Advertisement

ನೆನಪಿನ ಬುತ್ತಿ ತೆರೆದಾಗ ಹೀಗೆ ಆಯಿತು

08:46 PM May 30, 2020 | Hari Prasad |

ಕೆಲಸಕ್ಕೆ ಸೇರುವುದು ಪ್ರತಿಯೊಬ್ಬರ ಕನಸು. ಆ ಕನಸನ್ನು ನನಸಾಗಿಸುವತ್ತ ಎಲ್ಲರೂ ಮುಂದಡಿಯಿಡುತ್ತಾರೆ. ಇಲ್ಲಿ ತನ್ನ ಕನಸಿನ ಕೆಲಸವನ್ನು ಪಡೆದುಕೊಂಡ ಬಗೆ ಮತ್ತು ಅಲ್ಲಿನ ಅನುಭವಗಳಿಗೆ ಅಕ್ಷರ ರೂಪ ನೀಡಿದ್ದಾರೆ.

Advertisement

ಹಸಿ ಮಣ್ಣಿನ ಒದ್ದೆ ಗೋಡೆಗೆ ಕಲ್ಲು ಹೊಡೆದರೆ ಹೇಗೋ ಹಾಗೆಯೇ ಮನುಷ್ಯನ ಜೀವನದಲ್ಲಿ ಕೆಲವೊಂದು ಅನುಭವಗಳು ಅಚ್ಚು ಒತ್ತಿದಂತಿರುತ್ತವೆ.

ಸಿಹಿ ನೆನಪುಗಳ ನೆನೆದಾಗ ಕಣ್ಣಂಚಲ್ಲಿ ಯಾರದೇ ಅನುಮತಿ ಇಲ್ಲದೇ ಕಣ್ಣೀರು ಜಾರಿ ಕೆನ್ನೆ ಸೇರಬಹುದು. ಅದೇ ಕಹಿ ನೆನಪುಗಳು ತುಟಿಯಂಚಲಿ ಕಿರು ನಗೆ ತರಬಹುದು.

ನೆನಪುಗಳ ಮಾತು ಮಧುರ ಅಲ್ಲವೇ? ನನ್ನ ಜೀವನದ ಇನ್ಫೋಸಿಸ್‌ ಟ್ರೈನಿಂಗ್‌ನ ಸಿಹಿ -ಕಹಿ ಅನುಭವಗಳ ಜೋಳಿಗೆಯ ತೆರೆಯ ಹೊರಟಿರುವೆ.

ನನ್ನಂತಹ ಮಧ್ಯಮ ವರ್ಗದ ಹುಡುಗಿಗೆ ಇನ್ಫೋಸಿಸ್‌ ಎಂಬ ಅತ್ಯುನ್ನತ ಕಂಪನಿಯಲ್ಲಿ ಉದ್ಯೋಗಾವಕಾಶ ದೊರೆತದ್ದು ಅದ್ಯಾರ ಪುಣ್ಯವೋ ನಾ ಕಾಣೆ.

Advertisement

ಜೂನ್‌ 22ರ ಮಧ್ಯರಾತ್ರಿ 2 ಗಂಟೆ ಸುಮಾರು ನನ್ನ ಪಯಣ ಸಾಗಿತ್ತು ಸಂಸ್ಕೃತಿ ನಗರಿ ಮೈಸೂರಿನತ್ತ. ಬರೇ ಪುಸ್ತಕ, ಮಾಧ್ಯಮಗಳಲ್ಲಿ ಮಾತ್ರವೇ ಕೇಳಿದ್ದ ನನಗೆ ಮೈಸೂರಿಗೆ ಹೋಗಬೇಕೆಂಬ ಆಸೆ ಬಾಲ್ಯದಿಂದಲೂ ಇತ್ತು.

ಆದರೆ ನನಗೆಂದೂ ಆ ಅವಕಾಶ ದೊರೆತಿರಲಿಲ್ಲ ಇದೇ ಮೊದಲು ನಾನು ಮೈಸೂರಿಗೆ ಹೊರಟಿದ್ದು. ಅದರಲ್ಲೂ ವಿಶೇಷವೆಂದರೆ ಹೊರಟ್ಟಿದ್ದು ನನ್ನ ವೃತ್ತಿ ಜೀವನಕ್ಕಾಗಿ.

ಬೆಳಗ್ಗೆ ಸುಮಾರು 10 ಗಂಟೆಗೆ ಇನ್ಫೋಸಿಸ್‌ ಕ್ಯಾಂಪಸ್‌ಗೆ ಕಾಲಿಟ್ಟೆ. ಸುತ್ತ ಹಚ್ಚ -ಹಸುರು, ಸ್ವರ್ಗವೇ ಧರೆಗಿಳಿದು ನಿಂತಂತೆ ನನಗೆ ಭಾಸವಾಗಿತ್ತು. ಅಲ್ಲಲ್ಲಿ ಗಗನವನ್ನೇ ಚುಂಬಿಸುವ ಭೃಹತ್‌ ಕಟ್ಟಡಗಳು, ಯಾವುದೇ ಶಬ್ದ, ವಾಯು ಮಾಲಿನ್ಯವಿಲ್ಲದೇ ಚಲಿಸುವ ವಾಹನಗಳು, ಆಧುನೀಕೃತ ರೆಸ್ಟೋರೆಂಟ್‌ಗಳು ನನ್ನ ಕಣ್ಣನ್ನು ಸೆಳೆದಿದ್ದವು. ಅಂತೂ ಹೊಸ ಊರು, ಹೊಸ ಪರಿಸರ, ಹೊಸ ಜನಗಳು. ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಗಿ ಹೋಯ್ತು.

