Advertisement

ಇತಿಹಾಸದತ್ತ ಭಾರತ ದಿಟ್ಟ ನೋಟ

10:30 PM Jan 02, 2019 | |

ಸಿಡ್ನಿ: ಆಸ್ಟ್ರೇಲಿಯದ ನೆಲದಲ್ಲಿ ಟೀಮ್‌ ಇಂಡಿಯಾ ಕ್ರಿಕೆಟ್‌ ಇತಿಹಾಸವೊಂದನ್ನು ಬರೆಯಲು ತುದಿಗಾಲಲ್ಲಿ ನಿಂತಿದೆ. 2019ರ ಆರಂಭ ಎನ್ನುವುದು ಭಾರತೀಯ ಕ್ರಿಕೆಟಿನ ನೂತನ ಅಧ್ಯಾಯಕ್ಕೆ ನಾಂದಿ ಹಾಡುವ ಸಾಧ್ಯತೆಯೊಂದು ನಿಚ್ಚಳವಾಗಿದೆ. 1947ರಿಂದಲೂ ಕಾಂಗರೂ ನಾಡಿನಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಡುತ್ತಲೇ ಬಂದಿರುವ ಭಾರತ ತಂಡ ಮೊದಲ ಬಾರಿಗೆ ಇಲ್ಲಿ ಸರಣಿ ಜಯವನ್ನು ಒಲಿಸಿಕೊಳ್ಳುವ ಕ್ಷಣಗಣನೆಯಲ್ಲಿದೆ. ಈ ಕಾರಣಕ್ಕಾಗಿ ಗುರುವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ “ನ್ಯೂ ಇಯರ್‌ ಟೆಸ್ಟ್‌’ ಪಂದ್ಯ ಎಂದಿಗಿಂತ ಹೆಚ್ಚಿನ ಮಹತ್ವ ಪಡೆದಿದೆ.

Advertisement

ಸರಣಿ ಜಯಿಸಬೇಕಾದರೆ ಭಾರತ ಸಿಡ್ನಿಯಲ್ಲಿ ಜಯಭೇರಿ ಮೊಳಗಿಸಲೇಬೇಕೆಂದಿಲ್ಲ. ಈಗಿನ ಫಾರ್ಮನ್ನೇ ಮುಂದುವರಿಸಿ ಪಂದ್ಯವನ್ನು ಡ್ರಾಗೊಳಿಸಿದರೂ ಸಾಕು, ಸರಣಿ 2-1ರಿಂದ ಕೊಹ್ಲಿ ಬಳಗದ ಪಾಲಾಗಲಿದೆ. ಆದರೆ ಭಾರತ ಡ್ರಾ ಯೋಚನೆ ಬದಲು 3-1 ಗೆಲುವಿನ ಸಕಾರಾತ್ಮಕ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಯಾವುದೇ ಕಾರಣಕ್ಕೂ ಸಿಡ್ನಿಯಲ್ಲಿ ಸೋಲದೆ, ಸರಣಿಯನ್ನು 2-2ರಿಂದ ಮುಗಿಸದೇ ಇರುವುದು ಮುಖ್ಯ. ಏಕೆಂದರೆ, ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಮಣಿಸಲು ಟೀಮ್‌ ಇಂಡಿಯಾಕ್ಕೆ ಇದಕ್ಕಿಂತ ಉತ್ತಮ ಅವಕಾಶ ಮುಂದೆ ಲಭಿಸುವುದು ಅನುಮಾನ!

ಗೆಲುವೇ ಗುರಿಯಾಗಲಿ…
1947-48ರಿಂದ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಆಡುತ್ತಿರುವ ಭಾರತ ಕೇವಲ 3 ಸಲ ಡ್ರಾ ಸಾಧಿಸಿದೆ. ಉಳಿದ 7 ಸರಣಿಗಳಲ್ಲಿ ಸೋಲುಂಡಿದೆ. ಇದಕ್ಕೆ 2014-15ರ ಕೊನೆಯ ಸರಣಿ ಕೂಡ ಹೊರತಾಗಿಲ್ಲ. ಅಂದಹಾಗೆ ಭಾರತ ತಂಡ ಆಸ್ಟ್ರೇಲಿಯದಲ್ಲಿ ಸರಣಿ ಮುನ್ನಡೆಯೊಂದಿಗೆ ಅಂತಿಮ ಟೆಸ್ಟ್‌ ಆಡಲಿಳಿಯುತ್ತಿರುವುದು ಇದೇ ಮೊದಲು.

