Advertisement

ಹೂಳು ತುಂಬಿದ ಹೆಗ್ಗುಂಜೆ-ಯಡ್ತಾಡಿ ದೊಡ್ಡ ಹೊಳೆ

12:32 AM May 13, 2019 | sudhir |

ಕೋಟ: ಹೆಗ್ಗುಂಜೆಯಲ್ಲಿ ಉಗಮಗೊಂಡು ಯಡ್ತಾಡಿ, ಕಾವಡಿ ಮೂಲಕ ಫಲವತ್ತಾದ ಕೃಷಿಭೂಮಿಯ ಮಧ್ಯದಲ್ಲಿ ಹರಿದು ಬನ್ನಾಡಿ ಹೊಳೆಯನ್ನು ಸೇರುವ ಯಡ್ತಾಡಿ ದೊಡ್ಡ ಹೊಳೆ ಈ ಭಾಗದ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿಗೆ ನೀರಿನಾಶ್ರಯವಾಗಿತ್ತು. ಆದರೆ ಪ್ರಸ್ತುತ ಇದರಲ್ಲಿ ಹೇರಳ ಪ್ರಮಾಣದ ಹೂಳು ತುಂಬಿದ್ದು ಮಾರ್ಚ್‌ ಆರಂಭದಲ್ಲೇ ನೀರು ಬತ್ತಿಹೋಗುತ್ತಿದೆ. ಹೀಗಾಗಿ ನೀರಿಗೆ ವ್ಯಾಪಕ ಸಮಸ್ಯೆ ಎದುರಾಗುತ್ತಿದೆ.

Advertisement

ಕೃಷಿ ಭೂಮಿಗೆ ನೀರಿನಾಸರೆ
ಈ ಹೊಳೆ ಹೆಗ್ಗುಂಜೆಯಿಂದ ಬನ್ನಾಡಿ ತನಕ ಸುಮಾರು ಒಂದು ಸಾವಿರ ಹೆಕ್ಟೆರ್‌ ( 2ಸಾವಿರ ಎಕ್ರೆಗೂ ಅಧಿಕ) ಕೃಷಿಭೂಮಿಗೆ ನೀರುಣಿಸುತ್ತದೆ. ಕುಡಿಯುವ ನೀರಿನ ಸಮಸ್ಯೆಯಿಂದಲೂ ಈ ಭಾಗ ಮುಕ್ತವಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ನೀರಿನ ಅಲಭ್ಯತೆಯೊಂದಿಗೆ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯದೆ ನೆರೆಗೆ ಕಾರಣವಾಗಿ ಕೃಷಿ ಭೂಮಿಗೆ ಹಾನಿಯಾಗುತ್ತದೆ.

ಹೊಳೆ ಒತ್ತುವರಿ
ಕೆಲವು ಭಾಗದಲ್ಲಿ ಹೂಳಿನಿಂದಾಗಿ ಹೊಳೆ ಮುಚ್ಚಿಹೋಗಿದ್ದರೆ ಇನ್ನೂ ಕೆಲವು ಭಾಗದಲ್ಲಿ ವ್ಯಾಪಕ ಒತ್ತುವರಿ ನಡೆದಿದೆ. ಹೊಳೆಗೆ ಮಣ್ಣು ತುಂಬಿ ಗದ್ದೆ ಹಾಗೂ ಜಮೀನುಗಳನ್ನು ವಿಸ್ತರಿಸುವ ಕಾರ್ಯ ಸದ್ದಿಲ್ಲದೆ ಸಾಗುತ್ತಿದೆ. ಹೀಗೆ ಆದರೆ ಹೊಳೆ ಸಣ್ಣ ಕಾಲುವೆಯಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ನೀರಿನ ಸಮಸ್ಯೆಗೆ ಪರಿಹಾರ
ಹೊಳೆಯ ಹೂಳೆತ್ತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುವಂತೆ ಮಾಡಿದರೆ ಇಲ್ಲಿನ ಕೃಷಿಭೂಮಿ, ನದಿ, ಹಳ್ಳಗಳಲ್ಲಿ ಸದಾ ಕಾಲ ನೀರು ತುಂಬಬಹುದು. ನೀರಿನ ಒರತೆ ಹೆಚ್ಚಲಿದ್ದು ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಹಲವು ಬಾರಿ ಮನವಿ
ಹೊಳೆತ್ತಿ ಅಭಿವೃದ್ಧಿಗೊಳಿಸುವಂತೆ ಇಲ್ಲಿನ ರೈತರು, ಸ್ಥಳೀಯ ಮುಖಂಡರು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಪೂರಕ ಪ್ರತಿಕ್ರಿಯೆ ಸಿಕ್ಕಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಈ ಕುರಿತು ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

