ಕಬ್ಬನ್ನೇ ಮುಖ್ಯ ಬೆಳೆಯೆಂದು ಬೆಳೆಯುತ್ತಿದ್ದರು ಜಾಮಗೌಡ. ಅದೊಮ್ಮೆ ಕಬ್ಬಿಗೆ ಬೆಲೆ ಕುಸಿದಿದ್ದರಿಂದ ಮೆಣಸಿನಕಾಯಿ ಬೆಳೆಯಲು ನಿರ್ಧರಿಸಿದರು. ಭಾರೀ ಖಾರದ ಈ ಬೆಳೆ, ರೈತರಿಗೆ ಹೆಚ್ಚಿನ ಲಾಭ ತಂದುಕೊಟ್ಟಿತು. ನಾಲಿಗೆಗೆ ಖಾರ ಅನ್ನಿಸುವ ಮೆಣಸು, ರೈತರ ಪಾಲಿಗೆ ಸಿಹಿಯಾಯಿತು!
ಅಯ್ಯೋ, ಕೃಷಿ ನಂಬಿಕೊಂಡು ಯಾರಾದ್ರೂ ಬದುಕೋಕಾಗುತ್ತಾ? ಕೃಷಿ ಮಾಡುವುದರ ಬದಲು, ಯಾವುದಾದರೂ ಒಳ್ಳೆ ಉದ್ಯೋಗ ಹಿಡಿದರೆ ಮಾತ್ರ ಕೈಯಲ್ಲಿ ನಾಲ್ಕು ಕಾಸು ಓಡಾಡುತ್ತೆ ಅಂತ ಹಲವರು ಹೇಳುವುದನ್ನು ದಿನಾ ಕೇಳುತ್ತಲೇ ಇರುತ್ತೇವೆ. ಇಂಥ ಮಾತು ಹೇಳಿಕೊಂಡೇ ಅಜ್ಜ, ಅಪ್ಪ ನೋಡಿಕೊಂಡ ಜಮೀನಿಗೆ ಬೆನ್ನು ಹಾಕಿ ಪೇಟೆಯ ಹಾದಿ ಹಿಡಿಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ, ಕೆಲವೇ ಕೆಲವು ರೈತರು ಮಾತ್ರ ನೂತನ ತಂತ್ರಜಾnನ ಬಳಸಿ, ಇದ್ದ ಅಲ್ಪಸ್ವಲ್ಪ ಭೂಮಿಯಲ್ಲಿಯೇ ಹೊಸ ತಳಿಗಳನ್ನು ಬೆಳೆದು ಎಲ್ಲರಲ್ಲಿ ಬೆರಗು ಹುಟ್ಟಿಸುತ್ತಾರೆ. ಅಂಥ ಇಬ್ಬರು ರೈತರ ಕಥೆ ಇದು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತರಾದ ಸುರೇಶ ಹಣಮಂತ ಜಾಮಗೌಡ ಹಾಗೂ ಅವರ ಅಳಿಯ ಮಲ್ಲಪ್ಪ ರಾಮಪ್ಪ ಕಚ್ಚು ಎಂಬುವವರು ಕಬ್ಬಿನ ಬೆಳೆಯನ್ನು ನೆಚ್ಚಿಕೊಂಡವರು. ಆದರೆ, ಕಳೆದ ವರ್ಷ ಕಬ್ಬಿಗೆ ಉತ್ತಮ ಬೆಲೆ ಸಿಗದ ಕಾರಣ ತಮ್ಮ ಎರಡು ಎಕರೆ ಜಮೀನಿನಲ್ಲಿ ಇಂಡಸ್ ಕಂಪನಿಯ ಡಬ್ಬು ಮೆಣಸಿನಕಾಯಿ ಮತ್ತು ಸೀತಾರ ಗೋಲ್ಡ್ ಕಂಪನಿಯ ಉದ್ದ ಮೆಣಸಿನಕಾಯಿ ಬೆಳೆ ಬೆಳೆಯಲು ನಿರ್ಧರಿಸಿದರು.
