ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ. ಅಂಥದೊಂದು ರಾಷ್ಟ್ರಕ್ಕೆ ಬರುವುದಕ್ಕೆ ತುಂಬ ಭಯದ ಸಂಗತಿ. ಹೀಗಾಗಿ ಕಳುಹಿಸಲು ಪೋಷಕರು ಒಪ್ಪುತ್ತಿಲ್ಲ ಎಂದು ಹೇಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Advertisement
ಹೆಸರು ಅಂಬರ್ ಅಲಿನ್‌ಸ್ಕಿ. ಸ್ವಿಜರ್‌ಲ್ಯಾಂಡ್‌ನವರು. ಜು. 17ರಿಂದ ಚೆನ್ನೈನಲ್ಲಿ ಆರಂಭವಾದ ಕಿರಿಯರ ವಿಶ್ವ ಚಾಂಪಿಯನ್‌ಶಿಪ್ ಸ್ಕ್ವಾಷ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಇದ್ದಕ್ಕಿದಂತೆ ಪೋಷಕರು ನನಗೆ ತೆರಳಲು ಅನುಮತಿ ನೀಡುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ವಿಸ್ ಕೋಚ್ ಪಾಸ್ಕಲ್ ಭುರಿನ್, ಅಂಬರ್ ನಮ್ಮ ದೇಶದ ಅಗ್ರ ಆಟಗಾರ್ತಿ. ಆಕೆ ಭಾರತಕ್ಕೆ ಆಗಮಿಸಲು ನಿರಾಕರಿಸುತ್ತಿದ್ದಾಳೆ. ಇದಕ್ಕೆ ಕಾರಣ ಆಕೆಯ ಪೋಷಕರು ಅಂತರ್ಜಾಲದಲ್ಲಿ ಹುಡುಕಾಡಿದಾಗ ಭಾರತದಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಇಲ್ಲ ಎನ್ನುವ ವಿಷಯ ತಿಳಿದು ಬಂದಿದೆ. ಇದರಿಂದ ಪೋಷಕರು ಭಯಭೀತರಾಗಿದ್ದಾರೆ. ಹೀಗಾಗಿ ಮಗಳನ್ನು ಕಳುಹಿಸಲು ಒಪ್ಪುತ್ತಿಲ್ಲ ಎಂದಿದ್ದಾರೆ.
ಭಾರತದಲ್ಲಿ ಆಟಗಾರ್ತಿಯರಿಗೆ ರಕ್ಷಣೆ ಇಲ್ಲ ಎನ್ನುವುದನ್ನು ವಿಶ್ವ ಸ್ಕ್ವಾಷ್ ಒಕ್ಕೂಟ ತಳ್ಳಿ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಇಒ ಆ್ಯಂಡ್ರೊ ಶೆಲ್ಲಿ, ಪ್ರತಿ ಪೋಷಕರ ಆತಂಕದ ಬಗ್ಗೆ ನಮಗೆ ಅರಿವಿದೆ. ಆದರೆ ಎಲ್ಲ ಕ್ರೀಡಾಪಟುಗಳಿಗೆ, ಅವರು ಉಳಿದುಕೊಂಡಿರುವ ಹೊಟೇಲ್ ಸುತ್ತಮುತ್ತ ಬಿಗಿ ಭದ್ರತೆ ಹಾಕಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.