ಕುಟುಂಬ, ಗೆಳೆಯರು ಎಲ್ಲವನ್ನು ಬಿಟ್ಟು ಏಕಾಂಗಿಯಾಗಿ ಹೋಗಿ ತಲುಪಿದ್ದೆ. ಒಂದೊಂದು ಕ್ಷಣ ನನಗೆ ಸಂಶಯ ಹುಟ್ಟುತ್ತಿತ್ತು. ಮೈಸೂರು ಇರುವುದು ಕರ್ನಾಟಕದಲ್ಲೋ ಎಂದು. ಹೌದು ಮೈಸೂರು ಕರ್ನಾಟಕದಲ್ಲೇ ಇರಬಹುದು ಆದರೆ ಕ್ಯಾಂಪಸ್‌ ಒಳಗೆ ನನ್ನ ಕಣ್ಣುಗಳು ಒಂದು ಪುಟ್ಟ ಭಾರತವನ್ನೇ ಕಾಣುತ್ತಿದ್ದವು.

ಜಮ್ಮುವಿನಿಂದ ಹಿಡಿದು ಕನ್ಯಾಕುಮಾರಿಯವರೆಗೆ ಎಲ್ಲ ರಾಜ್ಯದಿಂದ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಅಲ್ಲಿರುತ್ತಿದ್ದರು. ಆದರೆ ಅಲ್ಲಿ ಯಾರಿಗೂ ಬೇಧವಿಲ್ಲ. ಆಹಾರ, ವಸತಿ, ನಿಯಮ ಇದಾವುದರಲ್ಲೂ ಯಾರಿಗೂ ಬೇಧವಿಲ್ಲದೇ ಎಲ್ಲರಿಗೂ ಒಂದೇ ಸೂರಿನಡಿ ಟ್ರೈನಿಂಗ್‌ ನಡೆಯುತ್ತಿತ್ತು. ಎಲ್ಲರೂ ಊಟ ಮಾಡುತ್ತಿದ್ದುದೂ ಒಂದೇ ಸೂರಿನಡಿ.

ಸುಮಾರು 337 ಎಕ್ರೆ ಇರುವ ಕ್ಯಾಂಪಸ್‌ ಸುತ್ತೋಣ ಎಂದು ನನ್ನ ಸ್ನೇಹಿತರ ಜತೆ ಸೈಕಲ್‌ ಹತ್ತಿದೆ. ಮಳೆಗಾಲ ಬೇರೆ ಅದಂತೂ ಭೂಲೋಕದ ಸ್ವರ್ಗದಂತೆ ಭಾಸವಾಗಿತ್ತು. ಎಲ್ಲಿಂದ ಹೋಗಿ ಎಲ್ಲಿ ತಲುಪಿದೆವು ಎಂಬುದು ನನಗಂತೂ ಗೊತ್ತಾಗುತ್ತಿರಲಿಲ್ಲ. ಕೊನೆಗೆ ನಮಗೆ ನೀಡಿದ ವಸತಿ ಗೃಹಕ್ಕೆ ತಲುಪಲು ಅಲ್ಲಲ್ಲಿ ಸಿಗುವ ಇತರ ಟ್ರೈನೀಗಳ ಸಹಾಯ ಪಡೆಯಬೇಕಾಯಿತು.

ಪ್ರತಿ ದಿನ ಬೆಳಗ್ಗೆ ಗೆಳೆಯರ ಜತೆ ಟ್ರೈನಿಂಗ್‌ ಹಾಜರಾದರೆ, ಸಂಜೆ ಮತ್ತೆ ಕ್ಯಾಂಪಸ್‌ ಸುತ್ತಾಟ ರೂಢಿಯಾಯ್ತು. ದಿನ ಕಳೆದಂತೆ ಟ್ರೈನಿಂಗ್‌ ಕಷ್ಟಕರವೆನಿಸಿದರೂ ಬಳಿಕ ಸುಲಭವಾಯಿತು. 3 ತಿಂಗಳು ಕಳೆದಿದ್ದೇ ಗೊತ್ತಾಗಿರಲಿಲ್ಲ.

ಬಳಿಕ ಪ್ಲೇಸ್ಮೆಂಟ್‌ ಆಗುವ ಸಂದರ್ಭ ಒಂದೇ ಕುಟುಂಬದಂತಿದ್ದ ನಮ್ಮ ಗೆಳೆಯರ ಗುಂಪು ಒಂದೊಂದು ದಿಕ್ಕಿಗೆ ಚದುರಿ ಹೋಯಿತು. ಆದರೆ ಜತೆಗೆ ಕಳೆದ ಸಾವಿರ ನೆನಪುಗಳು ಇಂದಿಗೂ ಕಣ್ಣಮುಂದೆ ಹಾದುಹೋಗುತ್ತಿದೆ. ಪರಿಸರದಲ್ಲಿ ದೂರವಿರಬಹುದು ಆದರೆ ಸ್ನೇಹದಲ್ಲಿ ನಾವೆಲ್ಲರೂ ಇಂದಿಗೂ ಒಂದೇ ಗೂಡಿನ ಜೇನುಹುಳುಗಳು.


— ಅಕ್ಷಿತಾ ನಾಯಕ್‌, ಇನ್ಫೋಸಿಸ್‌ ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next