ನೆರೆಯ ಮಹಾರಾಷ್ಟ್ರದ ಫಾರ್ಮ್ಹೌಸ್‌ನಿಂದ ಪ್ರತಿ ಸಸಿಗೆ 1.30 ಪೈಸೆಯಂತೆ ತಂದು, ಸಸಿಯಿಂದ ಸಸಿಗೆ 4 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ 75 ದಿನಗಳಲ್ಲಿ ಫಸಲು ಕಟಾವಿಗೆ ಬರುತ್ತದೆ ಎನ್ನುತ್ತಾರೆ ಸುರೇಶ. ಮೆಣಸು ಎಷ್ಟೇ ಖಾರವಿರಲಿ, ಅದಕ್ಕೂ ಕ್ರಿಮಿಕೀಟಗಳ ಕಾಟ ತಪ್ಪಿದ್ದಲ್ಲ. ಅಂಥಾ ಖಾರದ ಬೆಳೆಯನ್ನು ಚಪ್ಪರಿಸಿಕೊಂಡು ತಿನ್ನುವ ಕ್ರಿಮಿಕೀಟಗಳಿವೆ. ಇವುಗಳ ಹಾವಳಿ ತಡೆಯಲು, ನಾಟಿ ಮಾಡಿದ ಬಳಿಕ ಕ್ರಿಮಿನಾಶಕಗಳನ್ನು ಸಿಂಪಡಿಸಲೇಬೇಕು.
ಅನೇಕ ವರ್ಷಗಳಿಂದ ಕಬ್ಬನ್ನು ಬೆಳೆದು ನಮಗೆ ನಷ್ಟವಾಗಿದೆ. ಆದರೆ ಈ ಬಾರಿ ಧೈರ್ಯ ಮಾಡಿ ಮೆಣಸಿನಕಾಯಿ ಬೆಳೆದಿದ್ದೇವೆ. ಇದರಿಂದ ನಮಗೆ ಉತ್ತಮ ಲಾಭ ಕೂಡಾ ಬಂದಿದೆ ಎನ್ನುತ್ತಾರೆ ರೈತರು. ಪ್ರತಿ 6 ದಿನಕ್ಕೊಮ್ಮೆ ಫಸಲು ಕಟಾವಿಗೆ ಬರುತ್ತದೆ. ಪ್ರತಿ ವಾರಕ್ಕೊಮ್ಮೆ 6 ರಿಂದ 8 ಟನ್‌ನಷ್ಟು ಇಳುವರಿ ಬರುತ್ತದೆ. ಪ್ರತಿ ಟನ್‌ಗೆ 3500 ರೂ. ದರವಿದ್ದು, ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಪಾದಿಸಬಹುದು. ಅಲ್ಲದೆ, ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಸಾಕಷ್ಟು ಗ್ರಾಹಕರಿದ್ದಾರೆ. ಬೆಳಗಾವಿ, ವಿಜಯಪುರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ಸಾರಿಗೆ ವೆಚ್ಚವೂ ಹೊರೆಯಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮಾರಾಟಗಾರರೇ ನೇರವಾಗಿ ನಮ್ಮ ತೋಟಕ್ಕೆ ಬಂದು ಫಸಲನ್ನು ಪಡೆದು ಹಣ ಕೂಡಾ ಇಲ್ಲಿಯೇ ಕೊಟ್ಟು ಹೋಗುತ್ತಾರೆ. ಅದರಿಂದ ನಮಗೆ ಸಾರಿಗೆ ವೆಚ್ಚ ಕೂಡಾ ಬರುವುದಿಲ್ಲ. ಹಾಗಾಗಿ ಮೆಣಸು ಬೆಳೆದು ಲಾಭ ಮಾಡುವುದಕ್ಕೆ ಸಾಧ್ಯವಾಗಿದೆ ಅನ್ನುತ್ತಾರೆ ಜಾಮಗೌಡ.
ಹೆಚ್ಚಿನ ಮಾಹಿತಿಗೆ: 9663226183, 9945875631
– ಕಿರಣ ಶ್ರೀಶೈಲ ಆಳಗಿ