪೂರೈಕೆ ಮಾಡಿದ್ದು ಸಿಂಡಿಕೇಟ್‌ ಬ್ಯಾಂಕ್‌ ಎಂಬುದನ್ನು ಅಶೋಕ್‌ ಪೈ ಸ್ಮರಿಸಿಕೊಂಡರು.

Advertisement

ಬ್ಯಾಂಕ್‌ ಕೊಡುಗೆಯ ಸ್ಮರಣೆ ಬೇಡವೆ?
ನಾಡಿನ ಸಮಗ್ರ ಅಭಿವೃದ್ಧಿಗೆ ಕಾರಣವಾದ ಸಿಂಡಿಕೇಟ್‌ ಬ್ಯಾಂಕ್‌ನ ಕೊಡುಗೆ, ಸ್ಮರಣೆಯನ್ನು ಉಳಿಸಿ ಕೊಳ್ಳಬೇಕು. ಇದಕ್ಕಾಗಿ ನಾವು ಚಿಂತನೆ ನಡೆಸಬೇಕಾಗಿದೆ. 1969ರಲ್ಲಿ ಬ್ಯಾಂಕನ್ನು ರಾಷ್ಟ್ರೀಕರಣ ಮಾಡುವಾಗ ಡಾ| ಟಿಎಂಎ ಪೈಯವರು “ಮಗಳು ಪ್ರಾಯಕ್ಕೆ ಬಂದ ಮೇಲೆ ಯೋಗ್ಯ ವರನನ್ನು ಹುಡುಕಿ ಮದುವೆ ಮಾಡಿಕೊಡಬೇಕು. ಭಾರತ ಸರಕಾರಕ್ಕಿಂತ ಉತ್ತಮ ಅಳಿಯ ಇನ್ನಾವುದು’ ಎಂದಿದ್ದರು. ಈಗ ವಿಲೀನದ ಕಾಲಘಟ್ಟದಲ್ಲಿ ಮಗಳನ್ನು ಅಳಿಯ ರಕ್ಷಿಸಬೇಕಾಗಿದೆ ಎಂದು ಅಶೋಕ್‌ ಪೈ ತಿಳಿಸಿದರು.

8 ಸಾವಿರ ರೂ. ಬಂಡವಾಳ ದೊಂದಿಗೆ ಆರಂಭಗೊಂಡ ಬ್ಯಾಂಕ್‌ ಪ್ರಸ್ತುತ 4,200 ಶಾಖೆ, 4,500 ಎಟಿಎಂಗಳನ್ನು ಹೊಂದಿದೆ. ನಾವು “ಸಿಂಡಿಯನ್ಸ್‌’ ಮುಂದಿನ ದಿನಗಳಲ್ಲಿ ಬ್ಯಾಂಕ್‌ ಅಭಿವೃದ್ಧಿಯಲ್ಲಿ ಮುಂದೆ ಸಾಗಬೇಕು ಎಂದು ವಲಯ ಪ್ರಬಂಧಕ ಭಾಸ್ಕರ ಹಂದೆ ಸ್ಥಾಪಕರ ಕುರಿತ ಭಾಷಣದಲ್ಲಿ ತಿಳಿಸಿದರು.

ಪೈ ಕುಟುಂಬಸ್ಥರಿಗೆ ಸಮ್ಮಾನ
ಡಾ| ಟಿಎಂಎ ಪೈಯವರ ಮಕ್ಕಳಾದ ಡಾ| ಟಿಎಂಎ ಪೈ ಫೌಂಡೇಶನ್‌ ಕಾರ್ಯದರ್ಶಿ ಟಿ. ಅಶೋಕ್‌ ಪೈ- ಗಾಯತ್ರಿ ಪೈ, ಅಮೆರಿಕದ ನಿವಾಸಿ ವಸಂತಿ ಶೆಣೈ, ಮಣಿಪಾಲದ ಉದ್ಯಮಿ ಟಿ. ನಾರಾಯಣ ಪೈ- ವಿಜಯಲಕ್ಷ್ಮೀ ಪೈ, ಉಪೇಂದ್ರ ಪೈಯವರ ಮಗ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್‌ ಪೈ- “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ ಅವರನ್ನು ಸಮ್ಮಾನಿಸಲಾಯಿತು. ವಸಂತಿ ಶೆಣೈ, ವಿಜಯಲಕ್ಷ್ಮೀ ಪೈ, ಸಂಧ್ಯಾ ಪೈ ಮಾತನಾಡಿದರು.

ಗ್ರಾಹಕರಾದ ಕೋಟದ ಕೃಷಿ ಸಾಧಕ ಹರಿಶ್ಚಂದ್ರ ಉಪಾಧ್ಯಾಯ, ಮಂದಾರ್ತಿಯ ಉದ್ಯಮಿ ಮಹೇಶ ಉಡುಪ, ಮಣಿಪಾಲ ಕೆಎಂಸಿ ವೈದ್ಯೆ ಡಾ| ಪೂಜನ್‌ ಮಹೇಶ್‌ ಅವರನ್ನು ಗೌರವಿಸಲಾಯಿತು.

