ಕೋಲ್ಕತಾ: “ವಿಜಯ್ ಹಜಾರೆ ಟ್ರೋಫಿ’ ಚಾಂಪಿಯನ್ ಹಿಮಾಚಲ ಪ್ರದೇಶ “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಟಿ20 ಪಂದ್ಯಾವಳಿಯಲ್ಲೂ ಗೆಲುವಿನ ಓಟ ಮುಂದುವರಿಸಿ ಫೈನಲ್‌ಗೆ ಲಗ್ಗೆ ಇರಿಸಿದೆ. ಶನಿವಾರ “ಈಡನ್ ಗಾರ್ಡನ್ಸ್’ನಲ್ಲಿ ನಡೆಯುವ ಪ್ರಶಸ್ತಿ ಸಮರದಲ್ಲಿ ಅದು ಮುಂಬಯಿಯನ್ನು ಎದುರಿಸಲಿದೆ.
ಗುರುವಾರದ ಸೆಮಿಫೈನಲ್ ಸೆಣಸಾಟದಲ್ಲಿ ಹಿಮಾಚಲ ಪ್ರದೇಶ 13 ರನ್ನುಗಳಿಂದ ಪಂಜಾಬ್‌ಗ ಸೋಲುಣಿಸಿತು. ಇನ್ನೊಂದು ಉಪಾಂತ್ಯದಲ್ಲಿ ಮುಂಬಯಿ 5 ವಿಕೆಟ್‌ಗಳಿಂದ ವಿದರ್ಭವನ್ನು ಮಣಿಸಿತು. ಹಿಮಾಚಲ ಪ್ರದೇಶ 7 ವಿಕೆಟಿಗೆ 176 ರನ್ ಬಾರಿಸಿ ಸವಾಲೊಡ್ಡಿದರೆ, ಪಂಜಾಬ್ 7 ವಿಕೆಟ್ ನಷ್ಟಕ್ಕೆ 163 ರನ್ ಮಾಡಿತು. ಸುಮೀತ್ ವರ್ಮ 51, ಆಕಾಶ್ ವಶಿಷ್ಠ 43 ರನ್ ಮಾಡಿ ಹಿಮಾಚಲದ ದೊಡ್ಡ ಮೊತ್ತಕ್ಕೆ ಕಾರಣ ರಾದರು. ನಾಯಕ ರಿಷಿ ಧವನ್ 3, ಮಾಯಾಂಕ್ ಡಾಗರ್ 2 ವಿಕೆಟ್ ಉರುಳಿಸಿದರು. 45 ರನ್ ಮಾಡಿದ ಶುಭಮನ್ ಗಿಲ್ ಅವರದು ಪಂಜಾಬ್ ಸರದಿಯ ಗರಿಷ್ಠ ಗಳಿಕೆ.
ಅಯ್ಯರ್ ಅಮೋಘ ಆಟ :
ಮುಂಬಯಿ ವಿರುದ್ಧದ ಪಂದ್ಯ ದಲ್ಲಿ ವಿದರ್ಭ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. 7ನೇ ಕ್ರಮಾಂಕದಲ್ಲಿ ಆಡಲಿಳಿದ ಕೀಪರ್ ಜಿತೇಶ್ ಶರ್ಮ ಅಜೇಯ 46 ರನ್ (24 ಎಸೆತ, 3 ಬೌಂಡರಿ, 3 ಸಿಕ್ಸರ್) ಬಾರಿಸಿದ್ದರಿಂದ ಮೊತ್ತ 160ರ ಗಡಿ ದಾಟಿತು. ಶಮ್ಸ್ ಮುಲಾನಿ 3, ತುಷಾರ್ ದೇಶಪಾಂಡೆ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಕಿತ್ತರು.
ಮುಂಬಯಿ 16.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 169 ರನ್ ಬಾರಿಸಿತು. ಶ್ರೇಯಸ್ ಅಯ್ಯರ್ ಸರ್ವಾಧಿಕ 73 (44 ಎಸೆತ, 7 ಬೌಂಡರಿ, 4 ಸಿಕ್ಸರ್), ಪೃಥ್ವಿ ಶಾ 34, ಸಫìರಾಜ್ ಖಾನ್ 27 ರನ್ ಮಾಡಿದರು.