Advertisement

ಹರ್ಯಾಣ ನಿರ್ಗಮನ: ಫೈನಲ್‌ಗೆ ಕರ್ನಾಟಕ

12:06 AM Nov 30, 2019 | Sriram |

ಸೂರತ್‌: ಹಾಲಿ ಚಾಂಪಿಯನ್‌ ಕರ್ನಾಟಕ “ಸಯ್ಯದ್‌ ಮುಷ್ತಾಕ್‌ ಅಲಿ ಟಿ20′ ಕ್ರಿಕೆಟ್‌ ಕೂಟದ ಫೈನಲ್‌ ಪ್ರವೇಶಿಸಿದೆ. ಶುಕ್ರವಾರದ ಮೊದಲ ಸೆಮಿಫೈನಲ್‌ನಲ್ಲಿ ಹರ್ಯಾಣ ನೀಡಿದ ಬೃಹತ್‌ ಸವಾಲನ್ನು ಸುಲಭದಲ್ಲಿ ಮೀರಿನಿಂತ ಮನೀಷ್‌ ಪಾಂಡೆ ಪಡೆ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರೀ ಭರವಸೆ ಮೂಡಿಸಿದೆ.

Advertisement

ರವಿವಾರದ ಫೈನಲ್‌ನಲ್ಲಿ ಕರ್ನಾಟಕದ ಎದುರಾಳಿಯಾಗಲಿರುವ ತಂಡ ತಮಿಳುನಾಡು. ಇನ್ನೊಂದು ಸೆಮಿಫೈನಲ್‌ನಲ್ಲಿ ಅದು ರಾಜಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಸೋತು ಬ್ಯಾಟಿಂಗ್‌ ಅವಕಾಶ ಪಡೆದ ಹರ್ಯಾಣ, ಹಿಮಾಂಶು ರಾಣಾ (61), ಚೈತನ್ಯ ಬಿಶ್ನೋಯ್‌ (55) ಅವರ ಬಿರುಸಿನ ಅರ್ಧ ಶತಕ ಸಾಹಸದಿಂದ 8 ವಿಕೆಟಿಗೆ 194 ರನ್‌ ಪೇರಿಸಿತು. ಈ ಕಠಿನ ಸವಾಲನ್ನು ಬೆನ್ನಟ್ಟಿದ ಕರ್ನಾಟಕ, ಆರಂಭಿಕರಾದ ದೇವದತ್‌ ಪಡಿಕ್ಕಲ್‌ (87) ಮತ್ತು ಕೆ.ಎಲ್‌. ರಾಹುಲ್‌ (66) ಅವರ ಅಮೋಘ ಪರಾಕ್ರಮದಿಂದ 15 ಓವರ್‌ಗಳಲ್ಲೇ 2 ವಿಕೆಟಿಗೆ 195 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ರಾಹುಲ್‌-ಪಡಿಕ್ಕಲ್‌ ಪರಾಕ್ರಮ
ಬೃಹತ್‌ ಗುರಿ ಬೆನ್ನಟ್ಟಿದ ಕರ್ನಾಟಕ ದಿಟ್ಟ ಜವಾಬು ನೀಡತೊಡಗಿತು. ಆರಂಭಿಕರಾದ ರಾಹುಲ್‌-ದೇವದತ್‌ ಪಡಿಕ್ಕಲ್‌ ಹರ್ಯಾಣ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. ಮೊದಲ ವಿಕೆಟಿಗೆ 9.3 ಓವರ್‌ಗಳಿಂದ 125 ರನ್‌ ಒಟ್ಟುಗೂಡಿಸಿ ಗೆಲುವನ್ನು ಖಚಿತಪಡಿಸಿದರು. 7.4 ಓವರ್‌ಗಳಲ್ಲೇ ಕರ್ನಾಟಕದ ಮೊತ್ತ ನೂರರ ಗಡಿ ಮುಟ್ಟಿತ್ತು.
31 ಎಸೆತ ಎದುರಿಸಿದ ರಾಹುಲ್‌ 4 ಬೌಂಡರಿ, 6 ಸಿಕ್ಸರ್‌ ನೆರವಿನಿಂದ 66 ರನ್‌ ಚಚ್ಚಿದರು. 21 ಎಸೆತಗಳಿಂದ ಅರ್ಧ ಶತಕ ಪೂರೈಸಿದರು. ಕೂಟ ದುದ್ದಕ್ಕೂ ಅಮೋಘ ನಿರ್ವಹಣೆ ನೀಡುತ್ತ ಬಂದ ಪಡಿಕ್ಕಲ್‌ 42 ಎಸೆತಗಳಿಂದ 87 ರನ್‌ ಸೂರೆಗೈದರು (11 ಬೌಂಡರಿ, 4 ಸಿಕ್ಸರ್‌). ಅರ್ಧ ಶತಕ 24 ಎಸೆತಗಳಿಂದ ದಾಖಲಾಯಿತು. ಅಗರ್ವಾಲ್‌ ಅಜೇಯ 30 ರನ್‌ ಮಾಡಿದರು.

