Advertisement

ಸತತ 11ನೇ ಜಯ, ಕರ್ನಾಟಕ ಫೈನಲ್‌ಗೆ

12:30 AM Mar 13, 2019 | |

ಇಂದೋರ್‌: ಸತತ 11ನೇ ಗೆಲುವಿನೊಂದಿಗೆ ಕರ್ನಾಟಕ ತಂಡ ಸೈಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿ ಸೂಪರ್‌ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾ ಟಕ ತಂಡವು ವಿದರ್ಭ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡದ ಸವಾಲನ್ನು ಎದುರಿಸಲಿದೆ. 

Advertisement

ಮೊದಲು ಬ್ಯಾಟಿಂಗ್‌ ಮಾಡಿದ ವಿದರ್ಭ ವಿನಯ್‌ ಕುಮಾರ್‌ (27ಕ್ಕೆ 2) ಅವರ ಶಿಸ್ತಿನ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 7 ವಿಕೆಟಿಗೆ 138 ರನ್‌ಗಳಿಗೆ ಬ್ಯಾಟಿಂಗ್‌ ಮುಗಿಸಿತು. ಈ ಗುರಿ ಬೆನ್ನಟ್ಟಿದ್ದ ಕರ್ನಾಟಕ ನಾಯಕ ಮನೀಶ್‌ ಪಾಂಡೆ (49 ಔಟಾಗದೆ) ಹಾಗೂ ರೋಹನ್‌ ಕದಮ್‌ (39 ರನ್‌) ಅವರ ನೆರವಿನಿಂದ 19.2 ಓವರ್‌ಗಳಲ್ಲಿ  4 ವಿಕೆಟ್‌ ಕಳೆದುಕೊಂಡು 140 ರನ್‌ ಗಳಿಸಿ ಗೆಲುವಿನ ನಗು ಬೀರಿತು. ಅಜೇಯ ಕರ್ನಾಟಕ ಗುರುವಾರ ನಡೆಯಲಿರುವ ಫೈನಲ್‌ ಹಣಾಹಣಿಯಲ್ಲಿ ಮಹಾರಾಷ್ಟ್ರ ಸವಾಲನ್ನು ಎದುರಿಸಲಿದೆ.

ಮನೀಶ್‌, ಕದಮ್‌ ಶ್ರೇಷ್ಠ ಬ್ಯಾಟಿಂಗ್‌ 
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಬಿ.ಆರ್‌. ಶರತ್‌ (5 ರನ್‌) ಅವರ ವಿಕೆಟ್‌ ಕೇವಲ 20 ರನ್‌ ತಲುಪಿದಾಗ ಪತನಗೊಂಡಿತು. ಮೊತ್ತ 39 ರನ್‌ ಆಗುತ್ತಿದ್ದಂತೆ ಮಾಯಾಂಕ್‌ ಅಗರ್ವಾಲ್‌ (13 ರನ್‌) ವಿಕೆಟ್‌ ಕೂಡ ಉರುಳಿತು. ಆದರೆ ಆರಂಭಿಕ ರೋಹನ್‌ ಕದಮ್‌ ಅತ್ಯುತ್ತಮ ಆಟವಾಡಿ ಅರ್ಧಶತಕದತ್ತ ಹೆಜ್ಜೆ ಇಟ್ಟಿದ್ದರು. ಈ ಹಂತದಲ್ಲಿ ದಾಳಿಗಿಳಿದ ಠಾಕೂರ್‌ ತಮ್ಮ ಬೌಲಿಂಗ್‌ ಜಾದೂವಿನಿಂದ ಕದಮ್‌ರನ್ನು ಪೆವಿಲಿಯನ್‌ಗೆ ಅಟ್ಟಿದರು. ಆಗ ತಂಡದ ಮೊತ್ತ 3 ವಿಕೆಟ್‌ಗೆ 68 ರನ್‌ ಆಗಿತ್ತು. ಬಳಿಕ ಬಂದ ಕರುಣ್‌ ನಾಯರ್‌ (24 ರನ್‌) ತಂಡದ ಮೊತ್ತ 103 ರನ್‌ ಆಗಿದ್ದಾಗ ಔಟಾಗಿ ಹೊರ ನಡೆದರು. ಅನಂತರ ಮನೀಶ್‌ ಪಾಂಡೆ ಭರ್ಜರಿಯಾಗಿ ಆಡಿ 35 ಎಸೆತಗಳಲ್ಲಿ ಅಜೇಯ 49 ರನ್‌ ( 3 ಬೌಂಡರಿ ಹಾಗೂ 2 ಸಿಕ್ಸರ್‌) ಬಾರಿಸಿ ಗೆಲುವಿನ ದಡ ಸೇರಿಸಿದರು.  

ವಿದರ್ಭ ಕಳಪೆ ಬ್ಯಾಟಿಂಗ್‌
ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ವಿದರ್ಭ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಅಥರ್ವ ಟೈಡೆ (28 ರನ್‌) ಆರಂಭಿಕ ಹಂತದಲ್ಲಿ ಸ್ವಲ್ಪ ರನ್‌ ಗಳಿಸಿದರು. ಉಳಿದಂತೆ ವಿದರ್ಭದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಂಪೂರ್ಣ ನೆಲಕಚ್ಚಿತು. ಕೆಳ ಕ್ರಮಾಂಕದಲ್ಲಿ ಅಪೂರ್ವ ವಾಂಖೆಡೆ (ಅಜೇಯ 56 ರನ್‌) ಹಾಗೂ ಅಕ್ಷಯ್‌ ಕರ್ನೆವರ್‌ (33 ರನ್‌) ದಿಟ್ಟ ಆಟ ನಡೆಸಿದ್ದರಿಂದ ತಂಡ 130 ರನ್‌ ಗಡಿ ದಾಟಲು ಸಾಧ್ಯವಾಯಿತು. ಕರ್ನಾಟಕ ಪರ ವಿನಯ್‌ ಕುಮಾರ್‌ 2 ವಿಕೆಟ್‌ ಕಿತ್ತರೆ ಅಭಿಮನ್ಯು ಮಿಥುನ್‌ ಯಾವುದೇ ವಿಕೆಟ್‌ ಪಡೆಯದಿದ್ದರೂ 3 ಓವರ್‌ ಎಸೆದು ಕೇವಲ 11 ರನ್‌ ಬಿಟ್ಟು ಕೊಟ್ಟು ಅಮೋಘ ನಿಯಂತ್ರಣ ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ 20 ಓವರ್‌ಗಳಲ್ಲಿ 7 ವಿಕೆಟಿಗೆ 138 (ಅಪೂರ್ವ ವಾಂಖೆಡೆ ಅಜೇಯ 56, ಅಕ್ಷಯ್‌ ಕರ್ನೆವರ್‌ 33, ವಿನಯ್‌ ಕುಮಾರ್‌ 27ಕ್ಕೆ 2), ಕರ್ನಾಟಕ 19.2 ಓವರ್‌ಗಳಲ್ಲಿ 4 ವಿಕೆಟಿಗೆ 140 (ಮನೀಶ್‌ ಪಾಂಡೆ ಅಜೇಯ 49, ರೋಹನ್‌ ಕದಮ್‌ 39).

Advertisement
Advertisement

Udayavani is now on Telegram. Click here to join our channel and stay updated with the latest news.

Next