ಅಡಿಲೇಡ್‌ ಟೆಸ್ಟ್‌ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಿದ ಕೊಹ್ಲಿ ಪಡೆಗೆ ಪರ್ತ್‌ನಲ್ಲಿ ಆಸ್ಟ್ರೇಲಿಯ ತಿರುಗೇಟು ನೀಡಿತು. ವಾರ್ನರ್‌, ಸ್ಮಿತ್‌ ಇಲ್ಲದೆಯೂ ತಮಗೆ ಗೆಲ್ಲಲು ಗೊತ್ತಿದೆ ಎಂಬುದನ್ನು ತೋರಿಸಿಕೊಟ್ಟದ್ದು ಪೇನ್‌ ಪಡೆಯ ಅಮೋಘ ಸಾಧನೆಯೇ ಆಗಿದೆ.

ಆದರೆ ಮೆಲ್ಬರ್ನ್ ಸೋಲಿಗೆ ಸಿಡ್ನಿಯಲ್ಲಿ ತಿರುಗೇಟು ನೀಡುವ ಆಸೀಸ್‌ ಯೋಜನೆಯನ್ನು ಕೊಹ್ಲಿ ಪಡೆ ವಿಫ‌ಲಗೊಳಿಸಲೇಬೇಕಿದೆ. ಸರಣಿ ಗೆಲುವೊಂದೇ ಗುರಿ ಆಗಬೇಕಿದೆ.

Advertisement

ಕರ್ನಾಟಕದ ಓಪನಿಂಗ್‌ ಜೋಡಿ?
ಭಾರತದ ಈ ಸೋಲಿಗೆ ಆರಂಭಿಕರ ವೈಫ‌ಲ್ಯವೇ ಕಾರಣ ಎಂಬುದು ಗುಟ್ಟಾಗಿ ಉಳಿದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ, ಅಂತಾರಾಷ್ಟ್ರೀಯ ಪಂದ್ಯದ ಅನುಭವವೇ ಇಲ್ಲದ ಮಾಯಾಂಕ್‌ ಅಗರ್ವಾಲ್‌ ಮತ್ತು ಮಧ್ಯಮ ಕ್ರಮಾಂಕದ ಹನುಮ ವಿಹಾರಿ ಅವರಿಂದ ಇನ್ನಿಂಗ್ಸ್‌ ಆರಂಭಿಸುವ ರಿಸ್ಕ್ ತೆಗೆದುಕೊಂಡಿತು. ಇದನ್ನು ಇಬ್ಬರೂ ಸವಾಲಾಗಿ ತೆಗೆದುಕೊಂಡರು. ಅಗರ್ವಾಲ್‌ ಹೆಚ್ಚಿನ ಯಶಸ್ಸು ಕಂಡರು.

ಈಗ ಸಿಡ್ನಿ ಟೆಸ್ಟ್‌ ಪಂದ್ಯದ 13ರ ಬಳಗದಲ್ಲಿ ರಾಹುಲ್‌ ಕಾಣಿಸಿಕೊಂಡಿದ್ದಾರೆ. ರೋಹಿತ್‌ ಶರ್ಮ ಅನುಪಸ್ಥಿತಿಯಲ್ಲಿ ವಿಹಾರಿ ಕೆಳ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇರುವುದರಿಂದ ಅಗರ್ವಾಲ್‌ ಜತೆ ರಾಹುಲ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಗ ಕರ್ನಾಟಕದ ಜೋಡಿಯೊಂದು ಟೀಮ್‌ ಇಂಡಿಯಾದ ಇನ್ನಿಂಗ್ಸ್‌ ಆರಂಭಿಸಿದಂತಾಗುತ್ತದೆ.

