Advertisement

ಕನಿಷ್ಠ ಮತದಾನದ ಬೂತ್‌ ಮೇಲೆ ಸ್ವೀಪ್‌ ನಿಗಾ

01:00 AM Mar 14, 2019 | Team Udayavani |

ಉಡುಪಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ವರ್ಷವಿಡೀ ಕಾರ್ಯವೆಸಗುವ ಸಿಸ್ಟೆ ಮ್ಯಾಟಿಕ್‌ ವೋಟರ್ ಎಜುಕೇಶನ್‌ ಆ್ಯಂಡ್‌ ಇಲೆಕ್ಟೊರಲ್‌ ಪಾರ್ಟಿಸಿ ಪೇಶನ್‌ (ಸ್ವೀಪ್‌) ಚುರುಕಾಗಿದೆ. ಕಳೆದ ಕೆಲವು ಚುನಾವಣೆಗಳಿಂದ ಸ್ವೀಪ್‌ ಸಮಿತಿ ಮತದಾನ ಹೆಚ್ಚಳಕ್ಕೆ ವಿಶೇಷ ಶ್ರಮ ವಹಿಸುತ್ತಿದೆ. 

Advertisement

2013ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿದ್ದ ಸರಾಸರಿ ಶೇ.76.19 ಇದ್ದ ಮತದಾನ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 75.6ಕ್ಕೆ ಇಳಿಯಿತು. 2018ರ ವಿಧಾನ ಸಭಾ ಚುನಾವಣೆಯಲ್ಲಿ ಶೇ. 78.86
ಕ್ಕೇರಿತು. ಮತದಾನದ ಪ್ರಮಾಣವನ್ನು ಮತ್ತಷ್ಟು ಏರಿಸಲು ಜಿಲ್ಲಾ ಸ್ವೀಪ್‌ ಸಮಿತಿ ವಿವಿಧ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. 

ನಗರ ಪ್ರದೇಶಗಳಲ್ಲಿ ಮತ್ತು ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಹಿಂದಿನ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ ಶೇ.10 ಬೂತುಗಳನ್ನು ಗುರುತಿಸಿ ಅಲ್ಲಿ ಮತದಾನ ಹೆಚ್ಚಳಕ್ಕೆ ಗಮನ ಕೊಡಲಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ಇಂಥ 25 ಮತಗಟ್ಟೆಗಳನ್ನು ಗುರುತಿಸಲಾಗಿದೆ. ವಿಶೇಷವಾಗಿ ಬೈಂದೂರು ಕ್ಷೇತ್ರದ ಶಿರೂರು ಮತ್ತು ಗಂಗೊಳ್ಳಿ ಭಾಗದ ಮತಗಟ್ಟೆಗಳಲ್ಲಿ ಇದು ದಾಖಲಾಗಿದೆ. ಉದಾಹರಣೆಗೆ, ಗಂಗೊಳ್ಳಿ ಸ್ಟೆಲ್ಲಾ ಮೇರಿ ಹೈಸ್ಕೂಲ್‌ ಮತಗಟ್ಟೆಯಲ್ಲಿ 2018ರ ಚುನಾವಣೆಯಲ್ಲಿ ಶೇ.56.2, ಶಿರೂರು ಸ.ಹಿಂದುಸ್ಥಾನಿ ಹಿ.ಪ್ರಾ. ಶಾಲೆಯಲ್ಲಿ ಶೇ. 59.5, 2014ರ ಚುನಾವಣೆಯಲ್ಲಿ ಶಿರೂರು ಸ.ಮಾ.ಹಿ.ಪ್ರಾ. ಶಾಲೆಯ (ಪೂರ್ವ) ಮತಗಟ್ಟೆಯಲ್ಲಿ ಶೇ.55.37, ಬೈಂದೂರು ಹಿಂದುಸ್ಥಾನಿ ಹಿ.ಪ್ರಾ. ಶಾಲೆಯಲ್ಲಿ (ಉತ್ತರ) ಶೇ.51.09, 2013ರ ಚುನಾವಣೆಯಲ್ಲಿ ಶಿರೂರು ಸ.ಮಾ.ಹಿ.ಪ್ರಾ. ಶಾಲೆಯಲ್ಲಿ (ಪೂರ್ವ) ಶೇ.55.10 ದಾಖಲಾಗಿದೆ.

