Advertisement
ಹೌದು. ಸಾವಯವ ಉತ್ಪನ್ನಗಳ ದೃಢೀಕರಣ ಕಷ್ಟವಾದರೂ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಜನರು ಇಂದು ಹೆಚ್ಚು ಕೇಳುತ್ತಿದ್ದಾರೆ. ಬೆಳೆಗಳಿಗೆ ರಾಸಾಯನಿಕ ಬಳಸಿ, ಉತ್ಪನ್ನ ಸಿದ್ಧಗೊಳಿಸುವಾಗ ಸಾವಯವ ಪದ್ಧತಿ ಅಳವಡಿಸಿದರೆ ಸಾಕು ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಶೇ.100 ಸಾವಯವ ಪದ್ಧತಿಯ ಬೆಲ್ಲ ತಯಾರಿಕೆ ಮತ್ತು ಮಾವು ಬೆಳೆದು ತೋರಿಸಿ ಸಾಧನೆ ಮಾಡಿದ್ದಾರೆ ಧಾರವಾಡ ಸಮೀಪದ ಬಾಡ ಗ್ರಾಮದ ಯುವ ರೈತ ಕಲ್ಲನಗೌಡ ಪಾಟೀಲ.
Related Articles
Advertisement
ಮಾವಿನ ಕಾಯಿಗಳನ್ನು ಹಣ್ಣು ಮಾಡಲು ರಾಸಾಯನಿಕ ಬಳಕೆಯಾಗುತ್ತಿರುವುದನ್ನು ತಡೆದು ಸಾಂಪ್ರದಾಯಿಕ ಪದ್ಧತಿಯಲ್ಲಿ ಹಣ್ಣುಮಾಡುವುದಕ್ಕೆ ಇವರು ಮುಂದಾದರು. ಆದರೆ ಮಾವಿನ ಗಿಡಗಳಿಗೆ ಹಾಕುವ ರಾಸಾಯನಿಕ ಗೊಬ್ಬರ ಮತ್ತು ಹೂ, ಹೀಚು ನಿಲ್ಲಲು ಹೊಡೆಯುವ ಕೀಟನಾಶಕಗಳ ಬಗ್ಗೆಯೂ ಜಾಗೃತರಾಗಿ ಇಡೀ ಮಾವಿನ ಬೆಳೆಯನ್ನೇ ಸಾವಯವ ಪದ್ಧತಿ ರೂಪದಲ್ಲಿ ಬೆಳೆಯುತ್ತಿದ್ದಾರೆ.
ಕೈ ಸುಟ್ಟುಕೊಂಡರೂ ಕಾರ್ಯ ಬಿಡಲಿಲ್ಲ30 ಎಕರೆ ಹೊಲ ಹೊಂದಿರುವ ಕಲ್ಲನಗೌಡರು ತಮಿಳುನಾಡು ಮೂಲದ ಯಂತ್ರ ಬಳಸಿ ಬೆಲ್ಲ ತಯಾರಿಸಲು ಯತ್ನಿಸಿ ಕೈ ಸುಟ್ಟುಕೊಂಡರು. ಆದರೆ ಛಲ ಬಿಡದೆ ದೇಶಿ ಪದ್ಧತಿಯಲ್ಲಿ ಬೆಲ್ಲ ತಯಾರಿಸುವ ವಿಧಾನಗಳಲ್ಲಿಯೇ ಸುಧಾರಣೆ ತಂದುಕೊಂಡು ಸಾವಯವ ಬೆಲ್ಲ ತಯಾರಿ ಆರಂಭಿಸಿದರು. ಕೂಲಿಯಾಳುಗಳ ಕೊರತೆಯಾದಾಗ ಮನೆಯವರನ್ನು ಕರೆದುಕೊಂಡು ತಾವೇ ಅಖಾಡಕ್ಕಿಳಿದು ಬೆಲ್ಲ ಸಿದ್ಧಗೊಳಿಸಿದರು. ಈ ವರ್ಷ 10 ಸಾವಿರ ಕೆಜಿಯಷ್ಟು ಸಾವಯವ ಬೆಲ್ಲ ಸಿದ್ಧಗೊಳಿಸಿದ್ದು, ಮುಂದಿನ ವರ್ಷಕ್ಕೂ ಈಗಲೇ ಬೆಲ್ಲ ಬುಕ್ ಆಗಿದೆ. ಇನ್ನು ಮಾವಿನ ಹಣ್ಣುಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಬೆಳೆದು ಹಣ್ಣಾಗಿಸಿ ಮಾರಾಟ ಮಾಡುವ ಅವರ ಕಾರ್ಯವೈಖರಿ ವಿಭಿನ್ನವಾಗಿದೆ. ಕಾಯಿಗಳನ್ನು ಪಲ್ಪ್ ಮಾಡಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಒಂದು ಕಂಪನಿಗೆ ಕಳುಹಿಸುತ್ತಿದ್ದು, ಅಲ್ಲಿಂದ ಇವರ ಪರಿಶುದ್ಧ ಸಾವಯವ ಮಾವಿನ ಪಲ್ಪ್ ವಿದೇಶಕ್ಕೆ ಕಾಲಿಟ್ಟಿದೆ. ಮುಂಗಡ ಬುಕ್ಕಿಂಗ್!
