Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಸತತ 5ನೇ ಜಯ; ಕರ್ನಾಟಕ ಅಜೇಯ

12:30 AM Feb 28, 2019 | Team Udayavani |

ಕಟಕ್‌: ದಿಟ್ಟ ಹೋರಾಟ ನೀಡಿದ ಛತ್ತೀಸ್‌ಗಢವನ್ನು 4 ವಿಕೆಟ್‌ಗಳಿಂದ ಮಣಿಸಿದ ಕರ್ನಾಟಕ, “ಸಯ್ಯದ್‌ ಮುಷ್ತಾಕ್‌ ಅಲಿ ಟಿ20′ ಕ್ರಿಕೆಟ್‌ ಸರಣಿಯಲ್ಲಿ ಸತತ 5 ಗೆಲುವುಗಳೊಂದಿಗೆ ಅಜೇಯ ಓಟ ಬೆಳೆಸಿದೆ. “ಡಿ’ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

Advertisement

ಬುಧವಾರ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಛತ್ತೀಸ್‌ಗಢ 3 ವಿಕೆಟಿಗೆ 171 ರನ್‌ ಪೇರಿಸಿದರೆ, ಕರ್ನಾಟಕ 19.2 ಓವರ್‌ಗಳಲ್ಲಿ 6 ವಿಕೆಟಿಗೆ 175 ರನ್‌ ಬಾರಿಸಿ ಜಯ ಸಾಧಿಸಿತು. ಕರ್ನಾಟಕವಿನ್ನು ಒಡಿಶಾ (ಫೆ. 28) ಮತ್ತು ಹರ್ಯಾಣ (ಮಾ. 2) ವಿರುದ್ಧ ಕೊನೆಯ 2 ಲೀಗ್‌ ಪಂದ್ಯಗಳನ್ನು ಆಡಲಿದೆ.

ವಿನಯ್‌, ಸುಚಿತ್‌, ಮಿಥುನ್‌ ಸಾಹಸ
ಕೊನೆಯ 5 ಓವರ್‌ಗಳಲ್ಲಿ ಸಿಡಿಲಬ್ಬರ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಕರ್ನಾಟಕ ಗೆಲುವಿನ ಸಂಭ್ರಮ ಆಚರಿಸಿತು. ಮೊದಲ 15 ಓವರ್‌ಗಳಲ್ಲಿ 5 ವಿಕೆಟಿಗೆ 109 ರನ್‌ ಗಳಿಸಿ ಸೋಲಿನ ಅಂಚಿನಲ್ಲಿದ್ದ ಕರ್ನಾಟಕ, ಬಳಿಕ ಜಗದೀಶ್‌ ಸುಚಿತ್‌, ವಿನಯ್‌ ಕುಮಾರ್‌ ಮತ್ತು ಅಭಿಮನ್ಯು ಮಿಥುನ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಛತ್ತೀಸ್‌ಗಢದ ಗೆಲುವಿನ ಕನಸನ್ನು ಛಿದ್ರಗೊಳಿಸಿತು. ಕೊನೆಯ 4.2 ಓವರ್‌ಗಳಲ್ಲಿ ಈ ಮೂವರು 66 ರನ್‌ ಪೇರಿಸಿ ಅಮೋಘ ಗೆಲುವನ್ನು ತಂದಿತ್ತರು.

ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ವಿನಯ್‌ ಕುಮಾರ್‌ 13 ಎಸೆತಗಳಿಂದ ಅಜೇಯ 34 ರನ್‌ (4 ಸಿಕ್ಸರ್‌), ಜಗದೀಶ್‌ ಸುಚಿತ್‌ 24 ಎಸೆತಗಳಿಂದ 34 ರನ್‌ (3 ಬೌಂಡರಿ, 1 ಸಿಕ್ಸರ್‌) ಮತ್ತು ಮಿಥುನ್‌ 7 ಎಸೆತಗಳಿಂದ ಅಜೇಯ 18 ರನ್‌ (1 ಬೌಂಡರಿ, 2 ಸಿಕ್ಸರ್‌) ಸಿಡಿಸಿ ತಂಡವನ್ನು ದಡ ಮುಟ್ಟಿಸಿದರು.ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ರೋಹನ್‌ ಕದಮ್‌ 16, ಮಾಯಾಂಕ್‌ ಅಗರ್ವಾಲ್‌ 21 ಮತ್ತು ಕರುಣ್‌ ನಾಯರ್‌ 35 ರನ್‌ ಮಾಡಿದರು. ಆದರೆ ನಾಯಕ ಮನೀಷ್‌ ಪಾಂಡೆ (9), ಶರತ್‌ ಬಿ.ಆರ್‌. (0) ವಿಫ‌ಲರಾದರು.

ಹರ್‌ಪ್ರೀತ್‌ ಕಪ್ತಾನನ ಆಟ
ಛತ್ತೀಸ್‌ಗಢ ಪರ ನಾಯಕ ಹರ್‌ಪ್ರೀತ್‌ ಸಿಂಗ್‌ 79 ರನ್‌ (56 ಎಸೆತ, 8 ಬೌಂಡರಿ, 3 ಸಿಕ್ಸರ್‌), ಅಮನ್‌ದೀಪ್‌ ಖಾರೆ ಔಟಾಗದೆ 45 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದು ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆರಂಭಕಾರ ರಿಷಭ್‌ ತಿವಾರಿ ಕೊಡುಗೆ 33 ರನ್‌.

Advertisement

ಛತ್ತೀಸ್‌ಗಢದ ಬ್ಯಾಟಿಂಗ್‌ ಅಬ್ಬರದ ವೇಳೆ ಕರ್ನಾಟಕದ ಬೌಲಿಂಗ್‌ ಸಂಪೂರ್ಣ ದಿಕ್ಕು ತಪ್ಪಿತು.

ಸಂಕ್ಷಿಪ್ತ ಸ್ಕೋರ್‌: ಛತ್ತೀಸ್‌ಗಢ-3 ವಿಕೆಟಿಗೆ 171 (ಹರ್‌ಪ್ರೀತ್‌ ಔಟಾಗದೆ 79, ಅಮನ್‌ದೀಪ್‌ ಔಟಾಗದೆ 45, ರಿಷಭ್‌ 33, ಶ್ರೇಯಸ್‌ ಗೋಪಾಲ್‌ 19ಕ್ಕೆ 1, ಕೌಶಿಕ್‌ 36ಕ್ಕೆ 1, ಮಿಥುನ್‌ 46ಕ್ಕೆ 1). ಕರ್ನಾಟಕ-19.2 ಓವರ್‌ಗಳಲ್ಲಿ 6 ವಿಕೆಟಿಗೆ 175 (ನಾಯರ್‌ 35, ಸುಚಿತ್‌ 34, ವಿನಯ್‌ ಔಟಾಗದೆ 34, ಮೌರ್ಯ 13ಕ್ಕೆ 2, ಶುಭಂ 35ಕ್ಕೆ 2, ವಿಶಾಲ್‌ 40ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next