Advertisement

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

02:21 AM Mar 02, 2021 | Team Udayavani |

ಬಾಸೆಲ್‌ (ಸ್ವಿಜರ್‌ಲ್ಯಾಂಡ್‌): ಕೊರೋನೋತ್ತರ ಬ್ಯಾಡ್ಮಿಂಟನ್‌ ಕೂಟ ಗಳಲ್ಲಿ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿರುವ ಭಾರತಕ್ಕೆ ಮಂಗಳ ವಾರದಿಂದ ಮತ್ತೂಂದು ಸವಾಲು ಎದುರಾಗಲಿದೆ. ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಆರಂಭವಾಗಲಿದ್ದು, ಭಾರತೀಯರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.

Advertisement

ಇದಕ್ಕೆ ಮುಖ್ಯ ಕಾರಣವೆಂದರೆ, ಈ ಕೂಟಗಳಲ್ಲಿ ಭಾರತ ಸಾಧಿಸಿದ ಯಶಸ್ಸು. ಮುಖ್ಯವಾಗಿ ಪುರುಷರ ವಿಭಾಗದಲ್ಲಿ ಸಮೀರ್‌ ವರ್ಮ, ಎಚ್‌.ಎಸ್‌. ಪ್ರಣಯ್‌, ಕೆ. ಶ್ರೀಕಾಂತ್‌ ಅವರೆಲ್ಲ ಇಲ್ಲಿ ಚಾಂಪಿಯನ್‌ ಆದವರೇ. ಬಿ. ಸಾಯಿಪ್ರಣೀತ್‌ ಕಳೆದ ವರ್ಷ ರನ್ನರ್ ಅಪ್‌ ಆಗಿದ್ದರು. ಈ ನಾಲ್ವರೂ ಇಲ್ಲಿ ಕಣದಲ್ಲಿದ್ದಾರೆ.

ಈ ಕೂಟದ ತಾಣವಾದ ಬಾಸೆಲ್‌ನ ಸೇಂಟ್‌ ಜಾಕೋಬ್‌ಶಲ್ಲೆ ಪಿ.ವಿ. ಸಿಂಧು ಪಾಲಿಗೆ ಅದೃಷ್ಟದಾಯಕವೂ ಹೌದು. ಕಳೆದ ವರ್ಷ ಅವರು ವಿಶ್ವ ಚಾಂಪಿಯನ್‌ ಆಗಿ ಮೂಡಿಬಂದದ್ದು ಇದೇ ತಾಣದಲ್ಲಿ. ಇದು ಕೋವಿಡ್‌ ಕಾಲಕ್ಕೂ ಮುನ್ನ ಸಿಂಧು ಗೆದ್ದ ಕೊನೆಯ ಪದಕವಾಗಿತ್ತು. ಅವರಿಲ್ಲಿ ಟರ್ಕಿಯ ನೆಸ್ಲಿಹಾನ್‌ ಯಿಗಿಟ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ಥಾಯ್ಲೆಂಡ್‌ನ‌ಲ್ಲಿ ನಡೆದ ಕಳೆದ ಮೂರೂ ಪಂದ್ಯಾವಳಿಗಳಲ್ಲಿ ಸಿಂಧು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಸ್ವಿಜರ್‌ಲ್ಯಾಂಡ್‌ನ‌ಲ್ಲಿ ಅವರು ವೈಫ‌ಲ್ಯವನ್ನು ಹೋಗಲಾಡಿಸಿಕೊಳ್ಳಬೇಕಿದೆ. ಇಲ್ಲಿ ಕ್ವಾರ್ಟರ್‌ ಫೈನಲ್‌ ತನಕ ಸಿಂಧು ಹಾದಿ ಸುಗಮ ಎಂದು ಭಾವಿಸಲಾಗಿದೆ.