ಕೇವಲ 10 ವರ್ಷಗಳ ಹಿಂದಷ್ಟೇ ದೇಶಿ ಭತ್ತದ ಕಣಜವಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆದರೂ ಪರಿಶುದ್ಧ ಬೆಲ್ಲ ಸಿಕ್ಕುತ್ತಿಲ್ಲ . ಹಣಕ್ಕಾಗಿ ಕಬ್ಬು ಸಕ್ಕರೆ ಕಾರ್ಖಾನೆಗಳಿಗೆ ಹೋಗುತ್ತಿದೆ. ಈ ಸಕ್ಕರೆ ಸಂಘರ್ಷದಲ್ಲಿ ಎಲ್ಲರಿಗೂ ಅಕ್ಕರೆಯಾಗುವಂತೆ ಸಿದ್ಧಗೊಂಡ ಪರಿಶುದ್ಧ ಸಾವಯವ ಬೆಲ್ಲ ಸುತ್ತಲಿನ ಗ್ರಾಮಗಳ ಜನರ ಮನೆಯಲ್ಲಿನ ಹೋಳಿಗೆ ರುಚಿಯನ್ನು ಹೆಚ್ಚಿಸಿದೆ. ಇವರ ತೋಟದ ಮಾವಿನ ಹಣ್ಣಿನ ಪಲ್ಪ್ ವಿದೇಶಗಳಿಗೂ ಕಾಲಿಟ್ಟಿದೆ. ಮಾವಿನ ಹೂ ಬಿಡುವ ಮುನ್ನವೇ ಗ್ರಾಹಕರು ಇವರ ಹಣ್ಣಿಗೆ ಹಣ ಕೊಟ್ಟು ಬುಕ್ ಮಾಡುತ್ತಾರೆ. ರಾಸಾಯನಿಕ ಕೃಷಿಯ ಹಾನಿ ಬಗ್ಗೆ ರೈತರಲ್ಲಿ
ಜಾಗೃತಿ ಮೂಡಿಸುವುದು ಮತ್ತು ದೇಶಿ ಕೃಷಿ ಜ್ಞಾನ ಪರಂಪರೆ ಉಳಿಸಲು ಹೊಸ ಯೋಜನೆ ರೂಪಿಸಿದ್ದಾರೆ. ಬೆಲ್ಲ ಪರಿಶುದ್ಧವಾಗಿರಬೇಕಾದರೆ ಕಬ್ಬು ಪರಿಶುದ್ಧವಾಗಬೇಕು. ಕಬ್ಬು ಪರಿಶುದ್ಧವಾಗಲು ಬೆಳೆಯುವ ನೆಲವೂ ಪರಿಶುದ್ಧವಾಗಬೇಕು. ಈ ತತ್ವಕ್ಕೆ ಅಣಿಯಾಗಿ ಕೆಲಸ ಮಾಡಿದ್ದೇನೆ. ಯುವ ಪೀಳಿಗೆಯ ಅನಾರೋಗ್ಯಕ್ಕೆ ರಾಸಾಯನಿಕ ಕೃಷಿಯೇ ಕಾರಣ. ಅದರಿಂದ ಹೊರಬರಲೇಬೇಕಿದ್ದು, ಅದಕ್ಕಾಗಿ ನನ್ನ ಪ್ರಯತ್ನ.
ಕಲ್ಲನಗೌಡ ಪಾಟೀಲ, ಸಾವಯವ ಕೃಷಿಕ *ಬಸವರಾಜ ಹೊಂಗಲ್