ಮಣಿಪಾಲ ವಲಯ ಕಚೇರಿಯ ಎಜಿಎಂ ಗಣಪತಿ ಎನ್‌. ಶೇರಿಗಾರ್‌ ಪ್ರಸ್ತಾವನೆಗೈದರು. ಪ್ರಾದೇಶಿಕ ಪ್ರಬಂಧಕರಾದ ಸುಜಾತಾ ಜಿ. ಅತಿಥಿಗಳನ್ನು ಬರಮಾಡಿಕೊಂಡು, ರಾಮ ನಾಯ್ಕ ಸ್ವಾಗತಿಸಿದರು. ಅಗ್ರಣಿ ಬ್ಯಾಂಕ್‌ ಪ್ರಬಂಧಕ ರುದ್ರೇಶ್‌ ಅತಿಥಿಗಳನ್ನು ಪರಿಚಯಿಸಿದರು. ವಲಯ ಕಚೇರಿ ಎಜಿಎಂ ಸುರೇಶ ವಂದಿಸಿದರು.

ಒಡವೆ ಅಡವಿರಿಸಿ ಆರಂಭಿಸಿದ ಬ್ಯಾಂಕ್‌
ಉಪೇಂದ್ರ ಪೈ ಅವರನ್ನು ಆ ಕಾಲದ ಬ್ಯಾಂಕ್‌ ಒಂದರ ನಿರ್ದೇಶಕರನ್ನಾಗಿ ಮಾಡುವ ಭರವಸೆ ಬಂದಿತ್ತು. ಕೊನೆಗೆ ಕಾರಣಾಂತರಗಳಿಂದ ಭರವಸೆ ಈಡೇರಲಿಲ್ಲ. ಆಗ ಉಪೇಂದ್ರ ಪೈ ಮತ್ತು ಡಾ| ಟಿಎಂಎ ಪೈಯವರು ತಮ್ಮ ಪತ್ನಿ ಮೈ ಮೇಲಿದ್ದ ಚಿನ್ನಾಭರಣಗಳನ್ನು ಒತ್ತೆ ಇಟ್ಟು 8 ಸಾವಿರ ರೂ. ಬಂಡವಾಳದಲ್ಲಿ ಸಿಂಡಿಕೇಟ್‌ ಬ್ಯಾಂಕನ್ನು ಸ್ಥಾಪಿಸಿದರು.
– ಡಾ| ಎಚ್‌.ಎಸ್‌. ಬಲ್ಲಾಳ್‌

ನಾಲ್ಕು ಗಂಡು ಮಕ್ಕಳು, ಓರ್ವ ಪುತ್ರಿಯೊಂದಿಗೆ ವಿಧವೆಯೊಬ್ಬರು ಕಲ್ಯಾಣಪುರದ ತವರು ಮನೆಗೆ ಬಂದಿದ್ದರು. ಮಲತಾಯಿಯಾಗಿದ್ದರೂ ಅಕ್ಕರೆಯಿಂದ ಕಂಡರು. ಮಕ್ಕಳಲ್ಲಿ ಹಿರಿಯರಾದ ರಘುನಾಥ ಪೈ ಉಡುಪಿಗೆ ಬಂದು ವ್ಯಾಪಾರ ಆರಂಭಿಸಿದರು. ಇವರೊಂದಿಗೆ ಇತರ ತಮ್ಮಂದಿರೂ ಬಂದರು. ಅವರೆಲ್ಲ ಒಟ್ಟಾಗಿ ಕೊನೆಯ ತಮ್ಮ ಮಾಧವ ಪೈಯವರ ಕಲಿಕೆಗೆ ಸಹಾಯ ಮಾಡಿ ಎಂಬಿಬಿಎಸ್‌ ಮಾಡಿಸಿದರು. ಅನಂತರ ವೇದಾಚಲ ಎಂದು ಕರೆಯಲಾಗುತ್ತಿದ್ದ ಮಣಿಪಾಲದ ಬೋಳುಗುಡ್ಡೆಯಲ್ಲಿ ನಡೆದ ಅಭಿವೃದ್ಧಿ ಚಿರಪರಿಚಿತ. ಅದರ ಪರಿಣಾಮ ಎರಡು- ಮೂರು ಪೀಳಿಗೆಯವರು ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ, ಕೆಎಂಸಿಯಲ್ಲಿ ಓದುತ್ತಿದ್ದಾರೆ. ಇಂತಹ ಯಶೋಗಾಥೆಗಳು ಪಠ್ಯಪುಸ್ತಕದಲ್ಲಿ ಸೇರಿ ಮಕ್ಕಳು ತಿಳಿಯುವಂತಾಗಬೇಕು.
– ಡಾ| ಸಂಧ್ಯಾ ಎಸ್‌. ಪೈ

1942ರಲ್ಲಿ ಲಂಡನ್‌ ಶಾಖೆಯ ಕನಸು, 76ರಲ್ಲಿ ನನಸು
ಹಿಂದೆ “ಶಂಡಿ ಕಟ್‌’ ಬ್ಯಾಂಕ್‌ ಎಂದು ಗೇಲಿ ಮಾಡಲಾಗುತ್ತಿತ್ತು. 1942ರಲ್ಲಿ ಉಡುಪಿಯ ಮುಕುಂದ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಾ| ಟಿಎಂಎ ಪೈಯವರು ಮುಂದೊಂದು ದಿನ ಲಂಡನ್‌ನಲ್ಲಿಯೂ ಶಾಖೆ ತೆರೆಯುತ್ತೇವೆ ಎಂದು ಘೋಷಿಸಿದ್ದರು. ಅವರು ಇರುವಾಗಲೇ ಕೆ.ಕೆ. ಪೈಯವರು ಅಧ್ಯಕ್ಷರಾದ ಅವಧಿ- 1976ರಲ್ಲಿ ಲಂಡನ್‌ ಶಾಖೆ
ಆರಂಭವಾಯಿತು. – ಟಿ. ಅಶೋಕ್‌ ಪೈ

Advertisement

Udayavani is now on Telegram. Click here to join our channel and stay updated with the latest news.

Next