Advertisement

ಕ್ಷುಲ್ಲಕ ಕಾರಣಕ್ಕೆ ದುರಂತಅಂತ್ಯ ಕಂಡ ಸಿಹಿ ದಾಂಪತ್ಯ

11:19 AM Oct 11, 2018 | Team Udayavani |

ಬೆಂಗಳೂರು: ಅವರಿಬ್ಬರೂ ಆರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆತ ಗಾರೆ ಕೆಲಸ ಮಾಡಿ ದುಡಿದ ಹಣದಲ್ಲಿ ಪತ್ನಿಯನ್ನು ನರ್ಸಿಂಗ್‌ ಓದಿಸಿದ್ದ. ಇತ್ತೀಚೆಗೆ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ, ದಂಪತಿ ನಡುವೆ ಮಂಗಳವಾರ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಆ ಪುಟ್ಟ ಸಂಸಾರ ಸೂತ್ರ ಹರಿದ ಗಾಳಿಪಟದಂತಾಗಿದೆ. ಇಬ್ಬರು ಪುಟ್ಟ ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ. 

Advertisement

ಮಕ್ಕಳು ಶಾಲೆಗೆ ಹೋಗುವ ಸಮಯ ವಾದರೂ ಅಡುಗೆ ಮಾಡಲಿಲ್ಲ ಎಂದು ಪತಿ ದಂಡಪಾಂಡ್ಯನ್‌ ಬೈದರು ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಸಂಜನಿ ಮಂಗಳವಾರ ಕದಿರೇನಹಳ್ಳಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರಿಣಾಮ, ಪತ್ನಿ ಸದ್ಯದಲ್ಲಿಯೇ ಕೆಲಸಕ್ಕೆ ಹೋಗುವುದರಿಂದ ಕುಟುಂಬ ನಿರ್ವಹಣೆಗೆ ಮತ್ತಷ್ಟು ಬಲ ಬರಲಿದೆ ಎಂಬ, ದಂಡ ಪಾಂಡ್ಯನ್‌ ಕನಸು ಚೂರಾಗಿದೆ. ಇದರೊಟ್ಟಿಗೆ, ದಂಪತಿಯ ಹೆಣ್ಣುಮಗು ಮಧು (ಮೂರೂವರೆ ವರ್ಷ)ವಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಗದಿಯಾಗಿದ್ದ ಕಿವಿ ಶಸ್ತ್ರ ಚಿಕಿತ್ಸೆಯೂ ಮುಂದೂಡಲ್ಪಟ್ಟಿದೆ.

“ಪ್ರೀತಿಸಿ ವಿವಾಹವಾಗಿದ್ದ ಅಕ್ಕ ಹಾಗೂ ಭಾವ ಅನೂನ್ಯವಾಗಿ ಬಾಳುತ್ತಿದ್ದರು. ಆದರೆ, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳಕ್ಕೆ ಬೇಸತ್ತು ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ, ಅವರ ಮಕ್ಕಳು ಅನಾಥರಾಗಿ ಬಿಟ್ಟರು,’ ಎಂದು ಸಂಜನಿ ಸಹೋದರ ಅಜಿತ್‌ “ಉದಯ ವಾಣಿ’ ಬಳಿ ಅಳಲು ತೋಡಿ ಕೊಂಡರು. ಸಹೋದರಿ ಸಂಜನಿ ಅಕಾಲಿಕ ಸಾವಿನಿಂದ ಆಕೆಯ ಪುತ್ರಿ ಮಧುವಿನ ಕಿವಿ ಶಸ್ತ್ರಚಿಕಿತ್ಸೆಯನ್ನು ಕೆಲ ದಿನಗಳ ನಂತರ ಮಾಡಿ ಸುತ್ತೇವೆ ಎಂದು ಅಜಿತ್‌ ಗದ್ಗದಿತರಾದರು.