ಪಾಂಡ್ಯ, ಭುವಿಗೆ ಚಾನ್ಸ್‌ ಇಲ್ಲ
ರೋಹಿತ್‌ ಶರ್ಮ ಗೈರಲ್ಲಿ ಹಾರ್ದಿಕ್‌ ಪಾಂಡ್ಯ ಅವಕಾಶ ಪಡೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಸರಣಿಯ ನಡುವೆ ಕರೆಸಿಕೊಂಡ ಪಾಂಡ್ಯ ಅವರನ್ನು ಕಡೆಗಣಿಸಲಾಗಿದೆ. ಹಾಗೆಯೇ ಭುವನೇಶ್ವರ್‌ ಕುಮಾರ್‌ ಅವರನ್ನು ಸರಣಿಯುದ್ದಕ್ಕೂ ವೀಕ್ಷಕನನ್ನಾಗಿ ಉಳಿಸಿಕೊಂಡದ್ದೊಂದು ಅಚ್ಚರಿ. ಇದೇ ಸಾಲಿನಲ್ಲಿದ್ದ ಕುಲದೀಪ್‌ ಯಾದವ್‌ ಸಿಡ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ತಂಡ ಪ್ರಕಟಿಸದ ಆಸೀಸ್‌
ಸಾಮಾನ್ಯವಾಗಿ ಒಂದು ದಿನ ಮೊದಲೇ ಆಡುವ ಬಳಗವನ್ನು ಪ್ರಕಟಿಸುವ ಆಸ್ಟ್ರೇಲಿಯ ಇಲ್ಲಿ ಈ ಸಂಪ್ರದಾಯವನ್ನು ಮುರಿದಿದೆ. ಟಾಸ್‌ ವೇಳೆಯಲ್ಲೇ ಇದನ್ನು ಪ್ರಕಟಿಸಲು ನಿರ್ಧರಿಸಿದೆ.

ಒಂದು ಸಾಧ್ಯತೆ ಪ್ರಕಾರ ಮಿಚೆಲ್‌ ಮಾರ್ಷ್‌ ಬದಲು ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಒಳಬರಬಹುದು. ಓಪನರ್‌ ಆರನ್‌ ಫಿಂಚ್‌ ಮತ್ತು ಲೆಗ್‌ಸ್ಪಿನ್‌ ಆಲ್‌ರೌಂಡರ್‌ ಮಾರ್ನಸ್‌ ಲಬುಶೇನ್‌ ನಡುವೆ ಸ್ಪರ್ಧೆ ಇದೆ. ಫಿಂಚ್‌ ಹೊರಗುಳಿದರೆ ಉಸ್ಮಾನ್‌ ಖ್ವಾಜಾ ಇನ್ನಿಂಗ್ಸ್‌ ಆರಂಭಿಸಬಹುದು. ಒಟ್ಟಾರೆ ಸರಣಿ ಸಮಬಲದ ಒತ್ತಡವನ್ನು ಆಸೀಸ್‌ ಹೇಗೆ ನಿಭಾಯಿಸೀತು ಎಂಬುದೊಂದು ಕುತೂಹಲ.

ಇಶಾಂತ್‌ ಔಟ್‌; 13ರ ಬಳಗದಲ್ಲಿ ರಾಹುಲ್‌
ಸಿಡ್ನಿಯ ನಿರ್ಣಾಯಕ ಟೆಸ್ಟ್‌ ಪಂದ್ಯಕ್ಕಾಗಿ ಭಾರತ 13ರ ಬಳಗವನ್ನು ಪ್ರಕಟಿಸಿದೆ. ವೇಗಿ ಇಶಾಂತ್‌ ಶರ್ಮ ಪಕ್ಕೆಲುಬಿನ ಸಮಸ್ಯೆಗೆ ಸಿಲುಕಿದ್ದು, ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಹೀಗಾಗಿ ಭಾರತ ಹೆಚ್ಚುವರಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಸಿಡ್ನಿ ಪಿಚ್‌ ಸ್ಪಿನ್ನರ್‌ಗಳಿಗೆ ಒಲಿದೀತೆಂಬ ನಿರೀಕ್ಷೆಯೇ ಇದಕ್ಕೆ ಕಾರಣ. ಅಥವಾ ಉಮೇಶ್‌ ಯಾದವ್‌ ಮರಳಿ ಅವಕಾಶ ಪಡೆಯಬಹುದು.

