Advertisement

ರಾಮನವಮಿ ಪಾನಕದಲ್ಲಿ ಸಿಹಿ ಕಮ್ಮಿ!

05:24 PM Jul 27, 2018 | Team Udayavani |

ಯಾರೂ ಓಡಾಡದ ಒಂದು ರಸ್ತೆ, ಆ ರಸ್ತೆ ಮೇಲೊಂದು ಮಾರುತಿ ವ್ಯಾನು, ಆ ವ್ಯಾನ್‌ ಒಳಗೆ ರಗಡ್‌ ಎನಿಸುವ ನಾಲ್ಕು ಪಾತ್ರಗಳು. ಆ ಪಾತ್ರಗಳ ನಡುವೆ ಅಲ್ಲಲ್ಲಿ “ಮಜ ಮತ್ತು ಸಜ’ ಎನಿಸೋ ಸನ್ನಿವೇಶಗಳು. ಆ ರಸ್ತೆಯಲ್ಲಿ ಕಾಣಸಿಗುವ ಭಾವುಕ ಜೀವಗಳು. ವಿನಾಕಾರಣ ಎದುರಾಗುವ ಪಾತ್ರಗಳಿಗೆ ತಕ್ಕಮಟ್ಟಿಗಿನ ಕಥೆ ಹೊಂದಿರುವ “ಅಯ್ಯೋ ರಾಮ’, ಫ್ರೆಶ್‌ ಥಾಟ್‌ ಎನಿಸಿದರೂ, ಒಂದಷ್ಟು ಕೆಟ್ಟ ಚಿತ್ರಗಳಿಗೆ ಹೋಲಿಸಿದರೆ, ಚಿಟಿಕೆಯಷ್ಟು ಹೊಸತನವನ್ನು ಇಷ್ಟವಾಗಿಸುವ ಸಾಲಿಗೆ ಹೊಸ ಸೇರ್ಪಡೆ ಅಂದರೆ ತಪ್ಪಿಲ್ಲ.

Advertisement

ಇಲ್ಲಿ ನಿರ್ದೇಶಕರ “ದೂರ’ ದೃಷ್ಟಿಕೋನ ಚೆನ್ನಾಗಿದೆ. ಹಾಗಾಗಿ “ಅಯ್ಯೋ ರಾಮ’ ನೋಡುಗರಿಗೆ ಸಣ್ಣದ್ದೊಂದು ಹೊಸ ಫೀಲ್‌ ಕಟ್ಟಿಕೊಡುತ್ತೆ ಎಂಬುದೇ ಸಮಾಧಾನ. ಹಾಗಂತ, ಇಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಬೇಕೆಂಬ ನಿಯಮವಿಲ್ಲ. ಚಿತ್ರದಲ್ಲಿ ಸ್ಟಾರ್‌ ಇಲ್ಲ, ಕಮರ್ಷಿಯಲ್‌ ಗೆರೆಗಳೂ ಕಾಣುವುದಿಲ್ಲ. ಬೆರಳೆಣಿಕೆ ಪಾತ್ರಗಳ ಮೇಲೆ ಸಾಗುವ ಕಥೆಯಲ್ಲೊಂದು ಭಾವನಾತ್ಮಕ ಸಂಬಂಧವಿದೆ, ಹಣದ ಮೇಲೆ ಅತಿಯಾದ ವ್ಯಾಮೋಹಗೊಳ್ಳುವ ಮನಸ್ಸುಗಳಿವೆ,

ನಿಷ್ಕಲ್ಮಷ ಪ್ರೀತಿಯ ನೆರಳಿದೆ, ವೈದ್ಯಲೋಕದಲ್ಲೊಂದು ಮಾಫಿಯಾ ಇದೆ, ಒಳಗೊಳಗೊಂದು ಭಯವಿದೆ, ಸಣ್ಣದ್ದೊಂದು ಮಾನವೀಯತೆಯ ಬೆಸುಗೆ ಇದೆ … ಈ ಎಲ್ಲಾ ಕಾರಣಕ್ಕೆ “ಅಯ್ಯೋ ರಾಮ’ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆಯಾದರೂ, ಅದು ಸರಾಗವಾಗಿ ನೋಡುಗರನ್ನು ತೃಪ್ತಿಪಡಿಸಲ್ಲ ಎಂಬುದು ಅಷ್ಟೇ ನಿಜ. ವ್ಯಾನು ಅಲ್ಲಲ್ಲಿ ನಿಧಾನವಾಗಿ, ಅಡ್ಡಾದಿಡ್ಡಿಯಾಗಿ ಮುಂದಕ್ಕೆ ಸಾಗುವಂತೆ,  ಚಿತ್ರದ ಮೊದಲರ್ಧದಲ್ಲಿ ಚಿತ್ರ ಕೂಡ ಮಂದಗತಿಯಲ್ಲೇ ಸಾಗುವ ಮೂಲಕ ಎಲ್ಲೋ ತಾಳ್ಮೆ ಕೆಡಿಸುವ ದಾರಿ ಹಿಡಿಯುತ್ತೆ.

