Advertisement
ಈ “ಸಿಹಿ ಸಮರ’ದ ಹಿಂದೆ 2 ವರ್ಷಗಳ ರೋಚಕ ಕತೆಯಿದೆ. 2015ರಲ್ಲಿ ಒಡಿಶಾ ಸರಕಾರ ರಸಗುಲ್ಲವನ್ನು ಸಾಂಪ್ರದಾಯಿಕ ಸಿಹಿಯೆಂದು ಘೋಷಿಸಲು ಮುಂದಾಯಿತು. ಅದರ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಆಕ್ಷೇಪ ಮಾಡಿ, ತಗಾದೆ ತೆಗೆಯಿತು. ಆದರೆ ಹಠಬಿಡದ ಒಡಿಶಾ, ರಸಗುಲ್ಲ ಮೂಲವನ್ನು ಕೆದಕಲು ಹಲವು ಸಮಿತಿಗಳನ್ನು ರಚಿಸಿತು. ಜು. 30ರಂದು “ರಸಗುಲ್ಲ ದಿನ’ ಎಂದು ಆಚರಿಸುವುದಾಗಿಯೂ ಘೋಷಿಸಿತು.
“ರಸಗುಲ್ಲ’ ತನ್ನದೆಂದು ಹೇಳಲು ಒಡಿಶಾ ಸರಕಾರ ಪುರಾಣದ ಕಥೆಯೊಂದನ್ನು ಆಧಾರವಾಗಿಟ್ಟುಕೊಂಡಿತ್ತು. ಒಡಿಶಾದಲ್ಲಿರುವ ಪುರಿಯ ಜಗನ್ನಾಥ ದೇಗುಲದಲ್ಲಿ ನೆಲೆನಿಂತಿದ್ದ ಶ್ರೀ ಜಗನ್ನಾಥನು ತನ್ನ ಪತ್ನಿಯಾದ ಲಕ್ಷ್ಮೀಯ ಸಮ್ಮತಿಯಿಲ್ಲದೇ 9 ದಿನಗಳ ರಥಯಾತ್ರೆಗೆ ಹೋಗಿಬಂದಿದ್ದ. ಆಗ ಮುನಿಸಿಕೊಂಡಿದ್ದ ಲಕ್ಷ್ಮೀಯು ದೇಗುಲದ ಬಾಗಿಲನ್ನು ತೆರೆಯದೆ ಸತಾಯಿಸಿದ್ದಳು. ಆಕೆಯ ಮನವೊಲಿಸುವ ಸಲುವಾಗಿ ರಸಗುಲ್ಲ ಸೃಷ್ಟಿಸಿಕೊಟ್ಟಿದ್ದ. ಇದರ ಕುರುಹಾಗಿ ಈಗಲೂ ಪುರಿ ದೇಗುಲದಲ್ಲಿ ನೈವೇದ್ಯಕ್ಕೆ ರಸಗುಲ್ಲಗಳನ್ನೇ ಇಡುವ ಸಂಪ್ರದಾಯ ಶತಮಾನಗಳಿಂದ ಚಾಲ್ತಿಯಲ್ಲಿದೆ. ಹಾಗಾಗಿ, ಈ ಸಿಹಿ ನಮ್ಮದೇ ಎಂದು ಒಡಿಶಾ ವಾದ ಮಾಡಿತ್ತು.