ಅಹ್ಮದಾಬಾದ್: ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಮಂಗಳವಾರ ಮತ್ತು ಬುಧವಾರ ಅಹ್ಮದಾಬಾದ್‌ನಲ್ಲಿ ನಡೆಯಲಿವೆ. ಹ್ಯಾಟ್ರಿಕ್ ಹಾದಿಯಲ್ಲಿರುವ ಕಳೆದೆರಡು ಬಾರಿಯ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೆಣಸಲಿದೆ.
ಸ್ವಾರಸ್ಯವೆಂದರೆ, ಲೀಗ್ ಹಂತದಲ್ಲಿ ಕರ್ನಾಟಕ ಮತ್ತು ಪಂಜಾಬ್ ಒಂದೇ ವಿಭಾಗದಲ್ಲಿದ್ದವು. ಕರ್ನಾಟಕ ತನ್ನ ಏಕೈಕ ಸೋಲನ್ನು ಪಂಜಾಬ್ ವಿರುದ್ಧವೇ ಅನುಭವಿಸಿತ್ತು. ಅಂತರ 9 ವಿಕೆಟ್. ಸಿದ್ಧಾರ್ಥ್ ಕೌಲ್ ಹ್ಯಾಟ್ರಿಕ್ ಸಾಧಿಸಿದರೆ, ಆರಂಭಕಾರ ಪ್ರಭ್‌ಶಿಮ್ರಾನ್ ಸಿಂಗ್ 89 ರನ್ ಸಿಡಿಸಿ ರಾಜ್ಯದ ಬೌಲಿಂಗ್ ಪಡೆಯ ಮೇಲೆ ಸವಾರಿ ಮಾಡಿದ್ದರು.
ಪಂಜಾಬ್ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಲಗ್ಗೆ ಇರಿಸಿದ ತಂಡ. ರನ್ ಸರಾಸರಿ ಉತ್ತಮ ಮಟ್ಟದಲ್ಲಿದ್ದುದರಿಂದ ಕರುಣ್ ನಾಯರ್ ಪಡೆಗೆ ನಾಕೌಟ್ ಟಿಕೆಟ್ ಲಭಿಸಿತು. ಈಗ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಮುನ್ನುಗ್ಗಬೇಕಿದೆ.
ಈ ಪಂದ್ಯ ಯುವ ಓಪನರ್‌ಗಳ ಬ್ಯಾಟಿಂಗ್ ಸಾಮರ್ಥ್ಯಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ಪಂಜಾಬ್‌ನ ಪ್ರಭ್‌ಶಿಮ್ರಾನ್ ಸಿಂಗ್ ಕೂಟದಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಕ್ರಮವಾಗಿ 277 ಹಾಗೂ 207 ರನ್ ಪೇರಿಸಿದ್ದಾರೆ. ಎರಡೂ ತಂಡಗಳ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಪಂಜಾಬ್‌ನ ಪೇಸ್ ಬೌಲಿಂಗ್ ಸಾಮರ್ಥ್ಯ ತುಸು ಮೇಲ್ಮಟ್ಟದಲ್ಲಿದೆ. ಸಿದ್ಧಾರ್ಥ್ ಕೌಲ್ (10 ವಿಕೆಟ್) ಮತ್ತು ಸಂದೀಪ್ ಶರ್ಮ ಉತ್ತಮ ಲಯದಲ್ಲಿದ್ದಾರೆ. ಕರ್ನಾಟಕದ ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ ಕೂಡ ಅಪಾಯಕಾರಿಗಳೇ.
ಸ್ಪಿನ್ ವಿಭಾಗದಲ್ಲಿ ಜೆ. ಸುಚಿತ್ ಮತ್ತು ಶ್ರೇಯಸ್ ಗೋಪಾಲ್ ಕರ್ನಾಟಕದ ನೆರವಿಗಿದ್ದಾರೆ. ಪಂಜಾಬ್ ಮಾಯಾಂಕ್ ಮಾರ್ಕಂಡೆ ಅವರನ್ನು ನಂಬಿಕೊಂಡಿದೆ.
ಕ್ವಾರ್ಟರ್ ಫೈನಲ್ಸ್ :
ದಿನಾಂಕ ಪಂದ್ಯ ಆರಂಭ
ಜ. 26 ಕರ್ನಾಟಕ-ಪಂಜಾಬ್ ಅ. 12.00
ಜ. 26 ತ.ನಾಡು-ಹಿಮಾಚಲ ಸಂ. 7.00
ಜ. 27 ಹರ್ಯಾಣ-ಬರೋಡ ಅ. 12.00