Advertisement

ಕಾಲುವೆ ವಿಸ್ತರಣೆ ಫ‌ಲ ನೀಡಲು ಹೊಳೆ ಅಭಿವೃದ್ಧಿ ಅವಶ್ಯ
ಇದೀಗ ವಾರಾಹಿ ಎಡದಂಡೆ ಎತ ನೀರಾವರಿ ಕಾಲುವೆಯ ವಿಸ್ತರಣೆ ಪ್ರಕ್ರಿಯೆ ಜಾರಿಯಲ್ಲಿದೆ. ಇದು ವಿಸ್ತರಣೆಯಾದರೆ ಶಿರೂರು ಮೂಕೈìಯಿಂದ 9ಕಿ.ಮೀ. ಉದ್ದದ ಕಾಲುವೆ ನಿರ್ಮಾಣವಾಗಿ ಶಿರೂರುಮೂಕೈì, ಹೆಗ್ಗುಂಜೆ, ಯಡ್ತಾಡಿ ಭಾಗಕ್ಕೆ ನೀರಾವರಿ ವ್ಯವಸ್ಥೆಯಾಗಲಿದೆ. ಈ ದೊಡ್ಡ ಹೊಳೆಗೆ ಕಾಲುವೆಯನ್ನು ಸಂಪರ್ಕಿಸುವ ಯೋಜನೆ ಕೂಡ ಇದೆ. ಹೀಗಾಗಿ ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದರೆ ಹೊಳೆ ಅಭಿವೃದ್ಧಿ ಅವಶ್ಯ.

ಶೀಘ್ರ ಅಭಿವೃದ್ಧಿ ಅಗತ್ಯ
ವಾರಾಹಿ ಎಡದಂಡೆ ಏತ ನೀರಾವರಿ ಕಾಲುವೆಯ ವಿಸ್ತರಣೆಯಾಗುವುದರಿಂದ ಹಾಗೂ ಹೆಗ್ಗುಂಜೆ, ಯಡ್ತಾಡಿ, ಕಾವಡಿ ಭಾಗದಲ್ಲಿ ಪ್ರತಿವರ್ಷ ಕಾಡುವ ವ್ಯಾಪಕ ಪ್ರಮಾಣದ ನೀರಿನ ಸಮಸ್ಯೆ ನಿವಾರಣೆಗಾಗಿ ಹೊಳೆಯ ಅಭಿವೃದ್ಧಿ ಅಗತ್ಯವಿದೆ. ಈ ಕುರಿತು ಶೀಘ್ರ ಕ್ರಮಕೈಗೊಳ್ಳಬೇಕು.
-ಸತೀಶ್‌ ಶೆಟ್ಟಿ ಯಡ್ತಾಡಿ, ಸ್ಥಳೀಯ ಪ್ರಗತಿಪರ ಕೃಷಿಕರು

ಮನವಿ ಮಾಡಲಾಗಿತ್ತು
ಹೊಳೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಮೂರು ಗ್ರಾ.ಪಂ. ವ್ಯಾಪ್ತಿಗೆಅನುಕೂಲವಾಗಲಿದೆ. ಹೀಗಾಗಿ ಹಿಂದೊಮ್ಮೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಲಾಗಿತ್ತು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಮತ್ತೂಮ್ಮೆ ಮನವಿ ಮಾಡಲಾಗುವುದು.
-ಗಣೇಶ್‌ ಶೆಟ್ಟಿ, ಅಧ್ಯಕ್ಷರು ಹೆಗ್ಗುಂಜೆ ಗ್ರಾ.ಪಂ.

– ರಾಜೇಶ್‌ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next