ರಾಯಚೂರು: ಬೇಸಿಗೆ ಬಿಸಿಲಿಗೆ ಬಸವಳಿದು ಬಂದ ಜನರಿಗೆ ಮುದ ನೀಡಬೇಕಿದ್ದ ಈಜುಕೊಳವೊಂದು ನಿರುಪಯುಕ್ತವಾಗಿದೆ. ಅದು ಹಾಳು ಬಿದ್ದು 8-10 ತಿಂಗಳಾದರೂ ದುರಸ್ತಿಗೆ ಮುಂದಾಗದಿರುವುದು ಯುವಜನ ಮತ್ತು ಕ್ರೀಡಾ ಇಲಾಖೆ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ.
ಬೇಸಿಗೆ ಬಂದರೆ ಈ ಭಾಗದ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗುತ್ತದೆ. ಇಂಥ ವೇಳೆ ಈಜಾಡಿ ಕಾಲ ಕಳೆಯಬೇಕು ಎಂಬ ನಗರವಾಸಿಗಳ ಆಸೆ ಮಾತ್ರ ಈಡೇರುತ್ತಿಲ್ಲ. ಏಕೆಂದರೆ ಜಿಲ್ಲಾ ಕ್ರೀಡಾಂಗಣ ಪಕ್ಕದ ಈಜುಕೊಳದ ಬಾಗಿಲು ಮುಚ್ಚಿದೆ. ಬಡ ಮಧ್ಯಮ ವರ್ಗದ ಜನರಿಗೆ ಈಜುಕೊಳ ತುಂಬಾ ಅನುಕೂಲಕರವಾಗಿತ್ತು. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಜಿಲ್ಲಾಡಳಿತ ಈಜುಕೊಳ ನಿರ್ಮಿಸಿದೆ. ಆದರೆ, ಇದು ಮಾತ್ರ ಜನರ ಉಪಯೋಗಕ್ಕೆ ಬಂದಿದ್ದು ಅತಿ ವಿರಳ.
ಸಣ್ಣಪುಟ್ಟ ಸಮಸ್ಯೆಗಳಿದ್ದಾಗ ದುರಸ್ತಿ ಮಾಡಿಸಬೇಕಾದ ಇಲಾಖೆ ನಿರ್ಲಕ್ಷé ವಹಿಸಿದ ಪರಿಣಾಮ ಇಂದು ಅದು ಪಾಚಿಗಟ್ಟಿ ಹಾಳು ಬಿದ್ದಿದೆ. ಇದರಿಂದ ಬೇಸಿಗೆ ವೇಳೆ ಪಾಲಕರು ಮಕ್ಕಳನ್ನು ಖಾಸಗಿ ಈಜುಕೊಳಗಳಿಗೆ ಕರೆದೊಯ್ಯುವಂತಾಗಿದೆ. ಹಿಂದೆ ಇದು ಸಕ್ರಿಯವಾಗಿದ್ದಾಗ ನಿತ್ಯ ಏನಿಲ್ಲವೆಂದರೂ 200ರಿಂದ 300 ಜನ ಆಗಮಿಸುತ್ತಿದ್ದರು. ಪ್ರತಿಯೊಬ್ಬರಿಗೆ 30 ರೂ. ದರ ನಿಗದಿ ಮಾಡಲಾಗಿತ್ತು. ಕೆಲ ದಿನಗಳು ಖಾಸಗಿಯವರು ನಿರ್ವಹಣೆ ಮಾಡಿದಾಗ 50 ರೂ.ಗೆ ಹೆಚ್ಚಿಸಲಾಗಿತ್ತು. ಕೆಲವೊಮ್ಮೆ ವಾರಗಟ್ಟಲೇ ಕೊಳದಲ್ಲಿನ ನೀರು ಬದಲಿಸುತ್ತಿರಲಿಲ್ಲ ಎಂಬ ದೂರುಗಳಿದ್ದವು. ಆದರೂ ಅದ್ಯಾವುದನ್ನು ಲೆಕ್ಕಿಸದೆ ಈಜುಕೊಳ ಮಾತ್ರ ಸದಾ ಸಕ್ರಿಯವಾಗಿರುತ್ತಿತ್ತು. ಆದರೆ, ಕಾರಣಾಂತರಗಳಿಂದ ಅದು ಬಂದ್ ಆಯಿತು. ದುರಸ್ತಿಗೆ ಮುಂದಾಗಬೇಕಿದ್ದ ಇಲಾಖೆ ನಿರ್ಲಕ್ಷ್ಯದಿಂದ ಅದು ಸಂಪೂರ್ಣ ಹಾಳಾಗಿ ಹೋಗಿದೆ.
