Advertisement

ಸಮೂಹ ರೋಗನಿರೋಧಕ ಶಕ್ತಿ ನಿರ್ಮಾಣ: ಸ್ವೀಡನ್‌ ಗುರಿ

11:10 AM May 23, 2020 | sudhir |

ಸ್ಟಾಕ್‌ಹೋಮ್‌: ಕೋವಿಡ್‌-19 ನಿಭಾವಣೆಗೆ “ಸಮೂಹ ರೋಗನಿರೋಧಕ ಶಕ್ತಿ’ಯನ್ನು ಬೆಳೆಸುವ ಗುರಿಯೊಂದಿಗೆ ಹೆಚ್ಚು ಸಡಿಲ ಕ್ರಮಗಳನ್ನು ಅನುಸರಿಸಿರುವ ಸ್ವೀಡನ್‌, ಎಪ್ರಿಲ್‌ ಅಂತ್ಯದ ವೇಳೆ ರಾಜಧಾನಿಯ ಶೇ. 7.3ರಷ್ಟು ಜನರು ಮಾತ್ರ ರೋಗವನ್ನು ಹೊಡೆದೋಡಿಸುವುದಕ್ಕೆ ಅಗತ್ಯವಿರುವ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಬಹಿರಂಗಪಡಿಸಿದೆ.

Advertisement

“ಸಮೂಹ ರೋಗನಿರೋಧಕ ಶಕ್ತಿ’ಯನ್ನು ನಿರ್ಮಿಸಿಬೇಕಿದ್ದರೆ ಜನಸಂಖ್ಯೆಯ ಶೇ. 70ರಿಂದ 90 ಮಂದಿಯಲ್ಲಿ ಪ್ರತಿಕಾಯಗಳು ಇರಬೇಕಾಗುತ್ತದೆ. ಸ್ವೀಡನ್‌ ನೀಡಿರುವ ಅಂಕಿ-ಅಂಶಗಳು ಕೋವಿಡ್‌ ನಿಭಾವಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿರುವ ಇತರ ರಾಷ್ಟ್ರಗಳಲ್ಲಿನ ಅಂಕಿ-ಅಂಶಗಳಿಗಿಂತ ಚೆನ್ನಾಗಿಯೇನೂ ಇಲ್ಲವೆಂದು ಸಿಎನ್‌ಎನ್‌ ಹೇಳಿದೆ.

ಕೋವಿಡ್‌ ಸೋಂಕಿನ ವೇಳೆ ಸ್ವೀಡನ್‌ ಅದನ್ನು ನಿಭಾಯಿಸಲು ವಿಭಿನ್ನ ಕಾರ್ಯತಂತ್ರವೊಂದನ್ನು ಅನುಸರಿಸಿದೆ. ಅದು ಲಾಕ್‌ಡೌನ್‌ ವಿಧಿಸಿಲ್ಲ ಮತ್ತು ಹೆಚ್ಚಿನ ಶಾಲೆಗಳು, ರೆಸ್ಟೋರೆಂಟ್‌ಗಳು, ಸೆಲೂನ್‌ಗಳು ಹಾಗೂ ಬಾರ್‌ಗಳು ತೆರೆದಿವೆ. ಆದರೆ ಸರಕಾರ ಜನರ ಮೇಲೆ ಹೆಚ್ಚಿನ ಹೊಣೆ ವಹಿಸಿದೆ ಮತ್ತು ದೂರ ಪ್ರಯಾಣಗಳನ್ನು ಕೈಗೊಳ್ಳದಂತೆ ಸೂಚಿಸಿದೆ. ಸ್ವೀಡನ್‌ನ ಸಂಶೋಧಕರು ಆರಂಭದಲ್ಲಿ ಈ ಕಾರ್ಯ ತಂತ್ರವನ್ನು ಟೀಕಿಸಿದ್ದರು.