ಉಡುಪಿ ಕ್ಷೇತ್ರದ ಮಣಿಪಾಲದ ಮಣಿಪಾಲ ಪ.ಪೂ. ಕಾಲೇಜು (ಪೂರ್ವ) ಮತಗಟ್ಟೆಯಲ್ಲಿ 2018, 2014, 2013ರ ಚುನಾವಣೆಯಲ್ಲಿ ಕ್ರಮವಾಗಿ ಶೇ.55.41, ಶೇ.60.88, ಶೇ.54.15, ಒಳಕಾಡು ಸರಕಾರಿ ಪ್ರೌಢಶಾಲೆ (ಪಶ್ಚಿಮ) ಮತಗಟ್ಟೆಯಲ್ಲಿ ಶೇ. 58.97, ಶೇ.66.45, ಶೇ.60.56, ಕಾಪು ಕ್ಷೇತ್ರದ ಕಟ್ಟಿಂಗೇರಿ ಅಂಗನವಾಡಿ ಮತಗಟ್ಟೆಯಲ್ಲಿ 2018ರ ಚುನಾವಣೆಯಲ್ಲಿ ಶೇ. 61.46 ಕಡಿಮೆ ಮತದಾನದ ದಾಖಲೆ. 

ಕಾರ್ಕಳದಲ್ಲಿ ಶೇ.68-69, ಕುಂದಾಪುರದಲ್ಲಿ ಶೇ.64-65 ಮತದಾನವೇ ಕನಿಷ್ಠ ಮತದಾನದ ಬೂತುಗಳು.
ಇಂಥಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ನೆಹರೂ ಯುವ ಕೇಂದ್ರದ ಸ್ವಯಂಸೇವಕರು, ನಮ್ಮ ಭೂಮಿ, ಸ್ಕೌಟ್ಸ್‌ ಗೈಡ್ಸ್‌, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ಇವರಿಗೆ ಐದು ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೊಡಲಾಗಿದೆ. 

Advertisement

ಸಹಾಯವಾಣಿ
ಮತದಾರರ ಮಾಹಿತಿ ತಿಳಿಯಲು 1950 ಸಂಖ್ಯೆಯ ಸಹಾಯ ವಾಣಿ ತೆರೆಯಲಾಗಿದೆ. ವಿಶೇಷ ಚೇತನರಿ ಗಾಗಿ ಉಡುಪಿಯಲ್ಲಿ ಸಹಾಯವಾಣಿ 0820-2574811 ಆರಂಭಿಸಲಾಗಿದೆ.

ಮತದಾನ ಕಡಿಮೆಯಾಗಲು ಕಾರಣ
ಮಣಿಪಾಲದ‌ಲ್ಲಿರುವ ವೈದ್ಯ, ಎಂಜಿನಿಯರಿಂಗ್‌ ತಜ್ಞ ಮತದಾರರು ಆಗಾಗ ವಿದೇಶಗಳಿಗೆ ತೆರಳುತ್ತಾರೆ. ಇವರು ಚುನಾವಣೆ ಸಮಯದಲ್ಲಿ ಇರುವುದಿಲ್ಲ. ಉಡುಪಿ ಒಳಕಾಡು ಶಾಲೆ ಮತಗಟ್ಟೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ ವಾಸಿಗಳ ಸಂಖ್ಯೆ ಅಧಿಕ. ಇವರು ಇರುವುದು ವಿದೇಶಗಳಲ್ಲಿ. ಶಿರೂರು, ಗಂಗೊಳ್ಳಿಯಲ್ಲಿಯೂ ವಿದೇಶಗಳಲ್ಲಿರುವವರ ಸಂಖ್ಯೆ ಹೆಚ್ಚು. ಆದರೆ ಇವರಾರೂ ಮತದಾರರ ಪಟ್ಟಿಯಿಂದ ಹೆಸರು ಕಳಚಲು ಇಷ್ಟಪಡುವುದಿಲ್ಲ. ಶಿಕ್ಷಿತರು ಮತದಾನಕ್ಕೆ ಆಸಕ್ತಿ ತೋರುವುದು ಕಡಿಮೆ ಎನ್ನುವುದು ಇನ್ನೊಂದು ಕಾರಣ. 

ನಗರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕು. ಹೊಸ ಮತದಾರರು, ಅಂಗವಿಕಲರು, ತೃತೀಯ ಲಿಂಗಿಗಳು, ಮಹಿಳೆಯರು, ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನಜಾಗೃತಿ ರೂಪಿಸಲಾಗುವುದು. ವಿಶೇಷವಾಗಿ ಮತಯಂತ್ರ ಪ್ರಾತ್ಯಕ್ಷಿಕೆಯನ್ನು ಗ್ರಾ.ಪಂ. ಮಟ್ಟದಲ್ಲಿ ನಡೆಸಲಾಗುವುದು. ಮತದಾನ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ. 
– ಸಿಂಧೂ ಬಿ. ರೂಪೇಶ್‌, ಉಡುಪಿ ಜಿ.ಪಂ. ಸಿಇಒ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು. 

Advertisement

Udayavani is now on Telegram. Click here to join our channel and stay updated with the latest news.

Next