ಹರ್ಯಾಣ ಉತ್ತಮ ಆರಂಭ
ಹರ್ಯಾಣದ ಆರಂಭ ಕೂಡ ಉತ್ತಮವಾಗಿತ್ತು. ಚೈತನ್ಯ ಬಿಶ್ನೋಯ್‌ (55) ಹಾಗೂ ಹರ್ಷಲ್‌ ಪಟೇಲ್‌ (34) ಮೊದಲ ವಿಕೆಟಿಗೆ 6.4 ಓವರ್‌ಗಳಿಂದ 67 ರನ್‌ ಜತೆಯಾಟ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಹಿಮಾಂಶು ರಾಣಾ (61) ಹಾಗೂ ರಾಹುಲ್‌ ತೆವಾಟಿಯ (32) ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು.

Advertisement

ಮಿಥುನ್‌ ಅಮೋಘ ಬೌಲಿಂಗ್‌
19ನೇ ಓವರ್‌ ತನಕ ಹರ್ಯಾಣ ರನ್‌ ಪ್ರವಾಹ ಹರಿಸುತ್ತಲೇ ಇತ್ತು. ತಂಡದ ಮೊತ್ತ 210-215ಕ್ಕೆ ಏರುವ ನಿರೀಕ್ಷೆ ಮೂಡಿತ್ತು. ಆದರೆ ಅಲ್ಲಿಯ ತನಕ ದಂಡಿಸಿಕೊಂಡಿದ್ದ ಅಭಿಮನ್ಯು ಮಿಥುನ್‌, ಅಂತಿಮ ಓವರಿನಲ್ಲಿ ಅಮೋಘ ದಾಳಿ ಸಂಘಟಿಸಿದರು. ಮೊದಲ 4 ಎಸೆತಗಳಲ್ಲಿ 4 ವಿಕೆಟ್‌ ಕಿತ್ತ ಅವರು, ಅಂತಿಮ ಎಸೆತದಲ್ಲಿ ಮತ್ತೂಂದು ವಿಕೆಟ್‌ ಉಡಾಯಿಸಿದರು. ಹೀಗೆ 6 ಎಸೆತಗಳಲ್ಲಿ 5 ವಿಕೆಟ್‌ ಕಿತ್ತ ಭಾರತದ ಮೊದಲ ಟಿ20 ಬೌಲರ್‌ ಎಂಬ ಹೆಗ್ಗಳಿಕೆ ಮಿಥುನ್‌ ಅವರದ್ದಾಯಿತು. ಮಿಥುನ್‌ ಸಾಧನೆ 39ಕ್ಕೆ 5 ವಿಕೆಟ್‌.
ಮಿಥುನ್‌ ಕಳೆದ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಹ್ಯಾಟ್ರಿಕ್‌ ಸಹಿತ ಮೊದಲ ಸಲ “ಲಿಸ್ಟ್‌ ಎ’ ಕ್ರಿಕೆಟ್‌ನಲ್ಲಿ 5 ವಿಕೆಟ್‌ ಉಡಾಯಿಸಿದ್ದರು. ಇದೇ ಸಾಧನೆಯನ್ನು ಮುಷ್ತಾಕ್‌ ಅಲಿ ಕೂಟದಲ್ಲೂ ಪುನರಾವರ್ತಿಸಿದರು.

ದೇವದತ್‌ ಪಡಿಕ್ಕಲ್‌ ದಾಖಲೆ
ಪಡಿಕ್ಕಲ್‌ ಈ ಸರಣಿಯಲ್ಲಿ 548 ರನ್‌ ಬಾರಿಸಿದರು. ಇದು ಪದಾರ್ಪಣ ಟಿ20 ಸರಣಿಯಲ್ಲಿ ಕ್ರಿಕೆಟಿಗನೊಬ್ಬ ಪೇರಿಸಿದ ಅತ್ಯಧಿಕ ಗಳಿಕೆ. ಕರ್ನಾಟಕದವರೇ ಆದ ರೋಹನ್‌ ಕದಮ್‌ ಕಳೆದ ಸಲದ ಮುಷ್ತಾಕ್‌ ಅಲಿ ಕೂಟದಲ್ಲೇ 536 ರನ್‌ ಗಳಿಸಿದ ದಾಖಲೆ ಪತನಗೊಂಡಿತು. ಇವರಿ ಬ್ಬರನ್ನು ಹೊರತು ಪಡಿಸಿದರೆ ಪದಾರ್ಪಣ ಟಿ20 ಸರಣಿಯಲ್ಲಿ ಬೇರೆ ಯಾರೂ 500 ರನ್‌ ಹೊಡೆದಿಲ್ಲ.