ಮಕ್ಕಳು ಶಾಲೆಗೆ ಹೋದ ನಂತರ ಆತ್ಮಹತ್ಯೆ!: ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಾಣಂಬಾಡಿ ಮೂಲದ ದಂಡಪಾಂಡ್ಯನ್‌ ಹಾಗೂ ಸಂಜನಿ ಕದಿರೇನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, 5 ವರ್ಷದ
ಗಂಡು ಮಗು ಆಕಾಶ್‌ ಹಾಗೂ ಮೂರುವರೆ ವರ್ಷದ ಮಧು ನರ್ಸರಿ ಶಾಲೆಗೆ ಹೋಗುತ್ತಿದ್ದರು. ಮಂಗಳವಾರ ಬೆಳಗ್ಗೆ
9.30 ಆದರೂ ಅಡುಗೆ ಆಗಿರಲಿಲ್ಲ. 

Advertisement

ಹೀಗಾಗಿ, ಸಿಟ್ಟುಮಾಡಿಕೊಂಡಿದ್ದ ಪತಿ, “ಇಷ್ಟು ಹೊತ್ತಾದರೂ ಅಡುಗೆ ಮಾಡಿಲ್ಲ, ಮಕ್ಕಳು ಶಾಲೆಗೆ ಉಪವಾಸ ಹೋಗಬೇಕೆ? ಎಂದು ಗದರಿದ್ದಾರೆ. ಇದೇ ವಿಚಾರಕ್ಕೆ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದಾದ ಬಳಿಕ ಆತ ಮಕ್ಕಳಿಬ್ಬರಿಗೂ ಹೋಟೆಲ್‌ನಲ್ಲಿ ಊಟ ಕೊಡಿಸಿ ಶಾಲೆಗೆ ಬಿಟ್ಟು, ಎಂದಿನಂತೆ ಗಾರೆ ಕೆಲಸಕ್ಕೆ ಹೋಗಿದ್ದಾನೆ.

ಗಂಡ ಬೈದಿದ್ದರಿಂದ ಬೇಸರಗೊಂಡಿದ್ದ ಸಂಜನಿ ಮಧಾಹ್ನ ಮನೆಯ ಬಾಗಿಲು ಹಾಕಿಕೊಂಡವರಳು ಹೊರಗಡೆ ಬಂದಿರಲಿಲ್ಲ. ಹೀಗಾಗಿ ಆಕೆಯ ತಂಗಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಬಳಿ ಹೋಗಿ, ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಸಂಜನಿ ಫ್ಯಾನಿಗೆ ಸೀರೆ ಬಿಗಿದು ನೇಣುಹಾಕಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸಂಜನಿ ಪತಿ ದಂಡಪಾಂಡ್ಯನ್‌ ಹಾಗೂ ಸಂಬಂಧಿಕರಿಂದ ಹೇಳಿಕೆ ಪಡೆಯಲಾಗಿದೆ. ದಂಪತಿ ಅನೂನ್ಯವಾಗೇ ಇದ್ದರು. ಆದರೆ, ಕ್ಷುಲ್ಲಕ ಕಾರಣದಿಂದ ಆದ ಜಗಳಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಡುಗೆ ವಿಚಾರಕ್ಕೆಎರಡನೇ ಆತ್ಮಹತ್ಯೆ ಕಳೆದ ಸೆ.20ರಂದು ರುಚಿಕಟ್ಟಾಗಿ ಅಡುಗೆ ಸಿದ್ಧಪಡಿಸಿಲ್ಲ ಎಂದು ಬೇಸರಗೊಂಡು ಪತಿ ಬೈದಿದ್ದಕ್ಕೆ ನೊಂದು, ದೇವರ ಜೀವನಹಳ್ಳಿಯ ಶಾಂಪುರದಲ್ಲಿ ಜಯಲಕ್ಷ್ಮೀ ಎಂಬುವರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಜಯಲಕ್ಷ್ಮೀ ಪೋಷಕರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ದೈಹಿಕ ಕಿರುಕುಳ ಆರೋಪದ ಮೇರೆಗೆ ನಾಗರಾಜ್‌ ನನ್ನು ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next