ಪ್ರಧಾನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಇನ್ನೂ ಗುಣಮುಖರಾಗದ ಕಾರಣ ಸಿಡ್ನಿ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. 13ರ ಬಳಗದ ಆಯ್ಕೆಯ ವೇಳೆ ಅಶ್ವಿ‌ನ್‌ ಅವರನ್ನೂ ಸೇರಿಸಿಕೊಳ್ಳಲಾಗಿತ್ತು. ಆದರೆ ಎರಡೇ ಗಳಟೆಗಳಲ್ಲಿ ಮೀಡಿಯಾ ಮ್ಯಾನೇಜರ್‌ ಹೇಳಿಕೆಯೊಂದನ್ನು ನೀಡಿ, ಅಶ್ವಿ‌ನ್‌ ಅನ್‌ಫಿಟ್‌ ಎಂದು ಘೋಷಿಸಿದರು.

ರಾಹುಲ್‌ ಆಡುವರೇ?
ಕೆ.ಎಲ್‌. ರಾಹುಲ್‌ 13ರ ಬಳಗದಲ್ಲಿ ಕಾಣಿಸಿಕೊಂಡಿರುವುದೊಂದು ಅಚ್ಚರಿ. ಪರ್ತ್‌ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ರನ್‌ ಖಾತೆ ತೆರೆಯಲು ವಿಫ‌ಲರಾದ ರಾಹುಲ್‌ ಅವರನ್ನು ಮೆಲ್ಬರ್ನ್ ಟೆಸ್ಟ್‌ನಿಂದ ಹೊರಗಿಡಲಾಗಿತ್ತು. ಮತ್ತೆ ರಾಹುಲ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವರೇ ಎಂಬುದೊಂದು ಕುತೂಹಲ. ಆಗ ಕರ್ನಾಟಕದ ಜೋಡಿಯೊಂದು ಟೆಸ್ಟ್‌ ಇನ್ನಿಂಗ್ಸ್‌ ಆರಂಭಿಸಿದಂತಾಗುತ್ತದೆ.ಆದರೆ ಮಾಯಾಂಕ್‌ ಅಗರ್ವಾಲ್‌-ಹನುಮ ವಿಹಾರಿ ಅವರನ್ನು ಕೂಡಲೇ ಬೇರ್ಪಡಿಸುವ ಸಂಭವ ಕಡಿಮೆ.

ಸಂಭಾವ್ಯ ತಂಡಗಳು
ಭಾರತ
: ಮಾಯಾಂಕ್‌ ಅಗರ್ವಾಲ್‌, ಹನುಮ ವಿಹಾರಿ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಬ್‌ ಪಂತ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌.

ಆಸ್ಟ್ರೇಲಿಯ: ಉಸ್ಮಾನ್‌ ಖ್ವಾಜಾ, ಮಾರ್ಕಸ್‌ ಹ್ಯಾರಿಸ್‌, ಮಾರ್ನಸ್‌ ಲಬುಶೇನ್‌, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌/ಆರನ್‌ ಫಿಂಚ್‌, ಟ್ರ್ಯಾವಿಸ್‌ ಹೆಡ್‌, ಟಿಮ್‌ ಪೇನ್‌ (ನಾಯಕ), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯೋನ್‌, ಜೋಶ್‌ ಹ್ಯಾಝಲ್‌ವುಡ್‌.
ಆರಂಭ: ಬೆಳಗ್ಗೆ 5.00
ಪ್ರಸಾರ: ಸೋನಿ ಸಿಕ್ಸ್‌

* ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯ
ವರ್ಷ    ಫ‌ಲಿತಾಂಶ

1947    ಡ್ರಾ
1968    ಆಸ್ಟ್ರೇಲಿಯಕ್ಕೆ 144 ರನ್‌ ಜಯ
1978    ಭಾರತಕ್ಕೆ ಇ/2 ರನ್‌ ಜಯ
1981    ಆಸ್ಟ್ರೇಲಿಯಕ್ಕೆ ಇ/4 ರನ್‌ ಜಯ
1986    ಡ್ರಾ
1992    ಡ್ರಾ
2000    ಆಸ್ಟ್ರೇಲಿಯಕ್ಕೆ ಇ/141 ರನ್‌ ಜಯ
2004    ಡ್ರಾ
2008    ಆಸ್ಟ್ರೇಲಿಯಕ್ಕೆ 122 ರನ್‌ ಜಯ
2012    ಆಸ್ಟ್ರೇಲಿಯಕ್ಕೆ ಇ/68 ರನ್‌ ಜಯ
2015    ಡ್ರಾ

ಟೆಸ್ಟ್‌: 11
ಜಯ: 01
ಸೋಲು:     05
ಡ್ರಾ: 05

ಸಿಡ್ನಿಯಲ್ಲಿ ಒಂದೇ ಗೆಲುವು
“ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಈವರೆಗೆ 11 ಟೆಸ್ಟ್‌ ಪಂದ್ಯವಾಡಿರುವ ಭಾರತ ಗೆದ್ದದ್ದು ಒಂದರಲ್ಲಿ ಮಾತ್ರ. ಐದರಲ್ಲಿ ಸೋತು ಉಳಿದ ಐದನ್ನು ಡ್ರಾ ಮಾಡಿಕೊಂಡಿದೆ.

ಭಾರತದ ಏಕೈಕ ಗೆಲುವು ಒಲಿದದ್ದು 1977-78ರಲ್ಲಿ. ಸರಣಿಯ 4ನೇ ಟೆಸ್ಟ್‌ ಪಂದ್ಯವನ್ನು ಬಿಷನ್‌ ಸಿಂಗ್‌ ಬೇಡಿ ನಾಯಕತ್ವದ ಭಾರತ ಇನ್ನಿಂಗ್ಸ್‌ ಹಾಗೂ 2 ರನ್‌ ಅಂತರದಿಂದ ಗೆದ್ದಿತ್ತು. 5 ಪಂದ್ಯಗಳ ಸರಣಿಯನ್ನು 2-2 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಸ್ಪಿನ್‌ ತ್ರಿವಳಿಗಳು ಈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಬ್‌ ಸಿಂಪ್ಸನ್‌ ಸಾರಥ್ಯದ ಆಸ್ಟ್ರೇಲಿಯ 131ಕ್ಕೆ ಕುಸಿಯಿತು. ಚಂದ್ರಶೇಖರ್‌ (30ಕ್ಕೆ 4), ಬೇಡಿ (49ಕ್ಕೆ 3) ಆತಿಥೇಯರನ್ನು ಕಾಡಿದ್ದರು. ಜವಾಬಿತ್ತ ಭಾರತ 8 ವಿಕೆಟಿಗೆ 396 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ವಿಶ್ವನಾಥ್‌ (79), ಕರ್ಸನ್‌ ಘಾವ್ರಿ (64) ಗಾವಸ್ಕರ್‌ (49), ಚೌಹಾಣ್‌ (42), ಕಿರ್ಮಾನಿ (42) ಭಾರತದ ಸವಾಲಿನ ಮೊತ್ತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

265 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಆಸ್ಟ್ರೇಲಿಯ ದ್ವಿತೀಯ ಸರದಿಯಲ್ಲಿ ಹೋರಾಟ ಸಂಘಟಿಸಿತಾದರೂ ಇನ್ನಿಂಗ್ಸ್‌ ಸೋಲಿನಿಂದ ಬಚಾವಾಗಲು ವಿಫ‌ಲವಾಯಿತು. ಪ್ರಸನ್ನ (51ಕ್ಕೆ 4), ಚಂದ್ರಶೇಖರ್‌ (85ಕ್ಕೆ 2), ಬೇಡಿ (62ಕ್ಕೆ 2), ಘಾವ್ರಿ (42ಕ್ಕೆ 2) ಸೇರಿಕೊಂಡು ಕಾಂಗರೂಗಳಿಗೆ ಬಲೆ ಬೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next