Advertisement
ಮಕ್ಕಳು ಬೇಸಿಗೆ ರಜೆಗೆ ಅಜ್ಜಿ ಮನೆಗೆ ಬರುತ್ತಾರೆ. ಅಲ್ಲಿ ಅಕ್ಕಪಕ್ಕದ ಮಕ್ಕಳೊಡನೆ ಆಟವಾಡುತ್ತಾ, ಅಜ್ಜಿಯ ಕೈತುತ್ತನ್ನು ಸವಿಯುತ್ತಾ ಸಂತಸದಿಂದ ರಜಾ ಕಳೆದು ಮನೆಗೆ ವಾಪಸಾಗುತ್ತಾರೆ. ಬೆಂಗಳೂರಿನಲ್ಲಿ ವಾಸವಿರುವ ಅನುಷಾ ರಾಮು ದಂಪತಿಗಳಿಗೆ ಅದಿತಿ ಎಂಬ ಮುದ್ದಾದ ಮಗಳಿದ್ದಾಳೆ. ಅವಳ ಅಜ್ಜಿಮನೆ ಇರೋದು ಚಿಂತಾಮಣಿಯಲ್ಲಿ. ಎಲ್ಲಾ ಮಕ್ಕಳಂತೆ ಬೇಸಿಗೆ ರಜೆಗೆ ಅದಿತಿಯೂ ಅಜ್ಜಿಮನೆಗೆ ಹೋಗಿದ್ದಳು. ಅಜ್ಜಿಮನೆಯಿಂದ ವಾಪಸಾಗುವಾಗ ಬಹುತೇಕ ಮಕ್ಕಳು ಮತ್ತೆ ಯಾವಾಗ ಬರುವೆವೋ ಎಂಬ ನಿರೀಕ್ಷೆಯೊಂದಿಗೆ ತೆರಳುತ್ತಾರೆ. ಆದರೆ, ಅದಿತಿ ಅಜ್ಜಿಮನೆಯನ್ನು ಬಿಟ್ಟಿದ್ದು ತಾನು ಲಿಮ್ಕಾ ದಾಖಲೆ ಯಾವಾಗ ಮಾಡುತ್ತೇನೋ ಎಂಬ ನಿರೀಕ್ಷೆಯೊಂದಿಗೆ!ಮಕ್ಕಳಿಗೆ ಅಜ್ಜಿ ಮನೆಗಿಂತ ಉತ್ತಮವಾದ ಬೇಸಿಗೆ ಶಿಬಿರ ಬೇರೆಯಿಲ್ಲ ಎಂಬ ಮಾತನ್ನು ನಿಜವಾಗಿಸಿದ ಕೀರ್ತಿ ಅದಿತಿಯದು. ಪುಟ್ಟ ಪೋರಿ ಏನ್ಮಾಡಿದ್ದಾಳೆ ಗೊತ್ತಾ? ಚಿಂತಾಮಣಿಯ ಜೈನ್ ಶಾಲೆಯ ಯೋಗ ಗುರು ಗೋಂದರವರ ಬಳಿ ತೆರಳಿದ್ದು. ಅಜ್ಜಿ ಮನೆಯಲ್ಲಿದ್ದ ಒಂದು ತಿಂಗಳು ಪೂರ್ತಿ ಅವರ ಮಾರ್ಗದರ್ಶನದಲ್ಲಿ ಈಜು ಕೊಳದಲ್ಲಿ ಕಸರತ್ತು ಮಾಡಿದ್ದಾಳೆ. ಅದರ ಫಲವಾಗಿ ಅದಿತಿ ಈಗ ನೀರಿನಲ್ಲಿ ಸುಮಾರು ಮುಕ್ಕಾಲು ಗಂಟೆಗಳ ಕಾಲ ಕೈಕಾಲು ಆಡಿಸದೆ ತೇಲಬಲ್ಲಳು. ನೀರಿಗೆ ಡೈವ್ ಹೊಡೆಯಬಲ್ಲಳು. ಅಂದ ಹಾಗೆ ಅದಿತಿಗೆ ಇನ್ನೂ ಬರಿ 4 ವರುಷ! ನೀರಿನೊಂದಿಗೆ ಸ್ನೇಹ