ಹರ್ಯಾಣ
ಚೈತನ್ಯ ಬಿಶ್ನೋಯ್‌ ರನೌಟ್‌ 55
ಹರ್ಷಲ್‌ ಪಟೇಲ್‌ ಸಿ ನಾಯರ್‌ ಬಿ ಗೋಪಾಲ್‌ 34
ಶಿವಂ ಚೌಹಾಣ್‌ ಎಲ್‌ಬಿಡಬ್ಲ್ಯು ಗೋಪಾಲ್‌ 6
ಹಿಮಾಂಶು ಸಿ ಅಗರ್ವಾಲ್‌ ಬಿ ಮಿಥುನ್‌ 61
ಆರ್‌. ತೆವಾಟಿಯ ಸಿ ನಾಯರ್‌ ಬಿ ಮಿಥುನ್‌ 32
ಸುಮಿತ್‌ ಕುಮಾರ್‌ ಸಿ ಕದಮ್‌ ಬಿ ಮಿಥುನ್‌ 0
ಜಿತೇಶ್‌ ಸರೋಹ್‌ ಔಟಾಗದೆ 1
ಅಮಿತ್‌ ಮಿಶ್ರಾ ಸಿ ಗೌತಮ್‌ ಬಿ ಮಿಥುನ್‌ 0
ಜಯಂತ್‌ ಯಾದವ್‌ ಸಿ ರಾಹುಲ್‌ ಬಿ ಮಿಥುನ್‌ 0
ಇತರ 5
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 194
ವಿಕೆಟ್‌ ಪತನ: 1-67, 2-75, 3-112,4-192, 5-192, 6-192, 7-192, 8-194.
ಬೌಲಿಂಗ್‌:ಅಭಿಮನ್ಯು ಮಿಥುನ್‌ 4-0-39-5
ರೋನಿತ್‌ ಮೋರೆ 4-0-51-0
ವಿ. ಕೌಶಿಕ್‌ 4-0-41-0
ಕೃಷ್ಣಪ್ಪ ಗೌತಮ್‌ 4-0-38-0
ಶ್ರೇಯಸ್‌ ಗೋಪಾಲ್‌ 4-0-23-2
ಕರ್ನಾಟಕ
ರಾಹುಲ್‌ ಸಿ ಬಿಶ್ನೋಯ್‌ ಬಿ ಯಾದವ್‌ 66
ಪಡಿಕ್ಕಲ್‌ ಸಿ ಬಿಶ್ನೋಯ್‌ ಬಿ ಹರ್ಷಲ್‌ 87
ಮಾಯಾಂಕ್‌ ಅಗರ್ವಾಲ್‌ ಔಟಾಗದೆ 30
ಮನೀಷ್‌ ಪಾಂಡೆ ಔಟಾಗದೆ 3
ಇತರ 9
ಒಟ್ಟು (15 ಓವರ್‌ಗಳಲ್ಲಿ 2 ವಿಕೆಟಿಗೆ) 195
ವಿಕೆಟ್‌ ಪತನ: 1-125, 2-182.
ಬೌಲಿಂಗ್‌: ಹರ್ಷಲ್‌ ಪಟೇಲ್‌ 3-0-28-1
ಆಶಿಷ್‌ ಹೂಡಾ 2-0-31-0
ಯಜುವೇಂದ್ರ ಚಹಲ್‌ 3-0-40-0
ಸುಮಿತ್‌ ಕುಮಾರ್‌ 1-0-14-0
ಜಯಂತ್‌ ಯಾದವ್‌ 3-0-45-1
ಅಮಿತ್‌ ಮಿಶ್ರಾ 3-0-36-0

ಎಕ್ಸ್‌ಟ್ರಾ ಇನ್ನಿಂಗ್ಸ್‌
ಅಭಿಮನ್ಯು ಮಿಥುನ್‌ 3 ದೇಶಿ ಕ್ರಿಕೆಟ್‌ ಕೂಟಗಳಲ್ಲಿ ಹ್ಯಾಟ್ರಿಕ್‌ ಸಾಧಿಸಿದ ಭಾರತದ ಪ್ರಥಮ ಬೌಲರ್‌. ಅವರು ರಣಜಿ, ವಿಜಯ್‌ ಹಜಾರೆ ಪಂದ್ಯಾವಳಿಯಲ್ಲೂ ಈ ಸಾಧನೆ ಮಾಡಿದ್ದಾರೆ.

