Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಕರ್ನಾಟಕಕ್ಕೆ ಸತತ 9ನೇ ಜಯ

12:30 AM Mar 10, 2019 | |

ಇಂದೋರ್‌ (ಮಧ್ಯಪ್ರದೇಶ):ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ ಕರ್ನಾಟಕದ ಭರ್ಜರಿ ಓಟ ಮುಂದುವರಿದಿದೆ. ಸೂಪರ್‌ ಲೀಗ್‌ ಹಂತದ ಪಂದ್ಯದಲ್ಲಿ ಉತ್ತರಪ್ರದೇಶ ವಿರುದ್ಧ  ರಾಜ್ಯ ತಂಡ 10 ರನ್‌ ಜಯ ಸಾಧಿಸಿದೆ. ಈ ಮೂಲಕ ಈ ಕೂಟದಲ್ಲಿ ಸತತ 9ನೇ ಗೆಲುವು ದಾಖಲಿಸಿದೆ. ಲೀಗ್‌ ಹಂತದಲ್ಲಿ ಸತತ 7 ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ರಾಜ್ಯ,ಸೂಪರ್‌ ಲೀಗ್‌ನಲ್ಲೂ ಸತತ 2 ಜಯ ಕಂಡಿದೆ.

Advertisement

ಮನೀಶ್‌ ಪಾಂಡೆ ನಾಯಕತ್ವದ ಕರ್ನಾಟಕ ಮೊದಲು ಬ್ಯಾಟಿಂಗ್‌ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 149 ರನ್‌ ಗಳಿಸಿತು. ಇದನ್ನು ಬೆನ್ನತ್ತಿ ಹೊರಟ ಉತ್ತರಪ್ರದೇಶ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 139 ರನ್‌ ಮಾಡಲಷ್ಟೇ ಶಕ್ತವಾಯಿತು.ಹಿಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಆರಂಭಕಾರ ರೋಹನ್‌ ಕದಂ 35 ರನ್‌ ಗಳಿಸಿದ್ದೇ ತಂಡದ ಗರಿಷ್ಠ ರನ್‌. ಇದನ್ನು ಹೊರತುಪಡಿಸಿದರೆ ಮಾಯಾಂಕ್‌ ಅಗರ್ವಾಲ್‌ 33 ರನ್‌, ನಾಯಕ ಮನೀಶ್‌ ಪಾಂಡೆ 22 ರನ್‌ ಮತ್ತು ಮನೋಜ್‌ ಭಾಂಡಗೆ 25 ರನ್‌ ಗಳಿಸಿದರು. ಉತ್ತರಪ್ರದೇಶ ಪರ ಅಂಕಿತ್‌ ರಜಪೂತ್‌, ಯಶ್‌ ದಯಾಲ್‌, ಸೌರಭ್‌ ಕುಮಾರ್‌ ಹಾಗೂ ಅಂಕಿತ್‌ ಚೌಧರಿ ತಲಾ ಒಂದು ವಿಕೆಟ್‌ ಕಿತ್ತರು.

ಸುಲಭ ಮೊತ್ತವನ್ನು ಬೆನ್ನತ್ತಿದ್ದ ಉತ್ತರಪ್ರದೇಶಕ್ಕೆ ಆರಂಭಕಾರ ನಾಯಕ ಆಕಾಶ್‌ ದೀಪ್‌ ನಾಥ್‌ 46 ರನ್‌, 3ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಉಪೇಂದ್ರ ಯಾದವ್‌ 42 ರನ್‌ ಮಾಡಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಇವರಿಬ್ಬರ ಬಳಿಕ ಬಂದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಪರಿಣಾಮ ಕರ್ನಾಟಕದೆದರು ಸೋಲನುಭವಿಸುವಂತಾಯಿತು. ಕರ್ನಾಟಕದ ಪರ ಎಡಗೈ ವೇಗಿ ವಿ.ಕೌಶಿಕ್‌ 3 ವಿಕೆಟ್‌ ಕಿತ್ತರು. ಉಳಿದಂತೆ ಆರ್‌.ವಿನಯ್‌ ಕುಮಾರ್‌, ಜೆ.ಸುಚಿತ್‌ ತಲಾ 2 ವಿಕೆಟ್‌ ಕಿತ್ತ ತಂಡದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ- 20 ಓವರ್‌ಗಳಲ್ಲಿ 6 ವಿಕೆಟಿಗೆ 149 (ರೋಹನ್‌ ಕದಂ 35, ಮಾಯಾಂಕ್‌ ಅಗರ್ವಾಲ್‌ 33, ಅಂಕಿತ್‌ ಚೌಧರಿ 26ಕ್ಕೆ 1). ಉತ್ತರಪ್ರದೇಶ- 20 ಓವರ್‌ಗಳಲ್ಲಿ 8 ವಿಕೆಟಿಗೆ 139(ಆಕಾಶ್‌ ದೀಪ್‌ ನಾಥ್‌ 46, ಉಪೇಂದ್ರ ಯಾದವ್‌ 42, ಕೌಶಿಕ್‌ 22ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next