ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಸೆ.3ರಂದು ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಿಕ್ಷಕ ವರ್ಗಾವಣೆ ಗೊಂದಲ ಸಹಿತವಾಗಿ ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ ಕುರಿತು ಶುಕ್ರ ವಾರ ಇಲಾಖೆಯ ಅಧಿಕಾರಿಗಳೊಂ ದಿಗೆ ನಡೆಸಿದ ಸಭೆಯಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕ ವರ್ಗಾವಣೆ ಸಮಸ್ಯೆ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಎಲ್ಲ ಆಯಾಮಗಳಲ್ಲಿಯೂ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಸೆ.3ರಂದು ಸಭೆ ನಡೆಸಿ ಕೂಡಲೇ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ವಿಧಾನವನ್ನು ಚುರುಕುಗೊಳಿಸಲು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಅದಕ್ಕೊಂದು ಮೈಲಿಗಲ್ಲು ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯ ಪ್ರಮುಖ ನಿರ್ಧಾರಗಳು: ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭದ ದಿನವೇ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಮಕ್ಕಳಿಗೆ ನೀಡುವ ಸೈಕಲ್ ಮತ್ತು ಬಿಡಿಭಾಗಗಳ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ಪದೇಪದೆ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷಿಸಿ ನಂತರ ಸೈಕಲ್ ವಿತರಿಸಲು ಕ್ರಮವಹಿಸಬೇಕು.
ಸೈಕಲ್ ಮತ್ತು ಸಮವಸ್ತ್ರಗಳು ಮಕ್ಕಳಿಗೆ ಪ್ರೋತ್ಸಾಹದಾಯಕ ಹಾಗೂ ಮುದ ನೀಡುವಂತಿರಬೇಕು ಎಂದು ನಿರ್ದೇಶಿಸಿದ್ದಾರೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳ ವಿದ್ಯಾರ್ಥಿಗಳಿಗೆ 11 ಲಕ್ಷ ಪುಸ್ತಕ, ನೋಟ್‌ಬುಕ್, ಪೆನ್ ಸೇರಿದಂತೆ ಪಿಠೋಪಕರಣಗಳನ್ನು ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.
ಉ.ಕ.ದ ಹಲವು ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತ ಕುಟುಂಬಗಳು ಶಾಲೆಗಳಲ್ಲಿ ಆಶ್ರಯ ತೆಗೆದುಕೊಂಡ ಸಂದರ್ಭದಲ್ಲಿ ಶಾಲೆ ನಡೆಯದ ದಿನಗಳು ಮತ್ತು ವಿಪರೀತ ಮಳೆಯಿಂದ ಶಾಲೆಗಳಿಗೆ ರಜೆ ನೀಡಿದ ದಿನಗಳ ಪಠ್ಯಚಟುವಟಿಕೆ ಸರಿದೂಗಿಸಬೇಕು. ಹೀಗಾಗಿ ಆಯಾ ಶಾಲೆಗಳಿಗೆ ನೀಡಿದ ರಜಾದಿನಗಳಿಗೆ ಅನುಗುಣವಾಗಿ (ಶಾಲಾವಾರು ಪರಿಗಣನೆ) ಶಾಲಾ ದಿನಗಳನ್ನು ಸರಿದೂಗಿಸಲು ಕ್ರಮ ವಹಿಸಲು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ ಮುಷ್ಕರದ ಆತಂಕ ಎದುರಾಗುತ್ತಾ ಬಂದಿದೆ. ಭವಿಷ್ಯದಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಿ, ವಿದ್ಯಾರ್ಥಿಗಳಿಗೆ ಇದರಿಂದ ಭ್ರಮನಿರಸನ ಆಗುವುದನ್ನು ತಡೆಯಲು ಮುಷ್ಕರ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮನವಿ: ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ವಿಳಂಬ ಮಾಡುತ್ತಲೇ ಹೋದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶಿಕ್ಷಕರು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಸಂದರ್ಭದಲ್ಲಿ ಕೆಲವು ಶಿಕ್ಷಕರು ಸಚಿವರನ್ನು ಭೇಟಿ ಮಾಡಿ, ಆದಷ್ಟು ಬೇಗ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮನವಿ ಮಾಡಿಕೊಂಡಿದ್ದಾರೆ. ಅನರ್ಹಗೊಂಡಿರುವ ಶಾಸಕ ಎಚ್.ವಿಶ್ವನಾಥ್ ಕೂಡ ಸಚಿವರನ್ನು ಭೇಟಿ ಮಾಡಿ ಶಿಕ್ಷಕರ ವರ್ಗಾವಣೆ ಹಾಗೂ ಇತರೆ ವಿಷಯಗಳ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ನೂತನ ಸಚಿವರನ್ನು ಶಿಕ್ಷಕರು ಅಭಿನಂದಿಸಿದರು.