ಪಾಚಿಗಟ್ಟಿ, ಎಕ್ಕುಟ್ಟಿ ಹೋಗಿದೆ: ಈಜುಕೊಳದಲ್ಲಿ ಉಳಿದ ನೀರು ಖಾಲಿ ಮಾಡದ ಕಾರಣ ಅದು ಸಂಪೂರ್ಣ ಪಾಚಿಗಟ್ಟಿದ್ದು, ನೋಡಲಾರದ ಸ್ಥಿತಿಗೆ ತಲುಪಿದೆ. ಸುತ್ತಲಿನ ಕಾರಿಡಾರ್‌ಲ್ಲೆಲ್ಲ ಹುಲ್ಲು ಬೆಳೆದರೆ, ಕೆಲವೆಡೆ ಎಕ್ಕೆ ಗಿಡಗಳು ಬೆಳೆದಿವೆ. ಇನ್ನು ಸುತ್ತಲೂ ಹಾಕಿದ್ದ ಕುರ್ಚಿಗಳೆಲ್ಲ ಮುರಿದು ಹೋಗಿದ್ದು, ಹಾಳು ಬಿದ್ದು ಎಷ್ಟು ವರ್ಷಗಳಾಗಿವೆಯೋ ಎನ್ನುವ ಸ್ಥಿತಿಯಲ್ಲಿದೆ. ನೀರು ಹೊಡೆಯಲು ಅಳವಡಿಸಿದ್ದ ಮೋಟರ್ ಮತ್ತು ಪೈಪ್‌ಲೈನ್‌ಗೆ ತುಕ್ಕು ಹಿಡಿದಿದೆ. ಇನ್ನು ಶೌಚಾಲಯಗಳು ನಿರ್ವಹಣೆ ಇಲ್ಲದೇ ಹಾಳಾಗಿ ಹೋಗಿವೆ. ಕಮೋಡ್‌ಗಳನ್ನು ಮುರಿದು ಹಾಕಲಾಗಿದೆ.
ಈಗ ಮುಂಗಾರು ಶುರುವಾಗಿದ್ದು, ಮಕ್ಕಳ ಶಾಲೆಗಳು ಆರಂಭವಾಗಿವೆ. ಆದರೂ ಈ ಭಾಗದಲ್ಲಿ ಉಷ್ಣಾಂಶಕ್ಕೇನು
ಕೊರತೆಯಿಲ್ಲ. ರಜಾ ದಿನಗಳನ್ನು ಈಜಾಡಿ ಮಜಾ ಮಾಡುವವರಿಗೇನು ಕೊರತೆಯಿಲ್ಲ. ಇನ್ನಾದರೂ ಇಲಾಖೆ ದುರಸ್ತಿಗೆ ಮುಂದಾಗಲಿ ಎಂಬುದು ಸಾರ್ವಜನಿಕರ ಒತ್ತಾಸೆ.
ಸಂಪರ್ಕಕ್ಕೆ ಸಿಗದ ಅಧಿಕಾರಿ ಈಜುಕೊಳ ದುರಸ್ತಿಗೆ ಎಚ್‌ಕೆಆರ್‌ಡಿಬಿಯಿಂದ ಅನುದಾನ ಬಂದಿದೆ ಎಂಬ ಮಾಹಿತಿ ಇದೆ. ಆದರೆ, ಅದು ಇನ್ನೂ ಬಳಕೆಯಾಗಿಲ್ಲ. ಈಜುಕೊಳ ದುಸ್ಥಿತಿ ಹಾಗೂ ನಿರ್ವಹಣೆ ಬಗ್ಗೆ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಜಯಪ್ರಕಾಶ ಶೆಟ್ಟಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಪ್ರತಿಕ್ರಿಯೆ ನೀಡಲಿಲ್ಲ. ಕಾರ್ಯ ನಿಮಿತ್ತ ಹೊರಗಿದ್ದು, ನಂತರ ಮಾಹಿತಿ ನೀಡುವೆ ಎಂಬ ಸಿದ್ಧ ಉತ್ತರ ಮಾತ್ರ ನೀಡುತ್ತಿದ್ದರು.
ಸಿದ್ಧಯ್ಯಸ್ವಾಮಿ ಕುಕನೂರ