ತುಂಬಿದ ಬಾವಿಯಲ್ಲಿ ಮುಕ್ಕಾಲು ಗಂಟೆಯಿಂದ ಒಂದು ಗಂಟೆಯ ಕಾಲ ಕದಲದೇ ತೇಲಾಡುವ ಮೂಲಕ ಶವಾಸನ ಮಾಡುತ್ತಿದ್ದು, ಇದರ ಜೊತೆಗೆ ಈ ಬಾಲಕಿ ಬ್ಯಾಕ್ ಸ್ವಿಮ್, ಫ್ಲೋಟಿಂಗ್, ಮಗ್ ಡೈವ್ ಹಾಕುವುದು, ಎತ್ತರದಿಂದ ಜಂಪ್ ಮಾಡುವುದರಲ್ಲೂ ಸೈ. ಯೋಗ, ಕರಾಟೆ, ಸಂಗೀತ ಹಾಗೂ ನೃತ್ಯವನ್ನೂ ಕಲಿತಿದ್ದಾಳೆ. ಈಜು ಅವಳ ಮೊದಲ ಆದ್ಯತೆಯಾಗಿದ್ದರೂ, ಅದರ ಜೊತೆಗೆ ಸ್ಕೇಟಿಂಗ್, ಹಾಡುಗಾರಿಕೆ, ನೃತ್ಯ, ಯೋಗ ಕ್ಷೇತ್ರಗಳಲ್ಲೂ ಪ್ರಾವೀಣ್ಯತೆ ಮೆರೆಯುತ್ತಿದ್ದಾಳೆ.
Related Articles
ಅದಿತಿಗೆ ತರಬೇತಿ ನೀಡಿದ ಗುರು ಗೋಂದ ಅವರಿಗಂತೂ ಅದಿತಿ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದಾಳೆ. ಇಷ್ಟು ಕಡಿಮೆ ಅವಧಿಯಲ್ಲಿ ಅದು ಇಷ್ಟು ಚಿಕ್ಕ ವಯಸ್ಸಿನಲ್ಲಿ ಈಜು ಪಟ್ಟುಗಳನ್ನು ಕಲಿತಿದ್ದನ್ನು ಎಲ್ಲೂ ನೋಡೇ ಇಲ್ಲ ಎಂದು ಅದಿತಿಯ ಸಾಧನೆಗೆ ಹರ್ಷ ವ್ಯಕ್ತಪಡಿಸುತ್ತಾರೆ ಅವರು.
Advertisement
ನನಗೆ ಈಜುವುದು ಎಂದರೆ ತುಂಬಾ ಇಷ್ಟ. ಈಗ ನೀರಿನ ಮೇಲೆ ತೇಲುವುದರಲ್ಲಿ ಹಿಡಿತ ಸಿಕ್ಕಿದೆ. ಮುಂದೆ ಈಜಿನಲ್ಲೇ ಲಿಮ್ಕಾ ದಾಖಲೆ ಮಾಡುವಾಸೆ.– ಅದಿತಿ ಹೆತ್ತವರ ಕಣ್ಮಣಿ
ಮಗಳ ಆಸಕ್ತಿಗಳಿಗೆ ಪೋಷಕರು ಸಹಕಾರ ನೀಡುತ್ತಿದ್ದಾರೆ. ಮಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವಳ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಬೇಕಾದ ವ್ಯವಸ್ಥೆಯನ್ನು ಅವರು ಮಾಡಿಕೊಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಸಾಧನೆಯ ಮೆಟ್ಟಿಲು ಹತ್ತುತ್ತಿರುವ ಅದಿತಿ ಹೆತ್ತವರಿಗೂ ಕಣ್ಮಣಿಯಾಗಿದ್ದಾಳೆ. ಇಂದಲ್ಲ ನಾಳೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿದ್ದಾಳೆ ಎಂಬ ನಿರೀಕ್ಷೆ ಅವರದು. ಆ ದಿನಕ್ಕಾಗಿ ಕಾದು ಕುಳಿತಿದ್ದಾರವರು. ಶ್ರೀನಿವಾಸ ಚಿಂತಾಮಣಿ