Advertisement

ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

09:48 AM Dec 24, 2019 | Lakshmi GovindaRaj |

ಬೆಂಗಳೂರು: ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯ 12 ಹಾಗೂ ಓರ್ವ ಪಕ್ಷೇತರ ಶಾಸಕರು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ನೂತನ ಶಾಸಕರು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.

Advertisement

ಅಥಣಿ ಕ್ಷೇತ್ರದ ಶಾಸಕ ಮಹೇಶ್‌ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌, ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಟಾರ್‌ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್‌ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್‌ ಅವರು ಭಗವಂತ ಹಾಗೂ ಜಗಜ್ಯೋತಿ ಬಸವವೇಶ್ವರರ ಹೆಸರಿನಲ್ಲಿ, ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣ್‌ ಕುಮಾರ್‌ ಅವರು ಭಗವಂತ ಹಾಗೂ ಕೊಟ್ಟೂರೇಶ್ವರನ ಹೆಸರಿನಲ್ಲಿ, ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕೆ.ಆರ್‌.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜ್‌, ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಸತ್ಯ ಮತ್ತು ನಿಷ್ಠೆಯ ಹೆಸರಿನಲ್ಲಿ, ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಶಾಸಕ ಗೋಪಾಲಯ್ಯ ಅವರು ಭಗವಂತನ ಹೆಸರಿನಲ್ಲಿ, ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರು ಭಗವಂತನ ಹೆಸರಿನಲ್ಲಿ ಮತ್ತು ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ ಎಲ್ಲ ಶಾಸಕರಿಗೂ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೂಗುಚ್ಛ ನೀಡಿ ಅಭಿನಂದಿಸಿದರು. ಜತೆಗೆ, ಸಂವಿಧಾನದ ಪುಸ್ತಕ ಮತ್ತು ಸದನದ ನಿಯಮಾವಳಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿ, ಶುಭ ಕೋರಿದರು. ಈ ವೇಳೆ, ಕೆಲವು ಶಾಸಕರು ಸ್ಪೀಕರ್‌ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಬಸರಾಜ ಬೊಮ್ಮಾಯಿ, ಆರ್‌.ಅಶೋಕ್‌, ಸುರೇಶ್‌ ಕುಮಾರ್‌ ಈ ವೇಳೆ ಹಾಜರಿದ್ದರು.

ಶರತ್‌ ಕಡೆ ನೋಡದ ಸಿಎಂ: ಪ್ರಮಾಣ ವಚನ ಸ್ವೀಕರಿಸಿದ ಹೊಸಕೋಟೆಯ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ, ನಂತರ ಅಧಿಕಾರಿಗಳ ಬಳಿ ತೆರಳಿ ಕಡತದಲ್ಲಿ ಸಹಿ ಮಾಡಿದರು. ಈ ವೇಳೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಆರ್‌.ಅಶೋಕ್‌, ಸುರೇಶ್‌ ಕುಮಾರ್‌ ಅದೇ ಸ್ಥಳದಿಂದ ನಿರ್ಗಮಿಸಿದರು. ಈ ವೇಳೆ, ಶರತ್‌ ಬಚ್ಚೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿಯವರನ್ನು ಕೂಗುತ್ತಾ ಅವರ ಬಳಿ ತೆರಳಿದರೂ ಕೂಡ ಶರತ್‌ ಬಚ್ಚೇಗೌಡ ಅವರ ಕಡೆ ಸಿಎಂ ನೋಡದೇ ಸೀದಾ ನಡೆದುಕೊಂಡು ಹೋದರು. ಮುಖ್ಯಮಂತ್ರಿಗಳ ಹಿಂದೆ ಇದ್ದ ಸಚಿವ ಆರ್‌.ಅಶೋಕ್‌ ಅವರು ಶರತ್‌ ಬಚ್ಚೇಗೌಡರನ್ನು ನೋಡಿದರೂ ಮಾತನಾಡದೇ ಹಾಗೆಯೇ ಮುಂದೆ ನಡೆದರು.

Advertisement

ಕಾಂಗ್ರೆಸ್‌ ಶಾಸಕರು ಗೈರು: ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಪ್ರಮಾಣವಚನ ಸ್ವೀಕಾರ ಬೋಧನೆಗಾಗಿ ಭಾನುವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿಯ 12 ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಮತ್ತು ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್‌ ಅವರು ಪ್ರಮಾಣವಚನ ಸ್ವೀಕಾರ ವೇಳೆ ಗೈರಾಗಿದ್ದರು. ಕಾಂಗ್ರೆಸ್‌ನ ನಾಯಕರು ಕೂಡ ಸಭೆಯಲ್ಲಿರಲಿಲ್ಲ.

ಮೊಳಗಿದ ಘೋಷಣೆ: ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ಮುನ್ನ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರ ಬೆಂಬಲಿಗರು ಸ್ವಾಭಿಮಾನಿ ಪದ ಬಳಕೆ ಮಾಡಿ ಜಯಘೋಷ ಕೂಗಿದರು. ನಂತರ, ಬಿಜೆಪಿಯ ಅರುಣ್‌ ಕುಮಾರ್‌ ಪರ ಬಿಜೆಪಿ ಬೆಂಬಲಿಗರು ಘೋಷಣೆ ಕೂಗಿದರು. ಪ್ರತಿ ಶಾಸಕರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲೂ ಅವರ ಬೆಂಬಲಿಗರ ಘೋಷಣೆ ಮುಗಿಲು ಮುಟ್ಟಿತ್ತು. ಶರತ್‌ ಬಚ್ಚೇಗೌಡ ಅವರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಘೋಷಣೆ ಮತ್ತು ಚಪ್ಪಾಳೆ ಇನ್ನಷ್ಟು ಜಾಸ್ತಿಯಿತ್ತು.

Advertisement

Udayavani is now on Telegram. Click here to join our channel and stay updated with the latest news.

Next