ಸಿಡ್ನಿ: ಬಾರ್ಡರ್ ಗಾವಸ್ಕರ್ ಟ್ರೋಫಿಯ (Border Gavaskar Trophy) ಕೊನೆಯ ಪಂದ್ಯವಾಡುತ್ತಿರುವ ಟೀಂ ಇಂಡಿಯಾಗೆ ಈಗ ಗಾಯಾಳುಗಳ ಚಿಂತೆ ಕಾಡುತ್ತಿದೆ. ಇಡೀ ಸರಣಿಯಲ್ಲಿ ಟೀಂ ಇಂಡಿಯಾಗೆ ಆಧಾರವಾಗಿರುವ ಪ್ರಮುಖ ವೇಗಿ, ಸಿಡ್ನಿ ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಹೊಸ ವರ್ಷದ ಟೆಸ್ಟ್‌ನ ಎರಡನೇ ದಿನದಂದು ಭೋಜನ ವಿರಾಮದ ನಂತರ ಜಸ್ಪ್ರೀತ್ ಬುಮ್ರಾ ಕೇವಲ ಒಂದು ಓವರ್ ಬೌಲಿಂಗ್ ಮಾಡಿ ಮೈದಾನದಿಂದ ನಿರ್ಗಮಿಸಿದರು. ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಯ ನಂತರ ಅವರು ತಮ್ಮ ಟೆಸ್ಟ್ ಜೆರ್ಸಿ ತೆಗೆದು ಪ್ರಾಕ್ಟೀಸ್ ಕಿಟ್ ನಲ್ಲಿ ತಂಡದ ವೈದ್ಯರು ಮತ್ತು ಭದ್ರತಾ ಅಧಿಕಾರಿಯೊಂದಿಗೆ ಕಾರಿನಲ್ಲಿ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ.
ಈ ಪ್ರವಾಸದಲ್ಲಿ ಬುಮ್ರಾ ಅವರ ಕೆಲಸದ ಹೊರೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 152.1 ಓವರ್‌ಗಳನ್ನು ಬೌಲ್ ಮಾಡಿದ್ದು, 13.06 ಸರಾಸರಿಯಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಮುಖ ಬೌಲರ್ ಆಗಿರುವ ಬುಮ್ರಾಗೆ ಒಂದು ಪಂದ್ಯವಾದರೂ ವಿರಾಮ ನೀಡಬೇಕಿತ್ತು ಎಂದು ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಬೌಲರ್ ಎಂಬ ಸಾಧನೆಯನ್ನು ಬುಮ್ರಾ ಈ ವೇಳೆ ಮಾಡಿದರು. ಅವರು ಬಿಶನ್ ಬೇಡಿ ಅವರ 31 ವಿಕೆಟ್ ಗಳ ದಾಖಲೆಯನ್ನು ಮೀರಿದರು. ಬುಮ್ರಾ ಸದ್ಯ 32 ವಿಕೆಟ್ ಪಡೆದಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅವರು ವಿಶ್ರಾಂತಿ ಪಡೆದ ಕಾರಣದಿಂದ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದಾರೆ. ಸದ್ಯ ಬುಮ್ರಾ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಹಂಗಾಮಿ ನಾಯಕರಾಗಿದ್ದಾರೆ.
ಸಿಡ್ನಿ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 185 ರನ್ ಗಳಿಸಿದ್ದರೆ, ಆಸ್ಟ್ರೇಲಿಯಾ 181 ರನ್ ಗಳಿಗೆ ಆಲೌಟಾಯಿತು.