Advertisement

ಸಿಹಿ ಪ್ರಿಯರ ಬಂಗಾಳಿ ಸಂಡೇಶ್‌

10:47 PM Nov 08, 2019 | mahesh |

ಬಂಗಾಳಿಯವರು ಸಿಹಿ ಪ್ರಿಯರು. ಅವರ ದೈನಂದಿನ ಆಹಾರ ಕ್ರಮದಲ್ಲಿ ಒಂದಾದರೂ ಸಿಹಿ ತಿನಿಸು ಇರಲೇಬೇಕು. ಅವರ ತಿಂಡಿ-ಊಟಗಳಲ್ಲಿ ಸಿಹಿ ತಿಂಡಿ ಇಲ್ಲದಿದ್ದರೆ ಆ ದಿನ ಪೂರ್ಣಗೊಳ್ಳುವುದಿಲ್ಲ ಎಂಬ ಮಾತಿದೆ. ಹಾಗೇ ಬಂಗಾಳಿ ಸಿಹಿ ಎಂದಾಕ್ಷಣ ಮನದಲ್ಲಿ ಮೂಡುವ ಚಿತ್ರ ಅವರ ಸಾಂಪ್ರಾಯಿಕ ಖಾದ್ಯ ಸಂದೇಶ್‌/ ಸಂಡೇಶ್‌.

Advertisement

ಇದು ಬೆಂಗಾಲಿಯ ಸಾಂಪ್ರದಾಯಿಕ ಸಿಹಿ ತಿನಿಸಾಗಿದ್ದರೂ ಭಾರತಾದ್ಯಂತ ಜನಪ್ರಿಯಗೊಂಡಿದೆ. ಮೃದುವಾದ ಹಾಗೂ ಸಿಹಿಭರಿತವಾದ ಈ ತಿನಿಸನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೆಂದು ಮನ ಹಂಬಲಿಸುತ್ತದೆ. ಈ ವಿಶೇಷ ಸಿಹಿ ತಿಂಡಿಯನ್ನು ಮನೆಯಲ್ಲಿ ನೀವು ತಯಾರಿಸಬಹುದಾಗಿದ್ದು, ಅದಕ್ಕೆ ಬೇಕಾಗುವ ಸಾಮಗ್ರಿ ಹಾಗೂ ಮಾಡುವ ವಿಧಾನದ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿ
ಹಾಲು – 1 ಲೀ.
ಐಸ್‌ ಕ್ಯೂಬ್‌ಗಳು -1 ಕಪ್‌.
ಸಿಟ್ರಿಕ್‌ ಆ್ಯಸಿಡ್‌ ಹರಳು (ನಿಂಬುವಿನ ಜತೆ) -1/4 ಟೀ ಚಮಚ.
ಸಕ್ಕರೆ ಪುಡಿ – 3/4 ಕಪ್‌.
ಗುಲಾಬಿ ನೀರು (ಎಸೆನ್ಸ್‌) – 2 ಟೀ ಸ್ಪೂನ್‌
ಏಲಕ್ಕಿ ಪುಡಿ – ಅರ್ಧ ಟೀ ಸ್ಪೂನ್‌
ಅಲಂಕಾರಕ್ಕೆ : ಕೇಸರಿ ದಳಗಳು, ತುಂಡರಿಸಿದ ಬಾದಾಮಿ. ಹೆಚ್ಚಿಕೊಂಡ ಪಿಸ್ತಾ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದಕ್ಕೆ ಮುಚ್ಚಳವನ್ನು ಮುಚ್ಚಿ ದೊಡ್ಡ ಉರಿಯಲ್ಲಿ ಬಿಸಿಮಾಡಿ. ಹಾಲು ಕುದಿಯಲಾರಂಭಿಸಿದ ಅನಂತರ ಸಿಟ್ರಿಕ್‌ ಆ್ಯಸಿಡ್‌ ಹರಳನ್ನು ಸೇರಿಸಿ. ಹಾಲು ಒಡೆಯುವವರೆಗೂ ಸುಮಾರು 2-3 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ. ಅನಂತರ ಅದು ಮೊಸರಾಗಿ ಒಡೆದ ತಕ್ಷಣ ಐಸ್‌ ಕ್ಯೂಬ್‌ಗಳನ್ನು ಸೇರಿಸಿ ಅದು ಸಂಪೂರ್ಣವಾಗಿ ಕರಗುವವರೆಗೂ ಒಂದೆಡೆ ಇಡಿ.

ಅನಂತರ ಒಂದು ಬೌಲ್ ಅನ್ನು ತೆಗೆದುಕೊಂಡು, ಅದರ ಮೇಲ್ಭಾಗದಲ್ಲಿ ಬಿಳಿಯ ವಸ್ತ್ರವನ್ನು ಹಾಕಿ ಅದರ ಮೇಲೆ ಒಡೆದ ಹಾಲನ್ನು ಸುರಿಯಿರಿ. ವಸ್ತ್ರದಲ್ಲಿ ಶೇಖರವಾದ ಒಡೆದ ಹಾಲಿನ ಕೆನೆಯ ಮಿಶ್ರಣವನ್ನು 10 ನಿಮಿಷಗಳ ಕಾಲ ಬಿಳಿ ಬಟ್ಟೆಯಲ್ಲಿಯೇ ಬಿಡಿ. ಮಿಶ್ರಣದಲ್ಲಿರುವ ನೀರಿನ ಪಸೆ ಸಂಪೂರ್ಣವಾಗಿ ಇಳಿಯುವವರೆಗೂ ಕಾಯಿರಿ.
ಅನಂತರ ಹೂರಣವನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಮತ್ತೂಂದು ಪಾತ್ರೆಗೆ ಹಾಕಿಕೊಂಡು ಗಂಟುಗಳಿರದಂತೆ ಅಂಗೈನಲ್ಲಿ ಮಿಶ್ರಣವನ್ನು ನಾದಿ ಫ್ರಿಜ್‌ನಲ್ಲಿ ಇಡಿ.

Advertisement

ಕೊನೆಯದಾಗಿ 10 ನಿಮಿಷದ ಅನಂತರ ಸಮ ಪ್ರಮಾಣದಲ್ಲಿ ಮಿಶ್ರಣವನ್ನು ಹಾಗೂ ಸಕ್ಕರೆ ಪುಡಿ ಮತ್ತು ಗುಲಾಬಿ ಎಸೆನ್ಸ್‌ ನೀರನ್ನು ಸೇರಿಸಿ ಪೇಡದ ಆಕಾರದಲ್ಲಿ ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. ಅಲಂಕಾರಕ್ಕೆಂದು ತೆಗೆದು ಕೇಸರಿ ದಳಗಳು, ತುಂಡರಿಸಿದ ಬಾದಾಮಿ ಹಾಗೂ ಪಿಸ್ತಾವನ್ನು ಅದರ ಮೇಲೆ ಉದುರಿಸಿ ಪುನಃ ತಣ್ಣಗಾಗಲು ಫ್ರಿಜ್‌ನಲ್ಲಿ ಇಟ್ಟು ಕೋಲ್ಡ್‌ ಆದನಂತರ ಸವಿಯಿರಿ.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next