Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ

11:13 PM Nov 16, 2021 | Team Udayavani |

ಹೊಸದಿಲ್ಲಿ: ಅಭಿನವ್‌ ಮನೋಹರ್‌ (ಅಜೇಯ 70) ಅವರ ಅಮೋಘ ಬ್ಯಾಟಿಂಗ್‌ ಸಾಹಸದ ನೆರವಿನಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ.

Advertisement

ಮಂಗಳವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸೌರಾಷ್ಟ್ರ 7 ವಿಕೆಟಿಗೆ 145 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಕರ್ನಾಟಕ ಆರಂಭಿಕ ಆಘಾತದ ಹೊರತಾಗಿಯೂ 19.5 ಓವರ್‌ಗಳಲ್ಲಿ 8 ವಿಕೆಟ್‌ನಷ್ಟಕ್ಕೆ 150 ರನ್‌ ಪೇರಿಸಿ ಗೆಲುವಿನ ನಗೆ ಬೀರಿತು.

ಆರಂಭಿಕ ಆಘಾತ
ಭಾರತ “ಎ’ ಮತ್ತು ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ದೇವದತ್ತ ಪಡಿಕ್ಕಲ್‌, ಮಾಯಾಂಕ್‌ ಅಗರ್ವಾಲ್‌ ಅವರ ಅನುಪಸ್ಥಿತಿಯಲ್ಲಿ ಆಡಲಿಳಿದ ಕರ್ನಾಟಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್‌ನಲ್ಲಿಯೇ ಬಿ. ಆರ್‌. ಶರತ್‌ ಶೂನ್ಯಕ್ಕೆ ಔಟಾದರೆ, ಅದರ ಬೆನ್ನಲ್ಲೇ ನಾಯಕ ಮನೀಷ್‌ ಪಾಂಡೆ (4) ಕೂಡ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಕರುಣ್‌ ನಾಯರ್‌ ಕೂಡ ಕೇವಲ 5 ರನ್‌ಗಳಿಸಿ ನಿರ್ಗಮಿಸಿದರು. ತಂಡದ ಮೊತ್ತ 34 ಆಗುವ ವೇಳೆ ಪ್ರಧಾನ ಆಟಗಾರರ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮತ್ತೂಂದೆಡೆ ಆರಂಭಿಕ ರೋಹನ್‌ ಕದಂ ಕ್ರೀಸ್‌ ಕಚ್ಚಿ ನಿಂತಿದ್ದರು. 5ನೇ ವಿಕೆಟ್‌ಗೆ ಅಭಿನವ್‌ ಮನೋಹರ್‌ ಅವರೊಂದಿಗೆ ಜತೆಗೂಡಿ 64 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇದನ್ನೂ ಓದಿ:‘ಮಿನಿ ವಿಧಾನಸೌಧ’ಗಳನ್ನು ‘ತಾಲೂಕು ಆಡಳಿತ ಸೌಧ’ ಎಂದು ಬದಲಾಯಿಸಲು ಸರಕಾರದ ಚಿಂತನೆ

ಈ ಹಂತದಲ್ಲಿ 33 ರನ್‌ಗಳಿಸಿದ್ದ ರೋಹನ್‌ ಕದಂ ರನೌಟ್‌ ಆಗುವ ಮೂಲಕ ಹೊರನಡೆದರು. ಆದರೂ ಧೃತಿಗೆಡದ ಅಭಿನವ್‌ ಸೌರಾಷ್ಟ್ರ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಹೋದರು. ಈ ವೇಳೆ ಅನಿರುದ್ಧ್ ಜೋಶಿ (13), ಜಗದೀಶ್‌ ಸುಚಿತ್‌ (5), ವಿಜಯ ಕುಮಾರ್‌ ವೈಶಾಖ್‌ (4) ವಿಕೆಟ್‌ ಒಪ್ಪಿಸಿ ಆತಂಕ ಮೂಡಿಸಿದರು. ಅಂತಿಮ ಓವರ್‌ನಲ್ಲಿ ಕರ್ನಾಟಕಕ್ಕೆ 5 ರನ್‌ ಅಗತ್ಯವಿದ್ದಾಗ ಕೆಸಿ ಕಾರಿಯಪ್ಪ (0) ವಿಕೆಟ್‌ ಒಪ್ಪಿಸಿ ಮತಷ್ಟು ಸಂಕಟಕ್ಕೆ ಸಿಲುಕಿಸಿದರು. ಗೆಲುವಿಗೆ 2 ಎಸೆತಗಳಲ್ಲಿ 2 ರನ್‌ ಇದ್ದಾಗ ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಅಭಿನವ್‌ ತಂಡಕ್ಕೆ 2 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು. ಪಂದ್ಯದ ಕೊನೇಯ ವರೆಗೂ ಏಕಾಂಗಿಯಾಗಿ ಹೋರಾಡಿದ ಅಭಿನವ್‌ (ಅಜೇಯ 70) ಅವರ ಮನೋಹರ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್‌ ಹಾಗೂ 2 ಬೌಂಡರಿ ಒಳಗೊಂಡಿತು.

Advertisement

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-7ಕ್ಕೆ 145 (ಜಾಕ್ಸನ್‌ 50, ವೈಶಾಖ್‌ 19ಕ್ಕೆ 2, ಕಾರಿಯಪ್ಪ 23ಕ್ಕೆ 2), ಕರ್ನಾಟಕ-19.5 ಓವರ್‌ಗಳಲ್ಲಿ 8 ವಿಕೆಟಿಗೆ 150 (ಅಭಿನವ್‌ ಮನೋಹರ್‌ ಅಜೇಯ 70, ರೋಹನ್‌ ಕದಂ 33, ಜೈದೇವ್‌ ಉನಾದ್ಕತ್‌ 22ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next