Advertisement

ಜಿಪಂ ಉಪಾಧ್ಯಕ್ಷರಾಗಿ ಸ್ವರೂಪ್‌ ಆಯ್ಕೆ

03:07 PM May 25, 2019 | Suhan S |

ಹಾಸನ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಹಾಸನ ತಾಲೂಕು ಕಂದಲಿ ಕ್ಷೇತ್ರದ ಜೆಡಿಎಸ್‌ ಸದಸ್ಯ ಎಚ್.ಪಿ.ಸ್ವರೂಪ್‌ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

Advertisement

ಅಧಿಕಾರ ಹಂಚಿಕೆಯ ಸಂಬಂಧ ಜೆಡಿಎಸ್‌ನಲ್ಲಿ ಆಗಿದ್ದ ಆಂತರಿಕ ಒಪ್ಪಂದದಂತೆ ಕಳೆದ ಏ.24 ರಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಸುಪ್ರದೀಪ್‌ ಯಜಮಾನ್‌ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ದಿನಾಂಕ ನಿಗದಿಯಾಗಿತ್ತು.

ಬೆಳಗ್ಗೆ 10.30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಎಚ್.ಪಿ.ಸ್ವರೂಪ್‌ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಮೈಸೂರು ಪ್ರಾದೇಶಿಕ ಆಯುಕ್ತ‌ ಅನಿಲ್ಕುಮಾರ್‌ ಅವರು ಸ್ವರೂಪ್‌ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಜಿಪಂ ಸದಸ್ಯರ ಅಭಿನಂದನೆ: ಸ್ವರೂಪ್‌ ಅವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ 2021 ರ ಜೂ.2ರವರೆಗೂ ಕಾರ್ಯ ನಿರ್ವಹಿಸಲಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು. ನೂತನ ಉಪಾಧ್ಯಕ್ಷ ಸ್ವರೂಪ್‌ ಅವರನ್ನು ಪ್ರಾದೇಶಿಕ ಆಯುಕ್ತ ಅನಿಲ್ಕುಮಾರ್‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಕೆ.ಎನ್‌.ವಿಜಯಪ್ರಕಾಶ್‌ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಅಭಿನಂದಿಸಿದರು.

ಕಾಂಗ್ರೆಸ್‌ ಸದಸ್ಯರ ಗೈರು: ಸ್ವರೂಪ್‌ ಅವರ ನಾಮಪತ್ರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಹಾಗೂ ಪುಟ್ಟಸ್ವಾಮಿಗೌಡ ಅವರು ಸೂಚಕರಾಗಿ ಸಹಿ ಮಾಡಿದ್ದರು. ಉಪಾಧ್ಯಕ್ಷರ ಆಯ್ಕೆಯ ಜಿಲ್ಲಾ ಪಂಚಾಯಿತಿಯ ವಿಶೇಷ ಸಭೆಗೆ ಒಟ್ಟು 40 ಸದಸ್ಯರ ಪೈಕಿ 27 ಸದಸ್ಯರು ಹಾಜರಾಗಿದ್ದರು. ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಸೇರಿ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಗೈರು ಹಾಜರಾಗಿದ್ದರೆ, ಕಾಂಗ್ರೆಸ್‌ ಹಿರಿಯ ಸದಸ್ಯ ಪಟೇಲ್ ಶಿವಪ್ಪ ಸೇರಿ ಮೂವರು ಹಾಜರಾಗಿದ್ದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರೂ ಗೈರು ಹಾಜರಾಗಿದ್ದರು.

Advertisement

ಹಾಸನ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌.ದ್ಯಾವೇಗೌಡ, ಹಾಸನ ತಾ.ಪಂ ಅಧ್ಯಕ್ಷ ನಿಂಗೇಗೌಡ, ಜಿಲ್ಲಾ ಜೆಡಿಎಸ್‌ ವಕ್ತಾರ ಎಚ್.ಎಸ್‌.ರಘು, ಪಕ್ಷದ ಮುಖಂಡರಾದ ಎಚ್.ಎಸ್‌.ಅನಿಲ್ ಕುಮಾರ್‌, ಮೊಗಣ್ಣಗೌಡ ಮತ್ತಿತ್ತರ ಜೆಡಿಎಸ್‌ ಮುಖಂಡರು ಉಪಾಧ್ಯಕ್ಷ ಸ್ವರೂಪ್‌ ಅವರನ್ನು ಅಭಿನಂದಿಸಿದರು.

ಜನರ ಆಶೋತ್ತರಗಳಿಗೆ ಸ್ಪಂದಿಸುವೆ: ಸ್ವರೂಪ್‌

ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಎಚ್.ಪಿ.ಸ್ವರೂಪ್‌ ಅವರು ಜನರ ಆಶೋತ್ತರಗಳನ್ನು ಅರಿತು ಕೆಲಸ ಮಾಡುವೆ ಎಂದು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ನಿರ್ವಹಣೆಗೆ ಆದ್ಯತೆ ನೀಡುವುದಾಗಿಯೂ ಹೇಳಿದ ಅವರು ಗ್ರಾಮ ಮಟ್ಟಲ್ಲಿನ ಕುಂದು ಕೊರತೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. ರೇವಣ್ಣನವರ ನಿರ್ಧಾರಕ್ಕೆ ಬದ್ಧ: ಉಪಾಧ್ಯಕ್ಷರ ಅಧಿಕಾರ ವಧಿಯ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸಚಿವ ಎಚ್.ಡಿ. ರೇವಣ್ಣ ಅವರ ಸೂಚನೆಗೆ ಬದ್ಧನಾಗಿ ನಡೆದುಕೊಳ್ಳುವೆ ಎಂದು ಸ್ವರೂಪ್‌ ಅವರು ಸ್ಪಷ್ಟಪಡಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವುದರಿಂದ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಹಾಸನ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಚ್.ಎಸ್‌ಪ್ರಕಾಶ್‌ ಅವರ ಪುತ್ರರಾದ ಸ್ವರೂಪ್‌ ಅವರನ್ನು ಜಿಪಂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ
Advertisement

Udayavani is now on Telegram. Click here to join our channel and stay updated with the latest news.

Next