“ಅಯ್ಯೋ ರಾಮ’, ಇದೇನಪ್ಪಾ ಅಂದುಕೊಂಡು ಸೀಟಿಗೆ ಒರಗಿಕೊಳ್ಳುವ ಹೊತ್ತಿಗೆ, ಸಣ್ಣದ್ದೊಂದು ಕುತೂಹಲಕ್ಕೆ ಕಾರಣವಾಗುತ್ತೆ. ಆ ಕುತೂಹಲ ತಿಳಿದುಕೊಳ್ಳುವ ಆಸೆ ಇದ್ದರೆ “ರಾಮ ಭಜನೆ’ ಮಾಡಬಹುದು. ಇದು ಹೊಸ ಪ್ರಯೋಗದ ಚಿತ್ರವಲ್ಲ. ಆದರೆ, ನಿರೂಪಣೆಯಲ್ಲೊಂದಷ್ಟು ಹೊಸತನವಿದೆ. ಪಾತ್ರಗಳಲ್ಲಿ ಏರಿಳಿತಗಳಿವೆ. ಅವುಗಳನ್ನು ಬ್ಯಾಲೆನ್ಸ್‌ ಮಾಡುವಲ್ಲಿ ನಿರ್ದೇಶಕರು ಕೊಂಚ ಗಲಿಬಿಲಿಗೊಂಡಿದ್ದಾರೆ.

ಬಹುಶಃ ಆ ಗಲಿಬಿಲಿಯೇ ಮೊದಲರ್ಧದ ಮಂದಗತಿಗೆ ಕಾರಣ. ಚಿತ್ರದಲ್ಲಿ ಹೇಳಿಕೊಳ್ಳುವ ತಾಣಗಳಿಲ್ಲ. ಭರಪೂರ ಮನರಂಜನೆಯೂ ಇಲ್ಲ. ಕೆಲ ಪ್ರಶ್ನೆಗಳೊಂದಿಗೆ ನೋಡಿಸಿಕೊಂಡು ಹೋಗುವ ಚಿತ್ರದ ಮಧ್ಯೆ ಬರುವ ಹಾಡೊಂದು ಅರ್ಥ ಪೂರ್ಣ. ಅದು ಬಿಟ್ಟರೆ, ಚಿತ್ರಕಥೆಯಲ್ಲಿರುವ ಸಣ್ಣಪುಟ್ಟ ಲೋಪ ಸರಿಪಡಿಸಿಕೊಳ್ಳಲು ಸಾಧ್ಯವಿತ್ತು. ಕಥೆಯ ಥಾಟ್‌ ಚೆನ್ನಾಗಿದೆಯಾದರೂ, ಅದನ್ನು ಇನ್ನಷ್ಟು ಬಿಗಿಯಾಗಿ ಹಿಡಿದಿಡುವ ಮತ್ತು ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕರು ಎಡವಿದ್ದಾರೆ.

Advertisement

ಇಲ್ಲಿ ಹೀರೋ ಇಲ್ಲ, ವಿಲನ್‌ ಇಲ್ಲ, ನಾಯಕಿಯೂ ಇಲ್ಲ, ಕಥೆಯೇ ನಾಯಕ-ನಾಯಕಿ, ಪರಿಸ್ಥಿತಿಯೇ ವಿಲನ್‌. ಹಾಗಾಗಿ ಪಾಸ್‌ ಮಾರ್ಕ್ಸ್ ಕೊಡಲ್ಲಡ್ಡಿಯಿಲ್ಲ. ಒಂದು ಕಡೆ ಪ್ರೀತಿಸಿದ ಹುಡುಗಿಗಾಗಿ ಹತ್ತು ಲಕ್ಷ ಹಣ ಕದ್ದು ಅವಳ ಕೈಗಿಟ್ಟು ಯಾಮಾರುವ ಪ್ರೇಮಿ, ಇನ್ನೊಂದು ಕಡೆ ಕಿಡ್ನಿ ಕದಿಯೋ ವೈದ್ಯನ ಬ್ಲಾಕ್‌ವೆುಲ್‌ ಮಾಡಿ 25 ಲಕ್ಷ ಹಣಕ್ಕೆ ಡಿಮ್ಯಾಂಡ್‌ ಮಾಡೋ ಅನಾಮಿಕ,  ಮತ್ತೂಂದು ಕಡೆ ಮಾತು ಬಾರದ ಮತ್ತು

