Advertisement

“ಬೆವರು’ಗೊಂಬೆ: ಅವಳೇಕೆ ರಾತ್ರಿಯೂ ಬೆವರುತ್ತಾಳೆ?

02:21 PM Sep 20, 2017 | |

ಹಗಲಿನಲ್ಲಿ ಬೆವರಿದಾಗ ಅದು ಸಹಜವೆಂದು ಸುಮ್ಮನಾಗಬಹುದು. ಆದರೆ, ರಾತ್ರಿಯಲ್ಲಿ ಬೆವರಿದಾಗ ದೇಹಕ್ಕೆ ಅದೇನೋ ಕಿರಿಕಿರಿ. ನಿದ್ದೆಗೂ ಭಂಗ. ಮನಸ್ಸೂ ಒದ್ದೆ ಒದ್ದೆ. ಧರಿಸಿದ ಬಟ್ಟೆಗಳೂ ಕೊಳಕು. ಆದರೆ, ಹೀಗೆ ಬೆವರುವುದು ಕೇವಲ ಬೇಸಿಗೆ ಕಾಲದಲ್ಲಿ ಮಾತ್ರವಲ್ಲ, ಈಗ ಚಳಿಗಾಲದಲ್ಲೂ ಮಹಿಳೆಯರ ಶರೀರ ರಾತ್ರಿ ವೇಳೆ ಬೆವರುತ್ತದೆ. ಸೆಕೆಯೆಂಬ ಕಾರಣಕ್ಕಷ್ಟೇ ಶರೀರ ಬೆವರುವುದಿಲ್ಲ. ಅದರಾಚೆಗೂ ಕೆಲವು ಕಾರಣಗಳಿವೆ…

Advertisement

ದುಃಸ್ವಪ್ನ ಬಿದ್ದಾಗ: ಕೆಲವು ಮಹಿಳೆಯರು ದೈಹಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯವಾಗಿರುತ್ತಾರೆ. ಆದರೂ ರಾತ್ರಿಯೆಲ್ಲಾ ಬೆವರುವ ಕಾಯಿಲೆಯಿಂದ ಬಳಲುತ್ತಾರೆ. ಇದಕ್ಕೆ ಕಾರಣ ರಾತ್ರಿ ಮಲಗಿದಾಗ ಅವರ ನಿದ್ದೆಯಲ್ಲಿ ಕಾಡುವ ಕೆಟ್ಟ ಕನಸುಗಳು. ಕನಸಿನಲ್ಲಿ ಭಯಾನಕ ದೃಶ್ಯಗಳು ಕಂಡಾಗ ಹೆದರಿ ಅವರ ಮೈ ಬೆವರಲು ಶುರುವಾಗುತ್ತದೆ.

ಆಯಾಸ ಮತ್ತು ಖನ್ನತೆ: ಕೆಲವು ಮಹಿಳೆಯರು ಹಗಲಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ, ದೈಹಿಕವಾಗಿ ಆಯಾಸಗೊಂಡಿರುತ್ತಾರೆ. ಹಾಗೆಯೇ ಸಂಸಾರ ನಿಭಾಯಿಸುವ ಗೋಜಿನಲ್ಲಿ ಮಾನಸಿಕವಾಗಿ ಕುಗ್ಗಿ, ಯಾವುದೋ ಚಿಂತೆಯಲ್ಲಿ ಖನ್ನತೆಗೊಳಗಾಗಿರುತ್ತಾರೆ. ಈ ರೀತಿಯ ದೈಹಿಕ ಹಾಗೂ ಮಾನಸಿಕ ಅಸಮತೋಲನ, ಚಂಚಲತೆಗಳೂ ರಾತ್ರಿಯ ಬೆವರಿಗೆ ಕಾರಣವಾಗಬಲ್ಲುದು ಎಂಬುದನ್ನು ಸಂಶೋಧನೆಗಳು ಹೇಳಿವೆ.

ಹಾರ್ಮೋನು ಬದಲಾವಣೆ: ಮಹಿಳೆಯರಲ್ಲಿ ರಾತ್ರಿ ಬೆವರಿಕೆಗೆ ಮುಖ್ಯವಾದ ಕಾರಣವೆಂದರೆ, ಇಸ್ಟ್ರೋಜೆನ್‌ ಹಾರ್ಮೋನುಗಳ ವ್ಯತ್ಯಾಸ. ಋತುಬಂಧ ಅವಧಿ ಹಾಗೂ ಗರ್ಭಾವಸ್ಥೆಯಲ್ಲಿ ಈ ಹಾರ್ಮೋನುಗಳ ಏರುಪೇರು ಹೆಚ್ಚಾಗಿ ಕಂಡುಬರುತ್ತದೆ. ಇಸ್ಟ್ರೋಜೆನ್‌ ಹಾರ್ಮೋನುಗಳ ಪ್ರಮಾಣ ಬದಲಾದಾಗ, ದೇಹದಲ್ಲಿ ಉಷ್ಣತೆ ಏರಿಕೆಯಾಗಿ ಬೆವರುವಿಕೆ ಉಂಟಾಗುತ್ತದೆ. 

ಸೋಂಕು ತಗುಲುವಿಕೆ: ಸಾಮಾನ್ಯವಾಗಿ ಸೋಂಕುಗಳು, ವಾತಾವರಣದ ಬದಲಾವಣೆಯಿಂದ ಹರಡುತ್ತವೆ. ಬೇಸಿಗೆಗೆ ಹೊಂದಿಕೊಂಡಂಥ ದೇಹ ದಿಢೀರನೆ ಮಳೆ ಬಂದಾಗ ವಾತಾವರಣದಲ್ಲಿನ ತಂಗಾಳಿ ನಮ್ಮ ದೇಹಕ್ಕೆ ಸೋಂಕನ್ನು ಉಂಟುಮಾಡಿ, ಆರೋಗ್ಯವನ್ನು ಹದಗೆಡಿಸಬಹುದು. ಯಾವಾಗ ತಾಪಮಾನ ಬದಲಾಗುತ್ತದೋ ಆಗ ನಮಗೆ ಜ್ವರದ ರೂಪದಲ್ಲಿ ದೇಹದ ಉಷ್ಣತೆ ಹೆಚ್ಚಾಗಿ ಬೆವರುವಿಕೆ ಆರಂಭವಾಗುತ್ತದೆ.

Advertisement

ನಿರಂತರ ಬೆವರು: ಶರೀರದ ಉಷ್ಣತೆ ಹೆಚ್ಚಾದಾಗ, ಬೆವರುವ ಮೂಲಕ ಆ ಉಷ್ಣತೆಯ ನಿಯಂತ್ರಣ ಸಾಧ್ಯವಾಗುತ್ತದೆ. ಆಹಾರದ ಕಾರಣಕ್ಕಾಗಿ, ಆಯಾಸದ ಕಾರಣಕ್ಕಾಗಿ ಮಹಿಳೆ ಅಪರೂಪಕ್ಕೆ ಬೆವರಿದರೆ, ಅದರಲ್ಲೇನೂ ತೊಂದರೆಯಿಲ್ಲ. ಆದರೆ, ನಿರಂತರ ಬೆವರಿದರೆ ವೈದ್ಯರ ಬಳಿ ತೋರಿಸಿಕೊಳ್ಳುವುದು ಉತ್ತಮ.

ಶಿವರಾಜ ಬಿ. ಎಲ್

Advertisement

Udayavani is now on Telegram. Click here to join our channel and stay updated with the latest news.

Next