ಜನಸಂಖ್ಯೆಯ ಶೇ. 70ರಿಂದ 90 ಮಂದಿ ಸೋಂಕು ರೋಗವೊಂದಕ್ಕೆ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಾಗ ಸಮೂಹ ರೋಗ ನಿರೋಧಕ ಶಕ್ತಿ ನಿರ್ಮಾಣವಾಗುತ್ತದೆ. ಇದು ಯಾಕೆಂದರೆ ಒಂದೋ ಅವರು ಸೋಂಕಿಗೊಳಗಾಗಿ ಚೇತರಿಸಿಕೊಂಡಿರುತ್ತಾರೆ ಅಥವಾ ಲಸಿಕೆಯನ್ನು ಪಡೆದುಕೊಡಿರುತ್ತಾರೆ. ಹಾಗಾದಾಗ ರೋಗನಿರೋಧಕ ಶಕ್ತಿಯನ್ನು ಹೊಂದಿಲ್ಲದವರಿಗೂ ಅದು ಹರಡುವ ಅಪಾಯ ಕಡಿಮೆ. ಯಾಕೆಂದರೆ ಅವರಿಗೆ ಸೋಂಕು ಹರಡುವ ಹೆಚ್ಚು ಜನರು ಇರುವುದಿಲ್ಲ.

ಕೋವಿಡ್‌ ವೈರಸ್‌ ಇನ್ನಷ್ಟು ಹರಡಲಿದೆ ಮತ್ತು ಅದರ ಪ್ರಭಾವ ಕಡಿಮೆಯಾಗುವ ಮೊದಲು ಜನಸಂಖ್ಯೆಯ ಶೇ. 60ರಿಂದ
ಶೇ. 70 ಮಂದಿಗೆ ತಗುಲಲಿದೆ ಎಂದು  ಎಚ್ಚರಿಸಿರುವ ಮಿನ್ನೆಸೋಟ ಯೂನಿವರ್ಸಿಟಿಯ ಸೋಂಕು ರೋಗಗಳ ಸಂಶೋಧನೆ ಮತ್ತು ನೀತಿ ಕೇಂದ್ರದ ನಿರ್ದೇಶಕ ಮೈಕೆಲ್‌ ಆಸ್ಟರ್‌ಹೋಮ್‌, ಆದರೆ ದೇಶವೊಂದು ಸಮೂಹ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಬೇಕಿದ್ದರೆ ಅದಕ್ಕೆ 18ರಿಂದ 24 ತಿಂಗಳುಗಳ ದೀರ್ಘ‌ ಕಾಲ ಹಿಡಿಯುತ್ತದೆ ಎಂದು ಹೇಳುತ್ತಾರೆ. ಸಮೂಹ ರೋಗನಿರೋಧಕ ಶಕ್ತಿಯ ಪರಿಕಲ್ಪನೆಯೇ ಅಪಾಯಕಾರಿ ಲೆಕ್ಕಾಚಾರ ಎಂದು ಡಬ್ಲ್ಯುಎಚ್‌ಒ ಆರೋಗ್ಯ ತುರ್ತು ಕಾರ್ಯಕ್ರಮದ ನಿರ್ವಾಹಕ ನಿರ್ದೇಶಕ ಡಾ| ಮೈಕ್‌ ರಿಯಾನ್‌ ಹೇಳಿದ್ದಾರೆ.

Advertisement

ಸ್ಟಾಕ್‌ಹೋಮ್‌ ಜನಸಂಖ್ಯೆಯ ಶೇ. 15 ರಿಂದ 20ರಷ್ಟು ಮಂದಿ ರೋಗ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆಂದು ಎ. 24ರಂದು ಪ್ರಧಾನ ಸೋಂಕುರೋಗ ತಜ್ಞ ಟೆಗ್ನೆಲ್‌ ಅವರು ಬಿಬಿಸಿಗೆ ತಿಳಿಸಿದ್ದರು.
ಸ್ವೀಡನ್‌ನಲ್ಲಿ ಈಗ 32,172 ಕೋವಿಡ್‌ ಪ್ರಕರಣಗಳಿದ್ದು, 3,871 ಸಾವುಗಳು ಸಂಭವಿಸಿವೆ .

Advertisement

Udayavani is now on Telegram. Click here to join our channel and stay updated with the latest news.

Next