ಆಲ್‌ ಇಂಡಿಯನ್‌ ಶೋ
ಪುರುಷರ ಸಿಂಗಲ್ಸ್‌ನಲ್ಲಿ “ಆಲ್‌ ಇಂಡಿ ಯನ್‌ ಶೋ’ ಒಂದು ಕಂಡುಬರಲಿದೆ. ಕೆ. ಶ್ರೀಕಾಂತ್‌ ಮತ್ತು ಸಮೀರ್‌ ವರ್ಮ ಮೊದಲ ಸುತ್ತಿನಲ್ಲಿ ಪರಸ್ಪರ ಮುಖಾ ಮುಖೀ ಆಗಲಿದ್ದಾರೆ. ಹೀಗಾಗಿ ಒಬ್ಬರಿಗೆ ಯಶಸ್ಸು, ಮತ್ತೂಬ್ಬರಿಗೆ ನಿರಾಸೆ ಖಾತ್ರಿ!

Advertisement

ಅಜಯ್‌ ಜಯರಾಮನ್‌
ಥಾಯ್ಲೆಂಡ್‌ನ‌ ಸಿತ್ತಿಕೋಮ್‌ ಥಮಸಿನ್‌ ವಿರುದ್ಧ, ಪಿ. ಕಶ್ಯಪ್‌ ಸ್ಪೇನ್‌ನ ಪಾಬ್ಲೊ ಅಬಿಯನ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಗಾಯಾಳಾಗಿ ಥಾಯ್ಲೆಂಡ್‌ ಟೂರ್ನಿಯಿಂದ ಹೊರ ಗುಳಿದಿದ್ದ ಯುವ ಆಟಗಾರ ಲಕ್ಷ್ಯ ಸೇನ್‌ ಇಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಪ್ರಣವ್‌ ಜೆರ್ರಿ ಚೋಪ್ರಾ, ಎನ್‌. ಸಿಕ್ಕಿ ರೆಡ್ಡಿ, ಎಂ.ಆರ್‌. ಅರ್ಜುನ್‌, ಧ್ರುವ ಕಪಿಲ ಕೂಡ ಕಣದಲ್ಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ಜೋಡಿ ಮೇಲೂ ಭಾರೀ ನಿರೀಕ್ಷೆ ಇಡಲಾಗಿದೆ. ಟೊಯೊಟಾ ಥಾಯ್ಲೆಂಡ್‌ ಓಪನ್‌ನಲ್ಲಿ ಇವರು ಸೆಮಿಫೈನಲ್‌ ತನಕ ಸಾಗಿದ್ದರು.
ಈ ಸೂಪರ್‌ 300 ಪಂದ್ಯಾವಳಿ “ಒಲಿಂಪಿಕ್ಸ್‌ ಅರ್ಹತೆ’ಯಿಂದಾಗಿ ಹೆಚ್ಚು ಪ್ರಾಮಖ್ಯ ಪಡೆದಿದೆ.

ಸೆಮಿಫೈನಲ್‌ನಲ್ಲಿ ಸಿಂಧು-ಸೈನಾ ಮುಖಾಮುಖೀ?
ಭಾರತದ ಮತ್ತೋರ್ವ ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌ ಮುಂದೆ ಕಠಿನ ಸವಾಲು ಕಾದಿದೆ. ಎರಡು ಬಾರಿಯ ಚಾಂಪಿಯನ್‌ ಆಗಿರುವ ಸೈನಾ ಕೊರಿಯಾದ 6ನೇ ಶ್ರೇಯಾಂಕಿತೆ ಸುಂಗ್‌ ಜಿ ಹ್ಯುನ್‌, ಡೆನ್ಮಾರ್ಕ್‌ನ 4ನೇ ಶ್ರೇಯಾಂಕಿತ ಆಟಗಾರ್ತಿ ಮಿಯಾ ಬ್ಲಿಶ್‌ಫೆಲ್ಟ್ ವಿರುದ್ಧ ಆಡಬೇಕಿದೆ. ಮುಂದೆ ಸಾಗಿ ಸೆಮಿಫೈನಲ್‌ ತಲುಪಿದರೆ ಅಲ್ಲಿ ಪಿ.ವಿ. ಸಿಂಧು ಎದುರಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next