ಕಿವಿ ಕೇಳದ ಇಬ್ಬರು ಅನಾಥರಿಗೆ ಗೊಂಬೆ ಮುಖವಾಡ ಹಾಕಿಸಿ ಹಣ ಗಳಿಸಬೇಕೆಂಬ ಮುದಿಯಜ್ಜನ ಕಣ್ತಪ್ಪಿಸಿ ಓಡಿ ಹೋಗುವ ಮುಗ್ಧರು, ಮಗದ್ದೊಂದು ಕಡೆ ತನ್ನ ಮಗಳ ಹೃದಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಡಿ ಆತ್ಮಹತ್ಯೆಗೆ ಮುಂದಾಗುವ ಪ್ರಾಮಾಣಿಕ ಪೇದೆ … ಬೇರೆ ಬೇರೆ ಜಾಗದಲ್ಲಿ ಕಾಣುವ ಈ ಪಾತ್ರಗಳು, ಒಂದೇ ರಸ್ತೆಗೆ ಬಂದಾಗ ಅಲ್ಲೊಂದು ವಿಶೇಷ ಸನ್ನಿವೇಶ ನಡೆದುಹೋಗುತ್ತೆ. ಒಂದಲ್ಲ ಒಂದು ಸಮಸ್ಯೆಯಲ್ಲಿರುವ ಆ ಪಾತ್ರಗಳಿಗೆ ಪರಿಹಾರ ಸಿಗುತ್ತಾ? ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಾ? ಅದೇ ಕಥೆ.

ಶೇಷನ್‌, ಒಬ್ಬ ಅಪ್ಪಟ ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಟನೆ ಸಹಜವಾಗಿದೆಯಾದರೂ, ಮಿಮಿಕ್ರಿ ದೃಶ್ಯ ಬೇಕಿತ್ತಾ ಎಂಬ ಪ್ರಶ್ನೆ ಬರುತ್ತೆ. ಪ್ರಿಯಾಂಕ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದಂತಿದೆ. ಜಹಾಂಗೀರ್‌ ಒಬ್ಬ ಅಸಹಾಯಕ ತಂದೆಯಾಗಿ, ಪ್ರಾಮಾಣಿಕ ಪೇದೆಯಾಗಿ ಗಮನಸೆಳೆಯುತ್ತಾರೆ. ಪ್ರದೀಪ್‌ ಪೂಜಾರಿ, ಪ್ರಣಯ ಮೂರ್ತಿ ಇತರರು ಸಿಕ್ಕ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ವಿವೇಕ್‌ ಚಕ್ರವರ್ತಿ ಹಿನ್ನೆಲೆ ಸಂಗೀತಕ್ಕಿನ್ನೂ ಗಮನ ಕೊಡಬೇಕಿತ್ತು. ಒಂದೇ ಹಾಡಿದ್ದರೂ ಅದು ಕಥೆಗೆ ಪೂರಕ. ಶ್ಯಾಮ್‌ ಸಿಂಧನೂರ್‌ ಛಾಯಾಗ್ರಹಣದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

ಚಿತ್ರ: ಅಯ್ಯೋ ರಾಮ
ನಿರ್ಮಾಣ: ತ್ರಿವಿಕ್ರಮ್‌ ರಘು
ನಿರ್ದೇಶನ: ವಿನೋದ ಕುಮಾರ್‌
ತಾರಾಗಣ: ಶೇಷನ್‌, ಪ್ರಿಯಾಂಕ, ಪ್ರದೀಪ್‌ ಪೂಜಾರಿ, ಜಹಾಂಗೀರ್‌, ಪ್ರಣಯ ಮೂರ್ತಿ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next