ಮಿಥುನ್‌ ಓವರ್‌ ಒಂದರಲ್ಲಿ 5 ವಿಕೆಟ್‌ ಕಿತ್ತ ಭಾರತದ ಮೊದಲ ಹಾಗೂ ವಿಶ್ವದ 2ನೇ ಟಿ20 ಬೌಲರ್‌. 2013ರ ಬಿಸಿಬಿ ಇಲೆವೆನ್‌ ವಿರುದ್ಧ ಅಲ್‌ ಅಮಿನ್‌ ಹೊಸೈನ್‌ ಮೊದಲ ಸಲ ಈ ಸಾಧನೆಗೈದಿದ್ದರು.

ಮಿಥುನ್‌ ಟಿ20 ಕ್ರಿಕೆಟ್‌ ಪಂದ್ಯದ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಉರುಳಿಸಿದ ಭಾರತದ ಮೊದಲ, ವಿಶ್ವದ 6ನೇ ಬೌಲರ್‌.

ದೇವದತ್‌ ಪಡಿಕ್ಕಲ್‌ ಸಯ್ಯದ್‌ ಮುಷ್ತಾಕ್‌ ಅಲಿ ಪಂದ್ಯಾವಳಿಯೊಂದರಲ್ಲಿ 6 ಸಲ 50 ಪ್ಲಸ್‌ ರನ್‌ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌. ಇದರಲ್ಲಿ ಒಂದು ಅಜೇಯ ಶತಕ ಕೂಡ ಸೇರಿದೆ.

ಶ್ರೇಯಸ್‌ ಗೋಪಾಲ್‌ 2019ರ ಟಿ20 ಕ್ರಿಕೆಟ್‌ ಪಂದ್ಯಗಳಲ್ಲಿ ಒಟ್ಟು 51 ವಿಕೆಟ್‌ ಕಿತ್ತರು. ಅವರು ವರ್ಷವೊಂದರ ಟಿ20 ಪಂದ್ಯಗಳಲ್ಲಿ 50 ಪ್ಲಸ್‌ ವಿಕೆಟ್‌ ಕಿತ್ತ ಭಾರತದ ಮೊದಲ ಸ್ಪಿನ್ನರ್‌. ಉಳಿದಂತೆ ಭಾರತದ 3 ಪೇಸ್‌ ಬೌಲರ್‌ಗಳು ಈ ಸಾಧನೆ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಕರ್ನಾಟಕ 15 ಹಾಗೂ ಇದಕ್ಕಿಂತ ಕಡಿಮೆ ಓವರ್‌ಗಳಲ್ಲಿ ಅತ್ಯಧಿಕ ಮೊತ್ತವನ್ನು (195) ಯಶಸ್ವಿಯಾಗಿ ಬೆನ್ನಟ್ಟಿದ ವಿಶ್ವದ ಮೊದಲ ತಂಡವಾಗಿ ಮೂಡಿಬಂತು. 2014ರ ಟಿ20 ವಿಶ್ವಕಪ್‌ ವೇಳೆ ಅಯರ್‌ಲ್ಯಾಂಡ್‌ ವಿರುದ್ಧ ನೆದರ್ಲೆಂಡ್ಸ್‌ 13.5 ಓವರ್‌ಗಳಲ್ಲಿ 190 ರನ್‌ ಚೇಸ್‌ ಮಾಡಿ ಗೆದ್ದದ್ದು ದಾಖಲೆಯಾಗಿತ್ತು. ಐಪಿಎಲ್‌ನಲ್ಲಿ ರಾಜಸ್ಥಾನ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಕೂಡ 14.4 ಓವರ್‌ಗಳಲ್ಲಿ 190 ರನ್‌ ಮಾಡಿ ಜಯ ಒಲಿಸಿಕೊಂಡಿತ್ತು.

ಕರ್ನಾಟಕ ಸಯ್ಯದ್‌ ಮುಷ್ತಾಕ್‌ ಅಲಿ ನಾಕೌಟ್‌ ಪಂದ್ಯದಲ್ಲಿ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಜಯ ಸಾಧಿಸಿದ ತಂಡವೆನಿಸಿತು. 2009-10ರ ಕ್ವಾ. ಫೈನಲ್‌ನಲ್ಲಿ ಮುಂಬಯಿ ವಿರುದ್ಧ ಹೈದರಾಬಾದ್‌ 182 ರನ್‌ ಬೆನ್ನಟ್ಟಿ ಗೆದ್ದದ್ದು ಈವರೆಗಿನ ದಾಖಲೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next